ರಸಗುಲ್ಲ ಪಾಕದಲ್ಲಿ ಸತ್ತ ಕೀಟಗಳು: ದೀಪಾವಳಿ ಮುಗಿಯುವವರೆಗೆ ಮನೆಯಲ್ಲೇ ಮಾಡಿದ ಸ್ವೀಟ್ ತಿನ್ನೋದು ಸೇಫ್ ಎನ್ನುತ್ತಿದ್ದಾರೆ ನೆಟ್ಟಿಗರು
Deepavali Sweets: ದೀಪಾವಳಿ ಹಬ್ಬ ಮುಗಿಯವವರೆಗೆ ಮನೆಯಲ್ಲೇ ಮಾಡಿದ ಸ್ವೀಟ್ ತಿನ್ನೋದು ಸೇಫ್ ಎಂಬ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳದಿದೆ. ಕಾರಣ ಇಷ್ಟೆ - ರಸಗುಲ್ಲ ಪಾಕದಲ್ಲಿ ಸತ್ತ ಕೀಟಗಳು ಇರುವ ದೃಶ್ಯ ವೈರಲ್ ವಿಡಿಯೋದಲ್ಲಿ ಕಂಡಿದೆ. ಇನ್ನು ನೋಡಿ ನೆಟ್ಟಿಗರು ಆರೋಗ್ಯ ಜೋಪಾನ ಅಂತಿದ್ದಾರೆ. ನೀವೂ ಒಮ್ಮೆ ನೋಡಿಬಿಡಿ.
ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ ದೇಶವಾಸಿಗಳು. ಎಲ್ಲೆಡೆ ಸಿಹಿ ತಿನಿಸಲು ಹಂಚುವ ಮೂಲಕ ಸಡಗರ ವ್ಯಕ್ತಪಡಿಸುವುದು ಕೂಡ ವಾಡಿಕೆಯಂತೆ ನಡೆದಿದೆ. ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆರೋಗ್ಯ ಕಾಳಜಿ ವಿಚಾರ ಗಮನಸೆಳೆದಿದೆ. ವಿಶೇಷವಾಗಿ ದೀಪಾವಳಿ ಹಬ್ಬ ಮುಗಿಯವವರೆಗೆ ಮನೆಯಲ್ಲೇ ಮಾಡಿದ ಸ್ವೀಟ್ ತಿನ್ನೋದು ಸೇಫ್ ಎಂಬ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಪತ್ರಕರ್ತರೊಬ್ಬರು ಶೇರ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ರಸಗುಲ್ಲಕ್ಕೆ ಬಳಸುವ ಸಕ್ಕರೆ ಪಾಕದಲ್ಲಿ ಕೀಟಗಳು ಸತ್ತು ಬಿದ್ದಿರುವ ದೃಶ್ಯವಿದೆ. ಆ ಮೇಲೆ ಈ ರಸಗುಲ್ಲಾ ತಯಾರಿಕೆ ಎಲ್ಲಿ ಅಂದರೆ ದೆಹಲಿಯ ಮನೆಯೊಂದರ ಹಿಂಭಾಗದ ಹಿತ್ತಲಲ್ಲಿ ನಡೆದಿದೆ. ಸ್ವಲ್ಪವೂ ಸ್ವಚ್ಛತೆ ಇಲ್ಲದ ಪ್ರದೇಶವಾದ ಕಾರಣ ಬಹುಬೇಗ ಸೋಷಿಯಲ್ ಮೀಡಿಯಾದ ಗಮನಸೆಳೆದಿದೆ. ಹಲೋ ಸ್ನೇಹಿತರೆ, ದೀಪಾವಳಿಯ ರಸಗುಲ್ಲಾ ತಿನ್ನಿ ಎಂದು ಹೇಳುತ್ತಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೂರ್ವ ದೆಹಲಿಯ ದಲ್ಲುಪರಾ ಗ್ರಾಮದ್ದು ಎಂದು ಹೇಳಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಪಾಳುಬಿದ್ದ ಮನೆಯ ಬಾಗಿಲಿನೊಂದಿಗೆ ವಿಡಿಯೋ ದೃಶ್ಯ ಶುರುವಾಗುತ್ತದೆ. ಅದು ಮನೆಯ ಹಿತ್ತಲಿನಲ್ಲಿ ಕಂಡುಬರುವ ಒಳಗೆ ದೊಡ್ಡ ಪಾತ್ರೆಗಳಲ್ಲಿ ಅಡುಗೆ ಮಾಡುವ ಪುರುಷರ ಗುಂಪನ್ನು ತೋರಿಸಲು ತೆರೆದುಕೊಳ್ಳುತ್ತದೆ. ದೊಡ್ಡ ನೀಲಿ ಪಾತ್ರೆಗಳನ್ನು ಎಲ್ಲಾ ಕಡೆ ಇರಿಸಲಾಗಿದೆ. ನೆಲದ ಮೇಲೆ ತೊಟ್ಟಿಯಂತಹ ಪಾತ್ರೆಗಳು ಸಕ್ಕರೆ ಪಾಕದಲ್ಲಿ ನೆನೆಸಿಟ್ಟಿರುವ ಬಿಳಿ ರಸಗುಲ್ಲಾಗಳನ್ನು ದೃಶ್ಯದಲ್ಲಿ ಕಾಣಬಹುದು. ನೀವೂ ನೋಡಿ ವೈರಲ್ ವಿಡಿಯೋ-
ಕ್ಯಾಮರಾ ಝೂಮ್ ಇನ್ ಆಗುತ್ತಿದ್ದಂತೆ, ಬಿಳಿ ರಸಗುಲ್ಲಾಗಳು ಕಪ್ಪು ಚುಕ್ಕೆಗಳಿಂದ ಮುಚ್ಚಿಹೋಗಿವೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ನೂರಾರು ಸತ್ತ ನೊಣಗಳು, ಕೀಟಗಳು ಸಿರಪ್‌ನಲ್ಲಿ ತೇಲುತ್ತಿರುವುದನ್ನು ಕಾಣಬಹುದು. ನೊಣಗಳು ನೀಲಿ ಪಾತ್ರೆಗಳ ಸುತ್ತಲೂ ಸದ್ದು ಮಾಡುತ್ತವೆ. ಇದೇ ಸಿರಪ್ ಅನ್ನು ದೊಡ್ಡ ಪಾತ್ರೆಗಳಲ್ಲಿ ಸುರಿದು ಕುದಿಸಲಾಗುತ್ತದೆ. ಸಿಹಿತಿಂಡಿಗಳನ್ನು ತಯಾರಿಸುವ ಕೆಲಸಗಾರರು ಪಾತ್ರೆಗಳೊಳಗಿನ ನೊಣಗಳಿಂದ ವಿಚಲಿತರಾದಂತೆ ಕಾಣುವುದಿಲ್ಲ. ಎಲ್ಲವೂ ಸಹಜವೆಂಬಂತೆ ಅಡುಗೆ ಮಾಡುವುದನ್ನು ಮುಂದುವರಿಸಿರುವುದನ್ನು ಗಮನಿಸಬಹುದು.
ಅತ್ಯಂತ ಅಪಾಯಕಾರಿ ಆಹಾರ ತಯಾರಿಕೆ
ಈ ವಿಡಿಯೋ ಈಗಾಗಲೇ 53 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕಾಳಜಿಗಳು ವ್ಯಕ್ತವಾಗಿದೆ. ರಸಗುಲ್ಲಾ ತಯಾರಿಸುವ ವಿಧಾನ ಕಂಡು ಅನೇಕರು ಬೆಚ್ಚಿಬಿದ್ದಿದ್ಧಾರೆ.
"ದೀಪಾವಳಿಯಂದು ಪ್ರತಿ ಮಿಠಾಯಿ ಗೋದಾಮಿನಲ್ಲೂ ಇದೇ ರೀತಿಯ ಪರಿಸ್ಥಿತಿಗಳು ಕಂಡುಬರುತ್ತವೆ. ಅಲ್ಲಿ ಶುದ್ಧತೆಯ ಖಾತರಿಯಿಲ್ಲ. ದೀಪಾವಳಿಯಂದು ಒಣ ಹಣ್ಣುಗಳನ್ನು ಪ್ರಚಾರ ಮಾಡುವುದು ಉತ್ತಮ, ಇದರಿಂದ ನಿಮ್ಮ ಆರೋಗ್ಯ ಮತ್ತು ಇತರರ ಆರೋಗ್ಯವು ಉತ್ತಮವಾಗಿರುತ್ತದೆ" ಎಂದು ಒಬ್ಬ ಬಳಕೆದಾರರು ಹೇಳಿದರು. "ಇದು ಅಪಾಯಕಾರಿ, ಈ ದೀಪಾವಳಿಯಲ್ಲಿ ಸಿಹಿತಿಂಡಿಗಳನ್ನು ಖರೀದಿಸಬಾರದು. ಅದುವೇ ಸರಿಯಾದ ನಿರ್ಧಾರ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಹೀಗಾಗಿ, ಮತ್ತೊಬ್ಬ ಬಳಕೆದಾರ, “ರಸಗುಲ್ಲ ಪಾಕದಲ್ಲಿ ಸತ್ತ ಕೀಟಗಳು.. ದೀಪಾವಳಿ ಮುಗಿಯುವವರೆಗೆ ಮನೆಯಲ್ಲೇ ಮಾಡಿದ ಸ್ವೀಟ್ ತಿನ್ನೋದು ಸೇಫ್” ಎಂದು ಬರೆದಿದ್ದಾರೆ.