ಬೆಂಗಳೂರಿಗೆ ಹೊರಟಿದ್ದ ಆಕಾಶ್ ಏರ್ ವಿಮಾನಕ್ಕೆ ಬಾಂಬ್‌ ಬೆದರಿಕೆ; ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರಿಗೆ ಹೊರಟಿದ್ದ ಆಕಾಶ್ ಏರ್ ವಿಮಾನಕ್ಕೆ ಬಾಂಬ್‌ ಬೆದರಿಕೆ; ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿಗೆ ಹೊರಟಿದ್ದ ಆಕಾಶ್ ಏರ್ ವಿಮಾನಕ್ಕೆ ಬಾಂಬ್‌ ಬೆದರಿಕೆ; ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

ಕಳೆದ ಎರಡು ದಿನಗಳ ಅವಧಿಯಲ್ಲಿ ಭಾರತದ ಕನಿಷ್ಠ 10 ವಿಮಾನಗಳಿಗೆ ಬಾಂಬ್ ಬೆದರಿಕೆ ಎದುರಾಗಿದೆ. ಇಂದು (ಅಕ್ಟೋಬರ್ 16) ದೆಹಲಿಯಿಂದ ಬೆಂಗಳೂರಿಗೆ ಹೊರಟ ಆಕಾಶ್‌ ಏರ್‌ಗೆ ಬಾಂಬ್‌ ಬೆದರಿಕೆ ಎದುರಾದ ಕಾರಣ ಅದು ದೆಹಲಿಗೆ ವಾಪಸ್‌ ಹೋಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿದೆ.

ಬೆಂಗಳೂರಿಗೆ ಹೊರಟಿದ್ದ ಆಕಾಶ್ ಏರ್ ವಿಮಾನಕ್ಕೆ ಬಾಂಬ್‌ ಬೆದರಿಕೆ ಉಂಟಾದ ಕಾರಣ ಅದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿಗೆ ಹೊರಟಿದ್ದ ಆಕಾಶ್ ಏರ್ ವಿಮಾನಕ್ಕೆ ಬಾಂಬ್‌ ಬೆದರಿಕೆ ಉಂಟಾದ ಕಾರಣ ಅದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. (ಸಾಂಕೇತಿಕ ಚಿತ್ರ) (HT News)

ನವದೆಹಲಿ: ಬೆಂಗಳೂರಿಗೆ ಹೊರಟಿದ್ದ ಆಕಾಶ್ ಏರ್‌ ವಿಮಾನಕ್ಕೆ ಬುಧವಾರ (ಅಕ್ಟೋಬರ್ 16) ಬಾಂಬ್ ಬೆದರಿಕೆ ಎದುರಾದ ಕಾರಣ, ಅದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿ 184 ಜನ ಇದ್ದರು. ಆಕಾಶ್ ಏರ್ ಈ ಕುರಿತು ಹೇಳಿಕೆ ನೀಡಿದ್ದು, ವಿಮಾನ ಸಂಖ್ಯೆ ಕ್ಯೂಪಿ 1335 ವಿಮಾನವು ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿವರಿಸಿದೆ. ಕಳೆದ ಕೆಲವು ದಿನಗಳಿಂದ ಸಾಲು ಸಾಲು ಬಾಂಬ್ ಬೆದರಿಕೆ ಕರೆಗಳನ್ನು ವಿಮಾನ ಯಾನ ಸಂಸ್ಥೆಗಳು ಎದುರಿಸುತ್ತಿವೆ.

ಬೆಂಗಳೂರಿಗೆ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ

“ಇಂದು (ಅಕ್ಟೋಬರ್ 16) ದೆಹಲಿಯಿಂದ ಬೆಂಗಳೂರಿಗೆ ಹಾರುತ್ತಿದ್ದ ಆಕಾಶ ಏರ್ ವಿಮಾನ ಕ್ಯೂಪಿ 1335ಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ವಿಮಾನದಲ್ಲಿ 174 ಪ್ರಯಾಣಿಕರು, 7 ಶಿಶುಗಳು ಮತ್ತು 7 ಸಿಬ್ಬಂದಿ ಇದ್ದರು. ಈ ಬೆದರಿಕೆ ಕರೆ ಬಂದಾಗ ವಿಮಾನ ಬೆಂಗಳೂರು ಕಡೆಗೆ ಹಾರಾಟ ಶುರುಮಾಡಿತ್ತು. ತುರ್ತು ಪರಿಸ್ಥಿತಿ ಅರಿತ ಆಕಾಶ್ ಏರ್‌ನ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್‌ ಪರಿಸ್ಥಿತಿಯನ್ನು ಅವಲೋಕಿಸಿ ತುರ್ತಾಗಿ ವಿಮಾನವನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಇಳಿಸುವಂತೆ ಪೈಲಟ್‌ಗೆ ಸೂಚನೆ ನೀಡಿತ್ತು. ಫ್ಲೈಟ್ ಕ್ಯಾಪ್ಟನ್ ಇದರಂತೆ ದೆಹಲಿ ವಿಮಾನ ನಿಲ್ಧಾಣದಲ್ಲಿ ತುರ್ತಾಗಿ ವಿಮಾನವನ್ನು ಇಳಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಂಡರು. ಅಪರಾಹ್ನ 2 ಗಂಟೆಗೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ” ಎಂದು ಆಕಾಶ್ ಏರ್‌ನ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಏಳು ವಿಮಾನಗಳಿಗೆ ಬಾಂಬ್ ಬೆದರಿಕೆ

ಅಮೆರಿಕಕ್ಕೆ ಹೋಗುವ ಒಂದು ವಿಮಾನ ಸೇರಿ ಒಟ್ಟು ಏಳು ವಿಮಾನಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಎದುರಾದ ಕಾರಣ ಅವುಗಳ ಹಾರಾಟವೂ ವಿಳಂಬವಾಗಿತ್ತು. ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಬಾಂಬ್‌ ಬೆದರಿಕೆ ಎದುರಾಗಿತ್ತು. ಈ ಬೆದರಿಕೆಗಳ ಬಳಿಕ ವಿವಿಧ ವಿಮಾನ ನಿಲ್ಧಾಣಗಳಲ್ಲಿ ನಿರ್ದಿಷ್ಟ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಭದ್ರತಾ ಏಜೆನ್ಸಿಗಳು ಹೆಚ್ಚಿನ ನಿಗಾವಹಿಸಿವೆ.

ಮುಂಬೈನಿಂದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದ ಒಂದು ದಿನದ ನಂತರ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ ಮೂಲಕ ಬೆದರಿಕೆ ಎದುರಾಗಿತ್ತು. ಇದರಿಂದಾಗಿ ನೂರಾರು ಪ್ರಯಾಣಿಕರು ಮತ್ತು ಏರ್‌ಲೈನ್ ಸಿಬ್ಬಂದಿಗೆ ತೊಂದರೆಯಾಯಿತು. ಸೋಮವಾರದ ಬಾಂಬ್‌ ಬೆದರಿಕೆ ಕರೆ ಹುಸಿ ಕರೆ ಎಂದು ನಂತರ ಭದ್ರತಾ ಸಿಬ್ಬಂದಿ ದೃಢೀಕರಿಸಿದರು.

ಕಳೆದ ಎರಡು ದಿನಗಳ ಅವಧಿಯಲ್ಲಿ ಭಾರತದ ಕನಿಷ್ಠ 10 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ ಎದುರಾಗಿದೆ. ಮಂಗಳವಾರ (ಅಕ್ಟೋಬರ್ 15) ದೆಹಲಿಯಿಂದ ಷಿಕಾಗೋಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 777-300 ಇಆರ್ ವಿಮಾನಕ್ಕೆ ಬಾಂಬ್‌ ಬೆದರಿಕೆ ಎದುರಾಗಿತ್ತು. ಹೀಗಾಗಿ ಕೆನಡಾದ ಏರ್‌ಪೋರ್ಟ್‌ನಲ್ಲಿ ತುರ್ತಾಗಿ ಅದು ಭೂಸ್ಪರ್ಶ ಮಾಡಿತ್ತು. ಅದರಲ್ಲಿ 211 ಜನರಿದ್ದರು. ಅದು ಕೂಡ ಹುಸಿ ಬಾಂಬ್‌ ಬೆದರಿಕೆ ಎಂದು ಖಾತ್ರಿಯಾದ ಬಳಿಕ ವಿಮಾನ ಹಾರಾಟ ಮುಂದುವರಿಸಿತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.