logo
ಕನ್ನಡ ಸುದ್ದಿ  /  ಜೀವನಶೈಲಿ  /  ಈ ರೀತಿ ಸಿಂಪಲ್ ಆಗಿ ಮಾಡಿ ಫಿಶ್ ಬಿರಿಯಾನಿ: ಚಿಕನ್, ಮಟನ್ ಬಿರಿಯಾನಿಗಿಂತಲೂ ಹೆಚ್ಚು ರುಚಿಕರ ಈ ರೆಸಿಪಿ

ಈ ರೀತಿ ಸಿಂಪಲ್ ಆಗಿ ಮಾಡಿ ಫಿಶ್ ಬಿರಿಯಾನಿ: ಚಿಕನ್, ಮಟನ್ ಬಿರಿಯಾನಿಗಿಂತಲೂ ಹೆಚ್ಚು ರುಚಿಕರ ಈ ರೆಸಿಪಿ

Priyanka Gowda HT Kannada

Nov 21, 2024 09:00 AM IST

google News

ಈ ರೀತಿ ಸಿಂಪಲ್ ಆಗಿ ಮಾಡಿ ಫಿಶ್ ಬಿರಿಯಾನಿ: ಚಿಕನ್, ಮಟನ್ ಬಿರಿಯಾನಿಗಿಂತಲೂ ಹೆಚ್ಚು ರುಚಿಕರ ಈ ರೆಸಿಪಿ

  • ಚಿಕನ್ ಮತ್ತು ಮಟನ್‍ಗೆ ಹೋಲಿಸಿದರೆ ಮೀನಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಮೀನು ತಿನ್ನುವುದು ತುಂಬಾ ಪ್ರಯೋಜನಕಾರಿ. ಚಿಕನ್ ಬಿರಿಯಾನಿ ಮತ್ತು ಮಟನ್ ಬಿರಿಯಾನಿಯಂತೆ ಫಿಶ್ ಬಿರಿಯಾನಿ ಸೇವಿಸುವುದು ತುಂಬಾ ರುಚಿಕರವಾಗಿರುತ್ತದೆ. ಸಿಂಪಲ್ ಆಗಿ ತಯಾರಿಸಬಹುದಾದ ಫಿಶ್ ಬಿರಿಯಾನಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಈ ರೀತಿ ಸಿಂಪಲ್ ಆಗಿ ಮಾಡಿ ಫಿಶ್ ಬಿರಿಯಾನಿ: ಚಿಕನ್, ಮಟನ್ ಬಿರಿಯಾನಿಗಿಂತಲೂ ಹೆಚ್ಚು ರುಚಿಕರ ಈ ರೆಸಿಪಿ
ಈ ರೀತಿ ಸಿಂಪಲ್ ಆಗಿ ಮಾಡಿ ಫಿಶ್ ಬಿರಿಯಾನಿ: ಚಿಕನ್, ಮಟನ್ ಬಿರಿಯಾನಿಗಿಂತಲೂ ಹೆಚ್ಚು ರುಚಿಕರ ಈ ರೆಸಿಪಿ

ಮೀನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವೈದ್ಯರು ಮೀನು ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಚಿಕನ್ ಮತ್ತು ಮಟನ್‍ಗೆ ಹೋಲಿಸಿದರೆ ಮೀನಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ಎಷ್ಟೇ ಮೀನು ತಿಂದರೂ ಕೊಬ್ಬು ಸಂಗ್ರಹವಾಗುವುದಿಲ್ಲ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಮೀನು ತಿನ್ನುವುದು ತುಂಬಾ ಪ್ರಯೋಜನಕಾರಿ. ಚಿಕನ್, ಮಟನ್ ಬದಲಿಗೆ ಮೀನಿನ ಖಾದ್ಯಗಳನ್ನು ತಿನ್ನಬಹುದು. ಮೀನಿನಿಂದ ಸಾಂಬಾರ್, ಫ್ರೈ ಮಾಡುತ್ತಾರೆ. ಆದರೆ, ಫಿಶ್ ಬಿರಿಯಾನಿ ಮಾಡುವುದು ಕಡಿಮೆ. ಒಂದು ಬಾರಿ ಫಿಶ್ ಬಿರಿಯಾನಿ ಮಾಡಿ ನೋಡಿ ಮತ್ತೆ ಮತ್ತೆ ಮಾಡಿ ತಿನ್ನಬೇಕು ಎಂದೆನಿಸುತ್ತದೆ. ಇದನ್ನು ಮಾಡುವುದು ತುಂಬಾ ಸರಳ. ಫಿಶ್ ಬಿರಿಯಾನಿ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಫಿಶ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಬೇಯಿಸಿದ ಅಕ್ಕಿ- ಒಂದೂವರೆ ಕಪ್, ಮೀನು- ಕಾಲು ಕೆಜಿ, ಮೆಣಸಿನಪುಡಿ- ಒಂದು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ, ಈರುಳ್ಳಿ- ಎರಡು, ಗರಂ ಮಸಾಲೆ- ಅರ್ಧ ಟೀ ಚಮಚ, ಮೊಸರು- ಒಂದು ಕಪ್, ಕೊತ್ತಂಬರಿ ಪುಡಿ- ಎರಡು ಟೀ ಚಮಚ, ಎಣ್ಣೆ- ಅಗತ್ಯ ತಕ್ಕಷ್ಟು, ದಾಲ್ಚಿನ್ನಿ- 1 ಸಣ್ಣ ತುಂಡು, ಲವಂಗ- ಎರಡು, ಏಲಕ್ಕಿ- ಎರಡು, ನಕ್ಷತ್ರ ಮೊಗ್ಗು- ಒಂದು.

ಮಾಡುವ ವಿಧಾನ: ಮೀನಿನ ತುಂಡುಗಳನ್ನು ಸ್ವಚ್ಛವಾಗಿ ತೊಳೆದು ಬಟ್ಟಲಿನಲ್ಲಿ ಹಾಕಿ. ಇದಕ್ಕೆ ಉಪ್ಪು, ಮೆಣಸು, ಅರಿಶಿನ, ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಸ್ಟೌವ್ ಮೇಲೆ ಕಡಾಯಿ ಹಾಕಿ ಎಣ್ಣೆ ಹಾಕಿ. ಅದಕ್ಕೆ ಮೀನನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಶೇಕಡಾ ಅರವತ್ತರಷ್ಟು ಮೀನನ್ನು ಬೇಯಿಸಬೇಕು. ನಂತರ ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ಮೀನಿನ ಮಧ್ಯದ ಮೂಳೆಗಳನ್ನು ನಿಧಾನವಾಗಿ ತೆಗೆದುಹಾಕಿ, ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.

ನಂತರ ಸ್ಟೌವ್ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಲವಂಗ, ದಾಲ್ಚಿನ್ನಿ, ಸೋಂಪು, ಏಲಕ್ಕಿ, ನಕ್ಷತ್ರ ಮೊಗ್ಗು ಸೇರಿಸಿ, ಫ್ರೈ ಮಾಡಿ. ಇದಕ್ಕೆ ಈರುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಿ. ಜತೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಗರಂ ಮಸಾಲೆ, ಅರಿಶಿನ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಮೀನನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಅದಕ್ಕೆ ಬೇಯಿಸಿದ ಅನ್ನವನ್ನು ಹಾಕಿ ಕಲಸಿ. ಮೇಲೆ ಮುಚ್ಚಳವನ್ನು ಇರಿಸಿ, ಐದರಿಂದ ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಇರಿಸಿ. ಅಷ್ಟೇ ಟೇಸ್ಟಿ ಫಿಶ್ ಬಿರಿಯಾನಿ ರೆಡಿ.

ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿಗೆ ಹೋಲಿಸಿದರೆ ಫಿಶ್ ಬಿರಿಯಾನಿಯನ್ನು ತ್ವರಿತವಾಗಿ ತಯಾರಿಸಲಾಗುತ್ತದೆ. ಚಿಕನ್ ಮತ್ತು ಮಟನ್ ತುಂಡುಗಳು ಸ್ವಲ್ಪ ಗಟ್ಟಿಯಾಗಿರುತ್ತದೆ. ಮೀನು ಮೆತ್ತಗಿರುವುದರಿಂದ ಜಾಗರೂಕತೆಯಿಂದ ಫ್ರೈ ಮಾಡಬೇಕು. ಕೆಲವರು ಇದನ್ನು ಹಬೆಯಲ್ಲಿ ಬೇಯಿಸಿದರೆ ಇನ್ನು ಕೆಲವರು ಎಣ್ಣೆಯಲ್ಲಿ ಕರಿಯುತ್ತಾರೆ. ಹುರಿದ ನಂತರ, ಮೀನಿನ ತುಂಡುಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಿ. ಮೀನಿನ ಮುಳ್ಳುಗಳನ್ನು ತೆಗೆದುಹಾಕಿ. ತೆಗೆದ ನಂತರ ಚಿಕನ್ ಬಿರಿಯಾನಿ ರೀತಿಯಲ್ಲಿ ಬೇಯಿಸಬೇಕು. ಇದು ತುಂಬಾ ರುಚಿಕರವಾಗಿರುತ್ತದೆ. ಮುಳ್ಳುಗಳನ್ನು ತೆಗೆಯುವುದರಿಂದ ಮಕ್ಕಳಿಗೆ ತಿನ್ನಲು ತುಂಬಾ ಉಪಯುಕ್ತವಾಗಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ