Kejriwal Gujarat CM Campaign: ಗುಜರಾತ್ ಜನರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಅವಕಾಶ ನೀಡಿದ ಆಪ್: ..ನಂಬರ್‌ಗೆ ಮಾಡಿ ವಾಟ್ಸಪ್
Oct 29, 2022 03:25 PM IST
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
- ಗುಜರಾತ್ ವಿಧಾನಸಭೆ ಚುನಾವಣೆಯ ತಯಾರಿಗೆ ವೇಗ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್), ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಂತೆ ಗುಜರಾತ್ ಜನತೆಯಲ್ಲಿ ಕೇಳಿಕೊಂಡಿದೆ. 'ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆಯ್ಕೆ ಮಾಡಿ' ಎಂಬ ಆಂದೋಲನಕ್ಕೆ ಅರವಿಂದ್ ಕೇಜ್ರಿವಾಲ್ ಚಾಲನೆ ನೀಡಿದ್ದಾರೆ.
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ತಯಾರಿಗೆ ವೇಗ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್), ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಂತೆ ಗುಜರಾತ್ ಜನತೆಯಲ್ಲಿ ಕೇಳಿಕೊಂಡಿದೆ.
'ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆಯ್ಕೆ ಮಾಡಿ' ಎಂಬ ಆಂದೋಲನಕ್ಕೆ ಕೇಜ್ರಿವಾಲ್ ಚಾಲನೆ ನೀಡಿದ್ದು, ಜನರ ಅಭಿಪ್ರಾಯವನ್ನು ಸಂಗ್ರಹಿಸಿ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪಂಜಾಬ್‌ನಲ್ಲಿ ಮಾಡಿದಂತೆ, ಗುಜರಾತ್‌ನಲ್ಲೂ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಜನರ ಅಭಿಪ್ರಾಯ ಸಂಗ್ರಹಿಸಿ ಆಪ್ ನಿರ್ಧಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೊಂದು ಪವಿತ್ರ ಪ್ರಜಾಸತ್ತಾತ್ಮಕ ನಡೆ. ರಾಜ್ಯವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ಜನರಿಂದಲೇ ತಿಳಿದುಕೊಂಡು, ಅವರನ್ನೇ ನಾಯಕನನ್ನಾಗಿ ಆರಿಸುವುದು ಪ್ರಜಾಪ್ರಭುತ್ವಕ್ಕೆ ನಾವು ಕೊಡುವ ನಿಜವಾದ ಗೌರವ ಎಂದು ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಅಥವಾ ಇನ್ಯಾವುದೇ ರಾಜಕೀಯ ಪಕ್ಷಗಳು ಯಾರನ್ನಾದರೂ ಮುಖ್ಯಮಂತ್ರಿ ಎಂದು ಘೋಷಿಸುವಾಗ ಜನರ ಅಭಿಪ್ರಾಯವನ್ನು ಸಂಗ್ರಹಿಸುವುದಿಲ್ಲ. ದೆಹಲಿಯಲ್ಲಿ ಕುಳಿತಿರುವ ಬಲಿಷ್ಠರು ಈ ನಿರ್ಧಾರ ಮಾಡುತ್ತಾರೆ. ಆದರೆ ಆಪ್ ಜನರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಹೆಚ್ಚು ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ಗುಜರಾತ್‌ನಲ್ಲಿ ವಿಜಯ್ ರೂಪಾನಿ ಅವರನ್ನು ಮುಖ್ಯಮಂತ್ರಿ ಎಂದೂ ಘೋಷಿಸಿದಾಗಲೂ ಜನರ ಅಭಿಪ್ರಾಯ ಕೇಳಿರಲಿಲ್ಲ. ಬಳಿಕ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಭೂಪೇಂದ್ರ ಪಟೇಲ್ ಅವರನ್ನು ಕುಳ್ಳಿರಿಸಿತು. ಆಗಲೂ ಅದು ಈ ಬಗ್ಗೆ ಜನರ ಅಭಿಪ್ರಾಯವೇನು ಎಂಬುದರ ಕುರಿತು ಚಿಂತಿಸಲಿಲ್ಲ. ಆದರೆ ಆಪ್ ಈ ತಪ್ಪನ್ನು ಮಾಡುವುದಿಲ್ಲ. ನಾವು ನಿಮ್ಮನ್ನು ಆಳುವ ವ್ಯಕ್ತಿ ಯಾರಾಗಬೇಕು ಎಂಬುದನ್ನು ಜನರಿಂದಲೇ ಕೇಳಿ ನಿರ್ಧಾರ ಮಾಡುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದರು.
ಗುಜರಾತ್‌ನಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿರುವ ಕೇಜ್ರಿವಾಲ್, ಉಚಿತ ವಿದ್ಯುತ್, ಹಳ್ಳಿ ಹಳ್ಳಿಗೂ ಸರ್ಕಾರಿ ಶಾಲೆ, ಗುಣಮಟ್ಟದ ಶಿಕ್ಷಣ, ಆರೋಗ್ಯ ಸೌಲಭ್ಯಗಳು, ಕುಡಿಯುವ ನೀರಿನ ಪೂರೈಕೆಯಂತಹ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಗುಜರಾತ್ ಜನರು ಬದಲಾವಣೆ ಬಯಸಿದ್ದು, ಈ ಬಾರಿ ಅವರ ಆಯ್ಕೆ ಆಪ್ ಪಕ್ಷ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೇಜ್ರಿವಾಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಪಂಜಾಬ್‌ನಲ್ಲೂ ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿತ್ತು. ಅಲ್ಲಿನ ಜನರ ಅಭಿಪ್ರಾಯ ಪಡೆದೇ ನಾವು ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೇವು. ಗುಜರಾತ್‌ನಲ್ಲೂ ನಾವು ಈ ಪ್ರಯೋಗ ಮುಂದುವರೆಸುತ್ತೇವೆ. ಇಲ್ಲಿಯೂ ನಾವು ಯಶಸ್ಸು ಕಾಣುತ್ತೇವೆ ಎಂಬ ವಿಶ್ವಾಸವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಸರ್ಕಾರ ರಚಿಸಲಿದೆ. ಅಂತಹ ಸನ್ನಿವೇಶದಲ್ಲಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೇ ಆಗಿದ್ದರೂ, ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೇಜ್ರಿವಾಲ್ ರಾಜ್ಯದ ಜನತೆಗೆ ಭರವಸೆ ಕೊಟ್ಟಿದ್ದಾರೆ.
ಆಯ್ಕೆ ಪ್ರಕ್ರಿಯೆ ಹೇಗೆ?
ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಗುಜರಾತ್ ಜನರು 6357000360 ಸಂಖ್ಯೆಗೆ ಎಸ್‌ಎಂಎಸ್ ಅಥವಾ ವಾಟ್ಸಪ್ ಮಾಡಬೇಕಾಗುತ್ತದೆ. ಧ್ವನಿ ಸಂದೇಶ ಕಳುಹಿಸುವ ಅವಕಾಶ ಕೂಡ ನೀಡಲಾಗಿದ್ದು, aapnocm@gmail.comಗೆ ಇ- ಮೇಲ್ ಮಾಡುವ ಮೂಲಕವೂ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ.
ನವೆಂಬರ್ 3ರಂದು ಸಂಜೆ 5 ಗಂಟೆಯವರೆಗೂ ಈ ನಂಬರ್ ಚಾಲ್ತಿಯಲ್ಲಿ ಇರಲಿದ್ದು, ನವೆಂಬರ್ 4ರಂದು ಸಾರ್ವಜನಿಕವಾಗಿ ಫಲಿತಾಂಶವನ್ನು ಘೋಷಣೆ ಮಾಡಲಾಗುವುದು ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
182 ಸದಸ್ಯರ ಗುಜರಾತ್ ವಿಧಾನಸಭೆಗೆ ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇದೆ. ಆದರೆ ಚುನಾವಣಾ ಆಯೋಗ ಇದುವರೆಗೂ ಚುನಾವಣಾ ದಿನಾಂಕ ಘೋಷಣೆ ಮಾಡಿಲ್ಲ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದ್ದ ಚುನಾವಣಾ ಆಯೋಗ, ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾ ಕ ಪ್ರಕಟಿಸದಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.