ನಾನ್‌ವೆಜ್ ಪ್ರಿಯರಿಗಾಗಿ ಇಲ್ಲಿದೆ ಆಂಧ್ರ ಸ್ಟೈಲ್ ಚಿಕನ್ ಫ್ರೈ ರೆಸಿಪಿ; ಒಮ್ಮೆ ತಿಂದ್ರೆ ಖಂಡಿತ ನೀವು ಮತ್ತೆ ಬೇಕು ಅಂತೀರಿ
ನೀವು ವಿವಿಧ ರೀತಿಯ ಚಿಕನ್ ಫ್ರೈಗಳನ್ನು ತಿಂದಿರಬಹುದು. ಆದರೆ ಎಂದಾದ್ರೂ ಆಂಧ್ರ ಸ್ಟೈಲ್ ಚಿಕನ್ ಫ್ರೈ ತಿಂದಿದ್ದೀರಾ, ಸಾಂಪ್ರದಾಯಿಕ ಶೈಲಿಯ ಈ ಚಿಕನ್ ಫ್ರೈ ರೆಸಿಪಿ ಖಾರ ಖಾರವಾಗಿದ್ದು ಸಖತ್ ಟೇಸ್ಟಿ ಆಗಿರುತ್ತೆ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು, ರೆಸಿಪಿ ಇಲ್ಲಿದೆ.
ಭಾನುವಾರ ಬಂತೆಂದರೆ ಬಹುತೇಕರು ಮನೆಯಲ್ಲೇ ಚಿಕನ್ ಖಾದ್ಯಗಳನ್ನು ಮಾಡಿ ತಿನ್ನಲು ಇಷ್ಟಪಡುತ್ತಾರೆ. ಯಾವಾಗಲೂ ಚಿಕನ್ ಸಾರು, ಕಬಾಬ್, ಬಿರಿಯಾನಿ ತಿಂದು ಬೋರ್ ಆದ್ರೆ ಚಿಕನ್ ಫ್ರೈ ಟ್ರೈ ಮಾಡಬಹುದು. ಇದು ಆಂಧ್ರ ಸ್ಟೈಲ್ ಚಿಕನ್ ಫ್ರೈ ರೆಸಿಪಿ. ಇದನ್ನು ದಾಲ್, ಸಾಂಬಾರ್, ರಸಂ ಮಾಡಿದಾಗ ನೆಂಜಿಕೊಂಡು ತಿನ್ನಲು ಸಖತ್ ಆಗಿರುತ್ತೆ. ದೋಸೆ, ಪುಲ್ಕಾ, ಚಪಾತಿ ಜೊತೆಗೂ ಇದು ಮಸ್ತ್ ಕಾಂಬಿನೇಷನ್ ಅನ್ನಿಸುತ್ತೆ. ಹಾಗಾದರೆ ಆಂಧ್ರ ಸ್ಟೈಲ್ ಚಿಕನ್ ಫ್ರೈ ಮಾಡಲು ಏನೆಲ್ಲಾ ಬೇಕು, ಇದನ್ನ ಮಾಡೋದು ಹೇಗೆ ನೋಡಿ.
ಆಂಧ್ರ ಸ್ಟೈಲ್ ಚಿಕನ್ ಫ್ರೈ
ಬೇಕಾಗುವ ಸಾಮಗ್ರಿಗಳು: ಚಿಕನ್ – 1 ಕೆಜಿ, ಎಣ್ಣೆ – 5 ಚಮಚ, ಈರುಳ್ಳಿ – 3 ಚಿಕ್ಕದಾಗಿ ಹೆಚ್ಚಿದ್ದು, ಹಸಿಮೆಣಸು – 3, ಕೊತ್ತಂಬರಿ – 1 ಚಮಚ, ಒಣಮೆಣಸು – 4, ಕಾಳುಮೆಣಸು – ಅರ್ಧ ಟೀ ಚಮಚ, ಏಲಕ್ಕಿ – 2, ಲವಂಗ – 4, ದಾಲ್ಚಿನ್ನಿ – ಸಣ್ಣ ತುಂಡು, ಸೋಂಪು – ಅರ್ಧ ಚಮಚ, ಜೀರಿಗೆ – ಅರ್ಧ ಚಮಚ, ಅರಿಸಿನ – ಚಿಟಿಕೆ, ಖಾರದಪುಡಿ – 1ಚಮಚ, ಕೊತ್ತಂಬರಿ ಪುಡಿ – 1/2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಉಪ್ಪು – ರುಚಿಗೆ ತಕ್ಕಂತೆ
ಆಂಧ್ರ ಸ್ಟೈಲ್ ಚಿಕನ್ ಫ್ರೈ ಮಾಡುವ ವಿಧಾನ
ಸ್ಕಿನ್ ಔಟ್ ಚಿಕನ್ ತುಂಡುಗಳನ್ನು ತೆಗೆದುಕೊಳ್ಳಬೇಕು, ಮೂಳೆ ಸಹಿತವಾಗಿದ್ದರೆ ಉತ್ತಮ. ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ. ನಂತರ ನೀರು ಚೆನ್ನಾಗಿ ಆರುವಂತೆ ನೋಡಿಕೊಳ್ಳಿ. ಅದಕ್ಕೆ ಅರಿಸಿನ ಪುಡಿ, ಖಾರದಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ 25 ರಿಂದ 30 ನಿಮಿಷಗಳವರೆಗೆ ಮ್ಯಾರೆನೇಟ್ ಆಗಲು ಬಿಡಿ.
ಫ್ರೈ ಮಸಾಲ ತಯಾರಿಸುವುದು: ಒಲೆ ಹೊತ್ತಿಸಿ ಬಾಣಲೆ ಇಟ್ಟು ಕಾದ ಮೇಲೆ ಒಂದು ಚಮಚ ಕೊತ್ತಂಬರಿ, ಅರ್ಧ ಚಮಚ ಕಾಳುಮೆಣಸು, ನಾಲ್ಕು ಲವಂಗ, ಸ್ವಲ್ಪ ದಾಲ್ಚಿನ್ನಿ, ಅರ್ಧ ಚಮಚ ಸೋಂಪು, ಅರ್ಧ ಚಮಚ ಜೀರಿಗೆ ಹಾಕಿ ಮಧ್ಯಮ ಉರಿಯಲ್ಲಿ ಕನಿಷ್ಠ 2 ನಿಮಿಷ ಫ್ರೈ ಮಾಡಿ. ಯಾವುದೇ ಕಾರಣಕ್ಕೂ ಕಪ್ಪಾಗದಂತೆ ನೋಡಿಕೊಳ್ಳಿ. ಕೊನೆಯಲ್ಲಿ ಒಣ ಮೆಣಸು ಹುರಿದುಕೊಳ್ಳಿ. ಈ ಎಲ್ಲವನ್ನೂ ಮಿಕ್ಸಿಗೆ ಜಾರಿಗೆ ಹಾಕಿ, ಇದರ ಜೊತೆ ಕಲ್ಲುಪ್ಪು ಕೂಡ ಸೇರಿಸಿ, ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಿ.
ಚಿಕನ್ ಫ್ರೈ ಮಾಡುವ ವಿಧಾನ: ಒಲೆ ಹೊತ್ತಿಸಿ ಬಾಣಲೆ ಇಡಿ. ಅದಕ್ಕೆ ಐದು ಚಮಚ ಎಣ್ಣೆ ಹಾಕಿ, ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಕನಿಷ್ಠ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ತಾಜಾ ಕರಿಬೇವಿನ ಎಲೆ ಸೇರಿಸಿ. ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಕನಿಷ್ಠ 2 ನಿಮಿಷಗಳ ಕಾಲ ಹುರಿಯಿರಿ. ಅದರ ನಂತರ ಮುಚ್ಚಳವನ್ನು ಹಾಕಿ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಚಿಕನ್ ತುಂಡುಗಳು ಚೆನ್ನಾಗಿ ಬೆಂದಿದೆ ಎನ್ನಿಸಿದ ಮೇಲೆ ಅದಕ್ಕೆ ಹೆಚ್ಚಿದ ಹಸಿಮೆಣಸು ಹಾಗೂ ಸ್ವಲ್ಪ ಕರಿಬೇವು ಸೇರಿಸಿ. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡ ಮಿಶ್ರಣ ಹಾಕಿ. ಅವುಗಳನ್ನು ಕಡಿಮೆ ಉರಿಯಲ್ಲಿ ಕನಿಷ್ಠ 2 ನಿಮಿಷಗಳ ಕಾಲ ಫ್ರೈ ಮಾಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ ಸಖತ್ ಟೇಸ್ಟಿ ಆಗಿರುವ ಆಂಧ್ರ ಸ್ಟೈಲ್ ಚಿಕನ್ ಫ್ರೈ ತಿನ್ನಲು ಸಿದ್ಧ. ಇದಕ್ಕೆ ಕೊಂಚ ನಿಂಬೆರಸ ಹಿಂಡಿ ತಿಂದರೆ ಆಹಾ ಸ್ವರ್ಗ ಸುಖ. ಮೊದಲೇ ಹೇಳಿದಂತೆ ಇದರ ರುಚಿ ಮೊನ್ನೆ ತಿಂದರೆ ನೀವು ಮರೆಯುವುದಿಲ್ಲ.