Forest Tales: ಜಲಾಶಯಗಳು ಖಾಲಿಯಾಗಿ, ಬೆಂಗಳೂರು ಜಲ ಸಂಕಟದ ನಂತರವಾದರೂ ಪರಿಸರ, ಅರಣ್ಯ ಪ್ರಣಾಳಿಕೆ ಬೇಡವೇ?
Environment in Manifesto: ಲೋಕಸಭೆ ಚುನಾವಣೆಗೆ ಪಕ್ಷಗಳ ಪ್ರಣಾಳಿಕೆ ಸಿದ್ದವಾಗುತ್ತಿದೆ. ಇದರಲ್ಲಿ ಅರಣ್ಯ, ಪರಿಸರ, ಹವಾಮಾನ ಬದಲಾವಣೆ, ಜಲಸಂಕಟದಂತಹ ವಿಷಯ ಗೌಣ.
ಬೆಂಗಳೂರಿನಲ್ಲಿ ಜನ ನೀರಿಗಾಗಿ ಇನ್ನಿಲ್ಲದ ಹಾಹಾಕಾರ ಅನುಭವಿಸುವ ಸನ್ನಿವೇಶ ಬಹಳ ವರ್ಷಗಳ ನಂತರ ಕಾಣುತ್ತಿದೆ. ಮಳೆಯಿಲ್ಲದೇ ಜಲಾಶಯಗಳು ಬರಿದಾಗಿ ಮುಗಿಲ ಕಡ ನೋಡುವ ಸನ್ನಿವೇಶ ಎಲ್ಲೆಲ್ಲೂ ಇದೆ. ಪರಿಸರದ ಸಮಸ್ಯೆ ದೆಹಲಿಯಂತ ನಗರದಲ್ಲಿ ಯಾವ ಮಟ್ಟ ತಲುಪಿದೆ ಎನ್ನುವುದನ್ನೂ ಕಂಡಿದ್ದೇವೆ. ನೀರಿಲ್ಲದೇ ಹಲವರು ಮೂಲ ಪ್ರದೇಶಕ್ಕೆ ವಲಸೆ ಹೋಗುವ ಪ್ರಸಂಗಗಳು ಕಣ್ಣ ಮುಂದೆ ಇವೆ. ಜನರ ಬಳಿ ದುಡ್ಡು, ಕಾರು, ಐಷರಾಮಿ ಕಟ್ಟಡ ಇರಬಹುದು. ನೀರು, ಗಾಳಿ, ಬೆಳಕು ಇಲ್ಲದೇ ಇದ್ದರೆ ಯಾವ ಹಣವೂ ಇದನ್ನೆಲ್ಲಾ ತಂದುಕೊಡಲಾಗದು. ಪ್ರಕೃತಿ ಮುನಿದರೆ ಪರಿಸ್ಥಿತಿ ಹೇಗಿರಲಿದೆ. ಭವಿಷ್ಯವೂ ಹೇಗೆ ಭೀಕರವಾಗಿರಬಹುದು ಎನ್ನುವ ಮುನ್ಸೂಚನೆ ಹಲವು ವರ್ಷಗಳಿಂದಲೇ ಸಿಕ್ಕಿದೆ. ಈ ಬಾರಿ ಮತ್ತೊಮ್ಮೆ ನೀರು, ಬರದ ನೆಪದಲ್ಲಿ ನೆನಪಿಸಿಕೊಟ್ಟಿದೆ ಪ್ರಕೃತಿ.
ಇದು ಬೆಂಗಳೂರು ಮಹಾನಗರವೊಂದರ ಕಥೆ ಅಲ್ಲವೇ ಅಲ್ಲ. ಭಾರತದ ಹಲವಾರು ನಗರಗಳು ಇಂತದೇ ಜಲ ಕ್ಷಾಮವನ್ನು ಎದುರಿಸುತ್ತಿವೆ. ಅರಣ್ಯ ಪ್ರದೇಶಗಳು, ನದಿಗಳ ಮೂಲ ಹಾಳಾಗಿ ಪರಿಸರ ಅಸಮತೋಲನದ ಕಾರಣದಿಂದ ಮಳೆ ಪ್ರಮಾಣವೂ ಕುಸಿದಿದೆ. ಅಂತರ್ಜಲ ಪ್ರಮಾಣವೂ ಗಣನೀಯವಾಗಿ ಕುಸಿತ ಕಂಡಿದೆ. ಶುದ್ದ ನೀರಿಗೆ ಬೇಡಿಕೆ ಹೆಚ್ಚಿದೆ. ಕಾಡು ಕಡಿದರೆ, ಪರಿಸರ ಹಾಳು ಮಾಡಿದರೆ ಅನುಭವಿಸಬೇಕಾದ ಕಷ್ಟವನ್ನು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಇದೆಲ್ಲವೂ ಬಾಯಿ ಮಾತಿನಂತೆಯೇ ಭಾರತೀಯರಿಗೆ ಕಾಣುತ್ತಿದೆ. ಕೋವಿಡ್ ಕಾಲದ ಸಂಕಟವನ್ನು ದಾಟಿ ಬಂದರೂ ಜನರ ಮನೋಭಾವದಲ್ಲಿ ಬದಲಾವಣೆ ಕಾಣುತ್ತಲೇ ಇಲ್ಲ.
ಭಾರತ ಅಭಿವೃದ್ದಿ ಹೊಂದುತ್ತಿರುವ ದೇಶ. ಇಲ್ಲಿ ಪ್ರಗತಿಯ ಜತೆ ಜತೆಯಲ್ಲಿಯೇ ಅನಾಹುತಗಳನ್ನು ಎದುರಿಸುತ್ತಲೇ ದೇಶ ಕಟ್ಟುವ ಕೆಲಸ ಆಗಲೇಬೇಕು. ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವುದು ಶುದ್ದ ಗಾಳಿ, ನೀರು. ಅದೂ ಹವಾಮಾನ ವೈಪರಿತ್ಯದ ಪರಿಣಾಮ ಅರಣ್ಯ, ಪರಿಸರದ ಮೇಲೆ ಎಗ್ಗಿಲ್ಲದೇ ಆಗಿದೆ. ಆಗುತ್ತಲೇ ಇದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಲೇ ಇದೆ.
ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ಜನರಿಗೆ ಏನು ಮಾಡುತ್ತೇವೆ ಎನ್ನುವ ಪ್ರಣಾಳಿಕೆಯನ್ನು ಮುಂದಿಡುತ್ತಿವೆ. ಭಾರತದ ವಹಿವಾಟು ತ್ರಿಲಿಯನ್ ಲೆಕ್ಕದಲ್ಲಿ ಹೇಳಲಾಗುತ್ತಿದೆ. ಹತ್ತಾರು ಮೂಲಸೌಕರ್ಯಗಳನ್ನು ಕೊಡುವ ಭರದಲ್ಲಿ ಪರಿಸರ, ಅರಣ್ಯ ಎನ್ನುವುದು ಕೆಲವು ಪಕ್ಷಗಳ ಆದ್ಯತೆಯಲ್ಲವೇ ಅಲ್ಲ. ಮತ್ತೆ ಕೆಲ ಪಕ್ಷಗಳಿಗೆ ಇದು ಕೊನೆಯ ಆದ್ಯತೆಯೂ ಆಗಿರಬಹುದು.
“ ಭಾರತದಲ್ಲಿ ಅದೆಷ್ಟೋ ವರ್ಷದಿಂದ ನಾವು ಅರಣ್ಯ, ಪರಿಸರದ ವಿಚಾರವನ್ನು ಆದ್ಯತೆಯಾಗಿಯೇ ಪರಿಗಣಿಸಿಲ್ಲ. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲೂ ಸೇರಿಸಿಲ್ಲ. ಗಣಿಗಾಗಿ ಅರಣ್ಯ ಪ್ರದೇಶವನ್ನು ಲೂಟಿ ಮಾಡುವ ನೀತಿ ರೂಪಿಸುವ ರಾಜಕೀಯ ನೇತಾರರಿಗೆ ಅದೇ ಅರಣ್ಯವನ್ನು ಉಳಿಸಬೇಕು ಎಂಬುದು ತಿಳಿದಿರಲಿಲ್ಲ. ಜಲ ಸಂಕಟ, ಹವಾಮಾನ ವೈಪರಿತ್ಯದ ಪರಿಣಾಮಗಳು ಎಂಟನೇ ತರಗತಿ ಮಕ್ಕಳಿಗೆ ತಿಳಿದಿರುವಾಗ ಅದನ್ನು ಅನುಭವಿಸುತ್ತಿರುವ ರಾಜಕೀಯ ಪಕ್ಷಗಳವರಿಗೂ ತಿಳಿದಿಲ್ಲ ಎಂದು ಹೇಳಲಾದೀತೆ, ಇವರಿಗೆಲ್ಲಾ ಅರಣ್ಯ ಸುಟ್ಟು ಹಾಕುವುದು, ಜಲ ಮೂಲ ಹಾಳು ಮಾಡುವುದಷ್ಟೇ ಗೊತ್ತಿದೆ. ಒಬ್ಬರೊಬ್ಬರು ಪರಸ್ಪರ ದೂಷಿಸಿಕೊಂಡು ಚುನಾವಣೆ ಎಂದರೆ ಇದೆನಾ ಎಂದು ಹೊಸ ತಲೆಮಾರಿನವರು ನೋಡುವಂತಹ ಸ್ಥಿತಿಯಾಗುತ್ತಿದೆ. ಅರಣ್ಯ ನಾಶದಿಂದ ತೊಂದರೆ ಅನುಭವಿಸುತ್ತಿರುವುದು ಕಣ್ಣ ಮುಂದೆ ಇರುವಾಗಲಾದರೂ ರಾಜಕೀಯ ಪಕ್ಷಗಳಿಗೆ ಅರಣ್ಯ, ಪರಿಸರವೂ ಆದ್ಯತೆಯಾಗಲಿದೆ. ಪ್ರಣಾಳಿಕೆಯಲ್ಲಿ ಸೇರಿಸಿ ಗಂಭೀರವಾಗಿ ಜಾರಿಗೊಳಿಸಲಿ” ಎನ್ನುವ ಸಲಹೆಯನ್ನು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಯಲ್ಲಪ್ಪರೆಡ್ಡಿ ನೀಡುತ್ತಾರೆ.
ಇದರ ಮಧ್ಯೆಯೇ ಪರಿಸರಕ್ಕಾಗಿ ನಾವು ಸಂಘಟನೆಯು ಇದೇ ನಿಟ್ಟಿನಲ್ಲಿ ಏಪ್ರಿಲ್ 6 ರ ಶನಿವಾರ ಬೆಂಗಳೂರಿನಲ್ಲಿ ಸಮಾವೇಶವೊಂದನ್ನು ಆಯೋಜಿಸಿದೆ. ಅಲ್ಲಿ ಪರಿಸರ ತಜ್ಞರು, ನಾನಾ ಕ್ಷೇತ್ರದವರು ಭಾಗಿಯಾಗಿ ಪರಿಸರ ಸಂರಕ್ಷಣೆಗೆ ದನಿಗೂಡಿಸಲಿದ್ಧಾರೆ. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆಯೂ ಮುಖ್ಯ ಆದ್ಯತೆಯಾಗಬೇಕು ಎನ್ನುವುದು ಸಮಾವೇಶದ ಆಶಯ.
ಜಾಗತಿಕ ತಾಪಮಾನ ಏರಿಕೆ ವಿಜ್ಞಾನಿಗಳು ಸೂಚಿಸಿದ 1.5 ಡಿಗ್ರಿ ಮಿತಿಯನ್ನು ದಾಟಿ ಹವಾಮಾನ ತುರ್ತು ಪರಿಸ್ಥಿತಿ ಬಂದಿದೆ. ಪರಿಸರ ಸಮಸ್ಯೆಗಳನ್ನು ಸರಿಪಡಿಸಲು ನಮಗೆ ಇನ್ನು ಹೆಚ್ಚು ಕಾಲ ಉಳಿದಿಲ್ಲ. ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿ, ಬಿಸಿ ಅಲೆ ಮುಂತಾದ ಪೃಕೃತಿ ವಿಕೋಪಗಳನ್ನು ಎದುರಿಸುತ್ತಿರುವ ನಾವು ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕ್ರಮಗಳನ್ನು ಜಾರಿಗೊಳಿಸದಿದ್ದರೆ ಮುಂದೆ ಕೆಲವೇ ದಶಕಗಳಲ್ಲಿ ಮಾನವ ಕುಲದ ಜೊತೆಗೆ ಸಕಲ ಜೀವ ಜಂತುಗಳು ನೋವು ಸಂಕಷ್ಟಗಳ ಸರಮಾಲೆಯನ್ನು ಅನುಭವಿಸಿ ಮಹಾ ವಿನಾಶದ ಹಾದಿ ಹಿಡಿಯಲಿವೆ. ಹಾಗಾಗಿ ತತ್ ಕ್ಷಣದ ಕ್ರಮವಾಗಿ ಈ ಕೆಳಗಿನ ಪರಿಸರ ಪ್ರಣಾಳಿಕೆಯನ್ನು ನಿಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿ ಸಮಸ್ಯೆಗಳನ್ನು ಸರಿ ಪಡಿಸಲು ದೊರೆತಿರುವ ಕೊನೆಯ ಅವಕಾಶವನ್ನು ಬಳಸಿಕೊಳ್ಳಬೇಕು ಎನ್ನುವ ಒತ್ತಾಯದೊಂದಿಗೆ ಸಮಾವೇಶ ಆಯೋಜಿಸಲಾಗಿದೆ. ನಾಗೇಶ್ ಹೆಗಡೆ, ಅಖಿಲೇಶ್ ಚಿಪ್ಪಳಿ ಸಹಿತ ಹಲವಾರು ಪರಿಸರ ತಜ್ಞರು ಅಜೆಂಡಾವನ್ನು ರೂಪಿಸಿಕೊಟ್ಟಿದ್ದಾರೆ ಎಂದು ಮೈಸೂರು ಪರಿಸರಕ್ಕಾಗಿ ಬಳಗದ ಸಂಚಾಲಕರಾಗಿರುವ ಪರುಶುರಾಮಗೌಡ.
ಪರಿಸರ ಪ್ರಣಾಳಿಕೆಯ ಪ್ರಮುಖ ಅಂಶಗಳು
1. ಪಶ್ಚಿಮಘಟ್ಟ, ಕರಾವಳಿ ಮತ್ತಿತರ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ಸ್ಥಾವರ, ಗಣಿಗಾರಿಕೆ, ರಸ್ತೆ ಅಗಲೀಕರಣದಂತಹ ಹೊಸ ಯೋಜನೆಗಳಿಗೆ ಅನುಮತಿ ನೀಡಬಾರದು. ಅರಣ್ಯಪ್ರದೇಶಗಳಲ್ಲಿ ಸರಕಾರೀ ನೆಲದ ಒತ್ತುವರಿ ತೆರವುಗೊಳಿಸಬೇಕು. ಜೀವ ವೈವಿಧ್ಯತೆ ಉಳಿಸಿಕೊಳ್ಳಬೇಕು.
2. 2015 ರ ಪ್ಯಾರಿಸ್ ಒಪ್ಪಂದವನ್ನು ಜಾರಿಗೊಳಿಸಿ ಹಸಿರು ಅನಿಲಗಳ ಒಟ್ಟು ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು. ಅದಕ್ಕಾಗಿ ಪರಿಸರ ಕಾನೂನುಗಳನ್ನು ಬಿಗಿಗೊಳಿಸಬೇಕು. ಹವಾಮಾನ ಅಪಾಯಗಳ ತಡೆಗಟ್ಟುವಿಕೆ, ತಗ್ಗಿಸುವಿಕೆ ಮತ್ತು ಹೊಂದಾಣಿಕೆಯ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ವಿಶೇಷ ವೈಜ್ಞಾನಿಕ ಸಮಿತಿಯನ್ನು ರಚಿಸಬೇಕು.
3. ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಹತ್ತನೆಯ ತರಗತಿಯವರೆಗೂ ಪರಿಸರ ಶಿಕ್ಷಣದ ಜೊತೆಗೆ ಪರಿಸರ ಸಮಸ್ಯೆಗಳನ್ನು ಎದುರಿಸಲು ಬೇಕಾದ ಜೀವನ ಕೌಶಲ್ಯಗಳನ್ನು ಕಲಿಸಬೇಕು. ಪ್ರಕೃತಿಯ ಮೆಚ್ಚುಗೆ ಮತ್ತು ಪ್ರಕೃತಿಯ ನಡುವೆ ಬದುಕುವುದು ಎಲ್ಲಾ ಹಂತಗಳ ಪಠ್ಯಕ್ರಮದ ಮುಖ್ಯ ಭಾಗಗಳಲ್ಲಿ ಒಂದಾಗಬೇಕು.
4. ರಸ್ತೆ ಬದಿಯ ಮರಗಳನ್ನು ಸಮುದಾಯದ ಆಸ್ತಿಯೆಂದು ಘೋಷಿಸಬೇಕು. ಪ್ರತಿ ಊರಿನಲ್ಲೂ ಒಟ್ಟೂ ವಿಸ್ತೀರ್ಣದ ಶೇಕಡಾ 33 ರಷ್ಟು ಸ್ಥಳಗಳಲ್ಲಿ ವಿವಿಧ ಮರಗಳನ್ನು ಕಡ್ಡಾಯವಾಗಿ ಬೆಳೆಸಬೇಕು. ಮುಂದಿನ 25 ವರ್ಷಗಳ ವರೆಗೆ ಕೈಗೊಳ್ಳಬಹುದಾದ ಯಾವುದೇ ಯೋಜನೆಗಳಿಗೆ ನಾಶವಾಗಬಹುದಾದ ಮರಗಳನ್ನು ಅಂದಾಜಿಸಿ ಮುಂಚಿತವಾಗಿಯೇ ಬೆಳೆಸಬೇಕು. 1976ರ ಮರ ಸಂರಕ್ಷಣಾ ಕಾಯ್ದೆಗೆ ಹೆಚ್ಚಿನ ಆದ್ಯತೆ ನೀಡಬೇಕು.
5. ಮಾಲಿನ್ಯ ನಿಯಂತ್ರಣ ಆಡಳಿತ ಮಂಡಳಿ ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಅದು ವಿವಿಧ ಕ್ಷೇತ್ರದ ಪರಿಸರ ತಜ್ಞರ ಉಸ್ತುವಾರಿಯಲ್ಲಿರಬೇಕು. ಸರ್ಕಾರಿ ಕಚೇರಿಗಳಲ್ಲಿ ಪರಿಸರ ಇಲಾಖೆಯಲ್ಲಿನ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ಅವು ಕಟ್ಟು ನಿಟ್ಟಾಗಿ ಪರಿಸರ ನಿಯಮ ಪಾಲನೆ ಮಾಡದವರಿಗೆ, ಪರಿಸರ ಮಾಲಿನ್ಯ ಮಾಡುವವರಿಗೆ ದಂಡ ವಿಧಿಸಬೇಕು.
6 . ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ಈಗಿರುವ ತೆರಿಗೆಯನ್ನು ಕನಿಷ್ಟ 300% ಹೆಚ್ಚಿಸುವ ಮೂಲಕ ಅದರ ಬಳಕೆಯನ್ನು ನಿಯಂತ್ರಿಸಬೇಕು. ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವ ಕಂಪನಿಗಳು ತಮ್ಮ ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಸುವ / ಸಂಸ್ಕರಣೆ ಮಾಡುವ ಜವಾಬ್ದಾರಿ ಹೊರಬೇಕು. ಎಲ್ಲ ಮದ್ಯ, ಪೇಯ, ಔಷಧ, ತಯಾರಿಸುವ ಕಂಪನಿ/ಅಂಗಡಿಗಳು ಗಾಜಿನ ಖಾಲಿ ಬಾಟಲಿಗಳನ್ನು ಹಿಂಪಡೆದು ಮರು ಬಳಸುವುದನ್ನು ಕಡ್ಡಾಯ ಮಾಡಬೇಕು.
7 ಬೃಹತ್ ಜಲಾಶಯಗಳನ್ನು ಕಟ್ಟಬಾರದು. ಸ್ಥಳೀಯವಾಗಿ ಇರುವ ಜಲಮೂಲಗಳ ಸಂರಕ್ಷಣೆ ಆಗಬೇಕು. ಜಲಾಶಯಗಳ ಹೂಳನ್ನು ಕಾಲಕಾಲಕ್ಕೆ ತೆಗೆದು ಸ್ವಚ್ಛಗೊಳಿಸಬೇಕು. ನದಿಗಳಿಗೆ ಕೈಗಾರಿಕೆ, ಕೃಷಿ ಮತ್ತು ಧಾರ್ಮಿಕ ಕ್ಷೇತ್ರದ ತ್ಯಾಜ್ಯಗಳು ಸೇರದಂತೆ ಎಚ್ಚರಿಕೆ ವಹಿಸಬೇಕು.
8. ನಗರಗಳಲ್ಲಿ ಮಳೆ ನೀರು ಚರಂಡಿ ಸೇರದೆ ನೆಲದಲ್ಲಿ ಇಂಗಲು/ಸಂಗ್ರಹವಾಗಲು ವ್ಯವಸ್ಥೆ ಮಾಡಬೇಕು. ಎಲ್ಲಾ ಸರಕಾರೀ ಕಚೇರಿಗಳು ಮತ್ತು ಅಧಿಕಾರಿಗಳ ನಿವಾಸ ಗಳಲ್ಲಿ ಮಳೆಕೊಯ್ಲು/ಮಳೆನೀರಿಂಗಿಸುವಿಕೆ ಮತ್ತು ಸೌರವಿದ್ಯುತ್ ಘಟಕಗಳು ಕಡ್ಡಾಯವಾಗಬೇಕು. ಕೊಳವೆ ಬಾವಿಗಳ ಬದಲಾಗಿ ತೆರೆದ ಬಾವಿಗಳಿಗೆ ಹೆಚ್ಚು ಒತ್ತು ಕೊಡಬೇಕು. ಕಟ್ಟುವ ಪ್ರತಿಯೊಂದು ಕಟ್ಟಡದ ವಿಸ್ತೀರ್ಣಕ್ಕೆ ತಕ್ಕಷ್ಟು ಮಳೆನೀರ ಸಂಗ್ರಹಕ್ಕೆ ಕಡ್ಡಾಯವಾಗಿ ವ್ಯವಸ್ಥೆ ಮಾಡಿರಬೇಕು.
9. ಕೆರೆಗಳ ಹೂಳೆತ್ತಿಸಿ ಅಲ್ಲೆಲ್ಲ ಕಳೆರಹಿತ ಶುದ್ಧನೀರು ಸಂಗ್ರಹವಾಗುವಂತೆ ಮಾಡಬೇಕು. ರಾಜ ಕಾಲುವೆ, ಕೆರೆಗಳ ಮುಚ್ಚುವಿಕೆಯನ್ನು ತಡೆಗಟ್ಟಬೇಕು. ನಗರಗಳು ತಮ್ಮ ಕೆರೆ/ಬಾವಿ/ಮಳೆನೀರನ್ನೇ ಬಳಸುವಂತಾಗಬೇಕು.
10. ಹಸಿರು ಅನಿಲ ಹೊರಸೂಸದೆ ಸ್ಥಳೀಯವಾಗಿ ಸುಸ್ಥಿರ ಉದ್ಯೋಗದ ಅವಕಾಶ ಸೃಷ್ಟಿಸುವ ಗುಡಿ ಕೈಗಾರಿಕೆ ಮತ್ತು ಹಸಿರು ಕೆಲಸಗಳಿಗೆ ಪ್ರೋತ್ಸಾಹ ಕೊಡಬೇಕು. ಅವುಗಳ ಉತ್ಪನ್ನಗಳನ್ನು ತೆರಿಗೆ ಮುಕ್ತಗೊಳಿಸಬೇಕು. ಗ್ರಾಮ ಸ್ವರಾಜ್ಯಕ್ಕೆ ಒತ್ತು ಕೊಡಬೇಕು. ತಾಲೂಕು, ಹೋಬಳಿಗಳನ್ನು ಸುಸ್ಥಿರವಾಗಿ ಅಭಿವೃದ್ಧಿ ಪಡಿಸಬೇಕು.
11. ಕನಿಷ್ಠ 70-30 ಪ್ರಮಾಣದಲ್ಲಿ ಕೈಯಿಂದ ತಯಾರಿಸಿದ ಪದಾರ್ಥಗಳು, ಹೆಚ್ಚು ಜನರನ್ನು ಒಳಗೊಂಡಿರುವ, ಕಡಿಮೆ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸುವ, ಕಡಿಮೆ ಮಾಲಿನ್ಯವನ್ನು ಉಂಟುಮಾಡುವ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ಅವುಗಳಿಗೆ ಕಡಿಮೆ ಅಥವಾ ಶೂನ್ಯ ತೆರಿಗೆ ವಿಧಿಸಬೇಕು.
12. ಉದ್ಯೋಗ ಖಾತರಿ ಯೋಜನೆಯಲ್ಲಿ ಶ್ರಮದ ಕೆಲಸಕ್ಕೆ ಮಿತಿಯಿರಬಾರದು. ಈ ಯೋಜನೆಯಲ್ಲಿ ಮಣ್ಣು, ನೀರು, ಸಸ್ಯಾರಾಶಿ, ಇತ್ಯಾದಿ ಪರಿಸರಕ್ಕೆ ಪೂರಕವಾದ ಕೆಲಸ ಮಾಡುವುದಕ್ಕೆ ಆದ್ಯತೆಯ ಮೇಲೆ ಹಣ ಒದಗಿಸಬೇಕು.ಹವಾಮಾನ ವೈಪರೀತ್ಯಗಳಿಗೆ ಸಿಲುಕುವ ಸಾಮಾನ್ಯ ಜನರಿಗೆ / ಕೃಷಿಕರಿಗೆ / ಕೂಲಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಮತ್ತು ಬದಲೀ ವ್ಯವಸ್ಥೆ ಕಲ್ಪಿಸಬೇಕು. ಸುಸ್ಥಿರ ಬದುಕಿನ ಅವಕಾಶ ಒದಗಿಸಬೇಕು.
-ಕುಂದೂರು ಉಮೇಶಭಟ್ಟ, ಮೈಸೂರು