ಬೆಂಗಳೂರಿನಲ್ಲಿ ಗಾಳಿಯನ್ನು ಕಲುಷಿತಗೊಳಿಸಿದ್ದು ಯಾವುದು; ನಗರ ನಿವಾಸಿಗಳಿಂದ ಪ್ರಶ್ನೆಗಳ ಸುರಿಮಳೆ
Oct 28, 2024 01:18 PM IST
ಬೆಂಗಳೂರು ವಾಯು ಗುಣಮಟ್ಟ ಕುಸಿತ
- ವಾಯು ಗುಣಮಟ್ಟ ಸೂಚ್ಯಂಕ: ಬೆಂಗಳೂರು ನಗರದಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ. ಅದು ಇತ್ತೀಚೆಗೆ ಸುರಿದ ಭಾರೀ ಮಳೆಯ ಕಾರಣದಿಂದ ಗಾಳಿ ಕಲುಷಿತಗೊಡಿದೆ. ಮಳೆಯಿಂದ ಮಲಿನ ಆಗಿದ್ದೇಗೆ, ಅದರಿಂದಾದ ಅನಾಹುತಗಳ ಬಗ್ಗೆ ನಗರ ನಿವಾಸಿಗಳು ವಿವರಿಸಿದ್ದಾರೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಗಾಳಿಯ ಗುಣಮಟ್ಟ ಮಧ್ಯಮ ವರ್ಗದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇತ್ತೀಚಿನ ದಿನಗಳಲ್ಲಿ ಗಾಳಿಯ ಗುಣಮಟ್ಟ ಕುಸಿತದಿಂದ ಬೆಂಗಳೂರು ನಿವಾಸಿಗಳು ಉದ್ವಿಗ್ನಗೊಂಡಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕ (AQI) ಹದಗೆಡುತ್ತಿರುವ ಕಾರಣ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವಂತಾಗುತ್ತಿದೆ. ಇದು ಉತ್ತರದಿಂದ ಶುಷ್ಕ ಮತ್ತು ಕಲುಷಿತ ಗಾಳಿಯನ್ನು ಎಳೆದಿದ್ದು, ಬೆಂಗಳೂರಿನಲ್ಲಿ ಮಾಲಿನ್ಯದ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ದೀಪಾವಳಿ ತನಕ ಇದೇ ಪರಿಸ್ಥಿತಿ ಇರಬಹುದು ಅಥವಾ ಇನ್ನೂ ಕೆಡಬಹುದು ಎನ್ನಲಾಗಿದೆ. ಆದಾಗ್ಯೂ, ಬೆಂಗಳೂರಿನಲ್ಲಿ ಕಡಿಮೆ ತೀವ್ರತೆಯ ಮಳೆಯಿಂದಾಗಿ ಶೀಘ್ರದಲ್ಲೇ ಪರಿಹಾರ ನಿರೀಕ್ಷಿಸಲಾಗಿದೆ.
ಚಂಡಮಾರುತದ ಪರಿಣಾಮವು ಕೆಟ್ಟ ಗಾಳಿಯ ಗುಣಮಟ್ಟಕ್ಕೆ ಒಂದು ಕಾರಣವಾಗಿದೆ. . ಇತ್ತೀಚೆಗೆ ಸುರಿದ ಭಾರೀ ಮಳೆಯೂ ಅದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ. ಮಳೆಯಿಂದ ವಾಯುಮಾಲಿನ್ಯ ಹೇಗೆ ಸೃಷ್ಟಿಯಾಗುತ್ತದೆ ಎನ್ನುವುದು ಬಹುತೇಕರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ. ಮಳೆಯಿಂದ ರಸ್ತೆಗಳು ಕೆಸರುಮಯವಾಗಿ ಮಾರ್ಪಟ್ಟಿವೆ. ಇದರಿಂದ ಅನಾಹುತಗಳು ಸಂಭವಿಸಿದ್ದೂ ಇದೆ. ಭೂಮಿ ಒಣಗಿದ ಬಳಿಕ ಧೂಳಿನ ಗಾಳಿ ಹೆಚ್ಚಾಗಿ ವಾಯು ಮಾಲಿನ್ಯವಾಗುತ್ತಿದೆ. ರಸ್ತೆ ಬದಿ ಧೂಳು ಮಾಲಿನ್ಯ ಹೆಚ್ಚಳಕ್ಕೆ ತಿರುಗುತ್ತಿದೆ. ಇದು ನಮ್ಮ ಆರೋಗ್ಯದಲ್ಲಿ ಪರಿಣಾಮ ಬೀರುವಂತೆ ಮಾಡುತ್ತಿದೆ. ಹೀಗಾಗಿ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಮುಖ್ಯವಾಗಿದೆ. ಆಗ ಮಾತ್ರ ಮಾಲಿನ್ಯ ತಡೆಯಲು ಸಾಧ್ಯ ಎನ್ನುತ್ತಾರೆ ಬೆಂಗಳೂರು ನಿವಾಸಿಗಳು. ಆದರೆ, ಬಿಬಿಎಂಪಿ ತಮ್ಮ ಬಳಿ ತಮ್ಮ ಯಾಂತ್ರೀಕೃತ ಸ್ವೀಪರ್‌ಗಳಿದ್ದರೂ ರಸ್ತೆಯಲ್ಲಿರುವ ಧೂಳನ್ನು ಸ್ವಚ್ಛಗೊಳಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ ನಿವಾಸಿಗಳು.
ಬೆಂಗಳೂರು ಮಾಲಿನ್ಯದ ಬಗ್ಗೆಯೇ ಎಕ್ಸ್ ಖಾತೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ವಾಯುಗುಣಮಟ್ಟ ಕುಸಿತಕ್ಕೆ ಕಾರಣವೇನು ಎಂದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಸರ್ಕಾರ ಮಾಡಬೇಕಿರುವ ಕೆಲಸಗಳೇನು ಎನ್ನುವುದನ್ನು ತಿಳಿಸುತ್ತಿದ್ದಾರೆ. ನೆಟ್ಟಿಗರೊಬ್ಬರು ಬೆಂಗಳೂರು ವಾಯು ಗುಣಮಟ್ಟವನ್ನು ದೆಹಲಿಗೆ ಹೋಲಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ತುಂಬಾ ಬದಲಾಗಿದೆ. ಬಸ್ಗಳ ಸಂಖ್ಯೆ, ಕಟ್ಟಡ ಸೇರಿದಂತೆ ನಿರ್ಮಾಣದ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಡೆಲ್ಲಿಯಲ್ಲಿದ್ದೇನೆ. ಆದರೆ ಬೆಂಗಳೂರಿನಲ್ಲಿದ್ದಾಗ ದೆಹಲಿಗಿಂತ ವಾಯು ಗುಣಮಟ್ಟ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ತುಂಬಾ ಟ್ರಾಫಿಕ್, ಧೂಳು, ಕಾಮಗಾರಿ ಮತ್ತು ಡಾಂಬರುಗಳಿಲ್ಲದ ರಸ್ತೆಗಳು.. ಇವುಗಳಿಂದ ಮಾಲಿನ್ಯ ತಡೆಗಟ್ಟುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ವಾಹನ ಸಂಖ್ಯೆ ಹೆಚ್ಚಳ
ಉತ್ತಮ ವಾಯುಗುಣಮಟ್ಟ ಹೊಂದಿರುವ ಬೆಂಗಳೂರನ್ನು ಮಾಲಿನ್ಯ ಮಾಡಲು ಪ್ರಮುಖ ಕಾರಣ ವಾಹನಗಳ ಸಂಖ್ಯೆ ಹೆಚ್ಚಳ. ನಗರದಲ್ಲಿ ಅಂದಾಜು ಒಂದೂವರೆ ಕೋಟಿ ಜನರಿದ್ದು, 2 ಕೋಟಿಗೂ ಅಧಿಕ ವಾಹನಗಳಿವೆ. ಸಾರ್ವಜನಿಕ ಸಾರಿಗೆಯ ಬಳಕೆಯೇ ಕಡಿಮೆಯಾಗಿದೆ. ಇದು ಟ್ರಾಫಿಕ್ ಹೆಚ್ಚಿಸುತ್ತಿರುವುದರ ಜೊತೆಗೆ ವಾಯು ಮಾಲಿನ್ಯ ಸೃಷ್ಟಿಸುತ್ತಿದೆ. ಅಲ್ಲದೆ, ವಾಹನ ಸಂಚಾರ ಹೆಚ್ಚಾದಂತೆ ರಸ್ತೆಗಳು ಕಿತ್ತು ಹೋಗುತ್ತಿವೆ. ಆಗ ಅವು ಧೂಳುಮಯವಾಗುತ್ತಿವೆ. ಇದು ಕೂಡ ವಾಯು ಮಲಿನಗೊಳ್ಳುವಂತೆ ಮಾಡುತ್ತಿದೆ. ಅಲ್ಲದೆ, ಸಂಚರಿಸುವವರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಸಾರ್ವಜನಿಕ ಸಾರಿಗೆ ಬಳಸಿದರೆ ರಸ್ತೆಗಿಳಿಯವ ವಾಹನಗಳ ಸಂಖ್ಯೆ ಇಳಿಮುಖವಾಗಿ ವಾಯುಮಾಲಿನ್ಯ ತಗ್ಗಲು ನೆರವಾಗಲಿದೆ. ಆದರೆ ಇದಕ್ಕೆ ಆಸಕ್ತಿ ತೋರುವವರ ಪ್ರಮಾಣ ಕಡಿಮೆ.
ನಮ್ಮ ಬೆಂಗಳೂರನ್ನು ಬೆಂಬಲಿಸಿ ದೆಹಲಿಗೆ ಹೋಲಿಸುತ್ತಿರುವವರಿಗೆ ಕೆಲವರು ಛಾಟಿ ಬೀಸಿದ್ದಾರೆ. ಬೆಂಗಳೂರು ಬಗ್ಗೆ ಎಚ್ಚರಿಕೆ ಗಂಟೆಯನ್ನು ಎತ್ತುವ ಮೊದಲು ನೀವು ದೆಹಲಿ ಎನ್ಸಿಆರ್ಗೆ ಹೋಲಿಸುತ್ತಿರುವುದೇಕೆ. ನಮ್ಮ ಬೆಂಗಳೂರು ಅತ್ಯುತ್ತಮ ನಗರವಾಗಿದೆ. ಇಲ್ಲಿ ಎಲ್ಲರೂ ರಸ್ತೆಗಳ ಸ್ವಚ್ಛತೆಯ ವಿಚಾರದ ಬಗ್ಗೆ ಧ್ವನಿಯೆತ್ತಿದ್ದಾರೆ. ಹಾಗಾಗಿ ಬಿಬಿಎಂಪಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಮಳೆಯ ಸಂದರ್ಭ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ರಸ್ತೆಗಳಲ್ಲಿ ಧೂಳನ್ನು ಸ್ವಚ್ಛಗೊಳಿಸಬೇಕು ಎಂದು ಬೆಂಗಳೂರು ನಿವಾಸಿಗಳು ಮನವಿ ಮಾಡಿದ್ದಾರೆ.