8 ಅಡಿ ಎತ್ತರದ ವಿದ್ಯುತ್ ಕಂಬ ಹತ್ತೋದು ಕಡ್ಡಾಯ; ಕೆಪಿಟಿಸಿಎಲ್ ಕಿರಿಯ ಪವರ್‌ಮ್ಯಾನ್ ಸಹನಾ ಶಕ್ತಿ ಪರೀಕ್ಷೆ ಹೀಗಿರುತ್ತದೆ ನೋಡಿ
Oct 21, 2024 10:37 AM IST
ಕೆಪಿಟಿಸಿಎಲ್ ನೇಮಕಾತಿ ವಿಧಾನ- ವಿದ್ಯುತ್ ಕಂಬ ಹತ್ತುವ ಸಹನಾ ಪರೀಕ್ಷೆ ವಿವರ
- ಕೆಪಿಟಿಸಿಎಲ್ ಕಿರಿಯ ಪವರ್‌ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಅಸ್ಟೆಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯುತ್ ಕಂಬ ಹತ್ತುವುದು ಒಳಗೊಂಡ ಸಹನಾ ಪರೀಕ್ಷೆ ಕುರಿತು ತಿಳಿದುಕೊಳ್ಳುವುದು ಅಗತ್ಯ. ಕೆಪಿಟಿಸಿಎಲ್ , ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಮೆಸ್ಕಾಂ ಕಲಬುರಗಿಯ ಹುದ್ದೆಗಳಿಗೆ ಅ 21ರಿಂದ ನ 20ರ ತನಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕದಲ್ಲಿ ಸಾಕಷ್ಟು ಸಮಯದ ಬಳಿಕ ಉದ್ಯೋಗ ನೇಮಕಾತಿ ಗರಿಗೆದರಿದೆ. ವಿಶೇಷವಾಗಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ತನ್ನ ಮತ್ತು ತನ್ನ ಅಧೀನದ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಪವರ್‌ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಅಸ್ಟೆಸ್ಟೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯುತ್ ಕಂಬ ಹತ್ತುವುದು ಒಳಗೊಂಡ ಸಹನಾ ಪರೀಕ್ಷೆ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಕೆಪಿಟಿಸಿಎಲ್ ಮತ್ತು, ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಮೆಸ್ಕಾಂ ಕಲಬುರಗಿಯಲ್ಲಿರುವ ಹುದ್ದೆಗಳಿಗೆ ಅಕ್ಟೋಬರ್ 21ರಿಂದ ನವೆಂಬರ್ 20ರ ತನಕ ಅರ್ಜಿ ಸಲ್ಲಿಸಬಹುದು.
ಕೆಪಿಟಿಸಿಎಲ್ ನೇಮಕಾತಿ ವಿಧಾನ
ಸಹನಾ ಶಕ್ತಿ ಪರೀಕ್ಷೆಯಲ್ಲಿ ಹಲವು ಸ್ಪರ್ಧೆಗಳು ಇರುತ್ತವೆ. ಅವುಗಳಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವುದು ಈ ಹುದ್ದೆಯ ನೇಮಕಕ್ಕೆ ಕಡ್ಡಾಯವಾದ ಅಂಶ. ಸಹನ ಶಕ್ತಿ ಪರೀಕ್ಷೆಯ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ಜೇಷ್ಠತೆ ಆಧಾರದಲ್ಲಿ ಕರ್ನಾಟಕ ಸರಕಾರದ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುತ್ತದೆ.
ಸಹನಾ ಶಕ್ತಿ ಪರೀಕ್ಷೆಯಲ್ಲಿರುವ ಸ್ಪರ್ಧೆಗಳು
- ವಿದ್ಯುತ್ ಕಂಬ ಹತ್ತುವುದು. ಇದು 8 ಮೀಟರ್ ಎತ್ತರದ ಕಂಬವಾಗಿದೆ. ಇದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
- 100 ಮೋಟರ್ ಓಟವನ್ನು 14 ಸೆಕೆಂಡಿನಲ್ಲಿ ಕ್ರಮಿಸಬೇಕು.
- ಸ್ಕಿಪ್ಪಿಂಗ್, ಒಂದು ನಿಮಿಷಕ್ಕೆ 50 ಬಾರಿ ಸ್ಕಿಪ್ಪಿಂಗ್‌ಮಾಡಬೇಕು.
- ಹನ್ನೆರಡು ಪೌಂಡ್ ತೂಕದ ಶಾಟ್‌ಪೂಟ್ ಎಸೆತ, ಮೂರು ಅವಕಾಶ ನೀಡಲಾಗುತ್ತದೆ, ಎಂಟು ಮೀಟರ್ ದೂರ ಎಸೆಯಬೇಕು.
ಸಹನಾ ಶಕ್ತಿ ಪರೀಕ್ಷೆಯ ಕುರಿತು ತಿಳಿದಿರಬೇಕಾದ ಅಂಶಗಳು
- ಸಹನಾ ಶಕ್ತಿ ಪರೀಕ್ಷೆಯನ್ನು ಕವಿಪ್ರನಿನಿ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವುದು. ಸಹನ ಶಕ್ತಿ ಪರೀಕ್ಷೆಯನ್ನು ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ಆಯಾ ಕಂಪನಿಯ ವ್ಯಾಪ್ತಿಯಲ್ಲಿ ನಡೆಸಲಾಗುವುದು.
- ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಂದೇ ಸಹನ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಸದರಿ ಸಹನ ಶಕ್ತಿ ಪರೀಕ್ಷೆಯ ಫಲಿತಾಂಶವನ್ನು ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಲಾಗುವುದು.
- ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ಕೆಲಸ ಕಾರ್ಯಗಳು ಕಠಿಣ ಹಾಗೂ ಅಪಾಯಕಾರಿಯಾಗಿದ್ದು, ಸದರಿ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಪರಸ್ಪರ ಸಂವಹನವು (Communication) ಅತ್ಯಾವಶ್ಯಕವಾಗಿರುತ್ತದೆ. ಆದ್ದರಿಂದ ಅಂಗವಿಕಲ ಕೋಟಾದಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾತನಾಡುವ ಸಾಮರ್ಥ್ಯ ಹೊಂದಿರತಕ್ಕದ್ದು.
- ಸಹನಾ ಶಕ್ತಿಯ ಪರೀಕ್ಷೆಯ ಸ್ಪರ್ಧೆಗಳಿಗೆ ಯಾವುದೇ ಅಂಕಗಳನ್ನು ನಿಗದಿಪಡಿಸಿರುವುದಿಲ್ಲ. ಅಭ್ಯರ್ಥಿಗಳು ಆಯ್ಕೆಗೆ ಅರ್ಹರಾಗಲು ಕಡ್ಡಾಯವಾಗಿ ವಿದ್ಯುತ್ ಕಂಬವನ್ನು ಹತ್ತುವುದು (ಸ್ಪರ್ಧೆ ಸಂಖ್ಯೆ: ಅ) ಮತ್ತು ಇನ್ನುಳದ ಸ್ಪರ್ಧೆಗಳ ಪೈಕಿ ಕನಿಷ್ಟ ಎರಡರಲ್ಲಿ ಅರ್ಹತೆಯನ್ನು ಪಡೆಯತಕ್ಕದ್ದು.
- ಕಂಬ ಹತ್ತುವ ಸ್ಪರ್ಧೆಗೆ ಬೇಕಾಗಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿರುತ್ತದೆ. ಆದಾಗ್ಯೂ ಅಭ್ಯರ್ಥಿಗಳು ತಮ್ಮ ಸ್ವಂತ ಹೊಣೆಯಿಂದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವುದಾದರೂ ಅವಘಡಗಳು ಸಂಭವಿಸಿದಲ್ಲಿ, ಅಭ್ಯರ್ಥಿಗಳ ವೈದ್ಯಕೀಯ ವೆಚ್ಚ ಅಥವಾ ಇನ್ಯಾವುದೇ ರೀತಿಯ ಪರಿಹಾರವನ್ನು ನಿಗಮ/ಕಂಪನಿಯಿಂದ ಭರಿಸಲಾಗುವುದಿಲ್ಲ.
- ಸಹನಾ ಶಕ್ತಿ ಪರೀಕ್ಷೆ ಸಮಯದಲ್ಲಿ ಅಭ್ಯರ್ಥಿಗಳು ಸರ್ಕಾರಿ ಜಿಲ್ಲಾ ವೈದ್ಯಾಧಿಕಾರಿಗಳಿಂದ ನೀಡಲಾಗುವ ಶಾರೀರಿಕ ದಾರ್ಡ್ಯತೆ ಸಂಬಂಧ ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
- ಸಹನಾ ಶಕ್ತಿ ಪರೀಕ್ಷೆಗೆ ಅಭ್ಯರ್ಥಿಗಳನ್ನು ಎಸ್.ಎಸ್.ಎಲ್.ಸಿ./10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಅರ್ಹತೆಯ ಆಧಾರದಲ್ಲಿ 15 ರ ಅನುಪಾತದಲ್ಲಿ ಕರೆಯಲಾಗುವುದು.
- ಮೂಲ ದಾಖಲಾತಿಗಳು/ಪ್ರಮಾಣ ಪತ್ರಗಳ ಇತರೆ ದಾಖಲಾತಿಗಳ ಪರಿಶೀಲನೆಯನ್ನು ಸಹನ ಶಕ್ತಿ ಪರೀಕ್ಷೆಗೆ ನಿಗದಿಪಡಿಸಿದ ದಿನಾಂಕದಂದು ಮಾಡಲಾಗುವುದು.
- ಸಹನಾ ಶಕ್ತಿ ಪರೀಕ್ಷೆಯ ಸಮಯಕ್ಕೆ ಮೂಲ ದಾಖಲಾತಿಗಳು/ಪ್ರಮಾಣ ಪತ್ರಗಳ ಇತರೆ ಮೂಲ ದಾಖಲಾತಿಗಳ 'ಸ್ವಯಂ ದೃಢೀಕೃತ ಪ್ರತಿ'ಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ಅಭ್ಯರ್ಥಿಯು ಮೂಲ ದಾಖಲಾತಿಗಳನ್ನು ಪರಿಶೀಲನೆಯ ಸಮಯದಲ್ಲಿ ಸಲ್ಲಿಸದಿದ್ದಲ್ಲಿ, ಸಹನ ಶಕ್ತಿ ಪರೀಕ್ಷೆಗೆ ಭಾಗವಹಿಸಲು ಅವಕಾಶವನ್ನು ನೀಡಲಾಗುವುದಿಲ್ಲ.
ಕೆಪಿಟಿಸಿಎಲ್ ನೇಮಕಾತಿ 2024 ಸಂಬಂಧಪಟ್ಟಂತೆ ನೀವು ಓದಬೇಕಾದ ಲೇಖನಗಳು