ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬಿಸಿಲಿಗೆ ಅತಿಯಾಗಿ ಕಾಡಬಹುದು ಮೈಗ್ರೇನ್‌; ತಲೆನೋವು ಪ್ರಚೋದಿಸುವ ಅಂಶಗಳು, ಪಾರಾಗುವ ವಿಧಾನದ ಬಗ್ಗೆ ತಿಳ್ಕೊಳ್ಳಿ

Summer Tips: ಬಿಸಿಲಿಗೆ ಅತಿಯಾಗಿ ಕಾಡಬಹುದು ಮೈಗ್ರೇನ್‌; ತಲೆನೋವು ಪ್ರಚೋದಿಸುವ ಅಂಶಗಳು, ಪಾರಾಗುವ ವಿಧಾನದ ಬಗ್ಗೆ ತಿಳ್ಕೊಳ್ಳಿ

ಭಾರತದಲ್ಲಿ ಹಲವರು ಮೈಗ್ರೇನ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೈಗ್ರೇನ್‌ ಎನ್ನುವುದು ಒಂದು ರೀತಿ ವಿಚಿತ್ರ ತಲೆನೋವಿನ ಸಮಸ್ಯೆಯಾಗಿದ್ದು ಬೇಸಿಗೆಯಲ್ಲಿ ಇದು ಹೆಚ್ಚು ಕಾಡಬಹುದು. ಬೆಳಕಿನ ಸೂಕ್ಷ್ಮತೆ, ಶಬ್ದದ ಅಲರ್ಜಿ ಮುಂತಾದ ಸಮಸ್ಯೆಗಳಿಂದ ಮೈಗ್ರೇನ್‌ ಹೆಚ್ಚಬಹುದು. ಮೈಗ್ರೇನ್‌ ತಲೆನೋವು ಪ್ರಚೋದಿಸುವ ಅಂಶಗಳು, ಇದರಿಂದ ಪಾರಾಗುವ ವಿಧಾನ ಇಲ್ಲಿದೆ.

ಮೈಗ್ರೇನ್‌ ಪ್ರಚೋದಿಸುವ ಅಂಶಗಳು, ಪಾರಾಗುವ ವಿಧಾನಗಳ ಬಗ್ಗೆ ತಿಳ್ಕೊಳ್ಳಿ
ಮೈಗ್ರೇನ್‌ ಪ್ರಚೋದಿಸುವ ಅಂಶಗಳು, ಪಾರಾಗುವ ವಿಧಾನಗಳ ಬಗ್ಗೆ ತಿಳ್ಕೊಳ್ಳಿ

ಮನುಷ್ಯರಿಗೆ ತಲೆನೋವು ಬರುವುದು ಸಹಜ. ಒತ್ತಡವಾದಾಗ, ಬಿರುಬಿಸಿಲಿನಲ್ಲಿ ಹೊರಗಡೆ ಹೋದಾಗ, ಗ್ಯಾಸ್ಟ್ರಿಕ್‌ ಸಮಸ್ಯೆ ಆದಾಗ ತಲೆನೋವು ಕಾಣಿಸುತ್ತದೆ. ಆದರೆ ತಲೆನೋವಿನಲ್ಲೇ ಒಂದು ವಿಚಿತ್ರವಾದ ಬಗೆ ಇದೆ. ಇದನ್ನು ಮೈಗ್ರೇನ್‌ ತಲೆನೋವು ಎನ್ನುತ್ತಾರೆ. ಇದು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ʼಮೈಗ್ರೇನ್‌ ಸಂಕೀರ್ಣವಾದ ನರವೈಜ್ಞಾನಿಕ ಪರಿಸ್ಥಿತಿಯಾಗಿದೆ. ಇದು ಇತರ ತಲೆನೋವಿಗಿಂತ ಭಿನ್ನವಾಗಿರುತ್ತದೆ. ತಲೆಯ ಒಂದು ಭಾಗದಲ್ಲಿ ವಿಪರೀತ ನೋವು ಕಾಣಿಸುತ್ತದೆ. ಮೈಗ್ರೇನ್‌ ಉಂಟಾದಾಗ ವಾಕರಿಕೆ, ಬೆಳಕಿನ ಸೂಕ್ಷ್ಮತೆಯಂತಹ ಲಕ್ಷಣಗಳು ಕಾಣಿಸುತ್ತವೆ. ಶಬ್ದವು ಕಿರಿಕಿರಿ ಎನ್ನಿಸುತ್ತದೆʼ ಎಂದು ಪ್ರಾಕ್ಟೊದಲ್ಲಿ ಕನ್ಸಲ್ಟೆಂಟ್‌ ವೈದ್ಯರಾಗಿರುವ ಡಾ. ಮನೋಜ್‌ ಎ. ಜಿ. ಹೇಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಹೆಡ್ಏಕ್ ಡಿಸಾರ್ಡರ್ಸ್ (ICHD) ಮೈಗ್ರೇನ್‌ಗಳನ್ನು ಪ್ರಮುಖ ವಿಧಗಳಾಗಿ ವರ್ಗೀಕರಿಸುತ್ತದೆ.

"ಮೈಗ್ರೇನ್ ವಿದೌಟ್ ಔರಾಸ್ 4 ರಿಂದ 72 ಗಂಟೆಗಳ ಕಾಲ ಪುನರಾವರ್ತಿತ ತಲೆನೋವುವನ್ನು ಒಳಗೊಂಡಿರುತ್ತದೆ. ಔರಾದೊಂದಿಗೆ ಮೈಗ್ರೇನ್ ಸಂವೇದನಾ ಅಡಚಣೆಗಳನ್ನು ಒಳಗೊಂಡಿರುತ್ತದೆ. ದೀರ್ಘಕಾಲದ ಮೈಗ್ರೇನ್ ಆಗಾಗ್ಗೆ, ≥15 ದಿನಗಳು/ತಿಂಗಳಿಗೆ ಇರುತ್ತದೆ. ಇತರ ಪ್ರಕಾರಗಳು ಋತುಚಕ್ರ, ವೆಸ್ಟಿಬುಲರ್ ಮತ್ತು ರೆಟಿನಲ್ ಮೈಗ್ರೇನ್ ಸೇರಿವೆ. ಈ ವ್ಯವಸ್ಥೆಯು ನಿಖರವಾದ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ ಎಂದು ಡಾ. ಮನೋಜ್‌ ಎಬಿಪಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೈಗ್ರೇನ್‌ ಪ್ರಚೋದಿಸುವ ಅಂಶಗಳಿವು

ʼಪ್ರಚೋದಕಗಳು ವ್ಯಾಪಕವಾಗಿ ಬದಲಾಗುತ್ತವೆ, ನಿಖರವಾಗಿ ತಡೆಗಟ್ಟಲು ವೈಯಕ್ತಿಕ ಪ್ರಚೋದಕಗಳನ್ನು ಗುರುತಿಸುವುದು ಅಗತ್ಯ. ಇವುಗಳಲ್ಲಿ ನಿರ್ದಿಷ್ಟ ಆಹಾರ ಪದಾರ್ಥಗಳು (ಉದಾ. ಚಾಕೊಲೇಟ್, ವಾಯಿದೆ ಮುಗಿದ ಚೀಸ್), ಹಾರ್ಮೋನ್ ಬದಲಾವಣೆಗಳು, ಒತ್ತಡ, ನಿದ್ರೆಯ ಕೊರತೆ ಮತ್ತು ಪರಿಸರದ ಅಂಶಗಳು ಸೇರಿವೆ. ಈ ಪ್ರಚೋದಕಗಳನ್ನು ಪರಿಹರಿಸುವುದು ಮೈಗ್ರೇನ್‌ಗಳ ಆವರ್ತನ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ.

ಮೈಗ್ರೇನ್‌ಗಳನ್ನು ಪ್ರಚೋದಿಸುವಲ್ಲಿ ಒತ್ತಡವು ಗಮನಾರ್ಹ ಪಾತ್ರ ವಹಿಸುತ್ತದೆ. ವಿಶ್ರಾಂತಿ ವ್ಯಾಯಾಮಗಳಂತಹ ಒತ್ತಡ ನಿರ್ವಹಣೆಯ ತಂತ್ರಗಳನ್ನು ಅನುಸರಿಸುವುದು ಪ್ರಯೋಜನಕಾರಿಯಾಗಿದೆ. ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು, ಹೆಚ್ಚು ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಜೀವನಶೈಲಿಯ ಅಳವಡಿಕೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದುʼ ಎಂದು ಡಾ. ಮನೋಜ್‌ ಸಲಹೆ ನೀಡುತ್ತಾರೆ.

ಮೈಗ್ರೇನ್‌ಗೆ ಕಾರಣಗಳು

ಮುಂಬೈನ ವೀರಾ ರೋಡ್‌ನ ವೋಕ್‌ಹಾರ್ಡ್‌ ಆಸ್ಪತ್ರೆಯ ಕನ್ಸ್‌ಲ್ಟೆಂಟ್‌ ಇಂಟರ್‌ವೆನ್ಷನಲ್ ನ್ಯೂರಾಲಜಿಸ್ಟ್ ಡಾ. ಪವನ್‌ ಪೈ ಅವರ ಮೈಗ್ರೇನ್‌ಗಳು ಸಂಕೀರ್ಣ ಮತ್ತು ಬಹುಮುಖಿಯಾಗಿದ್ದು, ವ್ಯಾಪಕವಾದ ಸಂಭಾವ್ಯ ಕಾರಣಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ.

* ಮೈಗ್ರೇನ್‌ಗೆ ಸಾಮಾನ್ಯ ಪ್ರಚೋದಕಗಳಲ್ಲಿ ಒತ್ತಡ ಕೂಡ ಒಂದು. ಇದು ಸ್ನಾಯುವಿನ ಒತ್ತಡಕ್ಕೆ ಕಾರಣವಾಗಬಹುದು ಮತ್ತು ಮೈಗ್ರೇನ್‌ ಅನ್ನು ಪ್ರಚೋದಿಸುವ ಮೆದುಳಿನ ರಾಸಾಯನಿಕಗಳಲ್ಲಿನ ಬದಲಾವಣೆಗೆ ಕಾರಣವಾಗಬಹುದು.

* ಮತ್ತೊಂದು ಪ್ರಮುಖ ಅಂಶ ಎಂದರೆ ಅನುವಂಶೀಯತೆ. ಮೈಗ್ರೇನ್‌ ಕೌಟುಂಬಿಕ ಇತಿಹಾಸ ಹೊಂದಿರುವವರು ತಲೆನೋವಿನ ಸಮಸ್ಯೆ ಎದುರಿಸುತ್ತಾರೆ. ಋತುಸ್ರಾವ ಅಥವಾ ಗರ್ಭಾವಸ್ಥೆಯಂತಹ ಹಾರ್ಮೋನಿನ ಏರಿಳಿತಗಳು ಮೈಗ್ರೇನ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಸಂಶೋಧನೆ ಸೂಚಿಸುತ್ತದೆ.

* ಕಟು ವಾಸನೆ, ಪ್ರಕಾಶಮಾನವಾದ ದೀಪಗಳು ಮತ್ತು ಅತಿಯಾದ ಶಬ್ದ ಇಂತಹ ಪಾರಿಸರಿಕ ಅಂಶಗಳು ಸಹ ಕೆಲವು ವ್ಯಕ್ತಿಗಳಿಗೆ ಮೈಗ್ರೇನ್‌ ಪಚ್ರೋದಕಗಳಾಗಿ ಕೆಲಸ ಮಾಡುತ್ತವೆ. ಮೈಗ್ರೇನ್‌ ಮೇಲೆ ಕರುಳಿನ ಆರೋಗ್ಯದ ಸಂಭಾವ್ಯ ಪ್ರಭಾವದ ಬಗ್ಗೆ ಕೆಲವು ಪುರಾವೆಗಳಿವೆ.

* ಕರುಳು ಹಾಗೂ ಮೆದುಳಿನ ಸಂಪರ್ಕವು ಜೀರ್ಣಕಾರಿ ಸಮಸ್ಯೆಗಳು ಅಥವಾ ಆಹಾರದ ಸೂಕ್ಷ್ಮತೆಗಳು ಮೈಗ್ರೇನ್‌ ಹೆಚ್ಚಲು ಕಾರಣವಾಗಬಹುದು. ಮೈಗ್ರೇನ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ತಡೆಗಟ್ಟಲು ಸಮಗ್ರ ತಂತ್ರಗಳನ್ನು ಅಭಿವೃದ್ಧಿಪಡಿಸಲು ಈ ವಿಭಿನ್ನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

* ಋತುಚಕ್ರದ ಮೊದಲು ಅಥವಾ ಋತುಚಕ್ರದ ಸಮಯದಲ್ಲಿ ಅನುಭವಿಸಿದಂತಹ ಹಾರ್ಮೂನ್‌ ಏರಿಳಿತಗಳು, ಗರ್ಭಾವಸ್ಥೆ ಮತ್ತು ಋತುಬಂಧ ಇವು ಕೂಡ ಕೆಲವು ಮಹಿಳೆಯರಲ್ಲಿ ತಲೆನೋವಿಗೆ ಸಂಬಂಧಿಸಿವೆ. ಇದರೊಂದಿಗೆ ಗರ್ಭನಿರೋಧಕಗಳಂತಹ ಹಾರ್ಮೋನ್‌ ಔಷಧಿಗಳು ಕೂಡ ಮೈಗ್ರೇನ್‌ ಅನ್ನು ಹೆಚ್ಚಿಸುತ್ತದೆ.

* ಮದ್ಯಪಾನ ಮಾಡುವುದು ಹಾಗೂ ಕೇಫಿನ್‌ ಅಂಶ ಇರುವ ಪದಾರ್ಥಗಳ ಅತಿಯಾದ ಸೇವನೆಯು ಮೈಗ್ರೇನ್‌ ತಲೆನೋವನ್ನು ಹೆಚ್ಚಿಸಬಹುದು.

* ನಿದ್ದೆಯ ಕ್ರಮದಲ್ಲಿ ವ್ಯತ್ಯಾಸವಾಗುವುದು ಕೂಡ ಮೈಗ್ರೇನ್‌ಗೆ ಕಾರಣವಾಗಬಹುದು. ನಿದ್ದೆ ಕಡಿಮೆಯಾಗುವುದು ಹಾಗೂ ಅತಿಯಾದ ನಿದ್ದೆ ಎರಡೂ ಮೈಗ್ರೇನ್‌ ಹೆಚ್ಚಲು ಕಾರಣವಾಗುತ್ತದೆ.

* ಹವಾಮಾನ ಬದಲಾವಣೆಯು ಕೂಡ ಮೈಗ್ರೇನ್‌ ತಲೆನೋವು ಹೆಚ್ಚಲು ಕಾರಣವಾಗುತ್ತದೆ.

* ವಾಯಿದೆ ಮುಗಿದ ಚೀಸ್‌, ಉಪ್ಪು, ಸಂಸ್ಕರಿತ ಆಹಾರಗಳು ಇವು ಕೂಡ ಮೈಗ್ರೇನ್‌ ಪ್ರಚೋದಕಗಳಾಗಿ ಕಾರ್ಯನಿರ್ವಹಿಸುತ್ತವೆ. ಕೆಲವೊಮ್ಮೆ ಊಟ ಬಿಡುವುದು ಕೂಡ ಮೈಗ್ರೇನ್‌ಗೆ ಕಾರಣವಾಗುತ್ತದೆ.

ಮೈಗ್ರೇನ್‌ ನಿವಾರಿಸಲು ಕ್ರಮಗಳು

ಮೈಗ್ರೇನ್‌ನಿಂದ ಬಳಲುವ ವ್ಯಕ್ತಿಗಳು ತಮ್ಮ ಜೀವನ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬೇಕು. ಜೀವನಶೈಲಿಯ ಹೊಂದಾಣಿಕೆ, ಔಷಧಿಗಳು, ಪೂರಕಗಳ ಸೇವನೆ, ಪರ್ಯಾಯ ಚಿಕಿತ್ಸೆ, ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಕೂಡ ಇದಕ್ಕೆ ಪರಿಹಾರವಾಗಬಹುದು.

ಮೈಗ್ರೇನ್‌ ನಿವಾರಣೆಗೆ ಮನೆಮದ್ದು

ಮೈಗ್ರೇನ್‌ ನಿವಾರಣೆಗೆ ವೈದ್ಯಕೀಯ ಪರಿಹಾರಗಳು ಇದ್ದರೂ ಕೂಡ ಕೆಲವು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪುಣೆಯ ಹಡಪ್‌ಸರ್‌ನಲ್ಲಿರುವ ಸಹ್ಯಾದ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮಾಲೋಚಕ - ನರಶಸ್ತ್ರಚಿಕಿತ್ಸಕ ಡಾ. ಮನೀಶ್ ಸಬ್ನಿಸ್ ಅವರು ಎಬಿಪಿಗೆ ನೀಡಿರುವ ಮಾಹಿತಿ ಹೀಗಿದೆ.

ಕತ್ತಲೆ ಹಾಗೂ ನಿಶಬ್ಧ ಕೋಣೆಯಲ್ಲಿ ವಿಶ್ರಾಂತಿ: ಮೈಗ್ರೇನ್‌ ಕಾಣಿಸಿದಾಗ ಶಾಂತ ಹಾಗೂ ಕತ್ತಲೆಯ ವಾತಾವರಣದಲ್ಲಿ ಇರುವುದು ಬಹಳ ಮುಖ್ಯ. ಪ್ರಕಾಶಮಾನವಾದ ಬೆಳಕು ಹಾಗೂ ಅತಿಯಾದ ಶಬ್ದ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಡಾರ್ಕ್‌, ಸ್ತಬ್ಧ ಕೋಣೆಯಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಮೈಗ್ರೇನ್‌ ಕಡಿಮೆ ಮಾಡಿಕೊಳ್ಳಬಹುದು. ಇದು ಸಂವೇದನಾ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ.

ತಲೆಗೆ ಕೋಲ್ಡ್‌ ಕಂಪ್ರೆಸ್‌ ಅನ್ವಯಿಸುವುದು: ಮೈಗ್ರೇನ್‌ ನೋವು ನಿವಾರಿಸುವಲ್ಲಿ ಕೋಲ್ಡ್ ಕಂಪ್ರೆಸಸ್ ಪರಿಣಾಮಕಾರಿ. ನಿಮ್ಮ ಹಣೆಯ ಮೇಲೆ ಅಥವಾ ನಿಮ್ಮ ಕತ್ತಿನ ಹಿಂಭಾಗದಲ್ಲಿ ತಣ್ಣನೆಯ ಪ್ಯಾಕ್ ಅನ್ನು ಇರಿಸುವುದು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮೈಗ್ರೇನ್‌ಗೆ ಸಂಬಂಧಿಸಿದ ಥ್ರೋಬಿಂಗ್ ಸಂವೇದನೆಯನ್ನು ಸರಾಗಗೊಳಿಸುವ ಒಂದು ನಿಶ್ಚೇಷ್ಟಿತ ಪರಿಣಾಮವನ್ನು ನೀಡುತ್ತದೆ.

ತಲೆಭಾಗಕ್ಕೆ ಮಸಾಜ್‌ ಮಾಡುವುದು: ನಿಮ್ಮ ತಲೆಯ ಭಾಗಕ್ಕೆ ಮೃದುವಾಗಿ ಮಸಾಜ್‌ ಮಾಡುವುದು ಉದ್ವಿಗ್ನ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಹಾಗೂ ತಲೆಗೆ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಸರಳ ತಂತ್ರವು ಮೈಗ್ರೇನ್‌ಗೆ ಸಂಬಂಧಿಸಿದ ಕೆಲವು ಒತ್ತಡ ಮತ್ತು ಅಸ್ವಸ್ಥತೆಯನ್ನು ನಿವಾರಿಸುತ್ತದೆ. ನಿಧಾನಕ್ಕೆ ಬೆರಳುಗಳ ಮೂಲಕ ಹಣೆಗೆ ಮಸಾಜ್‌ ಮಾಡುವ ಮೂಲಕ ಮೈಗ್ರೇನ್‌ಗೆ ಪರಿಹಾರ ಕಂಡುಕೊಳ್ಳಬಹುದು.

ಹೈಡ್ರೇಟ್‌ ಆಗಿರಿ: ನಿರ್ಜಲೀಕರಣವು ಮೈಗ್ರೇನ್‌ಗೆ ಪ್ರಮುಖ ಪ್ರಚೋದಕವಾಗಿದೆ. ನೀವು ಹೈಡ್ರೇಟ್‌ ಆಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ತಲೆನೋವು ತಡೆಯಲು ಕೊಡುಗೆ ನೀಡುತ್ತದೆ. ದಿನವಿಡೀ ನೀರು ಕುಡಿಯುವುದರಿಂದ ಮೆದುಳಿಗೆ ರಕ್ತದ ಹರಿವು ಸೇರಿದಂತೆ ಸರಿಯಾಗ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಕೆಫೀನ್‌, ಸಕ್ಕರೆ ಅಂಶ ಅಧಿಕವಿರುವ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ.

ಪ್ರಚೋದಕಗಳನ್ನು ತಪ್ಪಿಸಿ: ನಿಮ್ಮ ತಲೆನೋವು ಹೆಚ್ಚಲು ಕಾರಣವಾಗುವ ಅಂಶಗಳನ್ನು ಗುರುತಿಸುವುದು ಹಾಗೂ ಅವುಗಳಿಂದ ದೂರವಿರುವುದು ಬಹಳ ಮುಖ್ಯವಾಗುತ್ತದೆ. ಪ್ರಕಾಶಮಾನವಾದ ದೀಪಗಳು, ಜೋರಾದ ಶಬ್ದಗಳು ಮತ್ತು ಬಲವಾದ ವಾಸನೆಗಳು ಅನೇಕ ಮೈಗ್ರೇನ್ ಪೀಡಿತರಿಗೆ ಸಾಮಾನ್ಯ ಪ್ರಚೋದಕಗಳಾಗಿವೆ. ಈ ಪ್ರಚೋದಕಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಮೈಗ್ರೇನ್‌ಗಳ ಆಕ್ರಮಣವನ್ನು ತಡೆಯಲು ಸಹಾಯ ಮಾಡುತ್ತದೆ.

ಮೈಗ್ರೇನ್‌ಗೆ ಪ್ರಚೋದಕಗಳು ಯಾವುವು, ಮೈಗ್ರೇನ್‌ ಉಂಟಾಗಲು ಕಾರಣಗಳೇನು, ಮೈಗ್ರೇನ್‌ ನಿವಾರಣೆಗೆ ಮನೆಮದ್ದುಗಳೇನು ಎಂಬಿತ್ಯಾದಿ ವಿವರ ತಿಳಿದುಕೊಂಡ್ರಿ ಅಲ್ವಾ. ಇದನ್ನು ಅನುಸರಿಸುವ ಮೂಲಕ ಮೈಗ್ರೇನ್‌ ಸಮಸ್ಯೆಗೆ ಮುಕ್ತಿ ಪಡೆದುಕೊಳ್ಳಿ.

ವಿಭಾಗ