logo
ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಿಡಿ, ಕನಿಷ್ಠ ಆಂಬುಲೆನ್ಸ್‌ ಸಿಬ್ಬಂದಿ ಕೊಡುವ ಕಾಳಜಿ ಇಲ್ಲ; ರಾಜೀವ ಹೆಗಡೆ ಬರಹ

ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಿಡಿ, ಕನಿಷ್ಠ ಆಂಬುಲೆನ್ಸ್‌ ಸಿಬ್ಬಂದಿ ಕೊಡುವ ಕಾಳಜಿ ಇಲ್ಲ; ರಾಜೀವ ಹೆಗಡೆ ಬರಹ

Jayaraj HT Kannada

Oct 08, 2024 09:19 AM IST

google News

ಉತ್ತರ ಕನ್ನಡಕ್ಕೆ ಕನಿಷ್ಠ ಆಂಬುಲೆನ್ಸ್‌ ಸಿಬ್ಬಂದಿ ಕೊಡುವ ಕಾಳಜಿ ಇಲ್ಲ ಎಂದು ಲೇಖಕ ರಾಜೀವ ಹೆಗಡೆ ದೂರಿದ್ದಾರೆ.

    • Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಂತೂ ಇಲ್ಲ. ಆದರೆ ಆಂಬುಲೆನ್ಸ್‌ ಸೇವೆಯೂ ಸರಿಯಾಗಿಲ್ಲ ಎಂಬ ಆರೋಪವಿದೆ. ಆಂಬುಲೆನ್ಸ್‌ ಬಂದರೂ ಅದರಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರುವುದಿಲ್ಲ ಎಂಬ ದೂರು ಜಿಲ್ಲೆಯ ಜನರದ್ದು.
ಉತ್ತರ ಕನ್ನಡಕ್ಕೆ ಕನಿಷ್ಠ ಆಂಬುಲೆನ್ಸ್‌ ಸಿಬ್ಬಂದಿ ಕೊಡುವ ಕಾಳಜಿ ಇಲ್ಲ ಎಂದು ಲೇಖಕ ರಾಜೀವ ಹೆಗಡೆ ದೂರಿದ್ದಾರೆ.
ಉತ್ತರ ಕನ್ನಡಕ್ಕೆ ಕನಿಷ್ಠ ಆಂಬುಲೆನ್ಸ್‌ ಸಿಬ್ಬಂದಿ ಕೊಡುವ ಕಾಳಜಿ ಇಲ್ಲ ಎಂದು ಲೇಖಕ ರಾಜೀವ ಹೆಗಡೆ ದೂರಿದ್ದಾರೆ. (Rajeev Hegde)

ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಹೆಚ್ಚು ಹಾಗೂ ಜನಸಂದ್ರತೆ ಕಡಿಮೆ ಇರುವ ಜಿಲ್ಲೆ ಉತ್ತರ ಕನ್ನಡ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಮೂಲಸೌಕರ್ಯಗಳಿಗೆ ಭಾರಿ ಕೊರತೆಯಿದೆ. ಜಿಲ್ಲೆಯಲ್ಲಿ ಗುಣಮಟ್ಟದ ಚಿಕಿತ್ಸೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೇ ಇಲ್ಲ. ಹಲವು ದಶಕಗಳಿಂದ ಇಲ್ಲಿನ ಜನರು ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂದು ರಾಜಕೀಯ ನಾಯಕರು ಹಾಗೂ ಸರ್ಕಾರಕ್ಕೆ ಬೇಡಿಕೆ ಇಡುತ್ತಿದ್ದರೂ ಅದು ಫಲಿಸುತ್ತಿಲ್ಲ. ಜಿಲ್ಲೆಯ ಜನರು ಉನ್ನ ಚಿಕಿತ್ಸೆಗಾಗಿ ಒಂದೋ ಉಡುಪಿ-ಮಣಿಪಾಲದ ಕಡೆ ಬರಬೇಕು ಅಥವಾ ಧಾರವಾಡಕ್ಕೆ ಓಡಬೇಕಾಗುತ್ತದೆ. ಈ ನಡುವೆ ಚಿಕಿತ್ಸೆ ತಡವಾಗಿ ಮಡಿದವರೆಷ್ಟೋ ಮಂದಿ.

ಅಪಘಾತದಂತಹ ತುರ್ತು ಪರಿಸ್ಥಿಯಲ್ಲಿ ಆಸ್ಪತ್ರೆ ಮತ್ತು ಆಂಬುಲೆನ್ಸ್‌ ಸೇವೆ ಸರಿಯಾಗಿ ಸಿಗದೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆಂಬುಲೆನ್ಸ್‌ ಬಂದರೂ ಅದರಲ್ಲಿ ವೈದ್ಯಕೀಯ ಸಿಬ್ಬಂದಿ ಇರುವುದಿಲ್ಲ ಎಂಬ ದೂರು ಜಿಲ್ಲೆಯ ಜನರದ್ದು. ಈ ಕುರಿತು ರಾಜೀವ ಹೆಗಡೆಯವರು ಬರೆದ ಲೇಖನ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ದಶಕಗಳಿಂದ ಜನರು ಅಕ್ಷರಶಃ ಬೇಡುತ್ತಿದ್ದಾರೆ. ಜನರ ಬಗ್ಗೆ ಕಿಂಚಿತ್‌ ಕಾಳಜಿಯಿಲ್ಲದ ಜನಪ್ರತಿನಿಧಿಗಳೆಲ್ಲ ಚುನಾವಣೆ ಸಂದರ್ಭದಲ್ಲಿ ಮೊಸಳೆ ಕಣ್ಣೀರು ಸುರಿಸಿ ನಾಪತ್ತೆಯಾಗುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಂತೂ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಸ್ಥಳೀಯ ಪ್ರಣಾಳಿಕೆಯಲ್ಲಿ ಅದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಲ್ಲೇಖವಾಗಿತ್ತು. ಹೊಸ ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ಯಾರಿಗೂ ಈ ಆಸ್ಪತ್ರೆ ಬಗ್ಗೆ ಗಮನವೂ ಇಲ್ಲ. ಪುಕ್ಕಟೆ ಹಂಚಿದ್ದೇವೆ ಎನ್ನುವ ಧಿಮಾಕಿನಲ್ಲಿ ಕ್ವಾಲರ್‌ ಏರಿಸಿಕೊಂಡು ಓಡಾಡುವರಿಗೆ ಇದೆಲ್ಲಿಂದ ನೆನಪಾಗಬೇಕು?

ಉತ್ತರ ಕನ್ನಡ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಂತೂ ತರುವ ಧಮ್ಮಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಕಂಬಳಿ, ಚಾದ್ರ ಹಾಕಿಕೊಂಡು ನಿದ್ರೆ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೂ ಇಲ್ಲ. ಆದರೆ ಇಲ್ಲಿರುವ ಆಸ್ಪತ್ರೆಗಳ ಮೂಲಕ ಕನಿಷ್ಠ ಪಕ್ಷ ಜನರ ಜೀವ ಉಳಿಸುವ ಕೆಲವನ್ನಾದರೂ ಮಾಡುತ್ತಾರೆ ಎನ್ನುವ ವಿಶ್ವಾಸ ಕೂಡ ಹೋಗಿದೆ.

ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಇಲ್ಲದ ಆಂಬುಲೆನ್ಸ್‌

ಭಾನುವಾರ ಮಧ್ಯಾಹ್ನ 11 ಗಂಟೆ ವೇಳೆಗೆ ಶಿರಸಿಯ ಜಾನ್ಮನೆ ಬಳಿಯಲ್ಲಿ ನನ್ನ ಸ್ನೇಹಿತರೊಬ್ಬರ ಪರಿಚಯದವರಿಗೆ ಅಪಘಾತವಾಗಿದೆ. ಅವರು ಕೂಡಲೇ ಶಿರಸಿ ಸರ್ಕಾರಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸುಮಾರು ಅರ್ಧ ಗಂಟೆಯಷ್ಟರಲ್ಲಿ ಸ್ಥಳಕ್ಕೆ ಆಂಬುಲೆನ್ಸ್‌ ಬಂತು. ಆದರೆ ನಮ್ಮ ಸರ್ಕಾರದ ಆರೋಗ್ಯ ಎಷ್ಟು ಹದಗೆಟ್ಟಿದೆಯೆಂದರೆ, ಆ ಆಂಬುಲೆನ್ಸ್‌ನಲ್ಲಿ ಯಾರೊಬ್ಬರೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಇರಲಿಲ್ಲ. ಚಾಲಕನ ಹೊರತಾಗಿ ಗಾಯಾಳುವನ್ನು ಕಾಳಜಿ ಮಾಡಲು ಯಾರೂ ಇರಲಿಲ್ಲ. ರಸ್ತೆ ಮಧ್ಯದಲ್ಲಿ ಏನಾದರೂ ಸಮಸ್ಯೆಯಾದರೆ ನೋಡುವರು ಯಾರು? ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲದೆ ಅದೆಷ್ಟೋ ಜನರು ದೂರದ ಧಾರವಾಡ, ಶಿವಮೊಗ್ಗ, ಮಣಿಪಾಲ್‌, ಮಂಗಳೂರಿಗೆ ಓಡುವ ಭರದಲ್ಲಿ ಜೀವ ಕಳೆದುಕೊಂಡಿದ್ದಾರೆ.‌

ಎಂಬಿಬಿಎಸ್‌ ಪದವಿ ನೀಡಿದವರಿಗೆ ದೊಡ್ಡ ಪದವಿ ನೀಡಬೇಕು

ಕನಿಷ್ಠ ಪ್ರಾಥಮಿಕ ಚಿಕಿತ್ಸೆಗೆ ಆಂಬುಲೆನ್ಸ್‌ಗೆ ಒಂದರಂತೆ ಪ್ಯಾರಾ ಮೆಡಿಕಲ್‌ ಸಿಬ್ಬಂದಿಯನ್ನು ನೀಡದ ಮಟ್ಟಿಗೆ ಸರ್ಕಾರ ಕೆಟ್ಟಿದೆಯೆಂದರೆ, ಅಂತಹ ವ್ಯವಸ್ಥೆಯನ್ನು ಏನೆಂದು ಕರೆಯಬೇಕು? ಪ್ಯಾರಾ ಮೆಡಿಕಲ್‌ ಸಿಬ್ಬಂದಿಯಿರದ ಒಂದು ಆಂಬುಲೆನ್ಸ್‌ನ್ನು ಸ್ಥಳಕ್ಕೆ ಕಳುಹಿಸುವಂತಹ ಅಧಿಕಾರಿಗಳು ಆರೋಗ್ಯ ಇಲಾಖೆಯಲ್ಲಿದ್ದಾರೆ ಎಂದರೆ ಅವರಿಗೆ ಎಂಬಿಬಿಎಸ್‌ ಪದವಿ ನೀಡಿದವರಿಗೆ ದೊಡ್ಡ ಪದವಿ ನೀಡಬೇಕಿದೆ. ಪ್ರಥಮ ಚಿಕಿತ್ಸೆ ನೀಡಲು ಸಿಬ್ಬಂದಿ ಇಲ್ಲವೆಂದಾದರೆ, ಅಲ್ಲಿರುವ ಜನರೇ ತಮ್ಮ ಕಾರಿನಲ್ಲೋ ಅಥವಾ ಇನ್ಯಾವುದೋ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದಲ್ಲವೇ?

ಅಪಘಾತ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ಗೆ ಕರೆ ಮಾಡುವ ಪ್ರಮುಖ ಉದ್ದೇಶ ಏನೆಂದರೆ, ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಯಾವುದೇ ರೀತಿಯ ತುರ್ತು ಚಿಕಿತ್ಸೆ ಬೇಕಿದ್ದರೆ ವೈದ್ಯರ ಸಲಹೆ ಮೇರೆಗೆ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿ ಎಂದಾಗಿರುತ್ತದೆ. ಇಲ್ಲವಾದಲ್ಲಿ ಆಂಬುಲೆನ್ಸ್‌ ಹಾಗೂ ಶವ ಹೊರುವ ವಾಹನಕ್ಕೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಾಗೆಯೇ ಅಪಘಾತದಲ್ಲಿನ ಗಾಯಾಳುವಿಗೆ ಗೋಲ್ಡನ್‌ ಅವಧಿಯಲ್ಲಿ ಚಿಕಿತ್ಸೆ ನೀಡದಿದ್ದರೆ ಅದರಿಂದಾಗುವ ಪರಿಣಾಮವೂ ಅಷ್ಟೇ ಕೆಟ್ಟದಾಗಿರುತ್ತದೆ.

ಮಲ್ಟಿ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡುವಂಥ ಕಾಳಜಿಯಿಂತೂ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು, ಸಚಿವರಿಗಿಲ್ಲ. ಆದರೆ ಅಗತ್ಯ ಸಿಬ್ಬಂದಿಯನ್ನಾದರೂ ನೀಡಿ, ಜನರ ಜೀವ ಕಾಪಾಡುವ ಕೆಲಸ ಮಾಡಿ. ಅಂದ್ಹಾಗೆ ಸ್ಥಳೀಯರ ನೆರವಿನಿಂದ ಅಪಘಾತಕ್ಕೀಡಾಗಿದ್ದ ದಂಪತಿ ಸುರಕ್ಷಿತವಾಗಿದ್ದಾರಂತೆ. ನಮ್ಮೂರಿನ ಜನರಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸ್ವಲ್ಪ ಕಾರ್ಯಪ್ರವೃತ್ತರಾದರೆ ಒಳಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ