logo
ಕನ್ನಡ ಸುದ್ದಿ  /  ಕರ್ನಾಟಕ  /  ಭ್ರಷ್ಟಾಚಾರವನ್ನೇ ಉದ್ಯಮ ಮಾಡ್ಕೊಂಡಿದೆ; ರಾಜ್ಯ ಸರ್ಕಾರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಭ್ರಷ್ಟಾಚಾರವನ್ನೇ ಉದ್ಯಮ ಮಾಡ್ಕೊಂಡಿದೆ; ರಾಜ್ಯ ಸರ್ಕಾರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

Prasanna Kumar P N HT Kannada

Oct 11, 2024 05:39 PM IST

google News

ಭ್ರಷ್ಟಾಚಾರವನ್ನೇ ಉದ್ಯಮ ಮಾಡ್ಕೊಂಡಿದ್ದಾರೆ; ರಾಜ್ಯ ಸರ್ಕಾರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

    • Shobha Karandlaje: ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕೆ ಉಪಹಾರ ಏರ್ಪಡಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. 
ಭ್ರಷ್ಟಾಚಾರವನ್ನೇ ಉದ್ಯಮ ಮಾಡ್ಕೊಂಡಿದ್ದಾರೆ; ರಾಜ್ಯ ಸರ್ಕಾರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ
ಭ್ರಷ್ಟಾಚಾರವನ್ನೇ ಉದ್ಯಮ ಮಾಡ್ಕೊಂಡಿದ್ದಾರೆ; ರಾಜ್ಯ ಸರ್ಕಾರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಮೈಸೂರು: ಮೈಸೂರು ಜಂಬೂಸವಾರಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಇದೇ ವೇಳೆ ದಸರಾ ಗಜಪಡೆಯ ಕಾವಾಡಿಗಳು, ಮಾವುತರ ಕುಟುಂಬಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬೆಳಗಿನ ಉಪಹಾರ ಕೂಟ ಏರ್ಪಡಿಸಿದ್ದರು. ಇಡ್ಲಿ, ದೋಸೆ, ಪೊಂಗಲ್, ಹೋಳಿಗೆ, ಕೇಸರಿ ಬಾತ್ ಬಡಿಸಿದ ಸಚಿವೆ, ಮಾವುತರು, ಕಾವಾಡಿಗಳ ಕುಟುಂಬಸ್ಥರಿಗೆ ದಸರಾ ಹಬ್ಬದ ಶುಭ ಕೋರಿದರು. ಇದೇ ವೇಳೆ ಶೋಭಾ ಕರಂದ್ಲಾಜೆಗೆ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು‌ ಸಾಥ್ ನೀಡಿದರು.

ತದನಂತರ ಮಾತನಾಡಿದ, ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಅದೇ ರೀತಿ ಕಾವಾಡಿಗರು, ಮಾವುತರ ಕುಟುಂಬಕ್ಕೆ ಉಪಹಾರ ಬಡಿಸಿದ್ದೇನೆ. ದಸರಾ ವೇಳೆ ಮಾವುತರು, ಕಾವಾಡಿಗಳು ಕಾಡಿನಿಂದ ನಾಡಿಗೆ ಬರುತ್ತಾರೆ. ಮುಂಚೆ ಮಾವುತರು, ಕಾವಾಡಿಗರಿಗೆ 3 ಸಾವಿರ ಗೌರವ ಧನ ನೀಡಲಾಗುತ್ತಿತ್ತು. ಅಂದು ಮಾವುತರು, ಕಾವಾಡಿಗರು ಪ್ರತಿಭಟನೆ ನಡೆಸಿದ್ದರು. ನಾವು ಇದನ್ನು ಮನಗಂಡು ಅವರಿಗೆ ಪ್ರತಿ ತಿಂಗಳು ಸಂಬಳ ನೀಡುವ ಕೆಲಸ ಮಾಡಿದೆವು. ಯಡಿಯೂರಪ್ಪ ಅವರು ಇದ್ದಾಗ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಬಳ ಕೊಡಿಸುವ ಕೆಲಸ ಮಾಡಿದೆವು. ಅಲ್ಲದೆ, ಅವರ ಮಕ್ಕಳಿಗೂ ಶಿಕ್ಷಣ ಕೊಡಿಸುವ ವ್ಯವಸ್ಥೆಯೂ ಕೊಡಿಸಿದೆವು ಎಂದು ಹೇಳಿದ್ದಾರೆ.

ಚಾಮುಂಡಿ ಬೆಟ್ಟ ಸ್ವಚ್ಛವೇ ಇಲ್ಲ ಎಂದ ಶೋಭಾ

ನೆನ್ನೆಯಷ್ಟೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮುಖಾಂತರ ತೆರಳಿ ದರ್ಶನ ಪಡೆದೆ. ಬೆಟ್ಟದಲ್ಲಿ ಶುಚಿತ್ವವೇ ಇಲ್ಲ. ದೇವಸ್ಥಾನದ ಆವರಣದಲ್ಲಿ ಯಾರೋ ಖಾಸಗಿ ವ್ಯಕ್ತಿಗಳು ಇದ್ದಾರೆ. ಅವರಿಗೆ ನಮ್ಮ ಮುಖ ಪರಿಚಯವೇ ಇಲ್ಲ. ದರ್ಶನಕ್ಕೆ ಬರುವ ಜನರನ್ನು ಎಳೆದು ಹಾಕುವ ಕೆಲಸ ಆಗುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದು. ಸ್ವಚ್ಛತೆ ಬಗ್ಗೆ ನಾವು ಸಾಕಷ್ಟು ಮಾತನಾಡುತ್ತೇವೆ. ದಸರಾ ಆಚರಣೆ ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಇದರ ಜೊತೆಗೆ ಅಭಿವೃದ್ಧಿಯನ್ನೂ ಸಹ ಮಾಡಬೇಕು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯಗೆ ತಿರುಗುಬಾಣ

ಜಾತಿಗಣತಿ ವರದಿ ಜಾರಿ ವಿಚಾರದ ಕುರಿತು ಪ್ರತಿಕ್ರಿಯಿಸಿ ಮಾತನಾಡಿದ ಅವರು, ವಿರೋಧ ವ್ಯಕ್ತಪಡಿಸಿದರು. ಜಾತಿಜನಗಣತಿ ಒಡೆದು ಆಳುವ ನೀತಿ‌. ಹಿಂದೆ ಬ್ರಿಟಿಷರು ಮಾಡಿದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ರಾಜ್ಯದ ಬಹು ಸಂಖ್ಯಾತರು ಜಾತಿಗಣತಿ ವರದಿಯನ್ನು ವಿರೋಧ ಮಾಡಿದ್ದಾರೆ. ಬಹುಸಂಖ್ಯಾತರಿಗೆ ಅಪಮಾನ ಮಾಡಲು, ಜಾತಿ ಜಾತಿ ನಡುವೆ ಬೆಂಕಿ ಹಚ್ಚಲು, ಬಹು ಸಂಖ್ಯಾತರ‌ನ್ನು ಒಡೆದು ಹಾಕಲು ಯೋಚನೆ ಮಾಡುತ್ತಿದ್ದಾರೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಇದು ಜಾರಿಯಾದರೆ ಸಿದ್ದರಾಮಯ್ಯರಿಗೇ ತಿರುಗುಬಾಣವಾಗುತ್ತದೆ ಎಂದು ಹೇಳಿದ್ದಾರೆ.

ಅವರಿಗೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು

ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ಪತ್ರಿಕಾ ಜಾಹೀರಾತು ಕುರಿತು ಪ್ರತಿಕ್ರಿಯಿಸಿದ ಕರಂದ್ಲಾಜೆ, ದುಷ್ಟ ಶಕ್ತಿ ಯಾರು ಎಂಬುದನ್ನು ಸರ್ಕಾರ ತೀರ್ಮಾನ ಮಾಡಲ್ಲ, ಜನರು ತೀರ್ಮಾನ ಮಾಡುತ್ತಾರೆ. ಯಾರು ಸರ್ಕಾರದ ಹಣ, ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಯಾರು ಭ್ರಷ್ಟಾಚಾರವನ್ನೇ ಉದ್ಯಮ ಮಾಡಿಕೊಂಡಿದ್ದಾರೆ. ವರ್ಗಾವಣೆಗೂ ದುಡ್ಡು, ಕೆಲಸ ಕೊಡಿಸಲಿಕ್ಕೂ ದುಡ್ಡು. ಎಲ್ಲರದಲ್ಲೂ ದುಡ್ಡು ತಗೋಳ್ತಾರೆ, ಅಂತವರು ಯಾವ ದೃಷ್ಟರ ಬಗ್ಗೆ ಮಾತನಾಡುತ್ತಾರೆ ಎಂದು ಅವರಿಗೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು. ಇಂತಹ ಜಾಹೀರಾತಿಗೆ ಸರ್ಕಾರದ ಹಣ ಬಳಸಿ ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸೈಟ್ ವಾಪಸ್ ನೀಡಿದ್ದೇಕೆ?

ಮೈಸೂರಿನ ಮುಡಾ ಹಗರಣದಲ್ಲಿ ಸ್ವತಃ ಸಿಎಂ ಧರ್ಮಪತ್ನಿ ಪಾರ್ವತಿ ಅವರು ಸೈಟ್ ವಾಪಸ್ ಮಾಡಿದರು. ಯಾಕೆ ವಾಪಸ್ ಮಾಡಿದ್ರು, ತಪ್ಪು ಮಾಡಿರುವುದಕ್ಕೆ ತಾನೇ, ಮರಳಿಸಿರುವುದು. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವ ಕಾರಣ ಇಡೀ ವರದಿ ನೀಡಿದೆ. ಪರಿಶಿಷ್ಟ ಪಂಗಡದ ಹಣವನ್ನು ಆಂಧ್ರ ಪ್ರದೇಶ, ಬಳ್ಳಾರಿ ಚುನಾವಣೆಗೆ ನೀಡಿರುವುದರ ಬಗ್ಗೆ ವರದಿ ನೀಡಿದೆ. ಯಾರು ಸರ್ಕಾರವನ್ನು ಲೂಟಿ ಮಾಡುತ್ತಿದ್ದಾರೆ. ನೀವೇನು ಬೇಕಿದ್ರು ಜಾಹೀರಾತು ನೀಡಬಹುದು. ಏನು ಬೇಕಾದರೂ ಭಾಷಣ ಮಾಡಬಹುದು ಸರ್ಕಾರ ನಿಮ್ಮ ಕೈಲಿದೆ. ಯಾರು ದುಷ್ಟರು ಯಾರು ಶಿಷ್ಟರು ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ