ದೀಪಾವಳಿಗೂ ಮೊದಲೇ ಭಾರತ್ ಬ್ರ್ಯಾಂಡ್ ಅಕ್ಕಿ, ಬೇಳೆ ಮಾರುಕಟ್ಟೆಗೆ ಬಿಟ್ಟ ಕೇಂದ್ರ ಸರ್ಕಾರ, ರಿಲಯನ್ಸ್‌ನಲ್ಲೂ ಖರೀದಿ ಮಾಡಬಹುದು ನೋಡಿ
Oct 23, 2024 05:31 PM IST
ದೀಪಾವಳಿಗೂ ಮೊದಲೇ ಭಾರತ್ ಬ್ರ್ಯಾಂಡ್ ಅಕ್ಕಿ, ಬೇಳೆ ಮಾರುಕಟ್ಟೆಗೆ ಬಿಟ್ಟ ಕೇಂದ್ರ ಸರ್ಕಾರ, ಬೆಲೆ ಏರಿಕೆ ತಡೆಯಲು ಪ್ರಯತ್ನಸಿದೆ.
ನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಅಕ್ಕಿ ಬೇಳೆ ಬೆಲೆ ಗಗನಮುಖಿಯಾಗಿದೆ. ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ, ಎರಡನೇ ಹಂತ ಭಾರತ್ ಬ್ರ್ಯಾಂಡ್‌ನ ಅಕ್ಕಿ, ಬೇಳೆಗಳನ್ನು ದೀಪಾವಳಿಗೂ ಮೊದಲೇ ಭಾರತ್ ಬ್ರ್ಯಾಂಡ್ ಅಕ್ಕಿ, ಬೇಳೆ ಮಾರುಕಟ್ಟೆಗೆ ಬಿಟ್ಟಿದೆ. ರಿಲಯನ್ಸ್‌ನಲ್ಲೂ ಇದು ಸಿಗಲಿದೆ. ಇದರ ಬೆಲೆ ಮತ್ತು ಇತರೆ ವಿವರ ಇಲ್ಲಿದೆ.
ನವದೆಹಲಿ: ದೀಪಾವಳಿ ಹಬ್ಬಕ್ಕೂ ಮೊದಲೇ ಆಹಾರ ಧಾನ್ಯ ಬೆಲೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡನೇ ಹಂತದ ಭಾರತ್ ಬ್ರಾಂಡ್ ಅಕ್ಕಿ ಬೇಳೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ನವದೆಹಲಿಯ ಕೃಷಿ ಭವನದಲ್ಲಿ ಇಂದು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳನ್ನು ವಾಹನಗಳ ಮೂಲಕ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನವದೆಹಲಿಯಲ್ಲಿ ಎಂಆರ್ ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳು ಪೂರೈಕೆಗೆ ಕ್ರಮ ಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ. ದೆಹಲಿ/ಎನ್‌ಸಿಆರ್ ನಿವಾಸಿಗಳಿಗಾಗಿ ಭಾರತ್ ಕಡಲೆ ಬೇಳೆ 70 ರೂ. ಕೆಜಿ, ಭಾರತ್ ಹೆಸರುಬೇಳೆ 107 ರೂ. ಕೆಜಿ ಮತ್ತು ಭಾರತ್ ತೊಗರಿಬೇಳೆ 89 ರೂ. ಕೆಜಿ ಬೆಲೆಯಲ್ಲಿ ಮಾರಟ ಮಾಡಲಾಗುತ್ತಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಕೈಗೊಂಡ ಈ ಯೋಜನೆ ನಾಗರಿಕರ ಮೇಲೆ ಹೆಚ್ಚುತ್ತಿರುವ ಆಹಾರ ಧಾನ್ಯ, ಬೇಳೆ-ಕಾಳು ಬೆಲೆ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ತಿಳಿಸಿದರು. ರಿಲಯನ್ಸ್ ಮಳಿಗೆಗಳ ಮೂಲಕ ಭಾರತ್ ಬ್ರಾಂಡ್ ಅಕ್ಕಿ ಬೇಳೆ ಗ್ರಾಹಕರಿಗೆ ತಲುಪಲಿದೆ.
ಭಾರತ್ ಬ್ರಾಂಡ್; ಯಾವುದಕ್ಕೆ ಎಷ್ಟು ದರ
ಭಾರತ್ ಬ್ರಾಂಡ್‌ನ ಅಕ್ಕಿ, ಬೇಳೆಗಳಿಗೆ ಯಾವುದಕ್ಕೆ ಎಷ್ಟು ದರಗಳನ್ನು ನಿರೀಕ್ಷಿಸಲಾಗುತ್ತಿದೆ. ಇದೀಗ ನವದೆಹಲಿಯಲ್ಲಿ ಬಿಡುಗಡೆಯಾದ ಆಹಾರ ಧಾನ್ಯಗಳ ಬೆಲೆಗಳನ್ನು ಗಮನಿಸಿದರೆ ಅದೇ ದರ ಇಡೀ ದೇಶಕ್ಕೂ ಅನ್ವಯವಾಗುವ ನಿರೀಕ್ಷೆ ಇದೆ. ಇದರಂತೆ,
10 ಕಿಲೋ ಭಾರತ್ ಗೋಧಿ ಹುಡಿ ದರ 300 ರೂಪಾಯಿ, 10 ಕಿಲೋ ಭಾರತ್ ಅಕ್ಕಿ ದರ 340 ರೂಪಾಯಿ, ಭಾರತ್ ಕಡಲೆ ಬೇಳೆ ದರ ಕಿಲೋಗೆ 70 ರೂಪಾಯಿ, ಹೆಸರು ಬೇಳೆಗೆ ಒಂದು ಕಿಲೋಗೆ 107 ರೂಪಾಯಿ, ತೊಗರಿ ಬೇಳೆಗೆ 93 ರೂಪಾಯಿ, ಮಸೂರ್ ಬೇಳೆಗೆ 89 ರೂಪಾಯಿ ಇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಮಿತಿಯಿಂದ ದರ ನಿಗದಿ
ಭಾರತ್ ಬ್ರಾಂಡ್ ಅಕ್ಕಿ, ಹಿಟ್ಟು, ಬೇಳೆ ಕಾಳುಗಳನ್ನು ಪುನಃ ಮಾರುಕಟ್ಟೆಗೆ ಬಿಡುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಮಿತಿ ತೀರ್ಮಾನ ತೆಗೆದುಕೊಂಡಿತ್ತು. ಇದೇ ಸಮಿತಿ ದರ ಪರಿಷ್ಕರಣೆ ವಿಚಾರವನ್ನೂ ಚರ್ಚಿಸಿ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿ ಎದುರು ಬಂದಿದ್ದ ಪ್ರಸ್ತಾವನೆಗಳ ಪ್ರಕಾರ, 10 ಕೆಜಿ ಗೋಧಿ ಹಿಟ್ಟು 275 ರಿಂದ 300 ರೂ.ವರೆಗೆ ಮತ್ತು 10 ಕೆಜಿ ಅಕ್ಕಿ ಚೀಲವನ್ನು 295 ರಿಂದ 320 ರೂಪಾಯಿ ಆಗಬಹುದು.ಇದೇ ವೇಳೆ ಬೇಳೆ ಕಾಳು ಕೆಜಿಗೆ 60 ರಿಂದ 70 ರೂಪಾಯಿಗೆ ಏರಬಹುದು. ಹೆಸರು ಬೇಳೆ ಕಿಲೋಗೆ 107 ರೂ ಮತ್ತು ಮಸೂರ್ ದಾಲ್ ಗರಿಷ್ಠ ಚಿಲ್ಲರೆ ಬೆಲೆ ಕೆಜಿಗೆ 89 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿತ್ತು.
ಕೇಂದ್ರ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಭಾರತ್ ರೈಸ್ (ಭಾರತ್ ಅಕ್ಕಿ) ಅನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಕೆಜಿಗೆ 29 ರೂನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತು. 2023ರ ನವೆಂಬರ್‌ನಲ್ಲಿ 10 ಕಿಲೋ ಭಾರತ್ ಅಟ್ಟಾವನ್ನು 275 ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಶುರುಮಾಡಿತ್ತು.