ಬಜೆಟ್ ವಿಶ್ಲೇಷಣೆ: ಬಂಡವಾಳ ಗಳಿಕೆ ಮೇಲಿನ ತೆರಿಗೆ ಹೆಚ್ಚಳ, ಆರ್ಥಿಕ ತಜ್ಞರ ಮಿಶ್ರ ಪ್ರತಿಕ್ರಿಯೆ; ಹೂಡಿಕೆಯ ನಿರೀಕ್ಷೆಯಲ್ಲಿ ಸರ್ಕಾರ
Jul 23, 2024 08:20 PM IST
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಅನ್ನು ತಜ್ಞರು ನೋಡೋದು ಹೀಗೆ.
- Expert on Budget ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಆರ್ಥಿಕವಾಗಿ ಹೇಗಿದೆ. ಇಲ್ಲಿದೆ ವಿಶ್ಲೇಷಣೆ.
- ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಕ್ಯಾಪಿಟಲ್ ಗೇನ್ ಅಥವಾ ಬಂಡವಾಳ ಗಳಿಕೆ ಎಂದರೆ ಏನು ಎನ್ನುವುದನ್ನು ಅರ್ಥ ಮಾಡಿಕೊಂಡರೆ ಇಂದು ಬಜೆಟ್ ನಲ್ಲಿ ಘೋಷಣೆ ಮಾಡಿರುವ ತೆರಿಗೆ ಪದ್ದತಿ ಅರ್ಥವಾಗುತ್ತದೆ. ಇದರ ಲಾಭ ನಷ್ಟ ಹೇಗಿರುತ್ತದೆ ಎಂದು ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಬಂಡವಾಳ ಗಳಿಕೆ ಎಂದರೆ ಆಸ್ತಿಯ ಮಾರಾಟದಿಂದ ಗಳಿಸಿದ ಲಾಭವು ಖರೀದಿ ಮತ್ತು ಮಾರಾಟದ ನಡುವಿನ ಅವಧಿಯಲ್ಲಿ ಮೌಲ್ಯದಲ್ಲಿ ಎಷ್ಟು ಹೆಚ್ಚಳವಾಗಿದೆ ಎನ್ನುವುದನ್ನು ತೋರಿಸುತ್ತದೆ. ಆಸ್ತಿ ಎಂದರೆ, ಸ್ಥಿರ ಚರಾಸ್ಥಿ, ಕಾರು, ಷೇರು, ವ್ಯವಾಹಾರ ಸೇರಿದಂತೆ ಯಾವುದೇ ರೀತಿಯ ಅಮೂರ್ತ ಆಸ್ತಿಯನ್ನು ಒಳಗೊಂಡಿರಬಹುದು.
ಬಂಡವಾಳ ಗಳಿಕೆಯಲ್ಲಿ ಎರಡು ವಿಧ. ಅಲ್ಪಾವಧಿ ಗಳಿಕೆ ಮತ್ತು ದೀರ್ಘಾವಧಿ ಗಳಿಕೆ. ಅಲ್ಪಾವಧಿ ಗಳಿಕೆ ಎಂದರೆ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಕೊಂಡು ಮಾರಾಟ ಮಾಡಿದ್ದರೆ ಅಲ್ಪಾವಧಿ ಗಳಿಕೆ ಎಂದೂ ಒಂದು ವರ್ಷಕ್ಕಿಂತ ಹೆಚ್ಚು ಅವಧಿಯದ್ದಾಗಿದ್ದರೆ ದೀರ್ಘಾವಧಿ ಗಳಿಕೆ ಎಂದೂ ಕರೆಯಲಾಗುತ್ತದೆ.
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಈ ಬಂಡವಾಳ ಗಳಿಕೆಯ ಎರಡೂ ವಿಧಗಳ ಆದಾಯಕ್ಕೆ ತೆರಿಗೆ ಬದಲಾವಣೆ ಮಾಡಿದ್ದಾರೆ. ದೀರ್ಘಾವಧಿ ಗಳಿಕೆ ಲಾಭಕ್ಕೆ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಿದ್ದರೆ ಅಲ್ಪಾವಧಿ ಗಳಿಕೆಗೆ ತೆರಿಗೆಯನ್ನು ಶೇ.15ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ.
ಕೆಲವು ಅಲ್ಪಾವಧಿಯ ಲಾಭ ಗಳಿಸುವ ಆಸ್ತಿಗಳಿಗೆ ಶೇ.20 ರಷ್ಡು ತೆರಿಗೆ ವಿಧಿಸಿದರೆ ಇನ್ನೂ ಕೆಲವು ಆಸ್ತಿಗಳಿಗೆ ಸಾಮಾನ್ಯ ರೀತಿಯ ತೆರಿಗೆ ಪದ್ದತಿಯನ್ನೇ ಅನುಸರಿಸಲಾಗುತ್ತದೆ. ದೀರ್ಘಾವಧಿ ಲಾಭದ ವಿಷಯದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲವು ಆರ್ಥಿಕ ಆಸ್ತಿಗಳ ಮೇಲೆ ತೆರಿಗೆ ವಿನಾಯಿತಿಯನ್ನು ವಾರ್ಷಿಕ 1 ಲಕ್ಷದಿಂದ 1.25 ಲಕ್ಷದವರೆಗೆ ಹೆಚ್ಚಿಸಲಾಗಿದೆ.
ದೀರ್ಘಾವಧಿ ಗಳಿಕೆಯ ಮೇಲಿನ ಲಾಭಕ್ಕೆ ಶೇ.12.5ರಷ್ಟು ತೆರಿಗೆ ವಿಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವರು ಸರಾಸರಿಯನ್ನು ಲೆಕ್ಕ ಹಾಕಿದರೆ ಈ ತೆರಿಗೆ ತುಂಬಾ ಕಡಿಮೆ ಇದೆ ಎಂದಿದ್ದಾರೆ.
ಈ ಘೋಷಣೆಯ ನಂತರ ಷೇರು ಮಾರುಕಟ್ಟೆಯಲ್ಲಿ 1000 ಅಂಶಗಳಷ್ಟು ಕುಸಿತ ಕಂಡಿದೆ. ಸರ್ಕಾರದ ಈ ಪದ್ದತಿಗೆ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬದಲಾವಣೆ ಸ್ಥಿರ ಮತ್ತು ಹೂಡಿಕೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಕೆಲವು ತಜ್ಞರು ಸ್ವಾಗತಿಸಿದ್ದಾರೆ.
ಅಲ್ಪಾವಧಿಯಿಂದ ದೀರ್ಘಾವಧಿ ಹೂಡಿಕೆಗೆ ಬದಲಾಗುವವರ ಸಂಖ್ಯೆ ಹೆಚ್ಚಾಗಲಿದ್ದು, ಸುಸ್ಥಿರ ಆಸ್ತಿ ಹೆಚ್ಚಾಗಲಿದೆ ಎನ್ನುವುದು ಸರ್ಕಾರದ ನಿರೀಕ್ಷೆಯಾಗಿರಬಹುದು. ಆದರೆ ತೆರಿಗೆ ಹೆಚ್ಚಳದಿಂದ ನಗದು ವ್ಯವಹಾರ ಹೆಚ್ಚಾಗಬಹುದು ಎಂಬ ಆತಂಕವೂ ಕಾಡಲಿದೆ ಎನ್ನುತ್ತಾರೆ.
ಉದಾಹರಣೆಗೆ 2019-20ರಲ್ಲಿ 1 ಕೋಟಿ ರೂ. ಗೆ ಆಸ್ತಿಯನ್ನು ಖರೀದಿ ಮಾಡಿದ್ದರೆ 2024-25ರಲ್ಲಿ ಆ ಅಸ್ತಿಯ ಬೆಲೆ 1.25 ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ಭಾವಿಸೋಣ. ದೀರ್ಘಾವಧಿ ಗಳಿಕೆಯ ಲಾಭ 25 ಲಕ್ಷ ರೂ.ಗಳಾಗಿದ್ದು, ಶೇ.12.5 ತೆರಿಗೆ ಪ್ರಕಾರ 3.12 ಲಕ್ಷ ರೂ ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಆಸ್ತಿಗಳ ಮಾರಾಟದ ಮೇಲೆ ಪರಿಣಾಮ ಬೀರಲಿದೆ ಮತ್ತು ನಗದು ವ್ಯವಹಾರಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದೂ ಅಭಿಪ್ರಾಯಪಡುತ್ತಾರೆ.
ಷೇರು ಮಾರುಕಟ್ಟೆಯ ಮೇಲೆ ಇದು ಹೊಡೆತ ನೀಡುತ್ತದೆ. ಬಂಡವಾಳ ಗಳಿಕೆಯ ಮೇಲಿನ ತೆರಿಗೆಯಲ್ಲಿ ಈ ಬದಲಾವಣೆಯನ್ನು ನಿರೀಕ್ಷಿಸಿರಲಿಲ್ಲ ಎಂದೂ ಕೆಲವು ಷೇರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಷೇರು ಮಾರುಕಟ್ಟೆ ಹಂತ ಹಂತವಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಈ ತೆರಿಗೆ ಪದ್ದತಿಯಿಂದ ಶಂಕೆ ಉಂಟಾಗುತ್ತದೆ ಎಂದೂ ಅಭಿಪ್ರಾಯಪಡುತ್ತಾರೆ.
ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು