ITR refund scam; ಆದಾಯ ತೆರಿಗೆ ರೀಫಂಡ್, ಆನ್‌ಲೈನ್ ವಂಚಕರ ಜಾಲಕ್ಕೆ ಬೀಳಬೇಡಿ, ಸೈಬರ್ ವಂಚನೆ ಮೊದಲೇ ಗುರುತಿಸಿ ಜಾಗೃತರಾಗಿ
Aug 19, 2024 07:28 PM IST
ಆನ್‌ಲೈನ್ ವಂಚನೆ; ಆದಾಯ ತೆರಿಗೆ ರೀಫಂಡ್ ವಂಚನೆ (ಸಾಂಕೇತಿಕ ಚಿತ್ರ)
ITR refund scam; ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ಮುಗಿದಿದೆ. ಆದಾಯ ತೆರಿಗೆ ಇಲಾಖೆ ಈಗ ಅವುಗಳನ್ನು ಪರಿಶೀಲಿಸಿ ಹೆಚ್ಚುವರಿ ತೆರಿಗೆ ರೀಫಂಡ್ ಮಾಡುವ ಕಾಲಘಟ್ಟ ಇದಾಗಿದ್ದು, ಆನ್‌ಲೈನ್ ವಂಚಕರ ಜಾಲಕ್ಕೆ ಬೀಳಬೇಡಿ, ಸೈಬರ್ ವಂಚನೆ ಮೊದಲೇ ಗುರುತಿಸಿ ಜಾಗೃತರಾಗಿ ಇರಬೇಕು ಎಂದು ಇಲಾಖೆ ಎಚ್ಚರಿಸಿದೆ.
ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿ, ಹೆಚ್ಚುವರಿಯಾಗಿ ಕಡಿತವಾಗಿರುವ ತೆರಿಗೆ ಹಣ ರೀಫಂಡ್ ಆಗುವ ಸಮಯ ಇದು. ಸೈಬರ್ ವಂಚಕರು ಅಮಾಯಕರನ್ನು ವಂಚಿಸುವುದಕ್ಕೆ ಐಟಿಆರ್ ರೀಫಂಡ್ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ತೆರಿಗೆ ಪಾವತಿದಾರರನ್ನು ಎಚ್ಚರಿಸುವ ಸಲುವಾಗಿ ಸರಣಿ ಟ್ವೀಟ್ ಮಾಡಿದೆ.
ಆದಾಯ ತೆರಿಗೆ ಇಲಾಖೆಯ ನೈಜ ಸಂದೇಶವನ್ನು ಅರಿಯುವುದು ಮತ್ತು ನಕಲಿ ಸಂದೇಶವನ್ನು ಗುರುತಿಸುವುದು ಹೇಗೆ ಎಂಬುದರ ವಿವರವನ್ನು ಆದಾಯ ತೆರಿಗೆ ಇಲಾಖೆ ಸರಣಿ ಟ್ವೀಟ್‌ನಲ್ಲಿ ವಿವರಿಸಿದೆ. ಆದಾಯ ತೆರಿಗೆ ಇಲಾಖೆ ಅಥವಾ ಇಲಾಖೆ ಅಧಿಕಾರಿಗಳ ಹೆಸರಲ್ಲಿ ಬರುವ ನಕಲಿ ಕರೆಗಳು ಮತ್ತು ಪಾಪ್-ಅಪ್ ನೋಟಿಫಿಕೇಶನ್‌ಗಳ ಬಗ್ಗೆ ಎಚ್ಚರದಿಂದ ಇರಬೇಕು. ಇದರಲ್ಲಿ ತೆರಿಗೆ ಮರುಪಾವತಿ ಪಡೆಯಬಹುದು ಎಂಬ ಸಂದೇಶವಿರುತ್ತದೆ. ಇದು ಆನ್‌ಲೈನ್ ವಂಚನೆಯ ಒಂದು ಮಾದರಿ. ಈ ರೀತಿ ಸಂದೇಶ ಬಂದಾಗ ಅದು ಅಸಲಿಯೋ ನಕಲಿಯೋ ಎಂಬುದನ್ನು ತೆರಿಗೆ ಪಾವತಿದಾರರೇ ಗುರುತಿಸಬೇಕಾಗುತ್ತದೆ.
ವಂಚನೆಯ ಸುಳಿವು ಪಡೆದು ಜಾಗೃತರಾಗಿ
ಆದಾಯ ತೆರಿಗೆ ರೀಫಂಡ್ ಸಂಬಂಧಿಸಿದ ವಂಚನೆಯನ್ನು ಮೊದಲೇ ಗುರುತಿಸಬೇಕು. ಆ ಮೂಲಕ ವಂಚನೆಯ ಸುಳಿಗೆ ಬೀಳದಂತೆ ಜಾಗೃತರಾರಬೇಕು. ಆನ್‌ಲೈನ್ ವಂಚನೆಯ ಜಾಲಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹೀಗೆ ಮಾಡಿ
1) ತೆರಿಗೆ ರೀಫಂಡ್ ಸಂಬಂಧಿಸಿದ ಅಪರಿಚಿತ ವ್ಯಕ್ತಿಗಳ ಫೋನ್ ಕರೆ, ಇಮೇಲ್, ಎಸ್‌ಎಂಎಸ್, ವಾಟ್ಸ್‌ಆಪ್ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವುದು ಬೇಡ.
2) ಆದಾಯ ತೆರಿಗೆ ಇಲಾಖೆ ಹೆಸರಲ್ಲಿ ಬಂದ ಎಪಿಕೆ ಫೈಲ್‌ಗಳು ಅಥವಾ ಇನ್ಯಾವುದೇ ಫೈಲ್‌ಗಳ ಯುಆರ್‌ಎಲ್ ಅನ್ನು ಕ್ಲಿಕ್ ಮಾಡಬೇಡಿ.
3) ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸ ಪರಿಶೀಲಿಸಿ
4) ನಿಮ್ಮ ವೈಯಕ್ತಿಕ ಬ್ಯಾಂಕ್ ಖಾತೆ ವಿವರ, ಆಧಾರ್ ನಂಬರ್, ಪ್ಯಾನ್ ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ.
5) ರೀಫಂಡ್ ಹೆಸರಲ್ಲಿ ಒಟಿಪಿ ಕೇಳಿದರೆ ಕೊಡಬೇಡಿ, ಆದಾಯ ತೆರಿಗೆ ಇಲಾಖೆ ತೆರಿಗೆ ರೀಫಂಡ್ ಮಾಡುವಾಗ ತೆರಿಗೆದಾರರ ಖಾತೆಗೆ ನೇರವಾಗಿ ಜಮೆ ಮಾಡುತ್ತದೆ ಎಂಬುದನ್ನು ಮರೆಯಬೇಡಿ.
ಅಸಲಿ ಮತ್ತು ನಕಲಿ ಗುರುತಿಸುವುದು
ಐಟಿ ಇಲಾಖೆಯವರು ಎಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ನಕಲಿ ಮೇಲ್‌ಗಳಲ್ಲಿ ಅಟ್ಯಾಚ್‌ಮೆಂಟ್ ಇದ್ದರೆ ಅದನ್ನು ಡೌನ್‌ಲೋಡ್ ಮಾಡುವುದಾಗಲೀ, ಅದನ್ನು ತೆರೆದು ನೋಡುವುದಾಗಲೀ ಮಾಡಬೇಡಿ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಅಂತಹ ಮೇಲ್‌ಗಳಲ್ಲಿ ನೀಡಲಾದ ಯಾವುದೇ ಲಿಂಕ್‌ಗಳನ್ನು ನೇರವಾಗಿ ಕ್ಲಿಕ್ ಮಾಡಬಾರದು. ಬ್ರೌಸರ್‌ಗಳಿಗೆ ಕಟ್ ಅಂಡ್ ಪೇಸ್ಟ್ ಕೂಡ ಮಾಡಬಾರದು. ಇದರ ಹೊರತಾಗಿ, ತೆರಿಗೆದಾರರು ಆಧಾರ್, OTP ಮತ್ತು ಪಾಸ್‌ವರ್ಡ್‌ಗಳಂತಹ ಸೂಕ್ಷ್ಮ ಮಾಹಿತಿಯನ್ನು ಯಾರಿಗೂ ಶೇರ್ ಮಾಡಬಾರದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
“ನಕಲಿ ಸಂದೇಶ ಬಹುತೇಕ ಹೀಗಿರಬಹುದು: ನಿಮಗೆ 15000 ರೂಪಾಯಿ ಆದಾಯ ತೆರಿಗೆ ಮರುಪಾವತಿಯನ್ನು ಅನುಮೋದಿಸಲಾಗಿದೆ. ಮೊತ್ತವನ್ನು ಶೀಘ್ರದಲ್ಲೇ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ, ದಯವಿಟ್ಟು ನಿಮ್ಮ ಖಾತೆ ಸಂಖ್ಯೆ 5XXXXX6777 ಅನ್ನು ಪರಿಶೀಲಿಸಿ. ಇದು ಸರಿಯಾಗಿಲ್ಲದಿದ್ದರೆ, ದಯವಿಟ್ಟು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಅಪ್‌ಡೇಟ್ ಮಾಡಿ" - ಈ ರೀತಿ ನಕಲಿ ಸಂದೇಶ ಬರಬಹುದು. ಇಂತಹ ಸಂದೇಶಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ತೆರಿಗೆದಾರರು ಇಂತಹ ಮೋಸದ ಸಂದೇಶಗಳು ಮತ್ತು ಇಮೇಲ್‌ಗಳನ್ನು ಐಟಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಫಾರ್ವರ್ಡ್ ಮಾಡಬೇಕು. ನಕಲಿ ಸಂದೇಶಗಳು ಬಂದಾಗ ಅವುಗಳ ವಿರುದ್ಧ ದೂರು ದಾಖಲಿಸುವುದು ಹೇಗೆ ಎಂಬುದನ್ನು ಕೂಡ ಗಮನಿಸಿ.
ಈ ರೀತಿ ಸಂದೇಶಗಳು ಬಂದಾಗ, ಅನುಮಾನಾಸ್ಪದ ಇಮೇಲ್‌ಗಗಳನ್ನು webmanager@incometax.gov.in ಗೆ ರವಾನಿಸಬಹುದು. ಇದಲ್ಲದೇ, incident@cert-in.org.in ಎಂಬ ಇಮೇಲ್‌ಗೂ ಕಳುಹಿಸಬೇಕು.