logo
ಕನ್ನಡ ಸುದ್ದಿ  /  ಕರ್ನಾಟಕ  /  ಕೃಷ್ಣೆಯ ಜಲಧಿಗೆ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌; ನಾಯಕರ ನಡೆಯಲ್ಲಿ ಒಗ್ಗಟ್ಟಿನ ಸಂದೇಶ

ಕೃಷ್ಣೆಯ ಜಲಧಿಗೆ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌; ನಾಯಕರ ನಡೆಯಲ್ಲಿ ಒಗ್ಗಟ್ಟಿನ ಸಂದೇಶ

Umesh Kumar S HT Kannada

Aug 21, 2024 05:15 PM IST

google News

ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಜೊತೆಯಾಗಿಯೇ ಬಾಗಿನವನ್ನೂ ಸಮರ್ಪಿಸಿದರು.

  • Bagina to Krishna River; ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಸಾಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಒಟ್ಟೊಟ್ಟಿಗೆ ಇದ್ದು ಗಂಗಾಪೂಜೆ ನೆರವೇರಿಸಿ, ಕೃಷ್ಣೆಯ ಜಲಧಿಗೆ ಗಂಗಾಪೂಜೆ ಸಲ್ಲಿಸಿದರು. 

ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಜೊತೆಯಾಗಿಯೇ ಬಾಗಿನವನ್ನೂ ಸಮರ್ಪಿಸಿದರು.
ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಜೊತೆಯಾಗಿಯೇ ಬಾಗಿನವನ್ನೂ ಸಮರ್ಪಿಸಿದರು.

ವಿಜಯಪುರ: ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಸಾಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಆಲಮಟ್ಟಿ ಜಲಾಶಯ ಭರ್ತಿಯಾದ ಕಾರಣ, ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಈ ಬಾಗಿನ ಅರ್ಪಣೆ ಸಮಾರಂಭ ಆಯೋಜಿಸಿತ್ತು. ಜಲಾಶಯ ಮತ್ತು ಉದ್ಯಾನ ವಿಶೇಷ ಅಲಂಕಾರದೊಂದಿಗೆ ಕಂಗೊಳಿಸಿದ್ದು, ಬಾಗಿನ ಅರ್ಪಣೆಗೂ ಮುನ್ನ ಡ್ಯಾಂ ಪ್ರವೇಶ ದ್ವಾರದಲ್ಲಿ ಪೊಲೀಸ್ ಇಲಾಖೆಯಿಂದ ಸಿಎಂ ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಲಮಟ್ಟಿ ಜಲಾಶಯದ ನೀರು ಗರಿಷ್ಠ ಮಟ್ಟ (123 ಟಿಎಂಸಿ) ತಲುಪಿದ ಈ ಶುಭ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೇರವೇರಿಸಿ ಬಾಗಿನ ಅರ್ಪಣೆಯ ಸಂತಸದ ಕ್ಷಣ ಇದು ಎಂದರು.

ಉತ್ತರ ಕರ್ನಾಟಕ ಭಾಗಕ್ಕೆ ಜೀವ ಜಲ ಒದಗಿಸುವ ಜಲಸಂಪನ್ಮೂಲ

ಕೃಷ್ಣಾ ನ್ಯಾಯಾಧೀಕರಣ-1 ರ ತೀರ್ಪಿನ ಅನ್ವಯ ಯುಕೆಪಿ.-1 ಮತ್ತು2 ರಲ್ಲಿ 173 ಟಿಎಂಸಿ ನೀರಿನ ಹಂಚಿಕೆಯ ಪ್ರಕಾರ ಒಟ್ಟು 6.67 ಲಕ್ಷ ಹೆಕ್ಟೇರ್ (16.47 ಲಕ್ಷ ಎಕರೆ) ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಅದೇ ರೀತಿ, ಕೃಷ್ಣಾ ನ್ಯಾಯಾಧೀಕರಣ-2 ರ ಅಂತಿಮ ತೀರ್ಪಿನ ಅನ್ವಯ ಯುಕೆಪಿ-3 ನೇ ಹಂತದ ಅನುಷ್ಠಾನಕ್ಕಾಗಿ ಹಂಚಿಕೆಯಾದ ನೀರಿನ ಪ್ರಮಾಣ 130.90 ಟಿ.ಎಂ.ಸಿ. ಹಾಗೂ ಯುಕೆಪಿ ಹಂತ-3 ಕ್ಕೆ ಹಂಚಿಕೆಯಾದ 130 ಟಿ.ಎಂ.ಸಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 519.60 ಮೀ ನಿಂದ 524.256 ಮೀ ವರೆಗೆ (15 ಅಡಿ) ಎತ್ತರಿಸುವುದು ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಡಿ ಒಟ್ಟಾರೆ 5.94 ಲಕ್ಷ ಹೆಕ್ಟೇರ್ (14.68 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ ಎಂಬುದನ್ನು ಅವರು ನೆನಪಿಸಿಕೊಂಡರು.

ಆಲಮಟ್ಟಿ ಸಂತ್ರಸ್ತರಿಗೆ ಪುನರ್ವಸತಿ ಕ್ರಮಗಳ ವಿವರ

ಆಲಮಟ್ಟಿ ಜಲಾಶಯದ ಸಂಗ್ರಹಣೆಯನ್ನು 524.256 ಮೀಟರ್‌ಗೆ ಹೆಚ್ಚಿಸಿದಲ್ಲಿ ಹಿನ್ನೀರಿನಲ್ಲಿ 188 ಗ್ರಾಮಗಳ 75,000 ಎಕರೆ ಜಮೀನು ಮುಳುಗಡೆಯಾಗಲಿದೆ. ಅಲ್ಲದೇ, ಮುಳುಗಡೆ ಹೊಂದುವ 20 ಗ್ರಾಮವಾಸಿಗಳಿಗೆ ಬಾಗಲಕೋಟ ಪಟ್ಟಣ ಒಳಗೊಂಡು ಬೃಹತ್ ಪ್ರಮಾಣದ ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಕ್ರಮಗಳನ್ನು ಹೊಸ ಭೂಸ್ವಾಧೀನ-2013 ರ ಕಾಯ್ದೆಯನ್ವಯ ಜರುಗಿಸಲಾಗುತ್ತದೆ. ಇದಕ್ಕಾಗಿ ಒಟ್ಟಾರೆ 1.34 ಲಕ್ಷ ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಇಲ್ಲಿಯವರೆಗೆ 28,878 ಎಕರೆ ಕ್ಷೇತ್ರವನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರ ನೀಡಿದರು.

ಈ ಯೋಜನೆಯ ಅನುಷ್ಠಾನಕ್ಕೆ 51,148.94 ಕೋಟಿ ರೂಪಾಯಿ (2014-15ರ ದರಪಟ್ಟಿ) ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರ್ಕಾರವು 2017ರ ಅಕ್ಟೋಬರ್ 9 ರಂದು ಅನುಮೋದನೆ ನೀಡಿದೆ. ಈ ಪೈಕಿ ಭೂಸ್ವಾಧೀನ ಮತ್ತು ಇತರೆ ಪ್ರಕ್ರಿಯೆಗಾಗಿ 30,143.00 ಕೋಟಿ ರೂಪಾಯಿ ಒದಗಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ