ವಕ್ಫ್ ಆಸ್ತಿ ವಿವಾದ; ಸುಬಗರ ಸೋಗು ಬೇಡ, ಬಿಜೆಪಿ ಆಡಳಿತದ ವಕ್ಫ್ ನೋಟಿಸ್ ಎಷ್ಟಿದೆ ನೋಡ್ತೀರಾ: ಸಿಎಂ ಸಿದ್ದರಾಮಯ್ಯ
Nov 03, 2024 07:53 AM IST
ವಕ್ಫ್ ಆಸ್ತಿ ವಿವಾದ; ಸುಬಗರ ಸೋಗು ಬೇಡ, ಬಿಜೆಪಿ ಆಡಳಿತದ ವಕ್ಫ್ ನೋಟಿಸ್ ಶೀಘ್ರ ಬಹಿರಂಗಗೊಳಿಸುವುದಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ವಕ್ಫ್ ಆಸ್ತಿ ವಿವಾದ ವಿಚಾರವಾಗಿ ರೈತರ ನೋಟಿಸ್ ಹಿಂಪಡೆಯಲು ಆದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಆಡಳಿತದ ವಕ್ಫ್ ನೋಟಿಸ್ ಶೀಘ್ರ ಬಹಿರಂಗ ಮಾಡಲಿದ್ದು ಅದನ್ನು ಎದುರಿಸಲು ಸಜ್ಜಾಗಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸವಾಲೆಸೆದಿದ್ದಾರೆ.
ಬೆಂಗಳೂರು: ವಕ್ಫ್ ಆಸ್ತಿ ವಿಚಾರ ಮತ್ತು ವಕ್ಫ್ ನೋಟಿಸ್ ವಿವಾದ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಜತೆಗೆ ಟ್ವೀಟ್ ಸಮರಕ್ಕೆ ಇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಆಸ್ತಿ ವಿಚಾರದಲ್ಲಿ ಯಾರೂ ಸುಬಗರಲ್ಲ ಎಂದು ಚಾಟಿ ಬೀಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುಡಾರಿ ಎಂದು ಸಂಬೋಧಿಸಿದ್ದಕ್ಕೆ ವಿಜಯೇಂದ್ರ ಮಾಡಿದ ಟ್ವೀಟ್‌ಗೆ ಉತ್ತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 6 ಟ್ವೀಟ್‌ಗಳ ಸರಣಿಯನ್ನು ಶೇರ್ ಮಾಡಿದ್ದಾರೆ. ಈ ನಡುವೆ, ವಕ್ಫ್ ಭೂಮಿಗೆ ಸಂಬಂಧಿಸಿ ರೈತರಿಗೆ ಕಳುಹಿಸಲಾದ ಎಲ್ಲ ನೋಟಿಸ್‌ಗಳನ್ನು ತತ್‌ಕ್ಷಣವೇ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಂದಾಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿದ್ದಾಗಿ ಪಿಐಟಿ ವರದಿ ಮಾಡಿದೆ.
ಬಿಜೆಪಿ ಆಡಳಿತದ ವಕ್ಫ್ ನೋಟಿಸ್ ಶೀಘ್ರ ಬಹಿರಂಗದ ಎಚ್ಚರಿಕೆ
ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಜೋರಾಗಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸರ್ಕಾರದ ಕಡೆಯಿಂದ ಹೋದ ನೋಟಿಸ್ ಅನ್ನು ಹಿಂಪಡೆಯುವಂತೆ ಆದೇಶ ನೀಡಿದರು. ಇದಾದ ಬಳಿಕ, ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, “ವಕ್ಪ್ ಆಸ್ತಿ ವಿಚಾರದಲ್ಲಿ ಸುಬಗರ ಸೋಗು ಹಾಕುವುದೇನು ಬೇಡ. ನಿಮ್ಮದೇ ಪಕ್ಷದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಈಗಿನ ನಿಮ್ಮ ಮಿತ್ರ ಪಕ್ಷವಾದ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಪ್ ಬೋರ್ಡ್ ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫಲವನ್ನು ನೀವೇ ಉಣ್ಣಬೇಕಾಗುವ ಸಂದರ್ಭ ಬರಬಹುದು..!! ಅದಕ್ಕೆ ಸಿದ್ಧರಾಗಿರಿ” ಎಂದು ಸವಾಲೆಸೆದಿದ್ದಾರೆ.
ವಕ್ಫ್ ಆಸ್ತಿ ವಿವಾದ; ರೈತರ ನೋಟಿಸ್ ಹಿಂಪಡೆಯಲು ಆದೇಶ
‘ರೈತರಿಗೆ ಯಾವುದೇ ತೊಂದರೆಯಾಗದಂತೆ ವಕ್ಫ್ ಭೂಮಿಗೆ ಸಂಬಂಧಿಸಿದ ಎಲ್ಲಾ ನೋಟಿಸ್ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಪ್ರಕಟಣೆ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಕೆಲವು ಅಧಿಕಾರಿಗಳ ಇತ್ತೀಚಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ವಕ್ಫ್ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಹುದು. ರಾಜ್ಯದಲ್ಲಿ ಶಾಂತಿ ಕದಡುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು. ಅಷ್ಟೇ ಅಲ್ಲ, ಯಾವುದೇ ತಪ್ಪು ಮಾಹಿತಿಯನ್ನು ನಿರ್ಲಕ್ಷಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸುವುದರ ಕಡೆಗೆ ಆದ್ಯತೆ ನೀಡಿದರು.
ವಕ್ಫ್ ಆಸ್ತಿಗೆ ಸಂಬಂಧಿಸಿದ ಭೂದಾಖಲೆಗಳ ಮೇಲಿನ ಎಲ್ಲ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ರೈತರಿಗೆ ತಮ್ಮ ಸ್ವಾಧೀನದಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸೂಕ್ತ ಸೂಚನೆ ಅಥವಾ ಕಾನೂನು ಪ್ರಕ್ರಿಯೆ ಇಲ್ಲದೆ ಭೂ ದಾಖಲೆಗಳಿಗೆ (ಪಹಣಿ ಅಥವಾ ಆರ್‌ಟಿಸಿ) ಅನಧಿಕೃತ ಬದಲಾವಣೆ ಮಾಡಿದರೆ ಅದನ್ನು ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಆದೇಶಿಸಿದರು.
ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು, ವಕ್ಫ್ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ವಿಜಯಪುರದಲ್ಲಿ ಸಾರ್ವಜನಿಕರಿಗೆ ಭರವಸೆ ನೀಡಿ ವಕ್ಫ್ ಕಾಯ್ದೆಯಡಿ ಹೊರಡಿಸಲಾದ ಎಲ್ಲಾ ನೋಟಿಸ್‌ಗಳನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಶುಕ್ರವಾರ ಜನರಿಗೆ ತಿಳಿಸಿದ್ದರು.