ಬೆಲ್ದಚ್ಚಂಗೇ ಪಾರು ನೀನೂ ನಂಗೆ: ಅಣ್ಣಯ್ಯ ಸೀರಿಯಲ್‌ನ ಟೈಟಲ್ ಸಾಂಗ್‌ನಲ್ಲಿ ಬರೋ ಬೆಲ್ದಚ್ಚು ರೆಸಿಪಿ ಇಲ್ಲಿದೆ ನೋಡಿ
Nov 03, 2024 10:51 AM IST
ಅಣ್ಣಯ್ಯ ಸೀರಿಯಲ್‌ನ ಟೈಟಲ್ ಸಾಂಗ್‌ನಲ್ಲಿ ಬರೋ ಬೆಲ್ದಚ್ಚು ರೆಸಿಪಿ ಇಲ್ಲಿದೆ ನೋಡಿ
- ಅಣ್ಣಯ್ಯ ಸೀರಿಯಲ್ ಟೈಟಲ್ ಸಾಂಗ್‌ನಲ್ಲಿ ಒಂದು ಸಾಲಿದೆ. ಬೆಲ್ದಚ್ಚಂಗೇ ಪಾರು ನೀನೂ ನಂಗೆ, ಶಾನೆ ಪ್ರೀತಿ ಐತೆ ಎದೆಯಾ ಒಳಗೇ ಎಂದು. ಬೆಲ್ಲದಚ್ಚನ್ನು ಮಾಡುವುದು ಹೇಗೆ? ಅದನ್ನು ನೀವೂ ನಿಮ್ಮ ಮನೆಯಲ್ಲಿ ಮಾಡಬಹುದಾ ಎಂದು ಒಮ್ಮೆ ಟ್ರೈ ಮಾಡಿ ನೋಡಿ.
ಅಣ್ಣಯ್ಯ ಧಾರಾವಾಹಿಯ ಟೈಟಲ್ ಸಾಂಗ್‌ನಲ್ಲಿ ಅಣ್ಣ ತಂಗಿಯರ ಬಾಂಧವ್ಯವನ್ನು ಯಾವ ರೀತಿಯಾಗಿ ಕಾಣಿಸಲಾಗಿದೆಯೋ ಅಷ್ಟೇ ಪಾರು ಹಾಗೂ ಶಿವನ ಪ್ರೀತಿಯನ್ನೂ ಸಾಹಿತ್ಯದ ಸಾಲುಗಳಲ್ಲಿ ತುಂಬಾ ಮುದ್ದಾಗಿ ಹೇಳಿದ್ದಾರೆ. ಅದರಲ್ಲಿ ಒಂದು ಸಾಲಿದೆ.
ಬೆಲ್ದಚ್ಚಂಗೇ ಪಾರು ನೀನೂ ನಂಗೆ, ಶಾನೆ ಪ್ರೀತಿ ಐತೆ ಎದೆಯಾ ಒಳಗೇ…..ಎಂದು ಈ ಹಾಡನ್ನು ಸಾಕಷ್ಟು ಜನ ತುಂಬಾ ಪ್ರೀತಿಯಿಂದ ಪದೇ ಪದೇ ಕೇಳುತ್ತಾರೆ. ಆದರೆ ಈ ಹಾಡಲ್ಲಿ ಬರುವ ಬೆಲ್ಲದ ಅಚ್ಚು ಈಗಿನ ಕಾಲದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದೇ ಇದ್ದರೂ ಹಿಂದೆಲ್ಲ ಸಕ್ಕರೆಗಿಂತ ಹೆಚ್ಚಾಗಿ ಬೆಲ್ಲವನ್ನೇ ಬಳಕೆ ಮಾಡುತ್ತಿದ್ದರು. ಈ ಬೆಲ್ಲದ ಅಚ್ಚನ್ನು ತಯಾರಿಸುವುದು ಅಷ್ಟು ಸುಲಭವಲ್ಲ. ಪ್ರೀತಿ ಮಾಡೋದು ಎಷ್ಟು ಕಷ್ಟ ಆದ್ರೆ ಪ್ರೀತಿ ಆದ್ಮೇಲೆ ಎಷ್ಟು ಇಷ್ಟ ಅಂತಾರಲ್ಲ, ಹಾಗೇ ಇದೂ ಕೂಡ. ಬೆಲ್ಲದ ಅಚ್ಚನ್ನು ಮಾಡೋದು ಕಷ್ಟವಾದ್ರೂ ಅದನ್ನು ತಿನ್ನಲು ಎಲ್ಲರಿಗೂ ಇಷ್ಟವಾಗುತ್ತದೆ.
ಸಕ್ಕರೆ ಅಚ್ಚನ್ನು ನೀವು ಕಂಡಿರುತ್ತೀರಿ ಹಬ್ಬಗಳ ಸಂದರ್ಭದಲ್ಲಿ ಅದನ್ನು ನಿಮ್ಮ ಮನೆಯಲ್ಲೂ ಮಾಡಿರಬಹುದು. ಸಕ್ಕರೆ ಗೊಂಬೆಗಳನ್ನು ತಯಾರಿಸಲಾಗುತ್ತದೆ. ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಈ ಸಕ್ಕರೆ ಗೊಂಬೆಗಳನ್ನು ಬಳಸಲಾಗುತ್ತದೆ. ಇನ್ನು ದಸರಾ ಸಂದರ್ಭದಲ್ಲೂ ಸಕ್ಕರೆ ಅಚ್ಚಿನ ಗೊಂಬೆಗಳನ್ನು ಇಡುವ ಸಂಪ್ರದಾಯ ಕೆಲ ಮನೆಗಳಲ್ಲಿದೆ.
ಬೆಲ್ಲದ ಅಚ್ಚನ್ನು ಹೇಗೆ ಮಾಡೋದು?
ಬೆಲ್ಲದ ಅಚ್ಚನ್ನು ಮಾಡೋದು ತುಂಬಾ ಕಷ್ಟವೂ ಅಲ್ಲ. ಆದರೆ ಸರಿಯಾದ ಪಾಕ ನೋಡಿ ಅದನ್ನು ಗಂಟೆಗಳ ಕಾಲ ಕಾಸಿ, ಸೋಸಿ ಮಾಡಬೇಕಾಗುತ್ತದೆ. ಬೆಲ್ಲದ ಅಚ್ಚನ್ನು ಹೇಗೆ ಮಾಡುವುದು ಎಂಬುದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ಇದೇ ರೀತಿ ನೀವೂ ನಿಮ್ಮ ಮನೆಯಲ್ಲಿ ಬೆಲ್ಲದ ಅಚ್ಚನ್ನು ಮಾಡಬಹುದು.
ಮೊದಲಿಗೆ ಕಬ್ಬಿನ ಹಾಲನ್ನು ತೆಗೆದುಕೊಳ್ಳಬೇಕು. ಕಬ್ಬಿನ ಹಾಲನ್ನು ಪಾಕ ಬರುವವರೆಗೂ ಕಾಯಿಸಬೇಕು. ಇದು ಸುಮಾರು 4ರಿಂದ 5 ತಾಸುಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಆಗಾಗ ಇದರ ಮೇಲೆ ಬರುವ ನೊರೆಯನ್ನು ತೆಗೆದು ಹಾಕಬೇಕು. ಈ ರೀತಿ ಮಾಡುತ್ತಾ ಅದು ಮಂದವಾಗುತ್ತಾ ಬರುತ್ತದೆ. ಆಗ ಒಂದು ಖಾಲಿ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಆ ಬೆಲ್ಲದ ಪಾಕವನ್ನು ನೀರಿಗೆ ಹಾಕಿದಾಗ ಅದು ಮಿಕ್ಸ್ ಆಗದೇ ದಾರದ ರೀತಿಯಲ್ಲಿ ಕಂಡರೆ ಬೆಲ್ಲದ ಪಾಕ ರೆಡಿಯಾಗಿದೆ ಎಂದು ಅರ್ಥ. ರೆಡಿಯಾದ ಪಾಕವನ್ನು ನಿಮಗೆ ಯಾವ ಆಕಾರ ಬೇಕೋ ಆ ಆಕಾರದ ಪಾತ್ರೆಯಲ್ಲಿ ಹಾಕಿಕೊಳ್ಳಿ.