ಯಕೃತ್ ದಾನ ಮಾಡಿ ಸಂಬಂಧಿ ಜೀವ ಉಳಿಸಲು ಹೋಗಿ ಪ್ರಾಣ ತೆತ್ತ ಉಪನ್ಯಾಸಕಿ: ಕುಂದಾಪುರ ತಾಲ್ಲೂಕಲ್ಲಿ ಮನಮಿಡಿಯುವ ಘಟನೆ
Sep 17, 2024 12:47 PM IST
ಯಕೃತ್ ದಾನ ಮಾಡಿ ಸೋಂಕಿಗೆ ಸಿಲುಕಿ ಜೀವ ಕಳೆದುಕೊಂಡ ಉಪನ್ಯಾಸಕಿ ಅರ್ಚನಾ ಕಾಮತ್
- ಸಂಬಂಧಿಯೊಬ್ಬರಿಗೆ ಯಕೃತ್ ಭಾಗ ದಾನ ಮಾಡಿದ್ದ ಕುಂದಾಪುರ ತಾಲ್ಲೂಕು ಕೋಟೇಶ್ವರದ ಉಪನ್ಯಾಸಕಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಉಡುಪಿ: ಉಪನ್ಯಾಸಕಿಯೊಬ್ಬರು ಸಂಬಂಧಿಯೊಬ್ಬರ ಜೀವ ಉಳಿಸಿಲು ಹೋಗಿ ತಮ್ಮದೇ ಪ್ರಾಣ ಕಳೆದಕೊಂಡ ಹೃದಯವಿದ್ರಾವಕ ಘಟನೆಯಿದು. ಸಂಕಷ್ಟಕ್ಕೆ ಸಿಲುಕಿದವರ ಬದುಕಿಗೆ ನೆರವಾಗಲು ಹೋಗಿ ಅದೇ ಅವರ ಬದುಕಿಗೂ ಮುಳುವಾಗಿರುವ ಬೇಸರದ ಘಟನೆ. ಇಡೀ ಕುಟುಂಬ ಮಾತ್ರವಲ್ಲದೇ ಸಂಬಂಧಿಕರು, ಪರಿಚಯಸ್ಥರಲ್ಲಿ ಈ ಘಟನೆ ಆಕ್ರಂದನಕ್ಕೆ ಕಾರಣವಾಗಿದೆ. ಅದರಲ್ಲೂ ನಾಲ್ಕು ವರ್ಷದ ಪುಟ್ಟ ಮಗುವನ್ನು ಅಗಲಿರುವ ಮನ ಮಿಡಿಯುವ ಸನ್ನಿವೇಶ. ಇದು ನಡೆದಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ.
ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಉಪನ್ಯಾಸಕಿಯಾಗಿ ಕೆಲ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಅರ್ಚನಾ ಕಾಮತ್(34) ಜೀವ ಕಳೆದುಕೊಂಡವರು. ಮೃತರು ಪತಿ ಚಾರ್ಟರ್ಡ್ ಅಕೌಂಟೆಂಟ್ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ
69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದರು ಅರ್ಚನಾ. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅರ್ಚನಾ ಕಾಮತ್ ಅವರು ಸೋಂಕಿಗೆ ತುತ್ತಾಗಿದರು. ಇದಕ್ಕಾಗಿ ಅವರಿಗೆ ಚಿಕಿತ್ಸೆ ನಡೆದಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಜೀವ ಕಳೆದುಕೊಂಡಿದ್ದಾರೆ ಅರ್ಚನಾ ಕಾಮತ್.
ಕೆಲ ದಿನಗಳ ಹಿಂದೆ ಸಂಬಂಧಿಕರೊಬ್ಬರು ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು. ಕುಟುಂಬದವರು ಯಕೃತ್ ದಾನ ಮಾಡಲು ಅವಕಾಶವಿದೆ. ಅದರಂತೆ ಅವರಿಗೆ ಯಕೃತ್ ಭಾಗವನ್ನು ನೀಡಲು ಅರ್ಚನಾ ಒಪ್ಪಿದ್ದರು. ಒಮ್ಮೆ ಯಕೃತ್‌ನ ಭಾಗವನ್ನು ನೀಡಿದರೆ ಅದು ಕೆಲವೇ ದಿನಗಳಲ್ಲಿ ಬೆಳೆಯುತ್ತದೆ. ಇದರಿಂದ ಸಮಸ್ಯೆ ಇರುವವರಿಗೆ ಒಳ್ಳೆಯದಾಗುತ್ತದೆ. ಯುವ ವಯಸ್ಸಿನವರಾದರೇ ದಾನ ಮಾಡಿದವರ ಆರೋಗ್ಯವೂ ಸುಧಾರಿಸುತ್ತದೆ. ಅರ್ಚನಾ ಅವರು ಕೆಲ ದಿನಗಳ ಹಿಂದೆ ಯಕೃತ್‌ನ ಭಾಗವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ನೀಡಿದ್ದರು. ಇದಾಗಿ ಒಂದಷ್ಟು ದಿನ ಆರಾಮಾಗಿದ್ದ ಅರ್ಚನಾ ಅವರಿಗೆ ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆಂದು ಹೋದಾಗ ಅವರ ಯಕೃತ್ ಗೆ ಸೋಂಕು ತಗುಲಿರುವುದು ಗೊತ್ತಾಗಿತ್ತು. ಯಕೃತ್ ನೀಡಿದಾಗ ಕೆಲವು ದಿನ ಕಡ್ಡಾಯ ವಿರಾಮ ಪಡೆಯಬೇಕು. ಇಲ್ಲದೇ ಇದ್ದರೆ ಸಮಸ್ಯೆ ಆಗಬಹುದು ಎಂದು ತಿಳಿಸಲಾಗಿತ್ತು. ಆದರೆ ಅರ್ಚನಾ ಉಪನ್ಯಾಸಕಿ ವೃತ್ತಿಗೆ ಮರಳಿದ್ದರು. ಇದು ಅವರಿಗೆ ಸಮಸ್ಯೆ ತಂದೊಡ್ಡಿರಬಹುದು ಎಂದು ಶಂಕಿಸಲಾಗಿದೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅರ್ಚನಾ ಅವರಿಗೆ ಮಂಗಳೂರಿನಲ್ಲಿಯೇ ಚಿಕಿತ್ಸೆ ನಡೆದಿತ್ತಾದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕುಟುಂಬದವರು, ಪರಿಚಯಸ್ಥರು, ಸಹದ್ಯೋಗಿಗಳು ಧಾವಿಸಿ ಕಣ್ಣೀರಿಟ್ಟರು.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯವಾಗಿದ್ದವರು. ಒಂದಿಲ್ಲೊಂದು ರೀತಿ ಸಮಾಜಕ್ಕೆ ನೆರವಾಗುತ್ತಿದ್ದರು. ಉಪನ್ಯಾಸಕಿಯಾಗಿಯೂ ಒಳ್ಳೆಯ ಹೆಸರು ಮಾಡಿದ್ದರು. ಈಗ ಒಳಿತು ಮಾಡಲು ಹೋಗಿ ತಮ್ಮದೇ ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ ಎಂದು ಪರಿಚಯಸ್ಥರು ಕಣ್ಣೀರಾದರು.