ನೀವು ಕರ್ನಾಟಕದ ಪ್ರಸಿದ್ಧ ಮಾಂಸಾಹಾರಿ ಖಾದ್ಯಗಳನ್ನು ತಿಂದಿದ್ದೀರಾ: ಈ ಭಕ್ಷ್ಯಗಳನ್ನು ಟ್ರೈ ಮಾಡದಿದ್ದರೆ ಇಂದೇ ಸವಿಯಿರಿ
Oct 28, 2024 06:16 PM IST
ಕರ್ನಾಟಕದ 10 ಜನಪ್ರಿಯ ಮಾಂಸಾಹಾರ ಖಾದ್ಯಗಳ ಬಗ್ಗೆ ಇಲ್ಲಿ ತಿಳಿಯಿರಿ.
- ನೀವು ಮಾಂಸಾಹಾರ ಪ್ರಿಯರಾಗಿದ್ದರೆ, ಕರ್ನಾಟಕದ ಪ್ರಸಿದ್ಧ ಆಹಾರಗಳನ್ನು ನೀವು ಟ್ರೈ ಮಾಡಲೇಬೇಕು. ಒಂದು ಬಾರಿ ಸವಿದರೆ ನಿಮಗೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಹಾಗಾದರೆ ಕರ್ನಾಟಕದ 10 ಜನಪ್ರಿಯ ಮಾಂಸಾಹಾರ ಖಾದ್ಯಗಳ ಬಗ್ಗೆ ಇಲ್ಲಿ ತಿಳಿಯಿರಿ.
ಕರ್ನಾಟಕವು ಭಾರತದ ಆಗ್ನೇಯ ಕರಾವಳಿಯಲ್ಲಿರುವ ಬಹಳ ಸುಂದರವಾದ ರಾಜ್ಯ. ಇಲ್ಲಿನ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಪಾಕಪದ್ಧತಿ ಸೇರಿದಂತೆ ಬಹಳ ವಿಶಿಷ್ಟತೆಯನ್ನು ಹೊಂದಿದೆ. ಕರ್ನಾಟಕದ ಪಾಕಶಾಲೆಯ ಸಂಸ್ಕೃತಿಯು ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಿಂದ ಹೆಚ್ಚಾಗಿ ಪ್ರಭಾವಿತವಾಗಿದೆ. ಆದರೂ, ಕರ್ನಾಟಕವು ತನ್ನದೇ ಆದ ಗುರುತು, ವಿಭಿನ್ನತೆ ಮತ್ತು ಜನಪ್ರಿಯತೆಯನ್ನು ಹೊಂದಿದೆ. ಕರ್ನಾಟಕದ ಆಹಾರ ಪದಾರ್ಥಗಳು ಬಹಳ ವಿಶಿಷ್ಟವಾಗಿದ್ದು, ಇಲ್ಲಿನ ಪಾಕಪದ್ಧತಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತವೆ. ಮಂಗಳೂರು ಮತ್ತು ಉತ್ತರ ಕನ್ನಡದಂತಹ ಕರಾವಳಿ ಪ್ರದೇಶಗಳು ವಿಭಿನ್ನ ಶೈಲಿಯ ಪಾಕಪದ್ಧತಿಯನ್ನು ಹೊಂದಿದ್ದರೆ, ದಕ್ಷಿಣ ಕರ್ನಾಟಕವು ವಿವಿಧ ರೀತಿಯ ಬಾತ್‍ಗೆ ಜನಪ್ರಿಯವಾಗಿದೆ. ಉತ್ತರ ಕರ್ನಾಟಕವು ಜೋಳದ ರೊಟ್ಟಿ, ಖಾರವಿರುವ ಮಸಾಲೆಯುಕ್ತ ಖಾದ್ಯಗಳಿಗೆ ಜನಪ್ರಿಯತೆ ಪಡೆದಿದೆ.
ನೀವು ಮಾಂಸಾಹಾರ ಪ್ರಿಯರಾಗಿದ್ದರೆ, ಕರ್ನಾಟಕದ ಪ್ರಸಿದ್ಧ ಆಹಾರಗಳನ್ನು ನೀವು ಟ್ರೈ ಮಾಡಲೇಬೇಕು. ಒಂದು ಬಾರಿ ಸವಿದರೆ ನಿಮಗೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಹಾಗಾದರೆ ಕರ್ನಾಟಕದ 10 ಜನಪ್ರಿಯ ಮಾಂಸಾಹಾರ ಖಾದ್ಯಗಳ ಬಗ್ಗೆ ಇಲ್ಲಿ ತಿಳಿಯಿರಿ.
ಕರ್ನಾಟಕದ ಪ್ರಸಿದ್ಧ 10 ಮಾಂಸಾಹಾರ ಖಾದ್ಯಗಳು
ಕೋರಿ ಗಸಿ: ಮಂಗಳೂರು ಪ್ರದೇಶ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಖಾದ್ಯ ತುಂಬಾನೇ ಫೇಮಸ್. ಸ್ಥಳೀಯ ತುಳು ಭಾಷೆಯಲ್ಲಿ ಕೋರಿ ಎಂದರೆ ಕೋಳಿ ಮತ್ತು ಗಸಿ ಎಂದರೆ ಕರಿ ಎಂದರ್ಥ. ಈ ತೆಂಗಿನಕಾಯಿ ಸೇರಿಸಿ ಮಾಡುವ ಕೋಳಿ ಸಾಂಬಾರ್ (ಕೋರಿ ಗಸಿ) ಅನ್ನು ಸಾಮಾನ್ಯವಾಗಿ ನೀರು ದೋಸೆ, ಒತ್ತು ಶ್ಯಾವಿಗೆ ಅನ್ನ ಅಥವಾ ರೊಟ್ಟಿಯೊಂದಿಗೆ ಬಡಿಸಲಾಗುತ್ತದೆ. ಇದು ಭಾರತೀಯ ಪಾಕಪದ್ಧತಿಯ ವೈವಿಧ್ಯಮಯ ರುಚಿಗಳನ್ನು ಮೆಚ್ಚುವವರಿಗೆ ಪರಿಪೂರ್ಣ ಆಹಾರವಾಗಿದೆ.
ಕುಂದಾಪುರ ಕೋಳಿ ಸಾರು: ಕರ್ನಾಟಕದ ಸಾಂಪ್ರದಾಯಿಕ ಆಹಾರವಾದ ಕುಂದಾಪುರ ಕೋಳಿ ಸಾರು ಮತ್ತೊಂದು ರೀತಿಯ ಚಿಕನ್ ಕರಿಯಾಗಿದ್ದು, ಇದನ್ನು ಮಸಾಲೆಗಳು ಮತ್ತು ತೆಂಗಿನ ಹಾಲಿನ ವಿಂಗಡಣೆಯಿಂದ ತಯಾರಿಸಲಾಗುತ್ತದೆ. ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯ ಸುವಾಸನೆಯು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ದೋಸೆ ಅಥವಾ ಅನ್ನಕ್ಕೆ ಸವಿಯಲು ಬಹಳ ರುಚಿಕರವಾಗಿರುತ್ತದೆ.
ದೊನ್ನೆ ಬಿರಿಯಾನಿ: ಇದು ಬೆಂಗಳೂರು ನಗರದಲ್ಲಿ ಬಹಳ ಜನಪ್ರಿಯವಾಗಿದ್ದು, ಚಿಕನ್ ತುಂಡುಗಳಿಗೆ ನಿಂಬೆರಸ, ಉಪ್ಪು, ಅರಶಿನ ಮತ್ತು ಮೊಸರು ಸೇರಿಸಿ ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ ತಯಾರಿಸಲಾಗುತ್ತದೆ. ಮಸಾಲೆಗಳು, ದಾಲ್ಚಿನ್ನಿ, ಏಲಕ್ಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಕ್ಕಿ ಎಲ್ಲವನ್ನೂ ಮಿಶ್ರಣ ಮಾಡಿ ನೀರು ಹಾಕಿ ಮುಚ್ಚಿಟ್ಟು ತಯಾರಿಸಲಾಗುತ್ತದೆ. ರಾಯಿತಾದೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.
ಮಂಡ್ಯ ಶೈಲಿ ನಾಟಿ ಕೋಳಿ ಸಾರು: ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗಗಳಲ್ಲಿ ಮುದ್ದೆ ನಾಟಿ ಕೋಳಿ ಸಾಂಬಾರ್ ಅಡುಗೆಗೆ ಬಹಳ ಪ್ರಾಮುಖ್ಯತೆ ಇದೆ. ಮಸಾಲೆಗಳು, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಶಿನ, ತೆಂಗಿನಕಾಯಿ, ಗಸಗಸೆ ಇತ್ಯಾದಿ ಸೇರಿಸಿ ಕೋಳಿ ಸಾರನ್ನು ತಯಾರಿಸಲಾಗುತ್ತದೆ. ಅನ್ನ ಅಥವಾ ರಾಗಿ ಮುದ್ದೆಗೆ ಇದು ಬೆಸ್ಟ್ ಕಾಂಬಿನೇಷನ್.
ಕೂರ್ಗ್ ಶೈಲಿ ಪಂದಿ ಕರಿ: ಪಂದಿ ಅಂದ್ರೆ ಹಂದಿ ಎಂದರ್ಥ. ಕೊಡಗಿನಲ್ಲಿ ಹಂದಿಮಾಂಸದ ಖಾದ್ಯ ಬಹಳ ಫೇಮಸ್. ಈ ಹಂದಿಮಾಂಸ ಆಧಾರಿತ ಖಾದ್ಯವು ಕರ್ನಾಟಕದ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಒಂದಾಗಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಇಷ್ಟಪಡುವ ಕೂರ್ಗ್‌ನಲ್ಲಿ ಇದು ಬಹಳ ಜನಪ್ರಿಯವಾಗಿದೆ. ಮಾಂಸವನ್ನು ವಿಶೇಷ ಮಸಾಲಾದಲ್ಲಿ ಬೇಯಿಸಲಾಗುತ್ತದೆ. ಇದನ್ನು ಸ್ಥಳೀಯ ಮಸಾಲೆಗಳಿಂದ ತಯಾರಿಸಲಾಗುತ್ತದೆ ಮತ್ತು ಗಾಢ ಬಣ್ಣವನ್ನು ಹೊಂದಿರುತ್ತದೆ. ಅದರಲ್ಲೂ ಹುಳಿ ರುಚಿಗೆ ಕಚಂಪೂಲಿ ಹಾಕಿ ತಯಾರಿಸಲಾಗುತ್ತದೆ. ಇದು ಸುಂದರವಾದ ಪರಿಮಳ ಮತ್ತು ರುಚಿಯನ್ನು ನೀಡುತ್ತದೆ.
ಕೋಳಿ ಸುಕ್ಕಾ: ಇದು ಕೂಡ ಕರ್ನಾಟಕದ ಕರಾವಳಿ ಭಾಗದಲ್ಲಿ ತುಂಬಾ ಜನಪ್ರಿಯವಾಗಿರುವ ಖಾದ್ಯವಾಗಿದೆ. ಚಿಕನ್ ಸುಕ್ಕಾವನ್ನು ಹಲವು ಮಸಾಲೆಗಳನ್ನು ಪುಡಿ ಮಾಡಿ ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನತುರಿಯನ್ನು ಹುರಿದು ಅದರ ಮೇಲೆ ಹಾಕಿ ಮಿಶ್ರಣ ಮಾಡಿದರೆ ಕೋಳಿ ಸುಕ್ಕಾ ಸವಿಯಲು ಸಿದ್ಧ. ನೀರು ದೋಸೆ ಜತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.
ತಲೆಮಾಂಸ ಫ್ರೈ: ಮಂಡ್ಯ, ಮೈಸೂರು ಭಾಗದಲ್ಲಿ ಬಹಳ ಪ್ರಸಿದ್ಧವಾಗಿರುವ ಮಟನ್, ಗುಡ್ಡೆಮಾಂಸ, ತಲೆಮಾಂಸ ಬಹಳ ಜನಪ್ರಿಯವಾಗಿದೆ. ಶುಂಠಿ, ಲವಂಗ, ವಿವಿಧ ಮಸಾಲೆಗಳು, ಉಪ್ಪು, ಕೊತ್ತಂಬರಿ ಸೊಪ್ಪು, ಸೇರಿಸಿ ತಯಾರಿಸಲಾಗುತ್ತದೆ.
ಕೂರ್ಗಿ ಶೈಲಿಯ ಚಿಕನ್ ಕರಿ: ಕೊಡಗು ಶೈಲಿಯ ಚಿಕನ್ ಕರಿಯಲ್ಲಿ ಹುಳಿಯ ರುಚಿಗಾಗಿ ಕಚಂಪುಲಿ ಬಳಕೆ ಮಾಡಲಾಗುತ್ತದೆ. ಇದು ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ಕೂರ್ಗಿ ಶೈಲಿಯ ಚಿಕನ್ ಕರಿಯನ್ನು ಕೂರ್ಗ್ ಸ್ಟೈಲ್ ಕಡುಂಬುಟ್ಟು ಅಥವಾ ಅಕ್ಕಿ ರೊಟ್ಟಿ ಅಥವಾ ಅನ್ನದೊಂದಿಗೆ ಬಡಿಸಲಾಗುತ್ತದೆ.
ಬೂತಾಯಿ/ಬಾಂಗಡೆ ಪುಳಿಮುಂಚಿ: ಇದು ಕರಾವಳಿ ಶೈಲಿಯ ಪ್ರಸಿದ್ಧ ಮೀನು ಖಾದ್ಯವಾಗಿದ್ದು, ಬ್ಯಾಡಗಿ ಮೆಣಸು, ಧನಿಯ, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ, ಅರಶಿನ, ಹುಣಸೆಹಣ್ಣಿನ ಹುಳಿ ಇತ್ಯಾದಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಕಡುಬು, ದೋಸೆ ಜತೆ ಸವಿಯಲು ರುಚಿಕರವಾಗಿರುತ್ತದೆ.
ಮಟನ್ ಕಾಲು ಸೂಪ್: ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಈ ಕುರಿ ಅಥವಾ ಮೇಕೆಯಿಂದ ತಯಾರಿಸಿದ ಮಟನ್ ಕಾಲು ಸೂಪ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದು ಪ್ರೋಟೀನ್ಗಳು, ಕಾಲಜನ್, ವಿಟಮಿನ್ ಬಿ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವುಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಇವೆಲ್ಲಾ ಕರ್ನಾಟಕದ 10 ಪ್ರಸಿದ್ಧ ಮಾಂಸಾಹಾರಿ ಖಾದ್ಯಗಳಾಗಿವೆ. ಇವುಗಳಲ್ಲಿ ಕೆಲವನ್ನು ನೀವು ಇನ್ನೂ ಟ್ರೈ ಮಾಡಿಲ್ಲವಾದರೆ ಪ್ರಯತ್ನಿಸಬಹುದು. ಖಂಡಿತಾ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.