logo
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು, ಅಪಘಾತ ಹೇಗಾಯಿತು- ಇಲ್ಲಿದೆ ವಿವರ

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು, ಅಪಘಾತ ಹೇಗಾಯಿತು- ಇಲ್ಲಿದೆ ವಿವರ

Umesh Kumar S HT Kannada

Dec 02, 2024 12:36 PM IST

google News

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (ಎಡ ಚಿತ್ರ) ಮತ್ತು ಅಪಘಾತಕ್ಕೀಡಾದ ಅವರ ಜೀಪ್‌ (ಬಲ ಚಿತ್ರ)

  •  ಮೈಸೂರಿನಲ್ಲಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಸೇರಬೇಕಾಗಿದ್ದ ಐಪಿಎಸ್ ಅಧಿಕಾರಿ, ಮಧ್ಯಪ್ರದೇಶ ಮೂಲದ ಹರ್ಷವರ್ಧನ್‌ ಅವರು ಭಾನುವಾರ ಸಂಭವಿಸಿದ ಹಾಸನ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು, ಅಪಘಾತದ ಕಾರಣ ಎಂಬಿತ್ಯಾದಿ ವಿವರ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (ಎಡ ಚಿತ್ರ) ಮತ್ತು ಅಪಘಾತಕ್ಕೀಡಾದ ಅವರ ಜೀಪ್‌ (ಬಲ ಚಿತ್ರ)
ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (ಎಡ ಚಿತ್ರ) ಮತ್ತು ಅಪಘಾತಕ್ಕೀಡಾದ ಅವರ ಜೀಪ್‌ (ಬಲ ಚಿತ್ರ)

ಬೆಂಗಳೂರು: ಹಾಸನ ಜಿಲ್ಲೆ ಕಿತ್ತಾನೆ ಸಮೀಪ ಭಾನುವಾರ (ಡಿಸೆಂಬರ್ 1) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (26) ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್‌ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಕಾರಣ ಚಾಲಕ ಮತ್ತು ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ಗಂಭೀರ ಗಾಯಗೊಂಡಿದ್ದರು. ಹರ್ಷವರ್ಧನ್ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಅಸುನೀಗಿದ್ದಾರೆ. ಇವರು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಿಂದ ಹಾಸನ ಜಿಲ್ಲಾ ಎಸ್ ಪಿ ಕಚೇರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾಸನ ಕಿತ್ತಾನೆ ಸಮೀಪ ಅಪಘಾತ ಹೇಗಾಯಿತು

ಮೈಸೂರಿನಿಂದ ಹಾಸನಕ್ಕೆ ಆಗಮಿಸುತ್ತಿದ್ದ ಮಹೇಂದ್ರ ಬೊಲೆರೋ ಜೀಪ್ ಟೈಯರ್ ಸ್ಫೋಟದಿಂದ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ನಂತರ ತೆಂಗಿನ ಮರಕ್ಕೆ ತಗುಲಿ ಪಕ್ಕದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದ್ದು, ಐಪಿಎಸ್ ಅಧಿಕಾರಿ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಐ ಸಿಯು ನಲ್ಲಿ ಚಿಕಿತ್ಸೆ ನೀಡಲಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಹರ್ಷವರ್ಧನ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಡಿ ಎ ಆರ್ ಕಾನ್ ಸ್ಟೇಬಲ್ ಮಂಜೇಗೌಡ ಎಂಬವರಿಗೂ ಗಾಯಗಳಾಗಿವೆ. ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು

ಹಾಸನ ಸಮೀಪ ಕಿತ್ತಾನೆ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಐಪಿಎಸ್ ಅಧಿಕಾರಿ. ಮಧ್ಯಪ್ರದೇಶ ರಾಜ್ಯದ ಸಿಂಗ್ರುಲಿ ಜಿಲ್ಲೆಯ ದೊಸಾರ್ ಗ್ರಾಮದವರು. ಇವರ ತಂದೆ ಅಖಿಲೇಶ್ ಎಸ್ ಡಿ ಎಂ( ಎಸಿ ಕೇಡರ್ ಅದಿಕಾರಿ) ಮದ್ಯಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾರೆ. ಇವರು ಮೂಲತಃ ಬಿಹಾರ ರಾಜ್ಯದವರು. ಹರ್ಷವರ್ಧನ್ ಐ ಐ ಟಿ ಯಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು.

ಹಾಸನದಲ್ಲಿ ಪ್ರೊಬೆಷನರಿ ಎಎಸ್‌ಪಿಯಾಗಿ ನಿಯೋಜನೆ

ಮೈಸೂರಿನಲ್ಲಿ ತರಬೇತಿ ಮುಗಿಸಿ ಹಾಸನದಲ್ಲಿ ಎಎಸ್‌ಪಿಯಾಗಿ ನಿಯೋಜಿತರಾಗಿರುವ ಕಾರಣ ಹಾಸನಕ್ಕೆ ಹೋಗುತ್ತಿದ್ದರು. 2023 ನೇ ಸಾಲಿನ ಐಪಿಎಸ್ ಅಧಿಕಾರಿಯಾದ ಇವರು ಒಂದು ವರ್ಷ ತರಬೇತಿ ಪಡೆದಿದ್ದರು. ಪ್ರೊಬೆಷನರಿ ಸೇವಾವಧಿ ಶುರುಮಾಡುವುದಕ್ಕೆ ಅವರು ಹಾಸನದಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು. ಆದರೆ ದುರದೃಷ್ಟವಶಾತ್‌ ವೃತ್ತಿಬದುಕು ಶುರುವಾಗುವ ಮೊದಲೇ ಅವರ ಬದುಕಿನ ಪಯಣ ಕೊನೆಗೊಂಡಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರ ಪ್ರಾಣ ಉಳಿಸುವುದಕ್ಕೆ ಪೊಲೀಸ್ ಇಲಾಖೆ ಪ್ರಯತ್ನಿಸಿತ್ತು. ಆದರೆ ಅದು ಫಲಕೊಡಲಿಲ್ಲ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಇವರ ತಂದೆ ಮತ್ತು ಕುಟುಂಬದವರು ಹಾಸನ ತಲುಪಿದ್ದಾರೆ ಎಂದು ತಿಳಿದು ಬಂದಿದೆ.

ಹರ್ಷವರ್ಧನ್ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರ್ಷವರ್ಧನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು. ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳಾ ಬೇಸರದ ಸಂಗತಿ. ವರ್ಷಗಳ‌ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷಬರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ