logo
ಕನ್ನಡ ಸುದ್ದಿ  /  ಜೀವನಶೈಲಿ  /  Diabetes: ಮಧುಮೇಹಿಗಳು ಯಾವ ಹಣ್ಣು ಸೇವಿಸಬಹುದು, ಯಾವುದರಿಂದ ದೂರ ಇದ್ರೆ ಉತ್ತಮ; ಇಲ್ಲಿದೆ ಉಪಯುಕ್ತ ಮಾಹಿತಿ

Diabetes: ಮಧುಮೇಹಿಗಳು ಯಾವ ಹಣ್ಣು ಸೇವಿಸಬಹುದು, ಯಾವುದರಿಂದ ದೂರ ಇದ್ರೆ ಉತ್ತಮ; ಇಲ್ಲಿದೆ ಉಪಯುಕ್ತ ಮಾಹಿತಿ

Reshma HT Kannada

Feb 24, 2024 08:00 AM IST

ಮಧುಮೇಹಿಗಳು ಯಾವ ಹಣ್ಣು ಸೇವಿಸಬಹುದು, ಯಾವ ಹಣ್ಣು ಇವರಿಗೆ ನಿಷಿದ್ಧ; ಇಲ್ಲಿದೆ ಉಪಯುಕ್ತ ಮಾಹಿತಿ

    • ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಮಧುಮೇಹಿಗಳಿಗೆ ತಾವು ಯಾವ ಆಹಾರ ಸೇವಿಸಬೇಕು, ಏನನ್ನು ತಿನ್ನಬಾರದು ಎಂಬ ಬಗ್ಗೆ ಸದಾ ಗೊಂದಲ ಇರುತ್ತದೆ. ಹಣ್ಣುಗಳನ್ನು ತಿನ್ನುವ ವಿಚಾರದಲ್ಲೂ ಈ ಗೊಂದಲ ಸಹಜ. ಹಾಗಾದರೆ ಮಧುಮೇಹಿಗಳು ಯಾವ ಹಣ್ಣನ್ನು ಸೇವಿಸಬಹುದು, ಯಾವುದನ್ನು ತಿನ್ನಬಾರದು, ಇಲ್ಲಿದೆ ಉಪಯುಕ್ತ ಮಾಹಿತಿ.
ಮಧುಮೇಹಿಗಳು ಯಾವ ಹಣ್ಣು ಸೇವಿಸಬಹುದು, ಯಾವ ಹಣ್ಣು ಇವರಿಗೆ ನಿಷಿದ್ಧ; ಇಲ್ಲಿದೆ ಉಪಯುಕ್ತ ಮಾಹಿತಿ
ಮಧುಮೇಹಿಗಳು ಯಾವ ಹಣ್ಣು ಸೇವಿಸಬಹುದು, ಯಾವ ಹಣ್ಣು ಇವರಿಗೆ ನಿಷಿದ್ಧ; ಇಲ್ಲಿದೆ ಉಪಯುಕ್ತ ಮಾಹಿತಿ

ಇತ್ತೀಚಿನ ಜಗತ್ತಿನಾದ್ಯಂತ ಜನರನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹಕ್ಕೆ ಅಗ್ರಸ್ಥಾನವಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಧುಮೇಹಿಗಳಿರುವುದು ಭಾರತದಲ್ಲಿ, ಆ ಕಾರಣದಿಂದ ಭಾರತವು ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ನಮ್ಮ ದೇಹದಲ್ಲಿ 100 ಮಿಲಿಯನ್‌ಗೂ ಅಧಿಕ ಮಂದಿ ಡಯಾಬಿಟಿಸ್‌ ಅಥವಾ ಮಧುಮೇಹದಿಂದ ಬಳಲುತ್ತಿದ್ದಾರೆ. ಬೇಸರದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಜನತೆಯಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ. ಮಧುಮೇಹ ಸಮಸ್ಯೆ ಕಾಡಲು ಪ್ರಮುಖ ಕಾರಣ ಒತ್ತಡ, ಆತಂಕದಂತಹ ಜೀವನಶೈಲಿಗೆ ಸಂಬಂಧಿಸಿದ ತೊಂದರೆಗಳು. ಅತಿಯಾದ ಒತ್ತಡವು ಜನರನ್ನು ಮಧುಮೇಹಿಗಳನ್ನಾಗಿಸುತ್ತಿದೆ. ಇದರೊಂದಿಗೆ ಮಧುಮೇಹದ ಕೌಟುಂಬಿಕ ಹಿನ್ನೆಲೆಯುಳ್ಳವರಲ್ಲೂ ಕೂಡ ಈ ಸಮಸ್ಯೆ ಹೆಚ್ಚು ಕಾಡಬಹುದು.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಮಧುಮೇಹ ಎಂಬುದು ಗುಣ ಪಡಿಸಲಾಗದ ಕಾಯಿಲೆ. ಆದರೆ ಖಂಡಿತ ಇದನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ನಮ್ಮ ಸೇವಿಸುವ ಆಹಾರದ ಪಾತ್ರವು ಬಹುಮುಖ್ಯವಾಗಿದೆ. ಆ ಕಾರಣಕ್ಕೆ ಸೂಕ್ತ ಆಹಾರ ಸೇವನೆಯ ಬಗ್ಗೆ ತಜ್ಞರು ಸಲಹೆ ನೀಡುತ್ತಾರೆ. ಮಧುಮೇಹಿಗಳು ದಿನನಿತ್ಯ ನಾವು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು, ಏನನ್ನು ತಿನ್ನಬಾರದು ಎಂಬ ಬಗ್ಗೆ ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಇದು ಹಣ್ಣುಗಳ ವಿಚಾರಕ್ಕೂ ಅನ್ವಯಿಸುತ್ತದೆ. ಮಧುಮೇಹಿಗಳಲ್ಲಿ ಹಲವರು ಹಣ್ಣು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಹಣ್ಣಿನಲ್ಲಿ ಸಿಹಿಯಂಶ ಇರುತ್ತದೆ ಎನ್ನುವುದು. ಹಾಗಂತ ಎಲ್ಲಾ ರೀತಿಯ ಹಣ್ಣುಗಳು ಮಧುಮೇಹಿಗಳಿಗೆ ಕೆಟ್ಟದ್ದು ಎಂದಲ್ಲ. ಹಾಗಾದರೆ ಯಾವ ಹಣ್ಣು ಸೇವಿಸಬಹುದು, ಯಾವ ಹಣ್ಣು ಇವರಿಗೆ ನಿಷಿದ್ಧ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ 4 ಹಣ್ಣು ಮಧುಮೇಹಿಗಳಿಗೆ ಉತ್ತಮ

ಸೇಬುಹಣ್ಣು: ಪ್ರತಿದಿನ ಒಂದು ಸೇಬುಹಣ್ಣು ತಿನ್ನುವುದರಿಂದ ಡಾಕ್ಟರ್‌ ಅನ್ನೇ ದೂರ ಇಡಬಹುದು, ಇನ್ನು ಮಧುಮೇಹಿಗಳನ್ನು ಇಡಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಸೇಬುಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದರ ಸೇವನೆಯಿಂದ ರಕ್ತದಲ್ಲಿ ಹಠಾತ್‌ ಸಕ್ಕರೆಯ ಪ್ರಮಾಣ ಏರಿಕೆಯಾಗುವುದಿಲ್ಲ. ಆ ಕಾರಣಕ್ಕೆ ಈ ಹಣ್ಣು ಮಧುಮೇಹಿಗಳಿಗೆ ಉತ್ತಮ. ಹಾಗಂತ ಅತಿಯಾಗಿ ತಿನ್ನುವುದು ಖಂಡಿತ ಒಳಿತಲ್ಲ.

ಪೇರಳೆಹಣ್ಣು (ಸೀಬೆಹಣ್ಣು): ಮಧುಮೇಹಿಗಳಿಗೆ ಪೇರಳೆಹಣ್ಣು ತಿನ್ನುವುದಕ್ಕೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಈ ಹಣ್ಣು ಕಡಿಮೆ ಗ್ಲೈಸೆಮಿಕ್‌ ಅಂಶವನ್ನು ಹೊಂದಿದೆ. ಅಂದರೆ ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಏಕಾಏಕಿ ಏರಿಕೆಯಾಗುವುದಿಲ್ಲ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಅವರ ಪ್ರಕಾರ ಸಿಪ್ಪೆ ತೆಗೆದು ಪೇರಳೆಹಣ್ಣು ಸೇವಿಸುವುದರಿಂದ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಕಿತ್ತಳೆ: ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಿತ್ತಳೆ ಹಣ್ಣು ಉತ್ತಮ ಆಯ್ಕೆ. ಇದು ನಾರಿನಾಂಶ ಸಮೃದ್ಧವಾಗಿದೆ. ಇದು ಕೂಡ ಕಡಿಮೆ ಗ್ಲೈಸೆಮಿಕ್‌ ಅಂಶ ಹೊಂದಿರುವ ಹಣ್ಣಾಗಿದೆ. ಮನೆಯಲ್ಲಿ ತಾಜಾ ಕಿತ್ತಳೆ ಹಣ್ಣಿನ ರಸ ತಯಾರಿಸಿ ಕುಡಿಯಬಹುದು.

ಕಿವಿ ಫ್ರೂಟ್‌: ಮಧುಮೇಹಗಳಿಗೆ ಹಿಂದು ಮುಂದು ನೋಡದೇ ಕಿವಿ ಫ್ರೂಟ್‌ ಅನ್ನು ಸೇವಿಸಬಹುದು. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಅಂಶ ಸಮೃದ್ಧವಾಗಿದೆ. ಇದರ ಸೇವನೆಯಿಂದ ಗ್ಲೊಕೋಸ್‌ ನಿಧಾನಕ್ಕೆ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ. ಇದನ್ನು ನೇರವಾಗಿ ಸೇವಿಸಲು ಇಷ್ಟ ಇಲ್ಲದೇ ಇರುವವರು ಸಲಾಡ್‌ ಅಥವಾ ಸ್ಮೂಥಿ ತಯಾರಿಸಿಕೊಂಡು ತಿನ್ನಬಹುದು.

ಈ ಹಣ್ಣುಗಳನ್ನು ಮಧುಮೇಹಿಗಳು ತಿನ್ನಲೇಬಾರದು

ಮಾವಿನಹಣ್ಣು: ಮಧುಮೇಹಗಳು ಎಂದಿಗೂ ತಿನ್ನಲೇಬಾರದಂತಹ ಹಣ್ಣು ಎಂದರೆ ಅದು ಮಾವಿನಹಣ್ಣು. ಇದು ಮಧುಮೇಹಿಗಳಿಗೆ ಬಹಳ ಅಪಾಯಕಾರಿ. ಇದರಲ್ಲಿ ಸಿಹಿಯ ಅಂಶ ಸಾಕಷ್ಟಿದ್ದು, ಇದು ಮಧುಮೇಹ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಒಂದು ವೇಳೆ ತಿನ್ನಲೇಬೇಕು ಎನ್ನಿಸಿದರೆ ಒಂದು ಚಿಕ್ಕ ತುಂಡು ಮಾವಿನಹಣ್ಣನ್ನು ಸವಿಯಲು ಅಡ್ಡಿಯಿಲ್ಲ.

ದ್ರಾಕ್ಷಿ: ದ್ರಾಕ್ಷಿ ಹುಳಿ ಎಂಬ ಮಾತಿದೆಯಾದರೂ ಈ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಇದರಲ್ಲಿರುವ ಫ್ರಕೋಸ್ಟ್‌ ಅಂಶವು ಸಕ್ಕರೆಯ ಮಟ್ಟದಲ್ಲಿ ಹಠಾತ್‌ ಏರಿಕೆಗೆ ಕಾರಣವಾಗುತ್ತದೆ. ಈ ಹಣ್ಣುಗಳು ಎಂದಿಗೂ ಅತಿಯಾಗಿ ಸೇವಿಸಬೇಡಿ. ಈ ಹಣ್ಣಿನಿಂದ ದೂರವಿದ್ದಷ್ಟೂ ಒಳಿತು.

ಲಿಚಿ: ಮಧುಮೇಹಗಳು ಲಿಚಿ ಹಣ್ಣು ತಿನ್ನುವುದು ಅಷ್ಟೊಂದು ಒಳ್ಳೆಯದಲ್ಲ. ಇದನ್ನು ಅತಿಯಾಗಿ ಸೇವಿಸುವುದರಿಂದ ಅಪಾಯ ತಪ್ಪಿದ್ದಲ್ಲ. ಇದರ ಅತಿ ಸೇವನೆಯು ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು ಹಾಗೂ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಬಹುದು.

ಬಾಳೆಹಣ್ಣು: ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿರುವುದು ನಿಜ. ಆದರೆ ಮಧುಮೇಹಿಗಳಿಗೆ ಇದು ವಿರೋಧಿ. ಇದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿದೆ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿದ್ದರೂ ಅತಿಯಾಗಿ ಸೇವಿಸುವುದರಿಂದ ಅಪಾಯ ತಪ್ಪಿದ್ದಲ್ಲ.

ಈ ಮೇಲಿನ ಮಾಹಿತಿಯಿಂದ ಮಧುಮೇಹಿಗಳು ಯಾವ ಹಣ್ಣು ತಿನ್ನಬಹುದು ಹಾಗೂ ಯಾವ ಹಣ್ಣು ತಿನ್ನಬಾರದು ಎಂದು ವಿಚಾರ ನಿಮಗೆ ಸ್ಪಷ್ಟವಾಗಿರಬಹುದು. ಇದು ಸಾಮಾನ್ಯ ಮಾಹಿತಿ ಆಧರಿಸಿದ ಲೇಖನವಾದ ಕಾರಣ ನೀವು ಯಾವುದೇ ಆಹಾರವನ್ನು ಸೇವಿಸುವ ಮೊದಲು ತಜ್ಞರಿಂದ ಅಭಿಪ್ರಾಯ ಪಡೆಯುವುದು ಉತ್ತಮ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು