ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ವರವಾಗುತ್ತಾ; ಹೇಗಿದೆ ರಾಜಕೀಯ ಲೆಕ್ಕಾಚಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ವರವಾಗುತ್ತಾ; ಹೇಗಿದೆ ರಾಜಕೀಯ ಲೆಕ್ಕಾಚಾರ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ವರವಾಗುತ್ತಾ; ಹೇಗಿದೆ ರಾಜಕೀಯ ಲೆಕ್ಕಾಚಾರ

ಇಡೀ ದೇಶ ಗಮನ ಸೆಳೆಯುವಂತ ಪ್ರಚಾರದೊಂದಿಗೆ ಬಿಜೆಪಿ ಅಯೋಧ್ಯಯ ರಾಮಮಂದಿರ ಉದ್ಘಾಟನೆ ಮಾಡಿರುವುದು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಾಲರಾಮ ದಕ್ಷಿಣ ಭಾರತದಲ್ಲಿ ಕೇಸರಿ ಪಕ್ಷಕ್ಕೆ ಮತಗಳನ್ನ ತಂದುಕೊಡುತ್ತಾನಾ?

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. (PTI)

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮೂಲಕ ಇಡೀ ದೇಶ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದ್ದಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಪ್ರಧಾನಿ ನರೇಂದ್ರ ಮೋದಿ ಅವರು. ನಮೋ ಅವರ ಹೆಚ್ಚಿನ ಮುತುವರ್ಜಿವಹಿಸಿದ ಪರಿಣಾಮ ಇಂದು (ಜನವರಿ 22, ಸೋಮವಾರ) ರಾಮಮಂದಿರವನ್ನು ನಿರ್ಮಿಸಿದ ಅದರಲ್ಲಿ ಬಾಲರಾಮ ವಿರಾಜಮಾನವಾಗಿದ್ದಾನೆ. 84 ಸೆಂಕೆಂಡ್‌ಗಳಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ 500 ವರ್ಷಗಳ ಕನಸಾಗಿತ್ತು ಅನ್ನೋದು ಹಲವರ ವಾದ.

ಬಿಜೆಪಿ ನೇತೃತ್ವದ ಸರ್ಕಾರದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಮ ಧ್ವಜಗಳೇ ರಾರಾಜಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಪ್ರತಿಯೊಬ್ಬ ಬಿಜೆಪಿ ನಾಯಕರು, ಕಾರ್ಯಕರ್ತರು ಈ ಐತಿಹಾಸಿನ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಆದರೆ ಎಲ್ಲೂ ಕೂಡ ಬಿಜೆಪಿ ಧ್ವಜ ಅಥವಾ ಪಕ್ಷದ ಹೆಸರು ಕಾಣಿಸಲೇ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸುವ ಮುನ್ನ ದಕ್ಷಿಣ ಭಾರತದ ದೇವಾಲಯಗಳಿಗೆ ಭೇಟಿ ನೀಡಿದ್ದರು. ಲೋಕಸಭೆ ಚುನಾವಣೆಗೆ ಇನ್ನ ಕೆಲವೇ ತಿಂಗಳು ಬಾಕಿ ಇರುವುದರಿಂದ ಮೋದಿ ಅವರ ಈ ನಡೆಯಲ್ಲಿ ಹಲವು ರಾಜಕೀಯ ಲೆಕ್ಕಾಚಾರಗಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ರಾಮಮಂದಿರ ಉದ್ಘಾಟನೆ ನಡೆಸಿದ ಪ್ರಚಾರ ವಿರೋಧ ಪಕ್ಷಗಳಿಗೆ ದೊಡ್ಡ ತಲೆನೋವಾಗಿ ಪರಿಮಣಿಸಿರುವುದು ಸುಳ್ಳಲ್ಲ.

2024ರ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯುವ ಗುರಿಯನ್ನು ಕೇಸರಿ ಪಕ್ಷ ಹಾಕಿಕೊಂಡಿದೆ. ಜನವರಿ 3 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ಬಿಜೆಪಿ ಘಟಕಗಳಿಗೆ ಪತ್ರವನ್ನು ಬರೆದು ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಬಂಧ ವಿಶೇಷ ಸೂಚನೆಯನ್ನು ನೀಡಿದ್ದರು. ಜನವರಿ 14 ರಿಂದ 22ರವರೆಗೆ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಸ್ವಚ್ಥತಾ ಅಭಿಯಾನವನ್ನು ನಡೆಸಬೇಕು. ಸಂಸದರು, ಶಾಸಕರು ಹಾಗೂ ಇತರೆ ಪದಾಧಿಕಾರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಸೂಚಿಸಿದ್ದರು. ಇದರಲ್ಲಿ ಎಲ್ಲೂ ಕೂಡ ಪಕ್ಷದ ಧ್ವಜ ಅಥವಾ ಬ್ಯಾನರ್‌ಗಳನ್ನು ಬಳಸಿಲ್ಲ. ಈ ಅಭಿಯಾನದೊಂದಿಗೆ ಸಂಪೂರ್ಣವಾಗಿ ಜನದೊಂದಿಗೆ ಸಂಪರ್ಕ ಬೆಳೆಸುವ ಉದ್ದೇಶವಾಗಿದೆ.

ರಾಮನ ಮೂಲಕ ಜನರನ್ನ ಸೆಳೆಯುವ ಮಂತ್ರ

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಪ್ರಮುಖ ನಾಯಕರನ್ನು ಹೊರತು ಪಡಿಸಿ ಯಾರೂ ಕೂಡ ಇಲ್ಲಿ ಉಪಸ್ಥಿತರಿರಲಿಲ್ಲ. ಬದಲಾಗಿ ಬಿಜೆಪಿಯ ಎಲ್ಲಾ ಸಂಸದರು, 93 ರಾಜ್ಯಸಭಾ ಸದಸ್ಯರು, 1,435 ಶಾಸಕರು ತಮ್ಮ ರಾಜ್ಯಗಳಲ್ಲಿ ಉಳಿದುಕೊಂಡು ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ವಿವಿಧ ದೇವಾಲಯಗಳಲ್ಲಿ ವಿಶೇಷ ಆರತಿಯಲ್ಲಿ ಭಾಗವಹಿಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು.

ಆರ್‌ಎಸ್‌ಎಸ್‌ ಮತ್ತು ಇತರೆ ಸಂಘಟನೆಗಳ ನೆರವಿನಿಂದ ಅಯೋಧ್ಯೆಯಿಂದ ಅಕ್ಷತಾ ಮತ್ತು ರಾಮಮಂದಿರದ ಫೋಟೊಗಳೊಂದಿಗೆ ಮನೆ ಮನೆಗೆ ತೆರಳಿ ಜನರನ್ನು ಆಹ್ವಾನಿಸುವ ಕೆಲಸ ಮಾಡಿತ್ತು. ಪ್ರಾಣ ಪ್ರತಿಷ್ಠಾಪನೆಯ ದಿನ ದೇವಸ್ಥಾನಗಳಿಗೆ ತೆರಳಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿತ್ತು. ಬಿಜೆಪಿಯ ಸಂಸದರು, ಶಾಸಕರು ಸಮಾಜಿಕ ಮಾಧ್ಯಮಗಳು ಹಾಗೂ ನೇರ ಸಂಪರ್ಕಗಳೊಂದಿಗೆ ವಿವಿಧ ಗುಂಪುಗಳ ಸಭೆಗಳ ಮೂಲಕ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ನಂತರ ಜನರನ್ನು ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಕರೆತರುವ ವ್ಯವಸ್ಥೆಗೂ ಬಿಜೆಪಿಯ ಜನಪ್ರತಿನಿಧಿಗಳು ಕೈಜೋಡಿಸಲಿದ್ದಾರೆ.

ಯಶಸ್ವಿಯಾಗುತ್ತಾ ಪ್ರಧಾನಿ ಮೋದಿ ಅವರ ಮಿಷನ್ ಸೌತ್

ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇದ್ದಾಗ ಅಂದರೆ ಜನವರಿ 14 ರಿಂದ 22ರ ವರೆಗಿನ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಆಚರಣೆಯಗಳನ್ನು ಅನುಸರಿಸುವ ಮೂಲಕ ದಕ್ಷಿಣ ಭಾರತದ ವಿವಿಧ ದೇವಾಲಯಗಳನ್ನು ಸುತ್ತಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇವುಗಳಲ್ಲಿ ವೀರಭದ್ರ ದೇವಾಲಯ, ಗುರುವಾಯೂರ್ ದೇವಾಲಯ ಹಾಗೂ ರಂಗನಾಥ ಸ್ವಾಮಿ ದೇವಾಲಯವೂ ಸೇರಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ಆಗಿದ್ದ ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಹೀನಾಯ ಸೋಲು ಕಂಡಿತ್ತು. ಇದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ದೊಡ್ಡ ಅಘಾತವನ್ನೇ ನೀಡಿದಂತಾಗಿತ್ತು. ಅಲ್ಲದೆ ಬಿಜೆಪಿ ಮುಕ್ತ ದಕ್ಷಿಣ ಭಾರತ ಆಗಿತ್ತು. ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಬಿಜೆಪಿ ಈ ಬಾರಿಯ ಶೇಕಡಾ 50 ರಷ್ಟು ಗುರಿಯನ್ನು ತಲುಪಲು ದಕ್ಷಿಣ ರಾಜ್ಯಗಳ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಲೆಕ್ಕಾಚಾರವನ್ನು ಹಾಕಿಕೊಂಡಂತಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.