logo
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರ ಐತಿಹಾಸಿಕ ಗೋಲಗುಮ್ಮಟ ಜಿಲ್ಲೆಯಷ್ಟೇ ಅಲ್ಲ, ಅತೀ ಹೆಚ್ಚು ಮಕ್ಕಳ ಸಾಹಿತಿಗಳನ್ನು ಸೃಷ್ಟಿಸಿದ ತವರೂರು ಹೌದು

ವಿಜಯಪುರ ಐತಿಹಾಸಿಕ ಗೋಲಗುಮ್ಮಟ ಜಿಲ್ಲೆಯಷ್ಟೇ ಅಲ್ಲ, ಅತೀ ಹೆಚ್ಚು ಮಕ್ಕಳ ಸಾಹಿತಿಗಳನ್ನು ಸೃಷ್ಟಿಸಿದ ತವರೂರು ಹೌದು

Umesha Bhatta P H HT Kannada

Nov 13, 2024 08:00 AM IST

google News

ಮಕ್ಕಳ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಕಂಚ್ಯಾಣಿ ಶರಣಪ್ಪ, ಸಿಸು ಸಂಗಮೇಶ, ಪಗು ಸಿದ್ದಾಪುರ, ಹ,ಮ.ಪೂಜಾರಿ.

    • Childrens day: ವಿಜಯಪುರ ಹಲವು ವಿಷಯಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ.ಮಕ್ಕಳ ಸಾಹಿತ್ಯದ ವಿಚಾರ ಬಂದಾಗ ಸಮೃದ್ದ ಸಾಹಿತ್ಯ ಹಾಗೂ ಸಾಹಿತಿಗಳನ್ನು ನೀಡಿದ ಹಿರಿಮೆ ವಿಜಯಪುರ ಜಿಲ್ಲೆಗೆ ಇದೆ. ಮಕ್ಕಳ ದಿನದ ಸಂದರ್ಭದಲ್ಲಿ ಇಂತಹ ಸಾಹಿತಿಗಳ ಕಿರು ಪರಿಚಯ ಇಲ್ಲಿದೆ.
ಮಕ್ಕಳ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಕಂಚ್ಯಾಣಿ ಶರಣಪ್ಪ, ಸಿಸು ಸಂಗಮೇಶ, ಪಗು ಸಿದ್ದಾಪುರ, ಹ,ಮ.ಪೂಜಾರಿ.
ಮಕ್ಕಳ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಕಂಚ್ಯಾಣಿ ಶರಣಪ್ಪ, ಸಿಸು ಸಂಗಮೇಶ, ಪಗು ಸಿದ್ದಾಪುರ, ಹ,ಮ.ಪೂಜಾರಿ.

ವಿಜಯಪುರ: ಒಂದು ಕಾಲಕ್ಕೆ ಉತ್ತರ ಕರ್ನಾಟಕದ ಪಂಚನದಿಗಳ ಬೀಡು ಎಂದೇ ಕರೆಯಿಸಿಕೊಂಡಿದ್ದ ಬಿಜಾಪುರ ಈಗಿನ ವಿಜಯಪುರ ನಗರದಲ್ಲಿ ಒಂದು ಸುತ್ತು ಹಾಕಿ ಬಂದರೆ ನಿಮಗೆ ಕಾಣ ಸಿಗುವುದು ಪಾರಂಪರಿಕ ತಾಣಗಳು ಹಾಗೂ ಮಕ್ಕಳ ಸಾಹಿತಿಗಳ ನಿವಾಸಗಳು. ಗೋಳಗೊಮ್ಮಟ ಸೇರಿದಂತೆ ಬರೀ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡಗಳಿಗೆ ಮಾತ್ರ ಇದು ಜನಪ್ರಿಯ ಅಂದುಕೊಳ್ಳುವ ಹಾಗಿಲ್ಲ. ಸಾಹಿತ್ಯದಲ್ಲಿ ಪ್ರಮುಖ ಪ್ರಾಕಾರವಾಗಿ ಹೊರ ಹೊಮ್ಮಿರುವ ಮಕ್ಕಳ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಜಿಲ್ಲೆ. ಏಕೆಂದರೆ ಈ ಜಿಲ್ಲೆಯಲ್ಲಿರುವರಷ್ಟು ಪ್ರಸಿದ್ದ ಹಾಗೂ ಪ್ರಬುದ್ದ ಮಕ್ಕಳ ಸಾಹಿತಿಗಳು ಕರ್ನಾಟಕದ ಬೇರಾವ ಜಿಲ್ಲೆಗಳಲ್ಲೂ ಸಿಗುವುದಿಲ್ಲ. ಈಗಲೂ ಹಲವು ಮಕ್ಕಳ ಸಾಹಿತಿಗಳು ಇಲ್ಲಿ ಸಕ್ರಿಯರು. ಈಗಲೂ ಮಕ್ಕಳ ಸಾಹಿತ್ಯ ಬರವಣಿಗೆಯಲ್ಲಿ ನಿರತರಾಗಿದ್ದಾರೆ.

ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೇ ವಿಜಯಪುರ ನೀಡಿದೆ. ಅವಿಭಜಿತ ವಿಜಯಪುರ ಜಿಲ್ಲೆಯನ್ನು ಮಕ್ಕಳ ಸಾಹಿತ್ಯದ ತವರು ಎಂತಲೇ ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಶಿಶು ಸಾಹಿತಿಗಳ ದೊಡ್ಡ ಪಡೆಯೇ ಇದೆ. ಕಂಚ್ಯಾಣಿ ಶರಣಪ್ಪ, ಸಿಸು ಸಂಗಮೇಶ, ಹ.ಮ.ಪೂಜಾರಿ, ಪ.ಗು. ಸಿದ್ದಾಪೂರ, ಶಂಗು ಬಿರಾದಾರ್‌, ಮಹಾಂತ ಗುಲಗಂಜಿ, ಜಂಬುನಾಥ ಕಂಚ್ಯಾಣಿ ಸಹಿತ ಶಿಶು ಸಾಹಿತಿಗಳು ದೊಡ್ಡ ಮಟ್ಟದಲ್ಲೇ ಬೆಳೆದಿದ್ದಾರೆ. ಜಿಲ್ಲೆಯ ಹೆಸರನ್ನೂ ಬೆಳಗಿಸಿದ್ದಾರೆ.

ಬೆಳವಣಿಗೆಗೆ ಕಾರಣ ಏನು

ಕನ್ನಡ ಸಾಹಿತ್ಯದ ಹಲವು ವಲಯಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು ಪ್ರಕಾರವೇ. ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಶಿಶು ಸಾಹಿತ್ಯದ ದೊಡ್ಡ ಪರಂಪರೆಯೇ ಇದೆ. ಕನ್ನಡದಲ್ಲಿಯೇ ಹಲವು ಸಾಹಿತಿಗಳು ಕೊಡುಗೆ ನೀಡಿರುವುದು ಉಲ್ಲೇಖನೀಯ. ಮಕ್ಕಳ ಸಾಹಿತ್ಯದ ಮಹತ್ವ ತಿಳಿಸಿಕೊಡುವ ಪ್ರಯತ್ನ ಕನ್ನಡದಲ್ಲೂ ಖಂಡಿತಾ ಆಗಿದೆ. ಹೊಸತಲೆಮಾರಿನಲ್ಲೂ ಆಶಾದಾಯಕ ಎನ್ನುವ ಶಿಶು ಸಾಹಿತ್ಯ ಬರುತ್ತಿದೆ ಎನ್ನುವುದು ಆಶಾದಾಯಕ ಬೆಳವಣಿಗೆಯೇ.

ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಶಿಶು ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಕನ್ನಡದಲ್ಲೂ ಹಲವಾರು ಶಿಶು ಸಾಹಿತಿಗಳು ದೊಡ್ಡ ಕೊಡುಗೆಯನ್ನೂ ನೀಡಿದ್ದಾರೆ. ದೊಡ್ಡವರು ಸಾಹಿತ್ಯ ರಚಿಸಿದರೂ ಮಕ್ಕಳ ಮನದಾಳವನ್ನು ಅಕ್ಷರದ ರೂಪದಲ್ಲಿ ಹಿಡಿದಿಡುವ ಪ್ರಯತ್ನ ಆಗಿದೆ. ಇದಕ್ಕೆ ಸುದೀರ್ಘ ಇತಿಹಾಸವೇ ಇದೆ. ಸಾಕಷ್ಟು ಪ್ರೋತ್ಸಾಹವೂ ಸಾಹಿತ್ಯ ವಲಯದಿಂದ ಸಿಕ್ಕಿದೆ. ಸರಕಾರವೂ ಧಾರವಾಡದಲ್ಲಿ ಬಾಲ ವಿಕಾಸ ಅಕಾಡೆಮಿ ಸ್ಥಾಪಿಸಿ ಸಾಹಿತ್ಯದೊಂದಿಗೆ ಹಲವಾರು ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದೆ.

ಪ್ರೋತ್ಸಾಹವೂ ಹೆಚ್ಚು

ಪತ್ರಿಕೆಗಳಲ್ಲೂ ಶಿಶು ಸಾಹಿತ್ಯಕ್ಕೆ ಬೆಂಬಲ ದೊರೆತಿರುವುದು ಹತ್ತಾರು ಸಾಹಿತಿಗಳು ಸಾಹಿತ್ಯ ರೂಪಿಸಲು ಸಹಕಾರಿಯಾಗಿದೆ. ಶಿಶು ಸಾಹಿತ್ಯ ಪಠ್ಯದ ರೂಪ ಪಡೆದಿದೆ. ಇನ್ನಷ್ಟು ಪ್ರೋತ್ಸಾಹ ನೀಡಿದರೆ ಶಿಶು ಸಾಹಿತ್ಯ ಇನ್ನಷ್ಟು ಗಟ್ಟಿಯಾಗಲಿದೆ ಎನ್ನುವ ನಂಬಿಕೆ ಹಿರಿಯ ಸಾಹಿತಿಗಳದ್ದು.

ವಿಜಯಪುರದಲ್ಲಿ ಮಕ್ಕಳ ಸಾಹಿತ್ಯ ಬೆಳೆಯಲು ಹಲವು ಕಾರಣಗಳಿವೆ. ಮುಖ್ಯವಾಗಿ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿ ಇಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಒಬ್ಬರೊಬ್ಬರನ್ನು ಗೌರವಿಸುವ ವಾತಾವರಣ ಹಿಂದಿನಿಂದಲೂ ಇದೆ. ಪರಸ್ಪರ ಉತ್ತಮ ಬಾಂಧವ್ಯವೂ ಬೆಳವಣಿಗೆಗೆ ಪ್ರಮುಖ ಕಾರಣ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿ ಹತ್ತಾರು ಕಾರ‍್ಯಕ್ರಮ, ಸಮ್ಮೇಳನ, ವಿಚಾರಸಂಕಿರಣವನ್ನು ಆಯೋಜಿಸಿಕೊಂಡು ಬಂದು ಪುಸ್ತಕಗಳ ಪ್ರಕಟಣೆಗೆ ಸರ್ಕಾರ, ಸಂಘಟನೆಗಳು ಬೆಂಬಲವಾಗಿ ನಿಂತಿರುವುದೂ ಮತ್ತೊಂದು ಕಾರಣ.

ವಿಜಯಪುರ ಸಾಹಿತ್ಯ ಲೋಕದಲ್ಲಿ ಬೆಳಗಿನ ಪ್ರಮುಖ ಮಕ್ಕಳ ಸಾಹಿತಿಗಳ ಕಿರು ಪರಿಚಯ ಇಲ್ಲಿದೆ.

ಕಂಚ್ಯಾಣಿ ಶರಣಪ್ಪ

ಮಗುವಿನಿಂದ ತೊಡಗಿ ಹಿರಿಯರವರೆಗೆ ಎಲ್ಲರಿಗೂ ಕಂಚ್ಯಾಣಿ ಶರಣಪ್ಪ ಎಂದರೆ ಅವರದೇ ಸಾಹಿತ್ಯದ ಸಾಲುಗಳು ಬಾಯಲ್ಲಿ ನಲಿದಾಡುತ್ತವೆ. ಮಕ್ಕಳ ಸಾಹಿತ್ಯದ ಕ್ಷೇತ್ರದಲ್ಲಿ ಅಷ್ಟರಮಟ್ಟಿಗೆ ಖ್ಯಾತರಾಗಿರುವ ಕಂಚ್ಯಾಣಿ ಶರಣಪ್ಪ 22 ಕೃತಿಗಳನ್ನು ಶಿಶು ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಜ್ಜನ ಕಾಡು ( ಮಕ್ಕಳ ಕವಿತೆಗಳು-ಮೊದಲ ಪುಸ್ತಕ), ನಂತರ ಅವರ ಹಲವಾರು ಕವನ ಸಂಕಲನಗಳನ್ನು ರಚಿಸಿದರು.) ಜಾಗೃತ ಭಾರತ, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಚೆಲುವಿನ ಚಿಟ್ಟೆ, ಪುಟ್ಟಿಯ ತೋಟ, ಬೆದರು ಬೆಚ್ಚ ಮುಂತಾದವುಗಳ ಜೊತೆಗೆ ‘ಗುಡು ಗುಡು ಗುಂಡ’ ಎಂಬ ಶಿಶು ಪ್ರಾಸದ ಪುಸ್ತಕ, ಗಿಲ್ ಗಿಲ್ ಗಿಡ್ಡ, ಅಪ್ಪನ ಕಥೆಗಳು, ಅಪ್ಪನ ಮತ್ತಷ್ಟು ಕಥೆಗಳು, ಚತುರ ಚಿಣ್ಣರು ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಎರಡು ವರ್ಷದ ಹಿಂದೆ ಕಾಲವಾದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಗೌರವವೂ ಲಭಿಸಿತ್ತು.

ಜಂಬುನಾಥ ಕಂಚ್ಯಾಣಿ

ಅವರ ಪುತ್ರ ಜಂಬು ನಾಥ ಕಂಚ್ಯಾಣಿ ಕೂಡ ಅಪ್ಪನಂತೆಯೇ ಮಕ್ಕಳ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಇಣಚಿ, ಚುಕುಬುಕು ರೈಲು, ಬಸವನ ಹುಳು, ಅಮ್ಮ, ರಾಷ್ಟ್ರ ಭಕ್ತಿಯನ್ನು ನಿರೂಪಿಸುವ ವೀರ ಭಗತ್‌ಸಿಂಗ್, ಪರಿಸರದ ಬಗ್ಗೆ ಎಚ್ಚರಿಸುವ ಬನದಿಂದ ಬಾಳು, ಕನ್ನಡದ ಹಿರಿಮೆ – ಗರಿಮೆಗಳನ್ನು ಸಾರುವ ಭುವನೇಶ್ವರಿ ಹೀಗೆ ಹಲವಾರು ಪದ್ಯಗಳು ಮಕ್ಕಳಿಗೆ ಮುದನೀಡುತ್ತವೆ. ಅಂಬೆಗಾಲಿನ ಹೋರಿ, ಪುಟ್ಟಿಯ ಗುಲಾಬಿ, ಮಲ್ಲಿಗೆ ಮಳೆ, ಬೇಲಿ (ಹನಿಗವನ) ಮುಂತಾದ ಮಕ್ಕಳ ಪದ್ಯಗಳ ಸಂಕಲನಗಳನ್ನು ಜಂಬುನಾಥ್‌ ಪ್ರಕಟಿಸಿದ್ದಾರೆ.

ಸಿಸು ಸಂಗಮೇಶ

ಸಿಸು ಸಂಗಮೇಶ ಅವರದ್ದು ಕೂಡ ಮಕ್ಕಳ ಸಾಹಿತ್ಯದಲ್ಲಿ ದೊಡ್ಡ ಹೆಸರು. ಬಾಲಭಾರತಿ ಪ್ರಕಾಶನದಡಿ ಸುಮಾರು 80ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆ ಸಂಗಮೇಶರದು. ಇವುಗಳಲ್ಲಿ ಹನ್ನೆರಡು ಕೃತಿಗೆ ರಾಷ್ಟ್ರ ಪ್ರಶಸ್ತಿ, ಹದಿನಾರು ಕೃತಿಗಳಿಗೆ ರಾಜ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿರುವುದು ವಿಶೇಷ.

ಸಂಗಮೇಶರ ಸಾಹಿತ್ಯ ಕೃಷಿಯಲ್ಲಿ ಮಕ್ಕಳಿಗಾಗಿ ರಚಿಸಿದ ಕೃತಿಗಳು ನಾಯಿ ಫಜೀತಿ, ಯಾರು ಜಾಣರು? ಮಂಕು ಮರಿ, ಆಶೆಬುರುಕಿ ಆಶಾ, ಹೇಗಿದ್ದರು ಹೇಗಾದರು, ದಾರಿಯ ಬುತ್ತಿ ಮುಂತಾದುವು. ಕವಿತಾ ಸಂಕಲನಗಳು ಸವಿ ಸಾಹಿತ್ಯ, ಕಾಡಿನ ಕಲಿಗಳು, ಶಾಲೆಗಿಂತ ಚೀಲಭಾರ, ಚುಟುಕು-ಗುಟುಕು, ಸೂರ್ಯ ಚಂದ್ರರ ನಡುವೆ ಮೊದಲಾದುವು. ಅನುವಾದಿತ ಕೃತಿಗಳು ಗೋಮುಖಯಾತ್ರೆ, ಕನಸಿನ ಲೋಕ, ಚತುರ ಚಾಣಾಕ್ಷ. ಪುಟಿಚೆಂಡು, ಆಣೆಕಲ್ಲು, ನಾವು ನಮ್ಮವರು ಮೊದಲಾದುವು ಸಂಪಾದಿತ ಕೃತಿಗಳು. ಎರಡು ದಶಕದ ಹಿಂದೆಯೇ ಸಂಗಮೇಶ ಅವರು ಕಾಲವಾದರೂ ಈಗಲೂ ಅವರ ಹೆಸರು ಅಜರಾಮರವಾಗಿ ಉಳಿದಿದೆ.

ಪ.ಗು.ಸಿದ್ದಾಪುರ

ಸಿದ್ದಾಪುರ ಕೂಡ ವಿಜಯಪುರದವರೇ. ಅವರ ಮೊದಲ ಮಕ್ಕಳ ಕವಿತೆಗಳ ಸಂಕಲನ ‘ಬಣ್ಣದ ಚಿಟ್ಟೆ’, ನಂತರ ‘ತಾರಾಲೋಕಕ್ಕೆ ಹಾರುವೆನು’, ‘ಮಳೆರಾಯ’, ‘ಪುಟ್ಟನ ಪ್ರಶ್ನೆ’, ಸಕ್ಕರೆ ತುಪ್ಪ, ಮುತ್ತಿನ ಕುಂಜಿಗೆ’, ‘ಮಂಗನ ಅಂಗಳಕೆ’, ಚಿನ್ನದ ಜಿಂಕೆ’, ನಂದನದಲ್ಲಿ ಚಂದನ’, ಆಯ್ದ ಮಕ್ಕಳ ಕವಿತೆಗಳ ಸಂಕಲನವಾದ ‘ಮಕ್ಕಳ ನೂರಾರು ಕವಿತೆಗಳು’ ಮುಂತಾದ ಕವಿತಾ ಸಂಕಲನಗಳಲ್ಲದೆ, ‘ಹಸಿರು ತೋರಣ’ (ಪರಿಸರ ಗೀತೆ), ‘ಪಣತೊಟ್ಟ ಪ್ರಾಣಿಗಳು’ (ಮಕ್ಕಳ ಕಥೆಗಳು),, ‘ಯಾವೂರಾನೆ, ವಿಜಾಪುರದಾನೆ!’ (ಮಕ್ಕಳ ಕಥೆಗಳು), ‘ಕರಡಿ ಹೇಳಿದ ಕಥೆ’ (ಮಕ್ಕಳ ಕಥನ ಕವನ), ‘ಅಥಣಿ ಶಿವಯೋಗಿಗಳು’ (ಮಕ್ಕಳಿಗಾಗಿ ವ್ಯಕ್ತಿ ಪರಿಚಯ), ‘ಬಂಗಾರದ ಬಳೆ’ (ಮಕ್ಕಳ ಕಥೆಗಳು) ಪ್ರಕಟಿಸಿದ್ದಾರೆ.

ಹ.ಮ. ಪೂಜಾರಿ

ವಿಜಯಪುರ ಜಿಲ್ಲೆಯವರಾದ ಪೂಜಾರಿ ಅವರು ಕೂಡ ಹಿರಿಯರ ಜತೆ ಮಕ್ಕಳ ಸಾಹಿತ್ಯದಲ್ಲೂ ಕೈ ಯಾಡಿಸಿ ಸೈ ಎನ್ನಿಸಿಕೊಂಡವರು. ಜಿಲ್ಲಾ ಮಕ್ಕಳ ಸಾಹಿತ್ಯ ಸಮೀಕ್ಷೆ ‘ಚಿಣ್ಣರ ಚೇತನ’, ಸಂಗೀತ ಕುರಿತಾದ ಲೇಖನಗಳ ಸಂಕಲನ ‘ಪಂಚಾಕ್ಷರಿ ಪ್ರಭೆ’, ಸ್ಪರ್ಧೆಗಾಗಿ ಮಕ್ಕಳ ಸಾಹಿತಿಗಳು ಬರೆದ ಕಥೆ, ಕವನಗಳ ಸಂಕಲನ ‘ಪುಟ್ಟ ಕಾಣಿಕೆ’ ಮತ್ತು ‘ಸುವರ್ಣ ಸಂಭ್ರಮ’ ಇತ್ಯಾದಿ ಕೃತಿಗಳು ಅವರಿಂದ ಬಂದಿವೆ.

ಶಂಗು ಬಿರಾಬಾರ

ಶಂಗು ಬಿರಾದಾರ ಅವರ ಹೆಸರು ಹೇಳಿದ ತಕ್ಷಣ ನೆನಪಾಗೋದು ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ ಎನ್ನುವ ಸಾಲುಗಳು. ವಿಜಯಪುರದ ಮತ್ತೊಬ್ಬ ಮಕ್ಕಳ ಸಾಹಿತಿ ಇವರು.ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಕತೆಗಳು ಎನ್ನು ಕೃತಿ, ಅರ್ಪಣ ಎನ್ನುವ ಮಕ್ಕಳ ಕವನ ಸಂಕಲನವನ್ನು ಅವರು ಪ್ರಕಟಿಸಿದ್ದಾರೆ. ದಶಕದ ಹಿಂದೆಯೇ ಕಾಲವಾದರೂ ಬಿರಾದಾರರ ಹೆಸರು ಗಟ್ಟಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ