ಗೃಹಿಣಿಯರ ಪಾಲಿಗೆ ಹುಳಿಯಾದ ಟೊಮೆಟೊ: ಇಳುವರಿ ಕುಸಿತ, ಶತಕ ತಲುಪಿದ ಟೊಮೆಟೊ ಬೆಲೆ
ಕಳೆದ ಮೂರು ವಾರಗಳಿಂದ ಟೊಮೆಟೊ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಭಾರಿಮಳೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ರೈತರು ಟೊಮೆಟೊ ಬೆಳೆದಿಲ್ಲ. ಜೊತೆಗೆ ಟೊಮೆಟೊಬೆಳೆಗೆ ರೋಗ ಕಾಣಿಸಿಕೊಂಡಿದ್ದು,ಉತ್ಪಾದನೆಯಲ್ಲಿ ಕುಸಿತವಾಗಿದೆ. (ವರದಿ: ಎಚ್.ಮಾರುತಿ,ಬೆಂಗಳೂರು)
ಬೆಂಗಳೂರು: ಕಳೆದ ಎರಡು ಮೂರು ವರ್ಷಗಳಿಂದ ಟೊಮೆಟೊ ಹಣ್ಣಿನ ಬೆಲೆಯಲ್ಲಿ ಏರಿಳಿತಗಳು ಹೆಚ್ಚಾಗಿ ಕಂಡು ಬಂದಿವೆ. ಅಡುಗೆಗೆ ಬಹಳ ಅನಿವಾರ್ಯವಾಗಿರುವ ಟೊಮೆಟೊ ಬೆಲೆ ಕನಿಷ್ಟ 10 ರೂಪಾಯಿಗೂ ಇಳಿದಿದೆ, ಹಾಗೆಯೇ ಎಷ್ಟೋ ಬಾರಿ ಶತಕದ ಗಡಿಯನ್ನೂ ದಾಟಿದೆ. ಈ ಅವಧಿಯಲ್ಲಂತೂ ಗೃಹಿಣಿಯರಿಗೆ ಟೊಮೆಟೊ ಹುಳಿಯಾಗಿ ಕಾಡಿದ್ದೇ ಹೆಚ್ಚು. ಕಳೆದ ಕೆಲವು ತಿಂಗಳಿನಿಂದ ಟೊಮೆಟೊ ಬೆಲೆ ಸ್ಥಿರವಾಗಿತ್ತು. ಕುಸಿದಿರಲೂ ಇಲ್ಲ. ಅತ್ತ ಏರಿಕೆ ಕಂಡಿರಲೂ ಇಲ್ಲ. ಆದರೆ, ಕಳೆದ ಎರಡು ವಾರಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೊ ಸರಬರಾಜು ಕಡಿಮೆಯಾಗಿದೆ. ಹೀಗಾಗಿ ಏರಿಕೆಯತ್ತ ಮುಖ ಮಾಡಿದ್ದ ಟೊಮೆಟೊ ಬೆಲೆ ಇದೀಗ ಶತಕ ತಲುಪಿದೆ.
ಎಂದಿನಂತೆ ಟೊಮೆಟೊ ಬೆಲೆ ಎಷ್ಟೇ ಏರಿಕೆ ಕಂಡರೂ ರೈತರಿಗೆ ಮಾತ್ರ ಲಾಭ ಸಿಗುವುದು ತೀರಾ ಕಡಿಮೆ. ಭಾರತೀಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುವುದೇ ಹೆಚ್ಚು. ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮೆಟೊಗೆ 40 ರೂ. ನಿಗದಿಯಾಗಿದ್ದರೆ ಗ್ರಾಹಕರಿಗೆ ಪ್ರತಿ ಕೆಜಿಗೆ 70 ರಿಂದ 90 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ಆನ್‌ಲೈನ್‌ನಲ್ಲಿ ಪ್ರತಿ ಕೆಜಿಗೆ 80 ರಿಂದ 100 ರೂ.ವರೆಗೂ ಮಾರಾಟ ಮಾಡುತ್ತಿರುವುದಾಗಿಯೂ ತಿಳಿದು ಬಂದಿದೆ.
ಕಳೆದ ಮೂರು ವಾರಗಳಿಂದ ಟೊಮೆಟೊ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಭಾರಿ ಮಳೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ರೈತರು ಟೊಮೆಟೊ ಬೆಳೆದಿಲ್ಲ. ಜೊತೆಗೆ ಟೊಮೆಟೊ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ಉತ್ಪಾದನೆಯಲ್ಲಿ ಕುಸಿತವಾಗಿದೆ. ಈ ಕಾರಣಗಳಿಗಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಪೂರೈಕೆಯಲ್ಲಿ ಕುಸಿತವಾಗಿದೆ ಎಂದು ಹೋಲ್‌ಸೇಲ್ ಮಾರಾಟಗಾರೊಬ್ಬರು ಹೇಳಿದ್ದಾರೆ. ಜತೆಗೆ ದಸರಾ ಆರಂಭವಾಗಿದ್ದು, ಬೆಲೆಯೂ ಇಳಿಯುವುದಿಲ್ಲ. ದಸರಾ ಮುಗಿದ ನಂತರ ಟೊಮೆಟೊ ಬೆಲೆ ಇಳಿಯಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಟೊಮೆಟೊಗೆ ಕಾಡಿದ ರೋಗಬಾಧೆ; ಇಳುವರಿ ಕುಸಿತ
ಕೇವಲ ಭಾರಿ ಮಳೆಯ ಕಾರಣಕ್ಕೆ ಮಾತ್ರ ಬೆಲೆ ಹೆಚ್ಚಳವಾಗಿಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಟೊಮೆಟೊಗೆ ಒಂದಲ್ಲ ಒಂದು ರೋಗ ತಗುಲುತ್ತಿದೆ. ಇದರಿಂದಲೂ ಇಳುವರಿ ಕಡಿಮೆಯಾಗಿದೆ. ಕಳೆದ ಐದಾರು ವರ್ಷಗಳಿಂದ ಟೊಮೆಟೊ ಬೆಳೆಯನ್ನು ನಾಶ ಮಾಡುವ ಬ್ಲೈಟ್ ಎಂಬ ರೋಗ ಮತ್ತು ಚುಕ್ಕಿ ರೋಗ ನಿರಂತರವಾಗಿ ಕಾಡುತ್ತಿದೆ. ಇದೀಗ ಬಿಂಗಿ ಎಂಬ ಹೊಸ ರೋಗ ಕಾಣಿಸಿಕೊಂಡಿದ್ದು, ಇದು ಟೊಮೆಟೊ ಹೂ ಬಿಡುವಾಗ ಕಾಣಿಸಿಕೊಳ್ಳುತ್ತದೆ. ಇದರಿಂದ ಶೇ.80 ರಿಂದ 90ರಷ್ಟು ಇಳುವರಿ ಕಡಿಮೆಯಾಗುತ್ತಿದೆ ಎಂದು ಬೆಳೆಗಾರ ವೆಂಕಟೇಶಪ್ಪ ಅಲವತ್ತುಕೊಂಡಿದ್ದಾರೆ.
ಉತ್ತಮ ಬೆಲೆ ಸಿಗುತ್ತದೆ ಎಂದು ಕೋಲಾರದ ಬಹುತೇಕ ರೈತರು ಟೊಮೆಟೊ ಬೆಳೆಯಲು ಆರಂಭಿಸಿದ್ದರು. ಇದಕ್ಕಾಗಿ ಹೆಚ್ಚಿನ ಬಂಡವಾಳವನ್ನೂ ಹೂಡಿದ್ದರು. ಆದರೆ ಇಳುವರಿಯಲ್ಲಿ ಕುಂಠಿತವಾಯಿತು. ಅಚ್ಚರಿ ಎಂಬಂತೆ ಟೊಮೆಟೊ ಜೀವಿತಾವಧಿ 48 ಗಂಟೆಗಳಿಗೆ ಕುಸಿದಿದ್ದು, ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ರೈತರು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರ ನೆರೆಯ ದೇಶಗಳು ಮತ್ತು ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಕಳುಹಿಸುತ್ತಿದ್ದರು. ಆದರೆ, ಈಗ ಟೊಮೆಟೊ ಬಹಳ ಬೇಗ ಕೆಡುತ್ತಿರುವುದರಿಂದ ಇಲ್ಲಿಯೇ ಉಳಿದಿದೆ. ರೈತರಿಗೆ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ ಎಂದು ರೈತ ಸಂಘದ ಮುಖಂಡರೊಬ್ಬರು ವಿವರಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಟೊಮೆಟೊ ಕೆಡುತ್ತಿದೆ ಎಂದು ಹೇಳುವ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೀಟನಾಶಕ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ. ಆದರೆ, ಇದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ಬದಲಾಗಿ ಮುಂದಿನ ಬೆಳೆಗೆ ಭೂಮಿಯನ್ನು ಹೇಗೆ ಸಿದ್ಧಪಡಿಸಬೇಕು ಎಂದು ರೈತರಿಗೆ ಪ್ರಾತ್ಯಕ್ಷಿಕೆ ನೀಡಬೇಕು. ಆಗ ಮಾತ್ರ ರೈತರಿಗೆ ಸಹಾಯವಾಗುತ್ತದೆ ಎನ್ನುತ್ತಾರೆ ರೈತರು.
ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲದಿದ್ದರೆ ಭವಿಷ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗಾರರೇ ಇಲ್ಲವಾಗುತ್ತಾರೆ. ಬಹುತೇಕ ರೈತರು ಟೊಮೆಟೊ ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ, ಕೆಲವರು ಬೆಳೆಯುವುದನ್ನೇ ಬಿಟ್ಟಿದ್ದಾರೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಬಹುದು.
ವಿಭಾಗ