Breaking News: ಮೈಸೂರು ರಾಜಪರಿವಾರಕ್ಕೆ ದಸರಾ ಸಂಭ್ರಮದಲ್ಲಿ ಹೊಸ ಅತಿಥಿಯ ಆಗಮನ, 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ ಒಡೆಯರ್
ಮೈಸೂರು ರಾಜವಂಶಸ್ಥರಾದ ಯದುವೀರ್ ಅವರು ಎರಡನೇ ಬಾರಿ ಅಪ್ಪ ಆಗಿದ್ದಾರೆ. ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಎರಡನೇ ಗಂಡು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ.
ಮೈಸೂರು: ಮೈಸೂರಿನ ರಾಜವಂಶಸ್ಥರ ಕುಟುಂಬದಲ್ಲಿ ದಸರಾ ವೇಳೆಯೇ ಸಂಭ್ರಮದ ಸುದ್ದಿ ದೊರೆತಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ದೇವಿ ಒಡೆಯರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವರಿಗೆ ಎರಡನೇ ಗಂಡು ಮಗು. ಈಗಾಗಲೇ ಆದ್ಯವೀರ್ ಏಳು ವರ್ಷದವನಿದ್ದು, ಈಗ ಮತ್ತೊಬ್ಬ ಪುತ್ರ ರಾಜವಂಶಕ್ಕೆ ಬಂದಿದ್ದಾನೆ. ಯದುವೀರ್ ಅವರು ಖಾಸಗಿ ದರ್ಬಾರ್ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು. ಶುಕ್ರವಾರ ಆಯುಧಪೂಜೆ ಸಂಭ್ರಮದಲ್ಲಿದ್ದರು. ಈ ವೇಳೆ ಖುಷಿಯ ವಿಚಾರ ಬಂದಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಡೀ ಕುಟುಂಬ ದಸರಾದ ಸಡಗರದಲ್ಲಿದೆ. ಈಗಾಗಲೇ ಎಂಟು ದಿನ ಖಾಸಗಿ ದರ್ಬಾರ್ ನಡೆಸಿರುವ ಯದುವೀರ್ ಅವರು ನಾಳೆ ವಿಜಯದಶಮಿಗೆ ಅಣಿಯಾಗುತ್ತಿದ್ದರು. ಇದರ ನಡುವೆ ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ ನವರಾತ್ರಿ ದಿನವೇ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್ ಒಡೆಯರ್ ಅವರಿಗೆ ತಲುಪಿತು. ಇದರಿಂದ ಅವರು ಖುಷಿಗೊಂಡರು.
ಖಾಸಗಿ ದರ್ಬಾರ್ ಇರುವ ಕಾರಣದಿಂದ ಕಂಕಣಧಾರಿಯಾಗಿರುವ ಯದುವೀರ್ ಅರಮನೆಯಿಂದ ಹೊರಗೆ ಹೋಗುವುದಿಲ್ಲ. ಇಂದು ಖಾಸಗಿ ದರ್ಬಾರ್ ಮುಗಿದ ಬಳಿಕ ಹೊರ ಬರಲಿದ್ದಾರೆ.
ಈಗಾಗಲೇ ಎಂಟು ತಿಂಗಳು ಮುಗಿದಿದ್ದರಿಂದ ಹೆರಿಗೆ ದಿನಗಳನ್ನು ತ್ರಿಷಿಕಾ ಎಣಿಸುತ್ತಿದ್ದರು. ಇದರಿಂದ ಈ ಬಾರಿ ಅವರು ಹೆಚ್ಚು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ನವರಾತ್ರಿ ವೇಳೆಯೇ ಮಗು ಆಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು. ಈಗಾಗಲೇ ಒಬ್ಬ ಮಗ ಇರುವುದರಿಂದ ಮಗಳು ಅರಮನೆಗೆ ಮಹಾಲಕ್ಷ್ಮಿ ರೂಪದಲ್ಲಿ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಎರಡನೇ ಬಾರಿಯೂ ಪುತ್ರನೇ ಆಗಮಿಸಿದ್ದಾನೆ ಎಂದು ರಾಜವಂಶಸ್ಥರೊಬ್ಬರು ಮಾಹಿತಿ ನೀಡಿದರು.
ರಾಜಸ್ಥಾನ ಮೂಲದ ಡುಂಗರ್ ಪುರ್ ಕುಟುಂಬದ ತ್ರಿಷಿಕಾಕುಮಾರಿ ಅವರನ್ನು 2016ರಲ್ಲಿ ಯದುವೀರ್ ಅವರು ವಿವಾಹವಾಗಿದ್ದರು. ಆನಂತರ ಆದ್ಯವೀರ್ ಜನಿಸಿದ್ದ. ಈಗ ಎರಡನೇ ಮಗುವಿನ ಜನನವಾಗಿದೆ. ಯದುವೀರ್ ನಾಲ್ಕು ತಿಂಗಳ ಹಿಂದೆಯಷ್ಟೇ ಮೈಸೂರು ಕೊಡಗು ಸಂಸದರಾಗಿ ಆಯ್ಕೆಯಾಗಿದ್ದಾರೆ.