logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರಿನಲ್ಲೂ ರಾಮಸ್ಮರಣೆ, ದೀಪ, ರಂಗೋಲಿ ಹಾಕಿ ಸಂತಸ, ಕರಸೇವಕರ ಮಿಲನ

Tumkur News: ತುಮಕೂರಿನಲ್ಲೂ ರಾಮಸ್ಮರಣೆ, ದೀಪ, ರಂಗೋಲಿ ಹಾಕಿ ಸಂತಸ, ಕರಸೇವಕರ ಮಿಲನ

Umesha Bhatta P H HT Kannada

Jan 22, 2024 07:39 PM IST

google News

ತುಮಕೂರಿನಲ್ಲಿ ರಾಮಮಂದಿರ ಉದ್ಘಾಟನೆ ಅಂಗವಾಗಿ ಪೂಜೆ, ಭಜನೆಗಳು ನಡೆದವು.

    • ‌ತುಮಕೂರಿನಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಭಾಗವಾಗಿ ಹಲವು ಕಡೆ ಚಟುವಟಿಕೆಗಳು ಸಡಗರದಿಂದ ನಡೆದವು( ವರದಿ: ಈಶ್ವರ್‌ ತುಮಕೂರು)
ತುಮಕೂರಿನಲ್ಲಿ ರಾಮಮಂದಿರ ಉದ್ಘಾಟನೆ ಅಂಗವಾಗಿ ಪೂಜೆ, ಭಜನೆಗಳು ನಡೆದವು.
ತುಮಕೂರಿನಲ್ಲಿ ರಾಮಮಂದಿರ ಉದ್ಘಾಟನೆ ಅಂಗವಾಗಿ ಪೂಜೆ, ಭಜನೆಗಳು ನಡೆದವು.

ತುಮಕೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆದ ಹಿನ್ನೆಲೆಯಲ್ಲಿ ಕಲ್ಪತರು ನಾಡಿನಲ್ಲೂ ರಾಮೋತ್ಸವದ ಸಡಗರ ಸಂಭ್ರಮ ಮನೆ ಮಾಡಿತ್ತು. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ರಾಮನಾಮ ಸ್ಮರಣೆ ಮೊಳಗಿದ್ದು, ಸೋಮವಾರ ಮಧ್ಯಾಹ್ನ 12.30ಕ್ಕೆ ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿದವು.

ಜಿಲ್ಲೆಯಾದ್ಯಂತ ಮನೆ ಮನೆಗೆ ಅಯೋಧ್ಯೆ ಮಂತ್ರಾಕ್ಷತೆ ತಲುಪಿಸಲಾಗಿತ್ತು, ಪ್ರತಿ ದೇವಾಲಯ, ಮನೆ ಮನೆಗಳಲ್ಲೂ ದೀಪ ಹಚ್ಚಿ, ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿ ಹಾಕಿ ವಿಶೇಷ ಭಕ್ತಿಯನ್ನು ಶ್ರೀರಾಮನಿಗೆ ಸಮರ್ಪಿಸಲಾಯಿತು.

ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯ, ಹನುಮಂತಪುರ, ಬನಶಂಕರಿ, ಮರಳೂರು, ಎಸ್.ಎಸ್.ಪುರಂನ ಸೀತಾ ರಾಮ ಮಂದಿರ, ಶೆಟ್ಟಿಹಳ್ಳಿ ಗೇಟ್‌ನ ಅಭಯ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮ, ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಜನೆ ನಡೆದಿದ್ದು, ಭಕ್ತರಿಂದ ಶ್ರೀರಾಮ ನಾಮ ಸ್ಮರಣೆ ಮೊಳಗಿತು.

ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಎಸ್.ಎಸ್.ಪುರಂ ರಸ್ತೆ, ಕೋತಿತೋಪು ರಸ್ತೆ, ಮಂಡಿಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ಬಾಳೆಕಂದು, ಮಾವಿನ ತೋರಣ ಕಟ್ಟಿ ಸಿಂಗರಿಸಲಾಗಿದ್ದು, ಭಕ್ತರು ಪೆಂಡಾಲ್‌ಗಳನ್ನು ಹಾಕಿ ಶ್ರೀರಾಮ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಸೇರಿದಂತೆ ಪ್ರಸಾದ ವಿತರಣೆ ಮಾಡಲಾಯಿತು.

ಬಾರ್‌ಲೈನ್ ರಸ್ತೆಯ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆಯ ನೇರ ಪ್ರಸಾರದ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮನ ಘೋಷಣೆಗಳನ್ನು ಕೂಗಿದ ಭಕ್ತರ ಕಣ್ಣಲ್ಲಿ ಆನಂದಭಾಷ್ಪ ಕಂಡು ಬಂತು.

ಶೆಟ್ಟಿಹಳ್ಳಿ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಜನಾ ಮಂಡಳಿಗಳಿಂದ ಭಜನೆ ಮೊಳಗಿತು. ಭಕ್ತರಿಗೆ ಪಾನಕ, ಹೆಸರುಬೇಳೆ, ಮಜ್ಜಿಗೆ ವಿತರಿಸಲಾಯಿತು.

ಅಮರಜ್ಯೋತಿ ನಗರದಲ್ಲಿರುವ ಶಿರಡಿಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ, ಭಜನೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು.

ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಮಂಟಪದಲ್ಲಿ ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ಭಾಗವಹಿಸಿದ್ದ ಕರಸೇವಕರ ಮಿಲನ ಕಾರ್ಯಕ್ರಮ ಸಹ ನಡೆಯಿತು. ಕರಸೇವಕರ ಮಿಲನ ಕಾರ್ಯಕ್ರಮದಲ್ಲಿ ರಾಮ, ಭಾರತಮಾತೆ ಭಾವಚಿತ್ರದೊಂದಿಗೆ ಪವಿತ್ರ ಗಂಗಾ ಜಲ ಮತ್ತು ಕರಸೇವೆಯ ಸಮಯದಲ್ಲಿ ತಂದ ನಾಲ್ಕು ಇಟ್ಟಿಗೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ರಾಮಮಂದಿರ ಉದ್ಘಾಟನೆ ಅಂಗವಾಗಿ ನಗರದ ಎಲ್ಲೆಡೆ ಆಟೋಗಳಲ್ಲಿ ಶ್ರೀರಾಮ ಮತ್ತು ರಾಮ ಮಂದಿರದ ಚಿತ್ರ ಇರುವ ಬಾವುಟಗಳು ರಾರಾಜಿಸುತ್ತಿದ್ದವು. ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗಳು, ಫ್ಲೆಕ್ಸ್ ಹಾಕಲಾಗಿದ್ದು, ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.

( ವರದಿ: ಈಶ್ವರ್‌, ತುಮಕೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ