ವಿಜಯಪುರ: ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕ, ನಶೆ ಇಳಿದ ಬಳಿಕ ತಾನೇ ಕಂಗಾಲಾದ
Nov 25, 2024 02:54 PM IST
ವಿಜಯಪುರ: ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕ, ನಶೆ ಇಳಿದ ಬಳಿಕ ತಾನೇ ಕಂಗಾಲಾದ ಘಟನೆ ವರದಿಯಾಗಿದೆ. ಆತನ ವಿರುದ್ಧ ಈಗ ಅಪಹರಣದ ಕೇಸ್ ದಾಖಲಾಗಿದೆ. ಎಡಭಾಗದಲ್ಲಿರುವ ಮೇಲಿನ ಚಿತ್ರದಲ್ಲಿ ಸಿಸಿ ಕ್ಯಾಮೆರಾದಲ್ಲಿ ಮಗುವನ್ನು ಎತ್ತಿಕೊಂಡು ಹೋದ ದೃಶ್ಯವಿದೆ. ಕಳೆಗಿನ ಚಿತ್ರದಲ್ಲಿ ಪೊಲೀಸರು ತಾಯಿಗೆ ಮಗುವನ್ನು ಒಪ್ಪಿಸಿದ ಸಂದರ್ಭ.
ವಿಜಯಪುರದಲ್ಲಿ ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕನ ವಿರುದ್ಧ ಮಗುವಿನ ಅಪಹರಣದ ಕೇಸ್ ದಾಖಲಾಗಿದೆ. ನಶೆ ಇಳಿದ ಬಳಿಕ ಮಗುವನ್ನು ವಾಪಸ್ ಕರೆದೊಯ್ದ ಜಾಗಕ್ಕೆ ಕರೆತಂದು ಪೊಲೀಸರ ಅತಿಥಿಯಾದ ಕುತೂಹಲಕಾರಿ ಹಾಗೂ ಕಳವಳಕಾರಿ ಘಟನೆ ವರದಿಯಾಗಿದೆ.
ವಿಜಯಪುರ: ನಿತ್ಯ ಬದುಕಿನ ಘಟನೆಗಳು ಕೆಲವೊಮ್ಮೆ ಬಹಳ ವಿಚಿತ್ರವೆನಿಸುವುದಷ್ಟೇ ಅಲ್ಲದೆ ಕಳವಳವನ್ನೂ ಮೂಡಿಸಿಬಿಡುತ್ತವೆ. ಅಂಥದ್ದೇ ಒಂದು ಕಳವಳಕಾರಿ ಘಟನೆ ವಿಜಯಪುರದಿಂದ ವರದಿಯಾಗಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಆಟವಾಡುತ್ತಿದ್ದ ಮಗುವನ್ನು ತನ್ನ ಮಗುವೆಂದು ಭಾವಿಸಿದ ಕುಡುಕನೊಬ್ಬ, ಆ ಮಗುವನ್ನು ಎತ್ತಿಕೊಂಡು ಹೋಗಿದ್ದ. ಇದರಿಂದ ಮಗುವಿನ ಪಾಲಕರು ಕಂಗಾಲಾಗುವಂತೆ ಮಾಡಿದ್ದ. ಅವರು ಮಗುವಿನ ಅಪಹರಣದ ದೂರು ದಾಖಲಿಸಿದರು. ಇನ್ನೊಂದೆಡೆ ಕುಡುಕನ ತಲೆಗೇರಿದ್ದ ನಶೆ ಇಳಿದಾಗ ಮಗು ತನ್ನದಲ್ಲ ಎಂಬ ಗೊತ್ತಾಗಿ ಕಂಗಾಲಾದ. ಪೊಲೀಸ್ ಕೇಸ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಮಗುವನ್ನು ವಾಪಸ್ ಪಾಲಕರಿಗೆ ಒಪ್ಪಿಸಿದ್ಧಾರೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನವೆಂಬರ್ 23 ರಂದು ಈ ಘಟನೆ ನಡೆದಿದ್ದು, ನಿನ್ನೆ ಸುಖಾಂತ್ಯ ಕಂಡಿದೆ.
ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕ
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನವೆಂಬರ್ 23ರ ಅಪರಾಹ್ನ ಬಾಗಲಕೋಟೆ ಮೂಲದ ರಾಮೇಶ್ವರಿ ಪವಾರ್ ಅವರ ಒಂದು ವರ್ಷದ ಮಗು ಸಂದೀಪ್ ಕಾಣದಾಗಿದ್ದ. ಜಿಲ್ಲಾ ಆಸ್ಪತ್ರೆಯ ಸಿಸಿಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಆ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಕಾಣಿಸಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಿಂದ ಮಗು ನಾಪತ್ತೆ ಎಂಬ ಸುದ್ದಿ ಎಲ್ಲರಲ್ಲೂ ಗಾಬರಿ ಹುಟ್ಟುವಂತೆ ಮಾಡಿತ್ತು. ಈ ಮಾಹಿತಿ ಪಡೆದ ಗಾಂಧಿ ಚೌಕ ಪೊಲೀಸರು ದೂರು ದಾಖಲಿಸಿಕೊಂಡು ಮಗುವಿನ ಪತ್ತೆಗೆ ಶೋಧ ಶುರುಮಾಡಿದ್ದಾರೆ. ಸತತ 20 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಮಗು ಮತ್ತು ಮಗುವನ್ನು ಕರೆದೊಯ್ದ ವಕ್ತಿ ಇಬ್ಬರನ್ನೂ ಪೊಲೀಸರು ಪತ್ತೆ ಹಚ್ಚಿದರು. ಆರೋಪಿಯನ್ನು ಬಂಧಿಸಿ, ಮಗುವನ್ನು ತಾಯಿಗೆ ಒಪ್ಪಿಸಿದರು. ಆರೋಪಿಯನ್ನು ದೇವರಹಿಪ್ಪರಗಿಯ ರವಿ ಹರಿಜನ ಎಂದು ಗುರುತಿಸಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ವರದಿ ಮಾಡಿದೆ.
ರಾಮೇಶ್ವರಿ ಪವಾರ್ ತನ್ನ ತಾಯಿ ಪದ್ಮಾ ಅವರನ್ನು ಮೂರು ದಿನ ಹಿಂದೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ತಾಯಿಯ ಜತೆಗೆ ಇರಬೇಕಾದ ಕಾರಣ ಒಂದು ವರ್ಷ ಮಗುವನ್ನೂ ತನ್ನ ಜತೆಗೇ ಇರಿಸಿಕೊಂಡಿದ್ದರು ರಾಮೇಶ್ವರಿ ಪವಾರ್. ನವೆಂಬರ್ 23ರ ಮಧ್ಯಾಹ್ನ ಪದ್ಮಾ ಅವರ ಕಫ ಪರೀಕ್ಷೆ ಆಗಬೇಕು ಮಾಡಿಸಿಕೊಂಡು ಬನ್ನಿ ಎಂದು ಡಾಕ್ಟರ್ ಹೇಳಿದ್ದರು. ಹಾಗಾಗಿ ರಾಮೇಶ್ವರಿ ಪವಾರ್ ಕಫ ಪರೀಕ್ಷೆ ಮಾಡಿಸಿಕೊಂಡು ಬರಲು ಹೋಗಿದ್ದರು. ಆಗ ಮಗುವನ್ನು ಆಸ್ಪತ್ರೆಯ ವಾರ್ಡ್‌ನಲ್ಲೇ ತಾಯಿ ಪದ್ಮಾ ಅವರ ಬಳಿಯೇ ಬಿಟ್ಟು ಹೋಗಿದ್ದರು.
ಮಗು ಅಳುತ್ತ ಆಸ್ಪತ್ರೆ ವಾರ್ಡ್‌ನಲ್ಲಿ ನಿಂತಿದ್ದ ವೇಳೆ ಆರೋಪಿ ರವಿ ಹರಿಜನ ಅಲ್ಲೇ ಬಂದಿದ್ದ. ಆ ಮಗುವನ್ನು ನೋಡಿ, ನನ್ನ ಮಗುವಿನಂತೆಯೆ ಇದೆಯಲ್ಲ ಎಂದು ಅಲ್ಲಿದ್ದವರ ಬಳಿ ಎಲ್ಲ ಹೇಳಿದ್ದ. ಬಳಿಕ ಮಗುವನ್ನು ಎತ್ತಿಕೊಂಡು ಹೋಗಿದ್ದ. ಆತ ಮಗುವನ್ನು ಎತ್ತಿಕೊಂಡು ಹೋದ ದೃಶ್ಯ ಆಸ್ಪತ್ರೆಯ ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಮಗು ಕಾಣದ ಸಂಕಟದಲ್ಲಿ ಮಗುವಿನ ತಾಯಿ ಕಂಗಾಲಾಗಿದ್ದರು. ಜೋರಾಗಿ ಅಳುತ್ತ ಗೋಳಾಡುತ್ತಿದ್ದ ಕರುಳುಹಿಂಡುವ ದೃಶ್ಯ ಕಂಡುಬಂದಿತ್ತು. ಇನ್ನೊಂದೆಡೆ, ಮಗುವನ್ನು ಮನೆಗೆ ಕರೆದೊಯ್ದ ಆರೋಪಿ ಮಾರನೇ ದಿನ ಅಂದರೆ ನಿನ್ನೆ (ನವೆಂಬರ್ 24) ವಾಪಸ್ ಮಗುವಿನ ಸಹಿತ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾನೆ. ಆಗ ಪೊಲೀಸರು ಆತನನ್ನು ಬಂಧಿಸಿ, ಮಗುವನ್ನು ಅದರ ತಾಯಿಗೆ ಒಪ್ಪಿಸಿದ್ದಾರೆ.
ನಶೆ ಇಳಿದ ಬಳಿಕ ತಾನೇ ಕಂಗಾಲಾದ ಕುಡುಕ
ಆರೋಪಿ ದೇವರಹಿಪ್ಪಗಿ ಮೂಲದ ರವಿ ಹರಿಜನ್ ಪೊಲೀಸ್ ವಿಚಾರಣೆ ವೇಳೆ, “ಮನೆಯಿಂದ ಆಸ್ಪತ್ರೆಗೆ ಹೋಗಿ ಔಷಧ ತಗೊಂಡು ಬಾ ಅಂತ ಕಳುಹಿಸಿದ್ದರು. ದಾರಿ ಮಧ್ಯೆ ಮದ್ಯಪಾನ ಮಾಡಿದೆ. ಕುಡಿತದ ಅಮಲು ತಲೆಗೇರಿತ್ತು. ನಶೆಯಲ್ಲಿದ್ದಾಗ ಆಸ್ಪತ್ರೆ ವಾರ್ಡ್‌ನಲ್ಲಿ ಅಳುತ್ತಿದ್ದ ಮಗುವನ್ನು ನೋಡಿದೆ. ನನ್ನ ಮಗುವಿನಂತೆಯೇ ಭಾಸವಾಯಿತು. ಹಾಗೆ ಸಂತೈಸುವುದಕ್ಕೆಂದು ಎತ್ತಿಕೊಂಡಿರುವಾಗ, ಫೋನ್ ಕರೆ ಬಂತು. ಹಾಗೆ ಮನೆಗೆ ಕರೆದುಕೊಂಡು ಹೋದೆ. ನಶೆ ಇಳಿದಾಗ ಮಗು ನನ್ನದಲ್ಲ ಎಂದು ಗೊತ್ತಾಗಿದೆ. ವಾಪಸ್ ಜಿಲ್ಲಾ ಆಸ್ಪತ್ರೆಗೆ ಮಗುವಿನೊಂದಿಗೆ ಬಂದೆ” ಎಂದು ಅಲವತ್ತುಕೊಂಡಿದ್ದಾನೆ.
ಆದರೆ ಈಗಾಗಲೇ ಮಗುವಿನ ಅಪಹರಣದ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಜಿಲ್ಲಾ ಆಸ್ಪತ್ರೆ ಸುತ್ತಮುತ್ತ ಇರುವ 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ನಿನ್ನೆ ಆರೋಪಿ ರವಿ ಹರಿಜನ ಆಸ್ಪತ್ರೆ ಸಮೀಪ ಬಂದ ಕೂಡಲೇ ವಿಜಯಪುರದ ಗಾಂಧಿ ಚೌಕ ಪೊಲೀಸರು ಆತನನ್ನು ಬಂಧಿಸಿ, ಕೇಸ್ ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಿದ್ದಾರೆ. ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ ಎಂದು ವರದಿ ಹೇಳಿದೆ.