Forest Tales: ಅರಣ್ಯ ರಕ್ಷಣೆಗೆ ಅಮರವಾದ ಶ್ರೀನಿವಾಸ್; ಹೀಗಿತ್ತು ವೀರಪ್ಪನ್ ಜೀವಂತ ಸೆರೆಗೆ ಹುತಾತ್ಮ ಅಧಿಕಾರಿ ಸತ್ಯಾನ್ವೇಷಣೆ ಮಾರ್ಗ
Jun 27, 2023 05:01 PM IST
ವೀರಪ್ಪನ್‌ರಿಂದ ಹತರಾದ ಡಿಸಿಎಫ್ ಶ್ರೀನಿವಾಸ್ ಅವರಿಗೆ ಕರ್ನಾಟಕ ಇಲಾಖೆ ಹಲವು ರೂಪದಲ್ಲಿ ಗೌರವ ಸೂಚಿಸಿದೆ.
- ವೀರಪ್ಪನ್‌ನ ಅಟ್ಟಹಾಸಗಳನ್ನು ಸತ್ಯಾನ್ವೇಷಣೆ ಮಾರ್ಗದಲ್ಲಿ ನಿಲ್ಲಿಸಲು ಹೋದ ಅಧಿಕಾರಿ ಪಿ. ಶ್ರೀನಿವಾಸ್ ಕೈಗೊಂಡ ಕ್ರಮಗಳು ಈಗಲೂ ಅರಣ್ಯ ಇಲಾಖೆಗೆ ಮಾದರಿ. ಮೂರು ದಶಕದ ಹಿಂದೆ ಹುತಾತ್ಮರಾದ ಶ್ರೀನಿವಾಸ್ ಅವರ ನೆನಪನ್ನು ಅರಣ್ಯ ಇಲಾಖೆ ಸ್ಥಾಪಿಸಿರುವ ಸ್ಮಾರಕ, ವಸ್ತು ಸಂಗ್ರಹಾಲಯಗಳು ಸಾರುತ್ತಿವೆ. ಈ ವಾರದ ಕಾಡಿನ ಕಥೆಯಲ್ಲಿ ಶ್ರೀನಿವಾಸ್ ಅವರನ್ನು ನೆನೆಯುತ್ತಾ,..
ಕಾವೇರಿ ನದಿ ಹಾಗೂ ಸುತ್ತಲಿನ ದಟ್ಟಕಾಡು, ವೀರಪ್ಪನ್ ಮತ್ತು ಪಿ.ಶ್ರೀನಿವಾಸ್, ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗದ ಗೋಪಿನಾಥಂ...
ಈ ಅರಣ್ಯದ ಸುತ್ತಲೂ ಹತ್ತಾರು ದಂತಕತೆಗಳಿವೆ. ಅರಣ್ಯಕ್ಕೆ ಕುತ್ತಾದ ಕಾಡುಗಳ್ಳ ವೀರಪ್ಪನ್ ಅಟ್ಟಹಾಸದ ಕರಾಳ ನೆನಪುಗಳು ಒಂದೆಡೆ. ಶಾಂತಿ ಮಂತ್ರ ಪಠಿಸುತ್ತಾ ವೀರಪ್ಪನ್ ಹಾಗೂ ಆತನ ಪಡೆಯನ್ನು ಸತ್ಯಾನ್ವೇಷಣೆ ಮಾರ್ಗದಲ್ಲಿ ಬದಲಾಯಿಸುವ ಪ್ರಯತ್ನ ಮಾಡಿ ಜೀವತೆತ್ತ ಅರಣ್ಯ ಇಲಾಖೆಯ ಅಧಿಕಾರಿ ಪಿ.ಶ್ರೀನಿವಾಸ್ ಅವರ ಬಲಿದಾನದ ಮಾರ್ಗ ಮತ್ತೊಂದೆಡೆ.
ಕಾವೇರಿ ಕಾಡಿನ ಕಥನ..
ಅದು ಕಾವೇರಿ ನದಿ ಸುತ್ತಲಿನ ಸುಂದರ ಅರಣ್ಯ. ಬೆಟ್ಟಗಳ ಸಾಲಿನ ನಡುವೆ ಕಾವೇರಿ ಹರಿದು ಕರುನಾಡಿನಿಂದ ತಮಿಳುನಾಡಿನತ್ತ ಹೋಗುವ ಮನಮೋಹಕ ಸನ್ನಿವೇಶ.
ಏಳು ಮಲೆಗಳನ್ನು ದಾಟಿ ಮಲೈಮಹಾದೇಶ್ವರ ಬೆಟ್ಟದ ನಂತರ ಸಿಗುವ ಊರು ಗೋಪಿನಾಥಂ. ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗದ ಸುತ್ತಲೂ ಕಾಡು. ಸಮೀಪದಲ್ಲೇ ಕಾವೇರಿ ನದಿ ಕರ್ನಾಟಕದ ಯಾನ ಮುಗಿಸಿ ತಮಿಳುನಾಡು ಸೇರುವ ಸ್ಥಳ. ಈ ಊರು ಕಾಡುಗಳ್ಳ ವೀರಪ್ಪನ್ ಸ್ವಗ್ರಾಮ.
ಅದು ಎಂಬತ್ತರ ದಶಕ. ವೀರಪ್ಪನ್ ಆಗಿನ್ನು ಮರಗಳ್ಳ. ಸ್ನೇಹಿತರ ಪಡೆ ಕಟ್ಟಿಕೊಂಡು ಸಣ್ಣ ಪುಟ್ಟ ಮರಗಳನ್ನು ಸಾಗಿಸುತ್ತಿದ್ದ. ನಂತರ ಆನೆಗಳನ್ನು ಕೊಂದು ದಂತ ಸಾಗಣೆಗೂ ಇಳಿದ. ಬೇಡಾದವರನ್ನುಕೊಂದು ಹಾಕುವಂತಹ ಕೃತ್ಯಗಳೂ ನಿಧಾನವಾಗಿ ಶುರುವಾಗಿದ್ದವು. ಈತನ ಉಪಟಳ ತಡೆಯಲು ಕರ್ನಾಟಕದ ಅರಣ್ಯ ಇಲಾಖೆ ಚಲನವಲನದ ಮೇಲೆ ನಿಗಾ ಇರಿಸಿತ್ತು. ಪ್ರಶ್ನಿಸಿದರೆ ಅರಣ್ಯ ಇಲಾಖೆಯವರ ಮೇಲೆಯೇ ದಾಳಿ ಮಾಡುವುದೂ ವೀರಪ್ಪನ್‌ನಿಂದ ನಡೆದಿತ್ತು. ಈತನನ್ನು ನಿಯಂತ್ರಿಸಲು ಇಲಾಖೆಗೂ ಸಮರ್ಥರೊಬ್ಬರ ನೇತೃತ್ವ ಬೇಕಿತ್ತು.
ಸತ್ಯಾನ್ವೇಷಣೆಯ ಹಾದಿಯಲ್ಲಿ...
ಆಂಧ್ರಪ್ರದೇಶದ ರಾಜಮಂಡ್ರಿಯ ಪಂಡಿಲ್ಲಪಲ್ಲಿ ಶ್ರೀನಿವಾಸ್ 1979ರಲ್ಲಿ ಐಎಫ್‌ಎಸ್ ಪೂರ್ಣಗೊಳಿಸಿ ನೇಮಕಗೊಂಡಿದ್ದುಕರ್ನಾಟಕಕ್ಕೆ. 25ರ ಹರೆಯದ ಯುವಕ. ಅರಣ್ಯ ತರಬೇತಿಗಳನ್ನು ಮುಗಿಸಿ ಶ್ರೀನಿವಾಸ್‌ಗೆ ಮೊದಲ ಹುದ್ದೆ ಸಿಕ್ಕಿದ್ದು ಚಾಮರಾಜನಗರ ಎಸಿಎಫ್. 1982ರಲ್ಲಿ ಶ್ರೀನಿವಾಸ್ ಸೇವೆ ಆರಂಭಿಸಿದಾಗ ವೀರಪ್ಪನ್‌ನ ಉಪಟಳ ತಿಳಿದಿತ್ತು. ಈ ಭಾಗದ ಅರಣ್ಯ ಪ್ರದೇಶದಲ್ಲಿ ವಾಸಿಸುತಿದ್ದ ಜನರ ಬವಣೆಗಳೂ ಶ್ರೀನಿವಾಸ್ ಅವರ ಅರಿವಿಗೆ ಬಂದಿತ್ತು.
ವಿನೋಭಾ ಭಾವೆ ಅವರ ವಿಚಾರಗಳಿಂದ ಆಕರ್ಷಿತರಾಗಿದ್ದ ಶ್ರೀನಿವಾಸ್ ಅವರು ಜಯಪ್ರಕಾಶ ನಾರಾಯಣ ಮಾರ್ಗಿಯೂ ಆಗಿದ್ದರು. ಸತ್ಯಾನ್ವೇಷಣೆಯ ಮಾರ್ಗದಲ್ಲಿ ಸಾಗಬೇಕೆಂಬ ಉತ್ಸಾಹ. ಜನರಿಗೆ ಏನಾದರೂ ಒಳಿತನ್ನು ಮಾಡಬೇಕೆಂಬ ತುಡಿತ. ಕಾಡುಗಳ್ಳ, ದಂತಗಳ್ಳರ ಉಪಟಳಕ್ಕೂ ಬ್ರೇಕ್ ಹಾಕಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ತವಕ. ಇದಕ್ಕೆ ಬಲ ತುಂಬಿದ್ದು ಐಎಫ್‌ಎಸ್ ಹುದ್ದೆ. ಬಡವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟರು. ಅರಣ್ಯ ಕಿರು ಉತ್ಪನ್ನಗಳ ಮೂಲಕ ಉದ್ಯೋಗ ಸ್ಥಳೀಯವಾಗಿಯೇ ಸಿಗುವ ಹಾಗೆ ಮಾಡಿದರು. ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನೂ ಕಲ್ಪಿಸಿದರು. ಇದಕ್ಕಾಗಿ ತಮ್ಮ ವೇತನವನ್ನೂ ಮೀಸಲಿಟ್ಟರು. ಸ್ನೇಹಿತರಿಂದ ಸಾಲವನ್ನೂ ಪಡೆದುಕೊಂಡು ಜನರ ಏಳಿಗಾಗಿ ಬಳಸಿದರು. ಗೋಪಿನಾಥಂನಲ್ಲಿ ಮಾರಿಯಮ್ಮ ದೇಗುಲ ಕಟ್ಟಿಸಿ ಜನ ಒಗ್ಗಟ್ಟಿನಿಂದ ಇರಬೇಕೆಂದು ಬಯಸಿದರು.
ಸೆರೆ ಸಿಕ್ಕ ವೀರಪ್ಪನ್ ಪರಾರಿ...
ಇದರೊಟ್ಟಿಗೆ ಈ ಭಾಗದ ಅರಣ್ಯ, ದಂತಗಳ್ಳರ ಪಟ್ಟಿ ತಯಾರಿಸಿದ್ದರು ಶ್ರೀನಿವಾಸ್. ಇದನ್ನಾಧರಿಸಿಯೇ ಆಗಾಗ ಕಾರ್ಯಾಚರಣೆಯೂ ನಡೆದಿತ್ತು. ಚೆನ್ನಾಗಿ ಕೆಲಸ ಮಾಡಿದ್ದ ಶ್ರೀನಿವಾಸ್ ಅವರಿಗೆ ಮರು ವರ್ಷವೇ ಬಡ್ತಿಯೊಂದಿಗೆ ದೊರೆತಿದ್ದು ಚಾಮರಾಜನಗರ ವಿಭಾಗದ ಡಿಸಿಎಫ್ ಹುದ್ದೆ.
ಕೇಂದ್ರ ಸರ್ಕಾರವು ಆನೆ ದಂತ ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಿದ ನಂತರ ವೀರಪ್ಪನ್ ಗಮನ ಶ್ರೀಗಂಧದ ಮರದ ಕಡೆ ನೆಟ್ಟಿತು. ವೀರಪ್ಪನ್‌ನನ್ನು ಸೆರೆ ಹಿಡಿಯಬೇಕು ಎನ್ನುವ ಯೋಜನೆ ರೂಪಿಸಿ ಯಶಸ್ವಿಯೂ ಆದರು ಶ್ರೀನಿವಾಸ್. 1986ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿತ್ತು. ಇತ್ತ ಸಿಕ್ಕಿಬಿದ್ದ ವೀರಪ್ಪನ್‌ನನ್ನು ಬೂದಿಪಡಗ ಅತಿಥಿಗೃಹದಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿತ್ತು. . ಇದೇ ವಿಚಾರವಾಗಿ ಶ್ರೀನಿವಾಸ್ ಹೊರ ಹೋಗಿದ್ದರೆ ವೀರಪ್ಪನ್ ಅತಿಥಿಗೃಹದಿಂದ ತಪ್ಪಿಸಿಕೊಂಡು ಬಿಟ್ಟ. ಕೊನೆಗೆ ಶ್ರೀನಿವಾಸ್ ಅಲ್ಲಿಂದ ವರ್ಗಾವಣೆಯೂ ಆದರು.
ನಂಬಿಸಿ ಕತ್ತು ಕತ್ತರಿಸಿದ..
ಇತ್ತ ವೀರಪ್ಪನ್ ಬಲಗೊಂಡು ಅರಣ್ಯ ಇಲಾಖೆಗೆ ಅಪಾಯಕಾರಿ ಆಗುತ್ತಿದ್ದುದನ್ನು ಎನ್ನುವುದನ್ನು ಅರಿತ ಕರ್ನಾಟಕ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿತು. ಶ್ರೀನಿವಾಸ್ ಕಾರ್ಯಪಡೆಯಲ್ಲಿದ್ದು ಇನ್ನಷ್ಟು ಸುಧಾರಣೆಗೆ ಒತ್ತು ನೀಡಿದರು. ವೀರಪ್ಪನ್ ಸಹೋದರ ಅರ್ಜುನ್ ಸಹಿತ ನಲ್ವತ್ತಕ್ಕೂ ಹೆಚ್ಚು ಕಾಡುಗಳ್ಳರು ಶರಣಾಗುವಂತೆ ಮಾಡಿದರು. ನಂತರ ಅವರ ಬಿಡುಗಡೆಗೂ ಸಹಕರಿಸಿ ಸ್ವಂತ ಬದುಕು ಕಟ್ಟಿಕೊಳ್ಳಲು ನೆರವಾದರು. ವೀರಪ್ಪನ್ ಬಲ ಕುಗ್ಗಿಸುವ ಪ್ರಯತ್ನ ತೀವ್ರವಾಗಿಯೇ ನಡೆದಿತ್ತು. ಶ್ರೀನಿವಾಸ್ ಈ ಭಾಗದಲ್ಲಿ ಜನಪ್ರಿಯರಾಗಿದ್ದರಿಂದ ಜನರೂ ಇವರ ಬೆಂಬಲಕ್ಕೆ ನಿಂತರು. ವೀರಪ್ಪನ್‌ಗೆ ಮಾತ್ರ ಶ್ರೀನಿವಾಸ್ ಮೇಲೆ ಇನ್ನಿಲ್ಲದ ಸಿಟ್ಟಿತ್ತು. 1991ರ ನವೆಂಬರ್ 9ರಂದು ವೀರಪ್ಪನ್ ನಾನು ಶರಣಾಗುತ್ತಿರುವುದಾಗಿ ಮಾಹಿತಿ ರವಾನಿಸಿದ. ಶ್ರೀನಿವಾಸ್ ಅವರು ಇದನ್ನು ಬಲವಾಗಿ ನಂಬಿದರು. ಒಬ್ಬರೇ ಕಾಡಿನೊಳಕ್ಕೆ ಹೊರಟರು. ಆದರೆ ಆಗಿದ್ದೇ ಬೇರೆ. ಅವರನ್ನೇ ಅಪಹರಿಸಿದ ವೀರಪ್ಪನ್ ಮರುದಿನ ತಲೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದ. ಗೋಪಿನಾಥಂನಿಂದ ಆರು ಕಿ.ಮಿ ದೂರದಲ್ಲಿ ಶವ ದೊರೆತಿತ್ತು. ಅದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ರೀತಿ ಹತ್ಯೆಗೀಡಾಗಿದ್ದು ಇದೇ ಮೊದಲು. ಒಂದು ದಶಕ ಕಾಲ ಸತ್ಯಾನ್ವೇಷಣೆಯೊಂದಿಗೆ ಜನರ ಸುಧಾರಣೆಗೆ ಹೊರಟು ಹೋರಾಡಿದ 37 ವರ್ಷದ ದಿಟ್ಟ, ದಕ್ಷ ಅಧಿಕಾರಿ ಅಮರವಾಗಿ ಹೋದರು.
ಹದಿಮೂರು ವರ್ಷ ಬಳಿಕ..
ಮರು ವರ್ಷವೇ ಶ್ರೀನಿವಾಸ್ ಅವರಿಗೆ ಕೇಂದ್ರ ಸರ್ಕಾರ ಎರಡನೇ ಅತ್ಯುನ್ನತ ಗೌರವ ಕೀರ್ತಿಚಕ್ರ ನೀಡಿ ಗೌರವಿಸಿತು. ಆನಂತರ ವೀರಪ್ಪನ್ ಉಪಟಳ ಮಿತಿ ಮೀರಿ ಕನ್ನಡದ ವರನಟ ಡಾ.ರಾಜ್‌ಕುಮಾರ್ ಅಪಹರಣ ಹಾಗೂ ಬಿಡುಗಡೆ, ಮಾಜಿ ಸಚಿವ ನಾಗಪ್ಪ ಹತ್ಯೆಯಂತಹ ಕರಾಳ ಕ್ಷಣಗಳೂ ದಾಖಲಾದವು. ಕೊನೆಗೆ 2004 ರ ಅಕ್ಟೋಬರ್ 18ರಂದು ವೀರಪ್ಪನ್ ಹತ್ಯೆಯಾಯಿತು. ಅಂದರೆ ಶ್ರೀನಿವಾಸ್ ಅವರ ಸಾವಿನ 13 ವರ್ಷದ ನಂತರ !.
ಸ್ಮಾರಕ ಹೇಳುವ ಕಥೆಗಳು..
ಮಾನವೀಯ ಮುಖ ಹಾಗೂ ಮನುಷ್ಯತ್ವವೇ ಇಲ್ಲದ ಎರಡೂ ಮಾದರಿಗಳನ್ನು ನೋಡಿದ ವೀರಪ್ಪನ್ ಊರು ಗೋಪಿನಾಥಂ ಜನ ಶ್ರೀನಿವಾಸ್ ಅವರಿಗೆ ಗೌರವಕೊಡುತ್ತಾರೆ. ಅವರ ಹೆಸರಿನಲ್ಲಿ ದೇವಸ್ಥಾನವನ್ನೂ ನಿರ್ಮಿಸಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಕಾವೇರಿ ವನ್ಯಜೀವಿ ವಿಭಾಗ ಹಾಗೂ ಮಲೈ ಮಹಾದೇಶ್ವರ ವನ್ಯಜೀವಿ ವಿಭಾಗಗಳೂ ಶ್ರೀನಿವಾಸ್ ಅವರ ಹೆಸರನ್ನು ಅಜರಾಮರವಾಗಿಸುವ ಕೆಲಸ ಮಾಡಿವೆ.
ಕಾವೇರಿ ವನ್ಯಜೀವಿ ವಿಭಾಗವು ಆಗಲೇ ಸ್ಮಾರಕವೊಂದನ್ನು ಇಲ್ಲಿ ನಿರ್ಮಿಸಿದ್ದರೂ ಪ್ರವಾಸಿಗರು ನದಿ ದಾಟಿ ಬರಲು ಇಲ್ಲಿ ಕಷ್ಟವಾಗುತ್ತಿತ್ತು. ಇದನ್ನು ಸುಂದರ ಪ್ರವಾಸಿ ತಾಣವಾಗಿಸುವ ಕಾಮಗಾರಿಯನ್ನುಎರಡು ವರ್ಷದ ಹಿಂದೆ ಪೂರ್ಣಗೊಳಿಸಲಾಗಿದೆ. ಯರ್ಕೇಯಂ ಹಳ್ಳಕ್ಕೆ ನರೇಗಾ ಹಾಗೂ ಇಲಾಖೆಯ ಅನುದಾನದಲ್ಲಿ ಚೆಕ್‌ಡ್ಯಾಂ ಕಮ್ ಜೀಪು ಹಾದಿಯನ್ನು ನಿರ್ಮಿಸಲಾಗಿದೆ. ಏಕ ಶಿಲೆ ಸ್ತಂಭ, ಅದರ ಸುತ್ತಲೂ ಗ್ರಾನೈಟ್ ಅಳವಡಿಸಿದ್ದು ಇಡೀ ಸ್ಮಾರಕಕ್ಕೆ ಕಳೆ ತಂದಿದೆ.
ಸಂಗ್ರಹಾಲಯವೂ ವಿಶೇಷ...
ಮಹಾದೇಶ್ವರ ವಿಭಾಗವೂ ಕೊಳ್ಳೇಗಾಲದಲ್ಲಿರುವ ಅರಣ್ಯ ಅತಿಥಿಗೃಹದಲ್ಲಿ ಶ್ರೀನಿವಾಸ್ ಅವರ ನೆನಪಿನ ಸಂಗ್ರಹಾಲಯ ಸ್ಥಾಪಿಸಿದೆ. ಅವರು ಬಳಸಿದ್ದ ವಸ್ತುಗಳನ್ನು ಸಂಗ್ರಹಿಸಿಟ್ಟಿದೆ. ವೀರಪ್ಪನ್ ಕಾರ್ಯಾಚರಣೆಗೆ ಉಪಯೋಗಿಸುತ್ತಿದ್ದ ಜೀಪ್‌ಗೆ ಮರು ಜೀವ ನೀಡಲಾಗಿದೆ. ಅವರು ಬರೆದ ಪತ್ರಗಳು, ಸಂಗ್ರಹಿಸಿಟಿದ್ದ ವಸ್ತುಗಳು, ಫೋಟೋಗಳು ಇಲ್ಲಿವೆ. ಶ್ರೀನಿವಾಸ್ ಅವರನ್ನು ಇಲ್ಲಿ ಜೀವಂತ ರೀತಿಯಲ್ಲಿ ನೋಡುವ ಪ್ರಯತ್ನವಾಗಿದೆ. ಚಾಮರಾಜನಗರ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮನೋಜ್‌ಕುಮಾರ್, ಡಾ.ರಮೇಶ್, ಏಡುಕೊಂಡಲು ಸಹಿತ ಹಲವರು ಇಲಾಖೆಯ ಹೀರೋಗೆ ನೈಜ ಗೌರವ ಸಲ್ಲಿಸಿದ್ದಾರೆ.
ನೀವೂ ಹೋಗಿ ಗೌರವ ಸಲ್ಲಿಸಿ ಬನ್ನಿ.…
ಕಾವೇರಿ ವನ್ಯಧಾಮ ಎಂಬ ಹೆಸರಿಟ್ಟಿರುವ ಹಿಂದೆ ಇರುವಂಥದ್ದು ಜೀವನದಿ ಕಾವೇರಿಯೇ. ವೀರಪ್ಪನ್ ಅಧಿಪತ್ಯ ಸ್ಥಾಪಿಸಿದ್ದ ಬಹುತೇಕ ಪ್ರದೇಶವೀಗ ಪ್ರವಾಸಿ ಸ್ಥಳವಾಗಿದೆ. ಅಕ್ರಮ ಚಟುವಟಿಕೆಗಳ ಪ್ರಮಾಣವೂ ತಗ್ಗಿದೆ. ಮಲೈಮಹಾದೇಶ್ವರ ಬೆಟ್ಟ, ಹೊಗೆನೆಕಲ್ ಫಾಲ್ಸ್ ವೀಕ್ಷಣೆಗೆ ಹೋದರೆ ಶ್ರೀನಿವಾಸ್ ಅವರ ಸ್ಮಾರಕ, ವಸ್ತು ಸಂಗ್ರಹಾಲಯ ನೋಡಬಹುದು. ಗೋಪಿನಾಥಂನ ಬಳಿ ಸ್ಮಾರಕ ವೀಕ್ಷಣೆಗೆ ಅವಕಾಶವಿದೆ. ಕೊಳ್ಳೇಗಾಲದಲ್ಲಿ ಸಂಗ್ರಹಾಲಯದ ಮೂಲಕ ಶ್ರೀನಿವಾಸ್ ಅವರ ಆ ದಿನಗಳ ಸಾಹಸವನ್ನು ಕಣ್ತುಂಬಿಕೊಳ್ಳಬಹುದು. ಅರಣ್ಯ ರಕ್ಷಣೆಗಾಗಿ ನೈಜ ಹೋರಾಟ ಮಾಡಿದವರಿಗೆ ಸಲ್ಲಿಸುವ ನಮ್ಮದೊಂದು ನಮನವೂ ಹೌದು.
ಇದನ್ನೂ ಓದಿರಿ..
ವಿಭಾಗ