Home Remedies; ತಲೆನೋವಿಗೆ ಸುಲಭ ಪರಿಹಾರವೇನು ಅಂತ ಕೇಳಿದ್ರೆ, 11 ಮನೆ ಮದ್ದುಗಳಿವೆ ನೋಡಿ; ಯಾವಾಗ ವೈದ್ಯರನ್ನು ಕಾಣಬೇಕು ಎಂಬ ಅರಿವೂ ಇರಲಿ
Sep 11, 2024 09:12 PM IST
ತಲೆನೋವಿಗೆ ಸುಲಭ ಪರಿಹಾರವೇನು ಅಂತ ಕೇಳಿದ್ರೆ, 12 ಮನೆ ಮದ್ದುಗಳಿವೆ ನೋಡಿ; ಯಾವಾಗ ವೈದ್ಯರನ್ನು ಕಾಣಬೇಕು ಎಂಬ ಅರಿವೂ ಇರಲಿ. (ಸಾಂಕೇತಿಕ ಚಿತ್ರ)
How to Relieve Headaches; ತಲೆನೋವು ಸಾಮಾನ್ಯ ಕಾಯಿಲೆ. ನಗರವಾಸಿಗಳು ಸುಲಭವಾಗಿ ಸಿಗುವ ಪ್ಯಾರಾಸಿಟಮಲ್ ಮಾತ್ರೆಗಳನ್ನು ತಗೊಳ್ಳುತ್ತಾರೆ. ಆದರೆ ಅದರ ಅಡ್ಡಪರಿಣಾಮಗಳು ಅನೇಕ. ಹಾಗಾದ್ರೆ ತಲೆನೋವಿಗೆ ಸುಲಭ ಪರಿಹಾರವೇನು ಅಂತ ಕೇಳಿದ್ರೆ, 11 ಮನೆ ಮದ್ದುಗಳಿವೆ ನೋಡಿ ಎನ್ನುತ್ತಾರೆ ಬಲ್ಲವರು. ಯಾವಾಗ ವೈದ್ಯರನ್ನು ಕಾಣಬೇಕು ಎಂಬ ಅರಿವೂ ಇರಲಿ ಎಂಬುದು ಅವರ ಕಿವಿಮಾತು.
ತಲೆನೋವು ಬರದೇ ಇರುವ ವ್ಯಕ್ತಿಗಳು ವಿರಳ. ಹಾಗಾಗಿಯೇ ತಲೆ ಇದ್ದವರಿಗೆಲ್ಲ ನೋವು ಇದ್ದಿದ್ದೇ ಎಂಬ ಆಡುಮಾತು ಬಳಕೆಯಲ್ಲಿದೆ. ಅದೂ ನಿಜವೇ ಎನ್ನಿ. ಬದಲಾದ ಕಾಲಘಟ್ಟದಲ್ಲಿ ಬದುಕು ಕೂಡ ವೇಗದ ಸುಳಿಗೆ ಸಿಕ್ಕಿದೆ. ತರಾತುರಿಯ ಬದುಕಿನಲ್ಲಿ ತಲೆ ನೋವು ಕೂಡ ಸಾಮಾನ್ಯವಾಗಿದೆ. ಸಹಜವಾಗಿಯೇ ಮನೆ ಮದ್ದುಗಳ ಬಳಕೆ ಹಳ್ಳಿಗಳಿಗೆ ಸೀಮಿತವಾಗಿದ್ದು, ನಗರವಾಸಿಗಳು ಮೆಡಿಕಲ್ ಕಡೆಗೆ ಮುಖ ಮಾಡುತ್ತಾರೆ.
ತಲೆ ನೋವು ಬರುವುದಕ್ಕೆ ಹತ್ತಾರು ಕಾರಣಗಳು. ಮಳೆಗಾಲ ಮತ್ತು ಚಳಿಗಾಲದಲ್ಲಿ ಶೀತ ಗಾಳಿಯಲ್ಲಿ ಸಂಚರಿಸುವುದರಿಂದ, ದೃಷ್ಟಿದೋಷ, ಮಲಬದ್ಧತೆ, ಮಾನಸಿಕ ಒತ್ತಡ, ಅತಿಯಾದ ದುಃಖ, ಮಿತಿ ಮೀರಿದ ಶಬ್ದ ಮಾಲಿನ್ಯ, ಅತಿಯಾಗಿ ಮೊಬೈಲ್, ಟಿವಿ, ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಕೆ, ನಿದ್ದೆಗೆಟ್ಟರೆ, ಹಸಿವು ತಡೆದುಕೊಂಡು ಕುಳಿತರೆ ತಲೆ ನೋವು ಕಾಡಬಹುದು. ಇದಲ್ಲದೆ, ಮಳೆಗಾಲದಲ್ಲಿ, ಚಳಿಯ ವಾತಾವರಣದಲ್ಲಿ ಸೈನುಸೈಟಿಸ್ ಸಮಸ್ಯೆ ಕಾರಣ ತಲೆ ನೋವು ಉಂಟಾಗಬಹುದು.
ಅದೇ ರೀತಿ ಬಿರು ಬಿಸಲಲ್ಲಿ ತಿರುಗಾಡುವುದರಿಂದಲೂ ತಲೆನೋವು ಉಂಟಾಗಬಹುದು. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಲ್ಲೂ ತಲೆನೋವು ಕಾಡಬಹುದು. ತಲೆನೋವಿಗೆ ಸುಲಭ ಪರಿಹಾರವೇನು ಅಂತ ಕೇಳಿದ್ರೆ, 12 ಮನೆ ಮದ್ದುಗಳಿವೆ ನೋಡಿ. ಮಾಹಿತಿ ದೃಷ್ಟಿಯಿಂದ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಸಾಮಾನ್ಯ ಕಾಯಿಲೆಗಳಿಗೆ ಮನೆ ಮದ್ದು ಪುಸ್ತಕದಿಂದ ಆಯ್ದ 12 ಮನೆ ಮದ್ದುಗಳ ವಿವರ ಇಲ್ಲಿದೆ.
ತಲೆನೋವು ಶಮನಕ್ಕೆ 11 ಮನೆ ಮದ್ದು
1) ಬಜೆಯನ್ನು ಪುಡಿಮಾಡಿ ಬಟ್ಟೆಯಲ್ಲಿ ಹಾಕಿ ಅದನ್ನು ಆಗಾಗ ಮೂಸುತ್ತಿರಬೇಕು.
2) ಈರುಳ್ಳಿಯ ರಸ ತೆಗೆದು ಅದಕ್ಕೆ ಒಂದು ಚಿಟಿಕೆ ಅರಶಿನ, ಒಂದು ಚಮಚ ಜೇನು ಬೆರೆಸಿ ದಿನಕ್ಕೆರಡು ಬಾರಿ ಎರಡು ಚಮಚೆ ಸೇವಿಸಬೇಕು.
3) ಶುಂಠಿಯನ್ನು ಹಾಲಿನಲ್ಲಿ ತೇಯ್ದು ಹಣೆಯ ಮೇಲೆ ಪಟ್ಟು ಹಾಕಬೇಕು.
4) ನುಗ್ಗೆ ಸೊಪ್ಪಿನ ರಸ ತೆಗೆದು ಅದರಲ್ಲಿ ಶುಂಠಿಯನ್ನು ಅರೆದು ಹಣೆಗೆ ಲೇಪಿಸಬೇಕು.
5) ದಾಲ್ಟಿನ್ನಿಯನ್ನು ನಿಂಬೆರಸದಲ್ಲಿ ತೇಯ್ದು ಹಣೆಗೆ ಲೇಪಿಸಬೇಕು.
6) ಕಾಳು ಮೆಣಸನ್ನು ಗರುಗದ ಸೊಪ್ಪಿನ ರಸದಲ್ಲಿ ಅರೆದು ಹಣೆಗೆ ಹಚ್ಚಬೇಕು.
7) ಹಸುವಿನ ತುಪ್ಪದಲ್ಲಿ ಬೆಲ್ಲ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.
8) ತುಳಸಿಯ ರಸ ಮತ್ತು ಏಲಕ್ಕಿಯನ್ನು ಅರೆದು ಹಣೆಗೆ ಲೇಪಿಸುವುದು.
9) ಕೊತ್ತಂಬರಿ ಸೊಪ್ಪಿನ ರಸ ಒಂದು ಭಾಗ, ಎಳ್ಳೆಣ್ಣೆ ಅರ್ಧ ಭಾಗ, ಪನ್ನೀರು, (ರೋಸ್ ವಾಟರ್) ಅರ್ಧ ಭಾಗ ಸೇರಿಸಿ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಕಾಯಿಸಬೇಕು. ನೀರಿನ ಅಂಶ ಆವಿಯಾಗಿ ಹೋಗುವವರೆಗೂ ಕಾಯಿಸಬೇಕು. ನಂತರ ಆರಿಸಿ ಬಾಟಲಿಯಲ್ಲಿ ತೆಗೆದಿಟ್ಟುಕೊಂಡಿದ್ದು ತಲೆಗೆ ಹಾಕಿ ಸ್ನಾನ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ.
ಇನ್ನು ಮೈಗ್ರೇನ್ ಇರುವುದು ಗೊತ್ತಿದ್ದರೆ,
10) ನೆಲ್ಲಿಕಾಯಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಹಣೆಗೆ ಹಚ್ಚಬೇಕು. ಆಗಾಗ್ಗೆ ಲೇಪಿಸುತ್ತಿರಬೇಕು. ಇದನ್ನು ನೆತ್ತಿಗೂ ಲೇಪಿಸಬೇಕು.
11) ಹಸುವಿನ ಹಾಲಿನಲ್ಲಿ ಬಾದಾಮಿಯನ್ನು ಅರೆದು ಅದಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ 15 ದಿನಗಳ ಕಾಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ತಲೆನೋವು ತಗ್ಗಿಸುವ ಸರಳ ವ್ಯಾಯಾಮಗಳು
1) ಹುಬ್ಬುಗಳಿಗೆ ವ್ಯಾಯಾಮ- ಹುಬ್ಬುಗಳನ್ನು ಮೇಲೇರಿಸಿ ಇಳಿಸುವುದನ್ನು ತ್ವರಿತಗತಿಯಲ್ಲಿ ಮಾಡಬೇಕು.
2) ಬಾಯಿಗೆ ವ್ಯಾಯಾಮ- ಜೋರಾಗಿ ಬಾಯಿ ತೆರೆದು ಮುಚ್ಚುವುದು, ಆಕಳಿಸುವಾಗ ಮಾಡಿದಂತೆ ಮಾಡುವುದು.
3) ಹಣೆ ಒತ್ತುವುದು- ಹೆಬ್ಬೆರಳು ಮತ್ತು ತೋರುಬೆರಳಿನಿಂದ ನೋವಿರುವ ಕಡೆಗೆ ಒತ್ತಿಕೊಳ್ಳಬೇಕು. ಆಕ್ಯುಪ್ರೆಶರ್‌ನಲ್ಲಿ ಇದನ್ನೇ ಅನುಸರಿಸಲಾಗುತ್ತದೆ. ಎಷ್ಟೋ ಸಲ ತಲೆನೋವು ಬಂದಾಗ ನಮ್ಮ ಆತ್ಮೀಯರು ಹಣೆಯ ಮೇಲೆ ಕೈಯಿರಿಸಿದಾಗ ನೋವು ಕಡಿಮೆಯಾದಂತಾಗುವುದು. ಆತ್ಮೀಯರ ಸ್ಪರ್ಶ ನಿಜಕ್ಕೂ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
ಯಾವಾಗ ವೈದ್ಯರನ್ನು ಕಾಣಬೇಕು
ಈ ಮನೆ ಔಷಧಗಳಿಂದ ಕಡಿಮೆಯಾಗದಿದ್ದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಆಯುರ್ವೇದ ವೈದ್ಯರು ನಿಮ್ಮ ಪ್ರಕೃತಿ, ಬಲ, ವಯಸ್ಸಿನ ಆಧಾರದ ಮೇಲೆ ಯಾವ ಔಷಧದ ಸೂಕ್ತ ಅನ್ನುವುದನ್ನು ನಿರ್ಧರಿಸುವುದು, ಪಂಚಕರ್ಮ ಚಿಕಿತ್ಸೆಯಲ್ಲಿ ಒಂದಾದ ನಸ್ಯ ಕರ್ಮವೂ ಅತ್ಯಂತ ಉಪಯುಕ್ತವಾದುದು. ಇದನ್ನು 7 ದಿನಗಳ ಕಾಲ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಾ. ವಸುಂಧರಾ ಭೂಪತಿ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ.
ವಯಸ್ಸು 40 ಮೀರಿದ್ದು ಮುಂಚೆ ಯಾವತ್ತೂ ಹೆಚ್ಚು ಬಾಧಿಸದಿದ್ದ ತಲೆನೋವು ಪದೇಪದೆ ಕಾಡಿದರೆ, ತಲೆನೋವು ತಲೆಯ ಬೇರೆ ಬೇರೆ ಭಾಗಗಳಲ್ಲಿ ಮೇಲಿಂದ ಮೇಲೆ ಬರುತ್ತಿದ್ದಲ್ಲಿ, ಯಾವುದೇ ಮನೆ ಔಷಧ, ಮಾತ್ರೆಗೆ ತಲೆನೋವು ತಗ್ಗದಿದ್ದಾಗ, ಯಾವುದೇ ಕಾರಣವಿಲ್ಲದೆ ಆಗಾಗ ತಲೆನೋವು ಬಾಧಿಸುತ್ತಿದ್ದಲ್ಲಿ, ತಲೆನೋವಿನಿಂದ ಕೆಲಸದಲ್ಲಿ ಏಕಾಗ್ರತೆ ಕಳೆದುಕೊಂಡು ಪದೇಪದೆ ರಜೆ ಹಾಕಬೇಕಾದ ಸಂದರ್ಭದಲ್ಲಿ, ತಲೆನೋವಿನಿಂದ ನೆನಪಿನ ಶಕ್ತಿ ಕಡಿಮೆಯಾಗುವುದು, ಕಣ್ಣು ಮಂಜಾಗುವುದು, ಪ್ರಜ್ಞೆ ತಪ್ಪುವುದು, ತಲೆಸುತ್ತು ಬರುತ್ತಿದ್ದಲ್ಲಿ, ವಾಂತಿಯಾದಲ್ಲಿ, ತಲೆನೋವಿನೊಂದಿಗೆ ಬೇರೆ ರೀತಿಯ ದೈಹಿಕ ತೊಂದರೆಗಳು ಕಾಣಿಸಿಕೊಂಡಲ್ಲಿ ತಡಮಾಡದೆ ವೈದ್ಯರನ್ನು ಕಾಣಬೇಕು ಎಂದು ಅವರು ವಿವರಿಸಿದ್ದಾರೆ.
ವಿಭಾಗ