ಚಿಕನ್ ಪ್ರಿಯರಿಗಾಗಿ ಇಲ್ಲಿದೆ ರಾಯಲಸೀಮೆ ಶೈಲಿಯ ನಾಟಿಕೋಳಿ ಸಾರು ರೆಸಿಪಿ, ಇದನ್ನು ಒಮ್ಮೆ ತಿಂದ್ರೆ ಮತ್ತೆ ಮತ್ತೆ ಮಾಡಿ ತಿಂತೀರಿ
ನಾಟಿ ಕೋಳಿ ಸಾರು, ಬಿಸಿ ರಾಗಿ ಮುದ್ದೆ ಇದರ ಟೇಸ್ಟ್ ಬಗ್ಗೆ ತಿಂದವರಿಗಷ್ಟೇ ಗೊತ್ತು. ನಾಟಿ ಕೋಳಿ ಸಾರನ್ನು ರಾಯಲಸೀಮೆ ಸ್ಟೈಲ್‌ನಲ್ಲಿ ಒಮ್ಮೆ ನಿಮ್ಮನೆಯಲ್ಲೂ ಮಾಡಿ ನೋಡಿ. ಇದರ ರುಚಿಗೆ ಮನೆಮಂದಿಯೆಲ್ಲಾ ಫಿದಾ ಆಗ್ತೀರಾ, ಮಾತ್ರವಲ್ಲ ಮತ್ತೆ ಮತ್ತೆ ಮಾಡಿ ತಿನ್ನೋದು ಪಕ್ಕಾ.
ನಾನ್‌ವೆಜ್ ಇಷ್ಟಪಡುವವರಲ್ಲಿ ಬಹುಪಾಲು ಚಿಕನ್ ಪ್ರಿಯರು. ಅದರಲ್ಲೂ ನಾಟಿ ಕೋಳಿ ಅಂದ್ರೆ ಆಹಾ, ಅದರ ರುಚಿಯೇ ಬೇರೆ. ನಾಟಿಕೋಳಿ ಅಥವಾ ಊರು ಕೋಳಿ ಮಾಂಸದಿಂದ ಖಾದ್ಯಗಳನ್ನ ತಯಾರಿಸಿದ್ರೆ ಅದರ ರುಚಿಗೆ ಸಾಟಿಯಿಲ್ಲ. ನಾಳಿ ಕೋಳಿ ಸಾರಿಗೆ ರಾಗಿ ಮುದ್ದೆ ಬೆಸ್ಟ್ ಕಾಂಬಿನೇಷನ್. ಸಾಮಾನ್ಯವಾಗಿ ನೀವು ಒಂದೇ ರುಚಿಯ ನಾಟಿ ಕೋಳಿ ಸಾರು ತಿಂದಿರುತ್ತೀರಿ. ಈ ಬಾರಿ ಹೊಸ ರುಚಿ ಬೇಕು ಅಂದ್ರೆ ರಾಯಲಸೀಮೆ ಸ್ಟೈಲ್‌ನಲ್ಲಿ ನಾಟಿ ಕೋಳಿ ಸಾರು ಮಾಡಿ. ರಾಯಲಸೀಮೆ ಸ್ಟೈಲ್‌ನ ನಾಟಿ ಕೋಳಿ ಸಾರಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಈ ನಾಟಿ ಕೋಳಿ ಸಾರು ಮಾಡೋದು ಸುಲಭ ಆದ್ರೂ ಇದರ ರುಚಿ ಮಾತ್ರ ಅದ್ಭುತ. ಈ ಭಾನುವಾರ ಆಗಿಲ್ಲ ಅಂದ್ರೆ ಮುಂದಿನ ಭಾನುವಾರಕ್ಕಾದ್ರೂ ಒಮ್ಮೆ ರಾಯಲಸೀಮೆ ಸ್ಟೈಲ್‌ನಲ್ಲಿ ನಾಟಿ ಕೋಟಿ ಸಾರು ಮಾಡಿ, ತಿನ್ನಿ. ರೆಸಿಪಿ ನಾವು ಹೇಳಿ ಕೊಡ್ತೀವಿ.
ರಾಯಲಸೀಮೆ ಸ್ಟೈಲ್ ನಾಟಿ ಕೋಳಿ ಸಾರು
ಬೇಕಾಗುವ ಸಾಮಗ್ರಿಗಳು: ನಾಟಿಕೋಳಿ – ಅರ್ಧ ಕೆಜಿ, ಈರುಳ್ಳಿ – 2, ಹಸಿಮೆಣಸಿನಕಾಯಿ – 2ರಿಂದ 3, ಟೊಮೆಟೊ: 1, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀ ಚಮಚ, ಮೆಣಸಿನ ಪುಡಿ – 1 ಟೀ ಚಮಚ, ಅರಿಶಿನ – 1/2 ಟೀ ಚಮಚ, ಕೊತ್ತಂಬರಿ ಪುಡಿ – 2 ಟೀ ಚಮಚ, ಜೀರಿಗೆ ಪುಡಿ – 1 ಟೀ ಚಮಚ, ಗರಂ ಮಸಾಲಾ – 1 ಟೀ ಚಮಚ, ಉಪ್ಪು – ರುಚಿಗೆ ತಕ್ಕಂತೆ (ಕಲ್ಲು ಉಪ್ಪು ಉತ್ತಮ), ನಿಂಬೆ ರಸ – 1 ಟೇಬಲ್ ಚಮಚ, ಎಣ್ಣೆ – 4 ಟೀ ಚಮಚ, ನೀರು – 1ರಿಂದ 2 ಗ್ಲಾಸ್, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು – ಸ್ವಲ್ಪ
ನಾಟಿ ಕೋಳಿ ಸಾರು ಮಾಡುವ ವಿಧಾನ
ನಾಟಿ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಕಲ್ಲು ಉಪ್ಪು, ಸ್ವಲ್ಪ ಅರಿಸಿನ, ಖಾರದಪುಡಿ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಕರಿಬೇವು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಈಗ ಕೋಳಿ ಮಾಂಸಕ್ಕೆ ಉತ್ತಮ ಮಸಾಲೆ ಸಿಗುತ್ತದೆ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಹೊತ್ತು ಬದಿಗಿರಿಸಿ. ಸ್ಟೌ ಆನ್ ಮಾಡಿ ಅದರ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಬಿಸಿ ಮಾಡಿ. (ಸಾಮಾನ್ಯವಾಗಿ ನಾಟಿಕೋಳಿ ತುಂಡುಗಳನ್ನು ಬಿಸಿ ಮಾಡಿದಾಗ ಸ್ವಲ್ಪ ಎಣ್ಣೆ ಬರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಎಣ್ಣೆಯನ್ನು ಬಳಸಿ). ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಬೇಕಿದ್ದರೆ ದಾಲ್ಚಿನ್ನಿ ಎಲೆ ಸೇರಿಸಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ಹಸಿಮೆಣಸು, ಕರಿಬೇವು ಸೇರಿಸಿ, ಎರಡು ನಿಮಿಷಗಳ ಕಾಲ ಇದನ್ನು ಹುರಿದುಕೊಳ್ಳಿ. ಅದಕ್ಕೆ ಸ್ವಲ್ಪ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಬೆಂದ ನಂತರ ನಾಟಿ ಕೋಳಿ ತುಂಡುಗಳನ್ನು ಕುಕ್ಕರ್‌ಗೆ ಹಾಕಿ.
ಕನಿಷ್ಠ 5-6 ನಿಮಿಷಗಳ ಕಾಲ ಚಿಕನ್ ಅನ್ನು ಫ್ರೈ ಮಾಡಿ, ಆಗ ನಾಟಿ ಕೋಳಿ ಎಣ್ಣೆ ಬಿಡುವುದನ್ನು ನೀವು ಗಮನಿಸಬಹುದು. ನಾಟಿ ಕೋಳಿ ಮಾಂಸ ಒಂದೈದು ನಿಮಿಷ ಫ್ರೈ ಮಾಡಿದ ನಂತರ ಹಸಿಮೆಣಸು, ಕೊತ್ತಂಬರಿ ಪುಡಿ, ಅರಿಸಿನಿ, ಟೊಮೆಟೊ ಸೇರಿಸಿ. ಇದನ್ನು ಒಂದು ಮೂರು ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಕಾಳುಮೆಣಸಿನ ಪುಡಿ ಸೇರಿಸಿ ಕನಿಷ್ಠ 5 ನಿಮಿಷ ಫ್ರೈ ಮಾಡಿ. ಅದಕ್ಕೆ 1 ರಿಂದ 2 ಗ್ಲಾಸ್ ನೀರು ಸೇರಿಸಿ, ಕುಕ್ಕರ್ ಮುಚ್ಚಿ. ನಾಟಿ ಕೋಳಿ ಬೇಗ ಬೇಯುವುದಿಲ್ಲವಾದ ಕಾರಣ 3 ರಿಂದ 4 ಸೀಟಿ ಹೊಡೆಸಿ. ಸ್ಟೌ ಆಫ್ ಮಾಡಿ ಕುಕ್ಕರ್ ತಣ್ಣದಾಗ ಮೇಲೆ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಉದುರಿಸಿ. ಅದನ್ನು ಮಿಕ್ಸ್ ಮಾಡಿ. ಈ ನಿಮ್ಮ ಮುಂದೆ ರಾಯಲಸೀಮೆ ಶೈಲಿಯ ನಾಟಿ ಕೋಳಿ ಸಾರು ತಿನ್ನಲು ಸಿದ್ಧ. ಇದು ಅನ್ನ, ದೋಸೆ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.