ಬಿಟ್‌ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅರೆಸ್ಟ್, ಬಂಧಿತ ಪೊಲೀಸರ ಸಂಖ್ಯೆ 4ಕ್ಕೆ ಏರಿಕೆ
Bitcoin Case: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಎಂಬವರನ್ನು ಸಿಐಡಿಯ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈವರೆಗೂ ನಾಲ್ವರು ಪೊಲೀಸರು ಅಧಿಕಾರಿಗಳು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. (ವರದಿ-ಎಚ್. ಮಾರುತಿ)
ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರನ್ನು ಸಿಐಡಿಯ ಎಸ್‌ಐಟಿ ಅಧಿಕಾರಿಗಳು ಸೋಮವಾರ (ಅಕ್ಟೋಬರ್ 7ರಂದು) ಬಂಧಿಸಿದ್ದಾರೆ. ವಿಚಾರಣೆಗೆಂದು ಸಿಐಡಿ ಕಚೇರಿಗೆ ಶ್ರೀಧರ್ ಬಂದಿದ್ದರು. ಆಗ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 2020ರಲ್ಲಿ ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್‌ಪಿ ಅವರನ್ನು ಬಂಧಿಸಲಾಗಿದೆ. ಈವರೆಗೂ ನಾಲ್ವರು ಪೊಲೀಸರು ಅಧಿಕಾರಿಗಳು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಈಗಾಗಲೇ ಇನ್ ಸ್ಪೆಕ್ಟರ್ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ ಮತ್ತು ಚಂದ್ರಾಧರ್ ಅವರನ್ನು ಬಂಧಿಸಲಾಗಿದೆ. ಬಿಟ್‌ಕಾಯಿನ್ ಹಗರಣದ ವಿಸ್ತೃತ ತನಿಖೆಗಾಗಿ ಸರ್ಕಾರ 2023 ಜುಲೈ 18 ರಂದು ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿತ್ತು. ನಂತರ ಕಾಟನ್ ಪೇಟೆ ಠಾಣೆಯಲ್ಲಿ ಶ್ರೀಧರ್ ವಿರುದ್ಧ ಹೊಸ ಎಫ್ಐಆರ್ ದಾಖಲಾಗಿತ್ತು. ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಶ್ರೀಧರ್ ಅವರೇ ಈ ಹಿಂದೆ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಹಗರಣದಲ್ಲಿ ಶ್ರೀಧರ್ ಪೂಜಾರಿಯೂ ಭಾಗಿಯಾಗಿದ್ದರು. ಇವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಆದರೆ ಇವರು ವಿಚಾರಣೆಗೆ ಸಹಕರಿಸದೇ ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಘೋಷಿತ ಆರೋಪಿ ಎಂದು ವಾರಂಟ್ ಜಾರಿ ಮಾಡಲಾಗಿತ್ತು. ವಾರಂಟ್ ಪ್ರಶ್ನಿಸಿ ಇತ್ತೀಚೆಗೆ ಶ್ರೀಧರ್ ಪೂಜಾರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಘೋಷಿತ ಆರೋಪಿ ಆದೇಶವನ್ನು ರದ್ದುಪಡಿಸಿತ್ತು. ಈಗಾಗಲೇ ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಲಾಗಿದೆ. ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎನ್ನುವುದು ಎಸ್‍ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿತ್ತು. ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸುತ್ತಿರಲಿಲ್ಲ.
ಈ ಪ್ರಕರಣದಲ್ಲಿ ಕೆಲವು ಬಿಜೆಪಿ ನಾಯಕರು ಮತ್ತು ಅವರ ಸಂಬಂಧಿಗಳ ಹೆಸರುಗಳು ಥಳುಕು ಹಾಕಿಕೊಂಡಿದ್ದವು. ಈ ಕಾರಣಕ್ಕಾಗಿ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಪ್ರಕರಣವೇನು?
ಡಾರ್ಕ್ ನೆಟ್ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದಡಿಯಲ್ಲಿ 2020ರ ನವೆಂಬರ್‌ನಲ್ಲಿ ಶ್ರೀಕಿ, ಅಲಿಯಾಸ್ ಶ್ರೀಕಾಂತ್ ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಪೂಜಾರಿ ಸಿಸಿಬಿಯಲ್ಲಿ ತನಿಖಾಧಿಕಾರಿಯಾಗಿದ್ದರು. ಇದೇ ಸಂದರ್ಭದಲ್ಲಿ 2019ರ ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ದೋಚಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಪೂಜಾರ್, 10ನೇ ಆರೋಪಿಯಾಗಿದ್ದ ಶ್ರೀಕಿಯನ್ನು 2020ರ ಏಪ್ರಿಲ್ 14ರಿಂದ 17 ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್ ವರ್ಗಾವಣೆ, ಪಾಸ್ ವರ್ಡ್ ಬದಲಾವಣೆ ಮಾಡಿಸಿ ಹಣ ದೋಚಿದ ಆರೋಪ ಎದುರಿಸುತ್ತಿದ್ದಾರೆ.
ಈ ಆರೋಪಗಳಡಿಯಲ್ಲಿ ಪೊಲೀಸರು 2024ರ ಜನವರಿ 24ರಂದು ದೂರು ದಾಖಲಿಸಿದ್ದರು. ಪೂಜಾರ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ಬಂಧಿಸದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದ ಆರೋಪಿ ಡಿವೈಎಸ್‌ಪಿ ಶ್ರೀಧರ್ ಕೆ ಪೂಜಾರ್ಗೆ ಬಂಧನ ಭೀತಿ ಎದುರಾಗಿತ್ತು. ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಎಸ್ಐಟಿ ಅಧಿಕಾರಿಗಳು, ತಡೆಯಾಜ್ಞೆ ಆದೇಶ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಆದೇಶ ಬರುತ್ತಿದ್ದಂತೆ ಪೂಜಾರ್ ನಾಪತ್ತೆಯಾಗಿದ್ದರು.
ಆಗ ಪೂಜಾರ್ ಬಂಧನಕ್ಕೆ ಮುಂದಾದಾಗ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಸಿವಿಲ್ ಕೋರ್ಟ್ ಸಮೀಪ ಎಸ್ಐಟಿ ತಂಡದ ಕಾರಿಗೆ ತಮ್ಮ ವಾಹನದಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ನಿರಂತರವಾಗಿ ಅಧಿಕಾರಿಯನ್ನು ಬಂಧಿಸಲು ಶೋಧ ನಡೆಸಿದರೂ ಪತ್ತೆಯಾಗದೇ ಇದ್ದುದರಿಂದ ನ್ಯಾಯಾಲಯದ ಅನುಮತಿ ಮೇರೆಗೆ ಘೋಷಿತ ಅಪರಾಧಿ ಎಂದು ತೀರ್ಮಾನಿಸಿ ಡಿವೈಎಸ್ ಪಿ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಎಸ್ಐಟಿ ಪ್ರಕಟಣೆ ಹೊರಡಿಸಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ.