ಕನ್ನಡ ರಾಜ್ಯೋತ್ಸವ 2024: ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕದ 10 ಮುಖ್ಯಮಂತ್ರಿಗಳು; ಅರಸರ ಭೂ ಕ್ರಾಂತಿ, ಸಿದ್ದರಾಮಯ್ಯರ ತೆರಿಗೆ ನೀತಿ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕದ 10 ಮುಖ್ಯಮಂತ್ರಿಗಳು; ಅರಸರ ಭೂ ಕ್ರಾಂತಿ, ಸಿದ್ದರಾಮಯ್ಯರ ತೆರಿಗೆ ನೀತಿ

ಕನ್ನಡ ರಾಜ್ಯೋತ್ಸವ 2024: ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕದ 10 ಮುಖ್ಯಮಂತ್ರಿಗಳು; ಅರಸರ ಭೂ ಕ್ರಾಂತಿ, ಸಿದ್ದರಾಮಯ್ಯರ ತೆರಿಗೆ ನೀತಿ

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿ ಕ್ರಾಂತಿಕಾರಕ ಹಾಗೂ ಮಹತ್ವದ ನಿರ್ಣಯ ಕೈಗೊಂಡ 10 ಸಿಎಂ ಗಳು ಹಾಗೂ ಅವರ ಕಾಲದಲ್ಲಿ ಆದ ಪ್ರಮುಖ ಬೆಳವಣಿಗೆಗಳ ವಿವರವನ್ನು ನೀಡಿದೆ.

ಕರ್ನಾಟಕದಲ್ಲಿ ಐತಿಹಾಸಿಕ ನಿರ್ಣಯಗಳ ಮೂಲಕ ಗಮನ ಸೆಳೆದ ಕರ್ನಾಟಕ ಸಿಎಂಗಳು.
ಕರ್ನಾಟಕದಲ್ಲಿ ಐತಿಹಾಸಿಕ ನಿರ್ಣಯಗಳ ಮೂಲಕ ಗಮನ ಸೆಳೆದ ಕರ್ನಾಟಕ ಸಿಎಂಗಳು.

1.ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ

ಬೆಂಗಳೂರಿನಲ್ಲಿ ಆಡಳಿತ ಭವನ ನಿರ್ಮಾಣವಾಗಿದ್ದು ಕೆಂಗಲ್‌ ಹನುಮಂತಯ್ಯ ಅವರ ಕಾಲದಲ್ಲಿಯೇ.1951ರಲ್ಲಿ ಶಂಕುಸ್ಥಾಪನೆಗೊಂಡು ಐದು ವರ್ಷದಲ್ಲಿಯೇ ಅಂದರೆ 1956 ರಲ್ಲಿಯೇ ಈ ಕಟ್ಟಡ ಪೂರ್ಣಗೊಂಡು ಬಳಕೆಯಲ್ಲಿದೆ. ಕೆಂಗಲ್‌ ಹನುಮಂತಯ್ಯ ಅವರೇ ಅಳವಡಿಸಿದ್ದ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಘೋಷವಾಕ್ಯವೂ ವಿಧಾನಸೌಧದಲ್ಲಿ ಗಮನ ಸೆಳೆಯುತ್ತದೆ. ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ 1.75ಕೋಟಿ ರೂ.

2. ಅರಸು ಕೊಟ್ಟ ಭೂಮಿ ಶಕ್ತಿ

ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಹಿಂದುಳಿದ ವರ್ಗಗಳ ನಾಯಕರಾಗಿ ಆ ವರ್ಗಗಳಿಗೆ ಶಕ್ತಿ ತುಂಬಿದ ಮೈಸೂರಿನ ಡಿ.ದೇವರಾಜ ಅರಸು ಅವರು ಕೈಗೊಂಡ ಕ್ರಾಂತಿಕಾರಕ ಕ್ರಮಗಳಲ್ಲಿ ಉಳುವವನೇ ಭೂಮಿ ಒಡೆಯ ಎನ್ನುವ ಹೆಜ್ಜೆ. 1974ರ ಭೂಸುಧಾರಣಾ ಕಾಯಿದೆಯ ಪ್ರಕಾರ ಜಮೀನು ಹೊಂದಬೇಕಾದರೆ ಆದಾಯದ ಮಿತಿಯಿತ್ತು. ಇದನ್ನು ತೆಗೆದು ಹಾಕಿದರು. ರಾಜ್ಯದಲ್ಲಿ 6 ಲಕ್ಷ ಕುಟುಂಬಗಳು ಭೂಮಿ ಒಡೆಯರಾದರು. ಇದರಿಂದ ಅದೆಷ್ಟೋ ಜನರ ಒಡೆತನದಲ್ಲಿದ್ದ ಭೂಮಿ ಉಳುವವರ ಪಾಲಾಯಿತು. ಸಹಸ್ರಾರು ಕುಟುಂಬಗಳಿಗೆ ಇದು ಶಕ್ತಿ ತುಂಬಿತು.

3. ಆಡಳಿತ ಸುಧಾರಣೆಯತ್ತ ರಾಮಕೃಷ್ಣ ಹೆಗಡೆ

ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿ ಆಡಳಿತ ಸುಧಾರಣೆಗೆ ಹೆಚ್ಚಿನ ಒತ್ತು ಕೊಟ್ಟರು. ಅದರಲ್ಲೂ ಅವರ ಕಾಲದಲ್ಲಿ ಆರಂಭಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ ಆಡಳಿತಕ್ಕೆ ಸಂಬಂಧಿಸಿದ ಹಲವಾರು ವ್ಯಾಜ್ಯಗಳು ಸುಸೂತ್ರವಾಗಿ ಪರಿಹಾರ ಕಾಣುವ ಸನ್ನಿವೇಶವಿದೆ. ಗ್ರಾಮೀಣಾಭಿವೃದ್ದಿಗೂ ಕರ್ನಾಟಕದಲ್ಲಿ ಬಲ ಬಂದಿದ್ದು ಹೆಗಡೆ ಅವರ ಕಾಲದಲ್ಲಿ ಅಬ್ದುಲ್‌ ನಜೀರ್‌ಸಾಬ್‌ ಅವರಂತ ನಾಯಕರು ಸಚಿವರಾಗಿ.

4. ಸಿಇಟಿ ತಂದ ವೀರಪ್ಪಮೊಯ್ಲಿ

ಹಿಂದುಳಿದ ವರ್ಗಗಳಿಗೆ ಸೇರಿದ ಎಂ. ವೀರಪ್ಪಮೊಯ್ಲಿ ಅವರು ಮುಖ್ಯಮಂತ್ರಿಯಾಗಿ ಸಾಕಷ್ಟು ವಿರೋಧಗಳನ್ನು ಎದುರಿಸಿದರು ಸುಧಾರಣಾ ಕ್ರಮ ಕೈಗೊಂಡರು.ಅವರ ಕಾಲದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು( ಸಿಇಟಿ) ಜಾರಿಗೊಳಿಸಿದರು. ಮೂರು ದಶಕದ ಹಿಂದೆಯೇ ಜಾರಿಗೊಂಡ ಸಿಇಟಿ ಈಗ ಇಡೀ ಭಾರತಕ್ಕೆ ಮಾದರಿಯಾಗಿದೆ. ಇದರಿಂದ ಬಡ, ಮಧ್ಯಮ ವರ್ಗದ ಮಕ್ಕಳು ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣ ಪಡೆಯುವಂತಾಯಿತು.

5 .ಶಿಕ್ಷಕರ ನೇಮಕಕ್ಕೆ ಕಾಯಕಲ್ಪ ಕೊಟ್ಟ ದೇವೇಗೌಡ

ಎಚ್‌ಡಿ ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಶೃಂಗೇರಿಯ ಎಚ್‌.ಜಿ.ಗೋವಿಂದೇಗೌಡ ಅವರು ಶಿಕ್ಷಣ ಸಚಿವರು. ಆಗ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರನ್ನು ಪ್ರಾಥಮಿಕ ಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಯಿತು. ಒಂದೇ ಒಂದು ಪೈಸೆ ಹಣ ಕೊಡದೇ ಅದೆಷ್ಟೋ ಪ್ರತಿಭಾವಂತರು ಶಿಕ್ಷಕರಾದರು. ಇದರ ಹಿಂದೆ ಇದ್ದದ್ದು ದೇವೇಗೌಡರ ಒತ್ತಾಸೆ ಹಾಗೂ ಗೋವಿಂದೇಗೌಡರ ಪ್ರಾಮಾಣಿಕತೆ.

6. ಹೊಸ ಜಿಲ್ಲೆ ರಚನೆ ಜೆಎಚ್‌ಪಟೇಲ್‌

ಸಮಾಜವಾದಿ ಹಿನ್ನೆಲೆಯ ಜೆ.ಎಚ್.ಪಟೇಲರು ಸಾಕಷ್ಟು ವಿರೋಧಗಳ ನಡುವೆಯೂ ಹೊಸದಾಗಿ ಏಳು ಜಿಲ್ಲೆಗಳನ್ನ ಘೋಷಿಸಿದರು. ಉಡುಪಿ, ದಾವಣಗೆರೆ, ಕೊಪ್ಪಳ,ಗದಗ, ಹಾವೇರಿ, ಚಾಮರಾಜನಗರ, ಬಾಗಲಕೋಟೆ ಜಿಲ್ಲೆಗಳು ರಚನೆಯಾಗಿದ್ದು ಪಟೇಲರ ಕಾಲದಲ್ಲಿಯೇ. ತುಮಕೂರು ಹಾಗೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಅವರ ಪ್ರಯತ್ನ ಆಗ ಫಲ ಕೊಡಲಿಲ್ಲ.

7. ಬೆಂಗಳೂರಿಗೆ ಎಸ್.ಎಂ.ಕೃಷ್ಣ ಬಲ

ವಿಭಿನ್ನ ರಾಜಕಾರಣಕ್ಕೆ ಹೆಸರಾದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಪ್ರಗತಿಗೆ ಒತ್ತು ನೀಡಿದರು. ಇದರಿಂದ ಬೆಂಗಳೂರು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಗಮನ ಸೆಳೆಯಿತು. ಬೆಂಗಳೂರು, ಮೈಸೂರು ನಗರಗಳ ಅಭಿವೃದ್ದಿಗೆ ಕಾರ್ಯಪಡೆಗಳನ್ನು ರಚಿಸಿದ್ದು ವಿಶೇಷ.

8. ಬೆಳಗಾವಿಯಲ್ಲಿ ಹೊಸ ವಿಧಾನಸೌಧ ತಂದ ಯಡಿಯೂರಪ್ಪ

ಸುವರ್ಣ ವಿಧಾನ ಸೌಧ, ಕರ್ನಾಟಕದ ಬೆಳಗಾವಿಯಲ್ಲಿ ಎರಡನೇ ಶಾಸಕಾಂಗ ಸಂಕೀರ್ಣವನ್ನು ಯಡಿಯೂರಪ್ಪ ಅವರು ಸಿಎಂ ಆಗಿದ್ಧಾಗ ನಿರ್ಮಿಸಲಾಗಿದೆ ಬೆಳಗಾವಿ ಹೊರವಲಯದ ಹಲಗಾ-ಬಸ್ತವಾಡ ಗ್ರಾಮಗಳಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು 391 ಕೋಟಿ ರೂ. ವೆಚ್ಚದಲ್ಲಿ 127 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ರಚನೆಯು 16,138 ಚದರ ಮೀಟರ್‌ಗಳಲ್ಲಿ ಹರಡಿದೆ. ಸಂಸತ್ತಿನ ಮಾದರಿಯಲ್ಲಿ ಅಸೆಂಬ್ಲಿ ಹಾಲ್, ಕೌನ್ಸಿಲ್ ಹಾಲ್, ಸೆಂಟ್ರಲ್ ಹಾಲ್ ಮತ್ತು ಮಂತ್ರಿಗಳಿಗಾಗಿ 38 ಚೇಂಬರ್‌ಗಳನ್ನು ಒಳಗೊಂಡಿದೆ.

9. ಸಾಲ ಮನ್ನಾ ಮಾಡಿದ ಎಚ್‌ಡಿಕುಮಾರಸ್ವಾಮಿ

ಭಾರತದಲ್ಲಿ ಸಾಲ ಮನ್ನಾ ಕಷ್ಟು ಎನ್ನುವ ಸನ್ನಿವೇಶದಲ್ಲಿದ್ದಾಗ ಮೊದಲ ಬಾರಿಗೆ ಸಿಎಂ ಆಗಿದ್ದಾಗಲೇ ಎಚ್‌.ಡಿ.ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತಂದರು. ಕಷ್ಟದಲ್ಲಿರುವ ರೈತರ ಕೈ ಹಿಡಿಯುವುದು ಇದರ ಹಿಂದೆ ಇದ್ದ ಉದ್ದೇಶ. ಈಗ ಅದು ನೀತಿಯಾಗಿಯೇ ರೂಪುಗೊಂಡಿದೆ.

10. ತೆರಿಗೆಗಳಿಗೆ ಸರಿ ದಾರಿ ತೋರಿದ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು ಸಿದ್ದರಾಮಯ್ಯ. ಎರಡನೇ ಬಾರಿ ಡಿಸಿಎಂ ಆಗಿದ್ದಾಗ ವ್ಯಾಟ್‌ ಜಾರಿಗೆ ಬಂದಿತು. ಅದನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದರು. ಆನಂತರ ಜಿಎಸ್‌ಟಿ ಕೂಡ ಜಾರಿಯಾಯಿತು. ಅದನ್ನು ಅನುಷ್ಠಾನಕ್ಕೆ ತಂದರು. ತೆರಿಗೆಗಳ ಸಂಗ್ರಹದ ವಿಚಾರದಲ್ಲೂ ಕರ್ನಾಟಕ ಮುಂಚೂಣಿ ರಾಜ್ಯದಲ್ಲಿರುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಅವ ಪಾತ್ರವೂ ಇದೆ.

 

 

Whats_app_banner