ಮೈಸೂರು ಅರಮನೆಯಲ್ಲಿ ದಸರಾ ವೇಳೆ ಅಶೌಚ; ಯದುವೀರ್ ಖಾಸಗಿ ದರ್ಬಾರ್,ವಿಜಯದಶಮಿ ಚಟುವಟಿಕೆಯಲ್ಲಿ ಭಾಗಿಯಾಗುವರೇ?
ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ದಸರಾ ವೇಳೆ ಹೊಸ ಸದಸ್ಯನ ಪ್ರವೇಶವಾಗಿದೆ. ನವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳು ಅಶೌಚದಿಂದ ತುಸು ಏರುಪೇರಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೈಸೂರು: ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಕುಟುಂಬದಲ್ಲಿ ಒಂದು ಕಡೆ ಎರಡನೇ ಮಗು ಜನಿಸಿರುವ ಖುಷಿ ಮನೆ ಮಾಡಿದ್ದರೆ, ಇನ್ನೊಂದು ಕಡೆ ಅಶೌಚವೂ ಮನೆ ಮಾಡಿದೆ. ಇದರಿಂದ ಇನ್ನು ಎರಡು ದಿನಗಳ ಕಾಲ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ನಡೆಸಬೇಕಿದ್ದ ನವರಾತ್ರಿ ಹಾಗೂ ವಿಜಯದಶಮಿ ಧಾರ್ಮಿಕ ವಿಧಿವಿಧಾನಗಳನ್ನು ಯಾರು ಮುನ್ನಡೆಸಲಿದ್ದಾರೆ. ರಾಜವಂಶಸ್ಥರಲ್ಲಿ ಯದುವೀರ್ ನೇರ ಸಂಬಂಧಿಗಳಿಗೆ ಅಶೌಚ ಅನ್ವಯಿಸಲಿದೆಯೇ, ಅವರೆಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಬಹುದೇ ಎನ್ನು ಪ್ರಶ್ನೆ ಎದುರಾಗಿದೆ. ಮೈಸೂರು ಯದುವಂಶದಲ್ಲಿ ಹಿಂದೆಲ್ಲಾ ಹಲವು ಬಾರಿ ಮಕ್ಕಳು ಹುಟ್ಟಿದ್ದರೂ ನವರಾತ್ರಿ ವೇಳೆ ಜನನ ಆಗಿರಲಿಲ್ಲ. ಮಗು ಜನಿಸಿದಾಗ ಇಂತಹ ಸನ್ನಿವೇಶ ಎದುರಾಗಿರುವುದು ಇದೇ ಮೊದಲ ಬಾರಿ. ಈ ಸಂಬಂಧ ಮೈಸೂರು ರಾಜವಂಶಸ್ಥರ ಪುರೋಹಿತರು, ಆಗಮಿಕರು ಈ ಕುರಿತು ಚರ್ಚಿಸುತ್ತಿದ್ದು, ಧಾರ್ಮಿಕ ಚಟುವಟಿಕೆಗಳ ಕುರಿತು ನಿರ್ಧರಿಸಲಿದ್ದಾರೆ.
ಈಗಾಗಲೇ ಎಂಟು ದಿನಗಳ ಖಾಸಗಿ ದರ್ಬಾರ್ ಚಟುವಟಿಕೆಯನ್ನು ಯದುವೀರ್ ಮುಗಿಸಿದ್ದಾರೆ.ನವರಾತ್ರಿಯ ಆಯುಧ ಪೂಜೆ ಚಟುವಟಿಕೆಗಳೂ ಅರಮನೆ ಆವರಣದಲ್ಲಿ ನಡೆದಿವೆ. ಮಧ್ಯಾಹ್ನ ಜಟ್ಟಿ ಕಾಳಗ ಸಹಿತ ಹಲವು ಧಾರ್ಮಿಕ ಸಂಪ್ರದಾಯಗಳಿವೆ. ಸಂಜೆ ಕೊನೆ ದಿನದ ಖಾಸಗಿ ದರ್ಬಾರ್ ಅನ್ನು ಯದುವೀರ್ ಒಡೆಯರ್ ಮುಗಿಸಬೇಕು. ಶನಿವಾರ ದಂದು ವಿಜಯದಶಮಿಯ ಶಮಿ ಪೂಜೆಯಲ್ಲಿ ಭಾಗಿಯಾಗಬೇಕು. ಅರಮನೆ ಒಳಗಿನ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಬೇಕು. ಆನಂತರ ವಿಜಯದಶಮಿ ಅಂಗವಾಗಿ ನಡೆಯುವ ಜಂಬೂ ಸವಾರಿಯ ಪುಷ್ಪಾರ್ಚನೆಯಲ್ಲೂ ಯದುವೀರ್ ಭಾಗಿಯಾಗಬೇಕು. ಇದರ ನಡುವೆ ರಾಜವಂಶಸ್ಥರ ಕುಟುಂಬದಲ್ಲಿ ನವರಾತ್ರಿ ವೇಳೆಯೇ ಮಗು ಜನಿಸಿರುವುದು ಒಂದೆಡೆ ಖುಷಿ ತಂದರೂ ನವರಾತ್ರಿ ಕೊನೆ ದಿನಗಳಲ್ಲಿ ಕೊಂಚ ಸಂಕಟವನ್ನೂ ಉಂಟು ಮಾಡಿದೆ.
ಅರಮನೆಯ ಮೂಲಗಳ ಪ್ರಕಾರ, ಈಗಾಗಲೇ ಯದುವೀರ್, ಅವರ ಪತ್ನಿ ತ್ರಿಷಿಕಾಕುಮಾರಿ ದೇವಿ, ಪುತ್ರ ಆದ್ಯವೀರ್ ಒಡೆಯರ್ ಹಾಗೂ ತಾಯಿ ಪ್ರಮೋದಾ ದೇವಿ ಅವರಿಗೆ ಹತ್ತು ದಿನದ ಅಶೌಚ ಇರಲಿದೆ. ಇದು ಅಶೌಚಕ್ಕೆ ಕಾರಣವಾಗಲಿದ್ದು. ಧಾರ್ಮಿಕ ವಿಧಿ ವಿಧಾನಗಳಿಗೆ ಅಡ್ಡಿಯಾಗಲಿದೆ. ಅರಮನೆಯಲ್ಲಿ ವಿಧಿ ವಿಧಾನಗಳನ್ನು ಮಾಡಲು ಅಡ್ಡಿಯಾಗಬಹುದು. ಅದರಲ್ಲೂ ಮೈಸೂರು ರಾಜವಂಶಸ್ಥರು ಧಾರ್ಮಿಕ ನಂಬಿಕೆ ಉಳ್ಳವರು. ಶ್ರದ್ದೆಯಿಂದ ಪಾಲಿಸುವವರು. ಈ ಕಾರಣದಿಂದ ಯದುವೀರ್ ಅವರು ಪುರೋಹಿತರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಯದುವೀರ್ ಅವರು ಕಂಕಣಧಾರಣೆ ಮಾಡಿರುವುದರಿಂದ ಅವರು ಎಲ್ಲಾ ಧಾರ್ಮಿಕ ಚಟುವಟಿಕೆಗಳು, ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಕಂಕಣ ಅವರಿಗೆ ಈ ಎಲ್ಲಾ ಅಶೌಚಗಳಿಂದ ದೂರ ಮಾಡಲಿದೆ. ಯಾವುದೇ ಅಡ್ಡಿಯೂ ಇದಕ್ಕೆ ಆಗದು. ಉಳಿದ ನಾಲ್ವರಿಗೆ ಅಶೌಚ ಬರಲಿದೆ. ಅವರಲ್ಲಿ ತ್ರಿಷಿಕಾ, ಆದ್ಯವೀರ್, ನವಜಾತ ಶಿಶು ಹಾಗೂ ಪ್ರಮೋದಾದೇವಿ ಒಡೆಯರ್ ಅವರು ಆಸ್ಪತ್ರೆಯಲ್ಲಿದ್ದಾರೆ. ದಸರಾ ಮುಗಿದ ನಂತರವೇ ಭಾನುವಾರ ಅವರು ಅರಮನೆಗೆ ಆಗಮಿಸಿದರೆ ಸಮಸ್ಯೆಯಾಗದು ಎನ್ನುವ ಸಲಹೆಯನ್ನು ಪುರೋಹಿತರು ನೀಡಿದ್ದಾರೆ. ಕುಟುಂಬದ ಇತರರ ಉಪಸ್ಥಿತಿಯಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಯದುವೀರ್ ಮುಂದುವರೆಸಬಹುದು. ಇದಕ್ಕೆ ಬೇಕಾದ ಸ್ವಚೃತೆ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಪುರೋಹಿತರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವಾರು ವರ್ಷಗಳ ಹಿಂದೆ ಸಂಬಂಧಿಯೊಬ್ಬರು ತೀರಿಕೊಂಡಿದ್ದರಿಂದ ಆಗಿನ ಮಹಾರಾಜರು ಕಂಕಣಧಾರಿಯಾಗಿ ವಿಧಿ ವಿಧಾನ ನೆರವೇರಿಸಿದ್ದರು. ಆನಂತರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತೀರಿಕೊಂಡ ವರ್ಷದಲ್ಲೂ ಉತ್ತರಾಧಿಕಾರಿ ಇಲ್ಲದೇ ಇದ್ದುದರಿಂಧ ಕತ್ತಿಯನ್ನು ಇರಿಸಿ ವಿಧಿ ವಿಧಾನ ನೆರವೇರಿಸಲಾಗಿತ್ತು. ಅದನ್ನು ಬಿಟ್ಟರೆ ಬೇರೆ ಸಮಯದಲ್ಲಿ ಈ ಸಮಸ್ಯೆ ಎದುರಾಗಿಲ್ಲ.
ಮೈಸೂರು ರಾಜವಂಶಸ್ಥರದ್ದು ಎಂಟು ನೂರು ವರ್ಷಕ್ಕೂ ಹಳೆಯದಾದ ಇತಿಹಾಸ ಇರುವ ಕುಟುಂಬ. ಇಲ್ಲಿ ಹಲವು ಬಾರಿ ಸಾವು, ಜನನದ ಅಶೌಚದ ಕ್ಷಣ ಎದುರಾಗಿವೆ. ಆದರೆ ದಸರಾ ವೇಳೆ ಈ ರೀತಿ ಹಿಂದೆ ಆಗಿರಲಿಲ್ಲ ಎಂದು ರಾಜವಂಶಸ್ಥರೇ ಹೇಳಿದ್ದಾರೆ. ಈ ಕಾರಣದಿಂದ ಯದುವೀರ್ ಒಡೆಯರ್ ಅವರು ಪುರೋಹಿತರೊಂದಿಗೆ ಚರ್ಚಿಸಿ ಕಂಕಣಧಾರಿಯಾಗಿರುವುದರಿಂದ ಎಲ್ಲಾ ವಿಧಿ ವಿಧಾನಗಳನ್ನು ಎರಡು ದಿನ ಮುಗಿಸುವರು. ಕುಟುಂಬದವರ ಕುರಿತಾಗಿಯೂ ಕೆಲವು ತೀರ್ಮಾನ ಕೈಗೊಳ್ಳಲಿದ್ದು, ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಯಾಗದು ಎಂದು ಅರಮನೆಯ ಪುರೋಹಿತರೊಬ್ಬರು ಮಾಹಿತಿ ನೀಡಿದರು.
ರಾಜವಂಶಸ್ಥರಿಗೆ ಹಾಗೂ ಕುಟುಂಬದ ಆಪ್ತರಿಗೆ ತ್ರಿಷಿಕಾ ಅವರಿಗೆ ಈ ತಿಂಗಳೆ ಹೆರಿಗೆಯಾಗುವುದು ತಿಳಿದಿತ್ತು. ಮಾನಸಿಕವಾಗಿ ಎಲ್ಲರೂ ಸಿದ್ದರಾಗಿದ್ದರು. ಆದರೆ ಅಕ್ಟೋಬರ್ 23ಕ್ಕೆ ಹೆರಿಗೆ ದಿನಾಂಕವನ್ನು ನೀಡಿದ್ದರು. ನಿರೀಕ್ಷೆಗಿಂತ 12 ದಿನ ಮುಂಚೆಯೇ ತ್ರಿಷಿಕಾ ಅವರಿಗೆ ಹೆರಿಗೆಯಾಗಿದೆ. ಈ ಕಾರಣದಿಂದ ಧಾರ್ಮಿಕ ಚಟುವಟಿಕೆ ಕುರಿತು ಸಣ್ಣ ಗೊಂದಲವಾಗಿದ್ದರೂ ಅದನ್ನೆಲ್ಲಾ ಬಗೆಹರಿಸಿ ಎಲ್ಲಾ ಚಟುವಟಿಕೆ ನಡೆಸಲಾಗುತ್ತದ ಎನ್ನುವುದು ಅವರು ನೀಡಿದ ವಿವರಣೆ.
ಇದನ್ನೂ ಓದಿರಿ: ಮೈಸೂರಿನ ಯದುವೀರ್ ಒಡೆಯರ್ ಅವರ ಖಾಸಗಿ ದರ್ಬಾರ್ ಕ್ಷಣಗಳು
ಯದುವೀರ್ ಅವರು ಶನಿವಾರ ನಡೆಯುವ ವಿಜಯದಶಮಿ ಪುಷ್ಪಾರ್ಚನೆಯ ವೇಳೆಯೂ ಭಾಗಿಯಾಗುವರು. ಕಂಕಣಧಾರಣೆ ಮಾಡಿದಾಗ ಈ ರೀತಿ ಅಶೌಚವಾದರೂ ಯಾವುದೇ ಅಡ್ಡಿಯಾಗದು ಎನ್ನುವ ಪುರೋಹಿತರ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನುತ್ತವೆ ಮೂಲಗಳು.
(ಗಮನಿಸಿ: ಮಗು ಜನನದಿಂದ ಉಂಟಾಗುವ ಅಶೌಚವನ್ನು ಸೂತಕ ಎಂದೂ ಸಹ ದಕ್ಷಿಣ ಕರ್ನಾಟಕದ ಕೆಲವೆಡೆ ಕರೆಯುತ್ತಾರೆ. ಇದಕ್ಕೆ ಪರುಡು ಎನ್ನುವ ಪದವೂ ಬಳಕೆಯಲ್ಲಿದೆ. ಇಲ್ಲಿ ಸೂತಕ ಅಥವಾ ಅಶೌಚ ಅಥವಾ ಪರುಡು ಎಂದರೆ ಶೋಕ ಎನ್ನುವ ಅರ್ಥವಲ್ಲ. ಮೈಲಿಗೆ ಎನ್ನುವ ಅರ್ಥ ಮಾತ್ರ ಇದೆ ಇದು ಪ್ರಚಲಿತದಲ್ಲಿರುವ ನಂಬಿಕೆ ಮತ್ತು ಆಚರಣೆ)