ಕಡಿಮೆ ದರದ ವಿಮಾನ ಟಿಕೆಟ್ ಬುಕ್ ಮಾಡೋದಕ್ಕೆ ಗೂಗಲ್ ಫ್ಲೈಟ್ಸ್ ಬಳಕೆ ಇನ್ನು ಸುಲಭ, ಹೊಸ ಫೀಚರ್ ಬಳಸೋದು ಹೇಗೆಂದು ನೋಡೋಣ
Oct 21, 2024 07:44 PM IST
ಕಡಿಮೆ ದರದ ವಿಮಾನ ಟಿಕೆಟ್ ಬುಕ್ ಮಾಡೋದು ಹೇಗಂತೀರಾ, ಗೂಗಲ್ ಫ್ಲೈಟ್ಸ್ ಹೊಸ ಫೀಚರ್ ಬಳಸೋದು ಹೇಗೆಂದು ನೋಡೋಣ
ವಿಮಾನ ಟಿಕೆಟ್ ಬುಕ್ ಮಾಡೋದಕ್ಕೆ ವಿಮಾನ ಕಂಪನಿಗಳ ವೆಬ್‌ಸೈಟ್‌ಗೋ ಅಥವಾ ಥರ್ಡ್ ಪಾರ್ಟಿ ವೆಬ್‌ಸೈಟ್, ಆಪ್‌ಗಳನ್ನು ಬಳಸುವುದು ವಾಡಿಕೆ. ಅದರಲ್ಲೇ ಕಡಿಮೆ ದರದ ವಿಮಾನ ಟಿಕೆಟ್ ನೋಡಿ ಬುಕ್ ಮಾಡುತ್ತಿರುವವರು ಇನ್ನು ಗೂಗಲ್ ಫ್ಲೈಟ್ಸ್‌ನ ಹೊಸ ಫೀಚರ್ ಅನ್ನು ಬಹಳ ಸುಲಭವಾಗಿ ಬಳಸಬಹುದು.
ಬಹಳಷ್ಟು ಜನ ಎಕಾನಮಿಯಲ್ಲೂ ಕಡಿಮೆ ದರ ವಿಮಾನ ಟಿಕೆಟ್ ಖರೀದಿಸಲು ಪ್ರಯತ್ನಿಸುತ್ತಿರುತ್ತಾರೆ. ಇದಕ್ಕಾಗಿ ಬಹಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಥರ್ಡ್ ಪಾರ್ಟಿ ಪ್ಲಾಟ್‌ಫಾರಂಗಳಲ್ಲಿ ಇಂತಹ ಫೀಚರ್ ಇದೆ. ಟಿಕೆಟ್ ಬುಕ್ಕಿಂಗ್ ಕೂಡ ಮಾಡಬಹುದು. ಆದರೆ ಅದಕ್ಕಿಂತ ಸ್ವಲ್ಪ ಹೆಚ್ಚು ಗ್ರಾಹಕ ಸ್ನೇಹಿ ಎನಿಸುವಂತೆ ಈಗ ಇಂತಹ ಕಡಿಮೆ ದರ ವಿಮಾನ ಟಿಕೆಟ್ ಬುಕ್ ಮಾಡುವುದಕ್ಕಾಗಿ ಗೂಗಲ್ ಫ್ಲೈಟ್ಸ್ (Google Flights) ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದು ವಿಮಾನ ಯಾತ್ರಿಕರಿಗೆ ಅಗ್ಗದ ದರದ ವಿಮಾನ ಟಿಕೆಟ್ ಹುಡುಕಲು ನೆರವಾಗುವ ರೀತಿಯಲ್ಲಿದೆ. ಗೂಗಲ್ ಫ್ಲೈಟ್ಸ್ ಪುಟ ತೆರೆದುಕೊಂಡ ಕೂಡಲೇ ಫೈಂಡ್ ಚೀಪ್ ಫ್ಲೈಟ್ ಫ್ರಂ ಎಂಬ ಶೀರ್ಷಿಕೆಯೂ ಕಾಣುತ್ತದೆ. ಇದಲ್ಲದೇ ಹೊರಡುವ ಸ್ಥಳ ಮತ್ತು ಹೋಗಬೇಕಾದ ಸ್ಥಳದ ವಿವರ ಕೊಟ್ಟರೆ ಕಡಿಮೆ ದರದ ಟಿಕೆಟ್ ಇರುವ ವಿಮಾನಗಳ ವಿವರನ್ನು ಆರಂಭದಲ್ಲಿ ತೋರಿಸುತ್ತದೆ.
ಗೂಗಲ್ ಫ್ಲೈಟ್ಸ್‌ನಲ್ಲಿರುವ ಹೊಸ ಫೀಚರ್ ಏನು
ಗೂಗಲ್ ಫ್ಲೈಟ್ಸ್ ಬಳಸಿಕೊಂಡು ವಿಮಾನಗಳ ಹಾರಾಟದ ಸಮಯ, ಟಿಕೆಟ್ ದರ ಮುಂತಾದವುಗಳನ್ನು ಹುಡುಕಾಡುವಾಗ ಅದು ತೋರಿಸುವ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ದರ ಮತ್ತು ಅನುಕೂಲಗಳನ್ನು ಹೊಂದಿಸಿ ತೋರಿಸುತ್ತದೆ. ಆದರೆ ಕೆಲವೊಮ್ಮೆ ಇನ್ನೂ ಅಗ್ಗದ ಆಯ್ಕೆಗಳಿರುತ್ತವೆ. ಇವು ನೇರವಾಗಿ ಗೋಚರಿಸದು. ಉದಾಹರಣೆಗೆ ಹೇಳಬೇಕು ಎಂದರೆ ಥರ್ಡ್ ಪಾರ್ಟಿ ಬುಕ್ಕಿಂಗ್ ಸೈಟ್‌ನಲ್ಲಿ ಏರ್‌ಲೈನ್‌ನ ಸೈಟ್‌ಗಿಂತ ಕಡಿಮೆ ದರದಲ್ಲಿ ಟಿಕೆಟ್ ಸಿಗುತ್ತಿರಬಹುದು. ಅಥವಾ ರಿಟರ್ನ್ ಟಿಕೆಟ್ ಬುಕ್ ಮಾಡುವಾಗ ರಿಯಾಯಿತಿ ಸಿಗಬಹುದು ಇಂತಹ ಪ್ರಯೋಜನಗಳು ಕಾಣದೇ ಹೋಗಬಹುದು. ಈ ಕೊರತೆಯನ್ನು ಹೋಗಲಾಡಿಸಲು ಗೂಗಲ್ ಈಗ ಗೂಗಲ್ ಫ್ಲೈಟ್ಸ್‌ಗೆ “ಚೀಪೆಸ್ಟ್” ಎಂಬ ಟ್ಯಾಬ್ ಅನ್ನು ಜೋಡಿಸಿದೆ. ಈ ಟ್ಯಾಬ್ ಅನ್ನು ಆಯ್ಕೆ ಮಾಡಿದರೆ ಆಗ ನೀವು ವಿಮಾನಗಳ ಆಯ್ಕೆ ಕಾಣಸಿಗುತ್ತದೆ. ಅದರಲ್ಲಿ ಅಗ್ಗದ ಟಿಕೆಟ್ ದರ ಸೇರಿ ಎಲ್ಲ ರೀತಿಯ ವಿವರಗಳೂ ಕಾಣುತ್ತದೆ. ಈ ಫೀಚರ್ ಅನ್ನು ಮುಂದಿನ ಎರಡು ವಾರದಲ್ಲಿ ಜಗತ್ತಿನೆಲ್ಲೆಡೆ ಲಭ್ಯವಾಗುವಂತೆ ಮಾಡಲಿದೆ ಗೂಗಲ್.
ಗೂಗಲ್ ಫ್ಲೈಟ್ಸ್‌ನಲ್ಲಿ ಈ ಚೀಪೆಸ್ಟ್ ಟ್ಯಾಬ್‌ನಲ್ಲಿ ವಿಮಾನ ಟಿಕೆಟ್ ಬುಕ್ ಮಾಡುವುದು ಹೇಗೆ
1) ಗೂಗಲ್ ಫ್ಲೈಟ್ಸ್ ಎಂದು ಗೂಗಲ್‌ನಲ್ಲಿ ಹುಡುಕಿದ ಕೂಡಲೇ ಸರ್ಚ್ ರಿಸಲ್ಟ್‌ನಲ್ಲಿ ಮೊದಲು ಕಣ್ಣಿಗೆ ಕಾಣುವುದೇ “Find Cheap Flight Options & Track Prices” (https://www.google.com/travel/flights?gl=IN&hl=en).
2) ಅದನ್ನು ಕ್ಲಿಕ್ ಮಾಡಿ ಸಾಮಾನ್ಯವಾಗಿ ವಿಮಾನ ಟಿಕೆಟ್ ಬುಕ್ ಮಾಡಲು ದಾಖಲಿಸುವ ವಿವರಗಳನ್ನು ನಮೂದಿಸಿ. ಆಗ ವಿಮಾನದ ವಿವರಗಳು ಅಲ್ಲಿ ಕಾಣಿಸುತ್ತವೆ.
3) ನಿಮಗೆ ಅಲ್ಲಿ “Best” ಎಂದು ಬರೆದ ಟ್ಯಾಬ್ ಗೋಚರಿಸುತ್ತದೆ. ಅದರಲ್ಲಿ ದರ ಮತ್ತು ಅನುಕೂಲಗಳನ್ನು ಹೊಂದಿಸಿದ ವಿವರ ಕಾಣುತ್ತದೆ. ಆದಾಗ್ಯೂ, ಟಾಪ್‌ನಲ್ಲಿ ನಿಮಗೆ “Cheapest” ಎಂಬ ಟ್ಯಾಬ್ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಕಡಿಮೆ ದರದ ವಿಮಾನ ಟಿಕೆಟ್‌ಗಳ ವಿವರ ಮೇಲೆದ್ದು ಕಾಣುತ್ತದೆ.
ಗೂಗಲ್ ಫ್ಲೈಟ್ಸ್‌ನಲ್ಲಿ ಹೊಸ ಫೀಚರ್ ಬಳಸಿ ಹುಡುಕುವಾಗ, ದೀರ್ಘಾವಧಿಯ ಲೇಓವರ್‌ಗಳೊಂದಿಗೆ ಅಥವಾ ನೀವೇ ಸ್ವತಃ ಹುಡುಕಿಕೊಂಡು ಹೋಗಿ ಏರಬೇಕಾದ ವಿಮಾನಗಳನ್ನು ಕಾಣಬಹುದು. ಅಲ್ಲಿ ನೀವು ಏರ್‌ಲೈನ್‌ಗಳ ನಡುವಿನ ಬದಲಾವಣೆಯ ಸಮಯ ಗಮನಿಸಬೇಕು. ಈ ರೀತಿ ವಿಮಾನಗಳನ್ನು ಗುರುತಿಸಿಕೊಂಡು ಟಿಕೆಟ್ ಬುಕ್ ಮಾಡಿಕೊಂಡರೆ ಆಗ ಇದು ನಿಮಗೆ ಹಣ ಮತ್ತು ಸಮಯವನ್ನು ಉಳಿಸಲು ನೆರವಾಗಬಹುದು. ಹೊಸ ಟ್ಯಾಬ್ ಬಳಸಿಕೊಂಡರೆ ಇಂತಹ ಮಾಹಿತಿಯನ್ನು ಗ್ರಹಿಸುವುದು ಸುಲಭವಾಗಲಿದೆ.