Environment Day: ತ್ಯಾಜ್ಯ ನಿರ್ವಹಣೆಗೆ ಹೆಸರುವಾಸಿ ವಾಣಿ ಮೂರ್ತಿ; ಹಸಿಕಸದಿಂದ ಗೊಬ್ಬರ ತಯಾರಿಸುವ ಇವರ ಪರಿಸರ ಕಾಳಜಿ ಸರ್ವರಿಗೂ ಸ್ಫೂರ್ತಿ
Vani Murthy: ಬೆಂಗಳೂರಿನ ವಾಣಿ ಮೂರ್ತಿ ತ್ಯಾಜ್ಯ ನಿರ್ವಹಣೆಗೆ ಹೆಸರುವಾಸಿ. ಹಸಿ ಕಸವನ್ನು ಮನೆಯಲ್ಲೇ ಗೊಬ್ಬರ ಮಾಡಿ ಗಿಡ ಬೆಳೆಸುವ ಮೂಲಕ ಪರಿಸರ ಕಾಳಜಿ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಜಾಗೃತಿ ಕುರಿತು ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇಲ್ಲಿದೆ ʼವರ್ಮ್ ರಾಣಿʼಯ ಪರಿಸರ ಕಾಳಜಿಯ ಕಥೆ.
60 ವರ್ಷದ ಗೃಹಿಣಿ ಈಗ ಚೇಂಜ್ ಮೇಕರ್. ಯುವಜನಾಂಗದ ಆದರ್ಶ. ಪರಿಸರದ ಬಗ್ಗೆ ಅರಿವು ಮೂಡಿಸುತ್ತಾ ಗೃಹಿಣಿಯರನ್ನು ಪ್ರೇರೇಪಿಸುತ್ತಿರುವ ವಾಣಿ ಮೂರ್ತಿ ಸಾಧಕಿಯೂ ಹೌದು. ಮನೆಯಲ್ಲಿಯೇ ಉತ್ಪತ್ತಿಯಾಗುವ ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡಿಕೊಂಡು ಮನೆಯಲ್ಲೇ ಸೊಪ್ಪು, ತರಕಾರಿ, ಹೂವು ಬೆಳೆಯುತ್ತಾ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಆದ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಮಹಿಳೆಯರ ಮನ ಗೆದ್ದಿದ್ದಾರೆ. ವಿಶ್ವ ಪರಿಸರ ದಿನಕ್ಕೊಂದು ಸ್ಫೂರ್ತಿಯ ಮಹಿಳೆ.
ಸಾಮಾಜಿಕ ಜಾಲತಾಣದ ʼವರ್ಮ್ ರಾಣಿʼ
ಇನ್‌ಸ್ಟಾಗ್ರಾಮ್‌ನಲ್ಲಿ ʼವರ್ಮ್ ರಾಣಿʼ ಎಂದೇ ಫೇಮಸ್ ಆಗಿರುವ ಅರವತ್ತು ವರ್ಷದ ವಾಣಿ ಮೂರ್ತಿ, ಮನೆಯಲ್ಲಿಯೇ ಸಿಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು ಹಾಗೂ ಪರಿಸರಕ್ಕೆ ಮಾರಕವಾಗುವಂತಹ ಪ್ಲಾಸ್ಟಿಕ್ ಬಳಸದೇ ಸುಸ್ಥಿರ ಸಮಾಜ ನಿರ್ಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಕಿರು ಮತ್ತು ಅರಿವು ಮೂಡಿಸುವ ವಿಡಿಯೊಗಳನ್ನು ಇನ್‌ಸ್ಟಾಗ್ರಾಂ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ಹಸಿ ಕಸದಿಂದ ಮನೆಯಲ್ಲೇ ಗೊಬ್ಬರ ತಯಾರಿಕೆ
2009ರಲ್ಲಿ ನಡೆದ ಘಟನೆ. ಮಾವಳ್ಳಿಪುರ ಮತ್ತು ಮಂಡೂರಿನಲ್ಲಿ ತ್ಯಾಜ್ಯಗಳ ರಾಶಿ, ವಿಲೇವಾರಿಯಾಗದೆ ಉಳಿದ ತ್ಯಾಜ್ಯವನ್ನು ಕಂಡ ವಾಣಿ ಮೂರ್ತಿ, ಅಂದಿನಿಂದಲೇ ತಮ್ಮ ಮನೆಯ ತ್ಯಾಜ್ಯವನ್ನು ತಾವೇ ನಿರ್ವಹಿಸಬೇಕು ಎಂದು ನಿರ್ಧರಿಸಿದರು. ಅಂದಿನಿಂದ ಇಂದಿನವರೆಗೂ ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ (ತರಕಾರಿ ಸಿಪ್ಪೆ) ವನ್ನು ಗೊಬ್ಬರವನ್ನಾಗಿ ಪರಿವರ್ತಿಸಿದ್ದಾರೆ. ತಮ್ಮ ಮನೆಯಲ್ಲಿಯೇ ನೂರಾರು ಗಿಡಗಳನ್ನು ಬೆಳೆಸಿದ್ದಾರೆ. ಸೊಪ್ಪು, ಕೆಲ ತರಕಾರಿ, ಹೂವುಗಳನ್ನು ಮನೆಯ ಕಾಂಪೌಂಡ್‌ನಲ್ಲಿಯೇ ಬೆಳೆಯುತ್ತಿದ್ದಾರೆ.
ತಾರಸಿ ಮೇಲಿನ ತೋಟ ಮಾಡುವುದು, ಗಿಡಗಳ ನಿರ್ವಹಣೆ, ಮರುಬಳಕೆ ಮಾಡುವಂತಹ ವಸ್ತುಗಳ ಬಳಕೆ ಸೇರಿದಂತೆ ಪರಿಸರಕ್ಕೆ ಮಾರಕವಾಗದಂತಹ ಚಟುವಟಿಕೆಗಳ ಬಗ್ಗೆ ಸಣ್ಣ ವಿಡಿಯೊಗಳನ್ನು ಮಾಡುವ ಮೂಲಕ ಅರಿವು ಮೂಡಿಸುತ್ತಿರುತ್ತಾರೆ ವಾಣಿ ಮೂರ್ತಿ. ಅವರ ಈ ಉತ್ಸಾಹ ಯುವಜನಾಂಗಕ್ಕೆ ಸ್ಫೂರ್ತಿ ನೀಡುತ್ತಿದೆ. 2007ರಲ್ಲಿ ಫೇಸ್‌ಬುಕ್‌ನಲ್ಲಿ ಅಕೌಂಟ್ ಆರಂಭಿಸಿ ಈ ಬಗ್ಗೆ ಅರಿವು ನೀಡಲು ಆರಂಭಿಸಿದರು. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊಗಳ ಪ್ರಸಾರ ಹಾಗೂ ಇವರು ಅರಿವು ಮೂಡಿಸುವ ವಿಧಾನ ಎಲ್ಲರಲ್ಲೂ ಉತ್ಸಾಹ ಮೂಡಿಸಿದೆ. ಇದರ ಪರಿಣಾಮ 2.8 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಗೊಬ್ಬರ ಏಕೆ ಮತ್ತು ಹೇಗೆ?
ಹಲವಾರು ಮಂದಿ ಗೊಬ್ಬರ ತಯಾರಿಸುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಬ್ಬು ವಾಸನೆ, ಸೊಳ್ಳೆ, ಕ್ರಿಮಿಗಳು ಬರುತ್ತದೆ. ಪ್ರತ್ಯೇಕ ಸ್ಥಳ ಬೇಕಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಇದ್ಯಾವುದೂ ಇಲ್ಲದೇ, ನಾವು ಇರುವ ಕಡೆಯೇ ಗೊಬ್ಬರ ತಯಾರಿಸಬಹುದು ಎನ್ನುತ್ತಾರೆ ವಾಣಿ ಮೂರ್ತಿ.
ನಮ್ಮ ಮನೆಯಲ್ಲಿಯೇ ಶೇ 60ರಷ್ಟು ಹಸಿ ತ್ಯಾಜ್ಯ ಸಿಗಲಿದ್ದು, ಇದನ್ನು ಮಣ್ಣಿಗೆ ಸೇರಿಸುವುದರಿಂದ ಪರಿಸರಕ್ಕೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಜೊತೆಗೆ ಗಾಳಿಯೂ ಕಲುಷಿತಗೊಳ್ಳುವುದಿಲ್ಲ. ತರಕಾರಿ ಸಿಪ್ಪೆಯೊಂದಿಗೆ ತೆಂಗಿನ ನಾರಿನ ಪುಡಿ, ಗಿಡ, ಮರಗಳ ಒಣಗಿದ ಎಲೆಗಳನ್ನು ಮಿಶ್ರಣ ಮಾಡಿ ಒಂದು ತಿಂಗಳ ಕಾಲ ಗಾಳಿಯಾಗುವ ಡಬ್ಬದಲ್ಲಿ ಹಾಕಿಡುವ ಮೂಲಕ ಗೊಬ್ಬರ ಉತ್ಪತ್ತಿಯಾಗುತ್ತದೆ. ಇದನ್ನು ಗಿಡ-ಮರಗಳಿಗೆ ಹಾಕಬಹುದು. ಉತ್ತಮ ಫಲ ಸಿಗಲಿದೆ. ರಾಸಾಯನಿಕ ಗೊಬ್ಬರದ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ.
ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್‌ನಲ್ಲಿ ಪ್ರಸಾರವಾಗುವ ʼಒನ್ ಫಾರ್ ಚೇಂಜ್ʼ ಅಭಿಯಾನದಲ್ಲಿ ಇವರು ಮೂಡಿಸುತ್ತಿರುವ ಅರಿವಿನ ವಿಡಿಯೊಗಳು ಹಾಗೂ ಇವರ ಸಂದರ್ಶನ ಪ್ರಸಾರವಾಗಿದೆ.
ವಿಶೇಷ ಲೇಖನ: ಅಕ್ಷರ ಕಿರಣ್