ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಕಿಡಿ
Oct 11, 2024 06:40 PM IST
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ದರ್ಶನ ಪಡೆದ ಸಂದರ್ಭ. ದರ್ಶನದ ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
- HD Kumaraswamy: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆಯಾಗಿದೆ. ಅದರ ಸತ್ಯಾಂಶಗಳು ಹೊರವರುವ ಕಾಲ ದೂರ ಇಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರು: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ವಿಜಯದಶಮಿ ಮತ್ತು ಆಯುಧಪೂಜೆ ಹಿನ್ನೆಲೆ ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರು. ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ ಅವರು ಇದೇ ವೇಳೆ ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚಿಸಲು ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಎಸ್ಐಟಿ ತನಿಖೆಗೆ ಎಸ್ಐಟಿ ರಚಿಸುವ ಕುರಿತು ಚರ್ಚೆ ನಡೆದಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮದೇನು ತಕರಾರಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇವರು ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇದೇ ಸಿದ್ದರಾಮಯ್ಯ ಸದನದಲ್ಲಿ ಚರ್ಚೆ ಮಾಡಿದ್ದರು. ಸರ್ಕಾರ ರಚನೆಯಾಗಿ 15 ತಿಂಗಳು ಆಗಿದೆ. ಆದರೆ ಇಷ್ಟು ದಿನ ಸುಮ್ಮನಿದ್ದವರು, ಈಗ ತನಿಖೆ ಮಾಡುತ್ತಾರಾ? ಅವರ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡುತ್ತಿದ್ದಾರೆ ಎಂದು ಚಾಮುಂಡಿ ಬೆಟ್ಟದಲ್ಲಿ ಹೆಚ್ಡಿಕೆ ಹೇಳಿಕೆ ನೀಡಿದ್ದಾರೆ.
ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ
ದುಷ್ಟಶಕ್ತಿಗಳ ಎದುರು ಸತ್ಯದ ಜಯ ಜಾಹೀರಾತು ಕುರಿತು ಮಾತನಾಡಿದ್ದು, ಕಾಂಗ್ರೆಸ್ ಪಕ್ಷದವರು ಇಂದು ಪೇಪರ್ನಲ್ಲಿ ಅದ್ಯಾವುದೋ ಜಾಹಿರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ. ಕರ್ನಾಟಕ ರಾಜ್ಯವನ್ನು ವಾಮಾಮಾರ್ಗ, ಮೋಸದಿಂದ ಅಸ್ಥಿರಗೊಳಿಸಿದ್ದಾರೆ. ಆದರೆ ವಾಮಾಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿರುವ ಸರ್ಕಾರ ಇದು. ಇವರು ಯಾವತ್ತು ಸತ್ಯ, ಧರ್ಮ ಉಳಿದಿದ್ದಾರೆ. ಸಿದ್ದರಾಮಯ್ಯ ಅವರನ್ನ ಕೇಳುತ್ತೇನೆ. ಬಡವರಿಗೆ ಕೊಡುವ ಹಣವನ್ನು ವಾಲ್ಮೀಕಿ ನಿಗಮದಲ್ಲಿ ನುಂಗಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಸೈಟ್ ಪಡೆದಿದ್ದರು. ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ವಾಪಸ್ಸು ಕೊಟ್ಟಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆಯಾಗಿದೆ. ಅದರ ಸತ್ಯಾಂಶಗಳು ಹೊರವರುವ ಕಾಲ ದೂರ ಇಲ್ಲ. ಸಿದ್ರಾಮಣ್ಣನ ಬಗ್ಗೆ ಹಿನಕಲ್ ಸಾಕಮ್ಮನ ಕೇಳಿದ್ರೆ ಗೊತ್ತಾಗುತ್ತದೆ. ಯಾವ ವಾಮಾಮಾರ್ಗದಲ್ಲಿ ಸೈಟ್ ಪಡೆದಿದ್ದಾರೆ ಗೊತ್ತಾಗುತ್ತದೆ. ಇದೆಲ್ಲ ಇತಿಹಾಸ ಇದೆ. ಹಾಗಾಗಿ ಇಲ್ಲಿ ಸ್ಥಿರಗೊಳಿಸೋದು ಅಸ್ಥಿರ ಗೊಳಿಸೊದು ನಮ್ಮ ಕೈಯಲ್ಲಿಲ್ಲ. ಎಲ್ಲ ಚಾಮುಂಡಿ ಅಮ್ಮನ ಕೈಯಲ್ಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಕಮಿಷನ್ ತಗೊಂಡಿಲ್ಲ ಎಂದ ಹೆಚ್ಡಿಕೆ
ಹೆಚ್ಡಿಕೆ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎನ್ನುವ ವಿಚಾರಕ್ಕೆ ಕೇಂದ್ರ ಸಚಿವ ಪ್ರತಿಕ್ರಿಯಿಸಿ, ನಾನು ಎಷ್ಟು ದಾಖಲೆ ಕೊಡಲಿ, ಈಗ ಕೊಟ್ಟಿರುವುದೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಮುಖಂಡರೇ ಇದರ ಬಗ್ಗೆ ಮಾತನಾಡುತ್ತಾರೆ. ಪೆನ್ ಡ್ರೈವ್ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇದ್ದದ್ದು. ಅಶ್ಲೀಲ ಚಿತ್ರ ಇರಲಿಲ್ಲ ಅದರಲ್ಲಿ. ನಾನು ಕಮಿಷನ್ ಹೊಡಿಬೇಕು ಎನ್ನುವಂತಿದ್ದರೆ ರೈತರ ಸಾಲ ಮನ್ನಾ ಮಾಡಬೇಕಾಗಿರಲಿಲ್ಲ. ನಾನು 2 ಬಾರಿ ಮುಖ್ಯಮಂತ್ರಿಯಾದಾಗಲೂ ಯಾರಿಗೂ ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ ಎಂದು ತಾಯಿ ಸನ್ನಿಧಾನದಲ್ಲಿ ಹೇಳುತ್ತಿದ್ದೇನೆ ಎಂದರು.
ಡಿನ್ನರ್ ಮೀಟಿಂಗ್ ಬ್ರೇಕ್ ಫಾಸ್ಟ್ ಎಲ್ಲಾ ಅವರಿಗೆ ಸೇರಿದ್ದು. ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಪಕ್ಷಕ್ಕೆ ಸೇರಿದ್ದು. ನಾನು ಮುಖ್ಯಮಂತ್ರಿ ಇದ್ದಾಗ ಜಾತಿಗಣತಿ ವರದಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ನಾನು 14 ತಿಂಗಳು ಸಿಎಂ ಆಗಿದ್ದೆ, ಅವರು ಬಂದು 15 ತಿಂಗಳಾಗಿದೆ. ಯಾಕೆ ವರದಿ ಬಿಡುಗಡೆ ಮಾಡಿಲ್ಲ? ಪ್ರತಿನಿತ್ಯ ಕುರಿ ಕಾಯೋನು, ಅದಕ್ಕೆ ಹೊಟ್ಟೆ ಉರಿ ಎಂದು ಹೇಳಿಕೊಂಡು ತಿರುಗುತ್ತಾರೆ. ಮೋದಿ ಟೀ ಮಾರಿಲ್ವಾ? ನಾವು ಅಸೂಯೆ ಪಟ್ರೇ ಆಗುತ್ತಾ? ಜನ ತೀರ್ಮಾನ ಮಾಡಬೇಕು? ಹತ್ತು ವರ್ಷದ ಹಿಂದೆ ಮಾಡಿದ ಜಾತಿಗಣತಿ ವರದಿಯನ್ನು ಈಗ ಏನು ಮಾಡುತ್ತೀರಿ. ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಎಂದು ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ ಎಂದು ಚಾಮುಂಡಿ ಬೆಟ್ಟದಲ್ಲಿ ಹೆಚ್ಡಿಕೆ ಕಿಡಿಕಾರಿದ್ದಾರೆ.