ಐಟಿ ರಿಟರ್ನ್ಸ್ ಫೈಲಿಂಗ್; ಆದಾಯ ತೆರಿಗೆ ಸೆಕ್ಷನ್ 87ಎ ಪ್ರಕಾರ ರಿಯಾಯಿತಿ ಏನು, ಯಾರಿಗೆ ಇದು ಲಭ್ಯ, ಯಾರಿಗಿಲ್ಲ
Jul 25, 2024 07:26 PM IST
ಐಟಿ ರಿಟರ್ನ್ಸ್ ಫೈಲಿಂಗ್; ಆದಾಯ ತೆರಿಗೆ ಸೆಕ್ಷನ್ 87ಎ ಪ್ರಕಾರ ರಿಯಾಯಿತಿ ಏನು, ಯಾರಿಗೆ ಇದು ಲಭ್ಯ, ಯಾರಿಗಿಲ್ಲ ಎಂಬುದರ ವಿವರ. (ಸಾಂಕೇತಿಕ ಚಿತ್ರ)
ಐಟಿ ರಿಟರ್ನ್ಸ್ ಫೈಲಿಂಗ್; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಸಂದರ್ಭ ಇದು. ಅನೇಕರು ಶೂನ್ಯ ತೆರಿಗೆ ಪಾವತಿ ತೋರಿಸಲು ಬಳಸುವ ಆದಾಯ ತೆರಿಗೆ ಸೆಕ್ಷನ್ 87ಎ ಪ್ರಕಾರ ರಿಯಾಯಿತಿ ಏನು?, ಯಾರಿಗೆ ಇದು ಲಭ್ಯ, ಯಾರಿಗಿಲ್ಲ ಎಂಬ ವಿವರ ಇಲ್ಲಿದೆ.
ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ಶೂನ್ಯ ತೆರಿಗೆ ಪಾವತಿಯನ್ನು ದೃಢೀಕರಿಸಲು ಕೆಲವು ತೆರಿಗೆದಾರರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87ಎ ಅನ್ನು ಬಳಸುತ್ತಾರೆ. ಇದು ಹಳೆಯ ತೆರಿಗೆ ಪದ್ಧತಿಯಲ್ಲಿ ಅವರ ಆದಾಯ 5 ಲಕ್ಷ ರೂಪಾಯಿ ಇದ್ದರೆ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ 7 ಲಕ್ಷ ರೂಪಾಯಿ ಇದ್ದರೆ ಶೂನ್ಯ ತೆರಿಗೆ ರಿಟರ್ನ್ಸ್ (Nil IT Returns) ಸಲ್ಲಿಸಲು ನೆರವಿಗೆ ಬರುತ್ತದೆ.
ಆದಾಗ್ಯೂ, ಕೆಲವು ವಿಶೇಷ ಸಂದರ್ಭಗಳಲ್ಲಿ ಈ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗದೆ ಹಲವಾರು ತೆರಿಗೆದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ತಮ್ಮ ಅಸಹಾಯಕತೆ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಇವುಗಳಲ್ಲಿ ಸೆಕ್ಷನ್ 111A ಅಡಿಯಲ್ಲಿ ವಿಧಿಸಬಹುದಾದ ಅಲ್ಪಾವಧಿಯ ಬಂಡವಾಳ ಲಾಭಗಳು (Short Term Capital Gains) ಮತ್ತು ವಿಭಾಗ 112 ರ ಅಡಿಯಲ್ಲಿ ದೀರ್ಘಾವಧಿಯ ಬಂಡವಾಳ ಲಾಭಗಳು (Long Term Capital Gains) ಸೇರಿವೆ. ವಿಶೇಷ ಎಂದರೆ ಈ ಸಮಸ್ಯೆ ಶುರುವಾಗಿರುವುದು ಇದೇ ಜುಲೈ 5 ರಿಂದ. ಜುಲೈ 23 ರಂದು ಬಜೆಟ್ ಮಂಡನೆಯಾಗಿದ್ದು, ಇಲ್ಲಿ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ದರದ ಸ್ಲ್ಯಾಬ್‌ನಲ್ಲಿ ಪರಿಷ್ಕರಣೆಯಾಗಿದೆ. ಹೀಗಾಗಿ ಆದಾಯ ತೆರಿಗೆ ಸೆಕ್ಷನ್ 87ಎ ಹೆಚ್ಚು ಚರ್ಚೆಗೆ ಒಳಗಾಗಿದೆ.
ಏನಿದು ಆದಾಯ ತೆರಿಗೆ ಸೆಕ್ಷನ್ 87ಎ ರಿಬೇಟ್
ಸೆಕ್ಷನ್ 87A ಪ್ರಕಾರ ರಿಬೇಟ್ ಅನ್ನು ವಿವರಿಸುವುದಾದರೆ, ಸರಳವಾಗಿ ಹೇಳಬೇಕು ಎಂದರೆ ತೆರಿಗೆದಾರರಿಗೆ ತಮ್ಮ ಆದಾಯ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಇದು ಅನುವು ಮಾಡಿಕೊಡುತ್ತದೆ. ಹಳೆಯ ತೆರಿಗೆ ಪದ್ಧತಿ ಪ್ರಕಾರ ವ್ಯಕ್ತಿಯ ಒಟ್ಟು ವಾರ್ಷಿಕ ಆದಾಯವು 5 ಲಕ್ಷ ರೂಪಾಯಿ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂಪಾಯಿಯನ್ನು ಮೀರದಿದ್ದರೆ ಅಂತಹ ವ್ಯಕ್ತಿಗಳು ಈ ಸೆಕ್ಷನ್ ಪ್ರಕಾರ ರಿಬೇಟ್ ಅಥವಾ ರಿಯಾಯಿತಿಯನ್ನು ಪಡೆಯಬಹುದು. ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯನ್ನು ಕ್ಲೈಮ್ ಮಾಡಿದ ನಂತರ, ಆದಾಯ ತೆರಿಗೆ ಹೊಣೆಗಾರಿಕೆಯು 'ನಿಲ್' ಅಥವಾ ಶೂನ್ಯವಾಗಿರುತ್ತದೆ.
ಆದಾಯ ತೆರಿಗೆ ಸೆಕ್ಷನ್ 87ಎ; ರಿಯಾಯಿತಿ ಪಡೆಯುವಲ್ಲಿ ತೆರಿಗೆದಾರರ ಸಮಸ್ಯೆ
ಆದಾಯ ತೆರಿಗೆ ಸೆಕ್ಷನ್ 87ಎ ಪ್ರಕಾರ ರಿಯಾಯಿತಿ ಪಡೆಯುವಲ್ಲಿ ತೆರಿಗೆದಾರರ ಸಮಸ್ಯೆಯನ್ನು ಜುಲೈ 5 ರಿಂದ ಎದುರಿಸುತ್ತಿದ್ದಾರೆ ಎಂಬುದರ ಕಡೆಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್ ಗಮನಸೆಳೆದಿದೆ.
"ಈಕ್ವಿಟಿ ಷೇರುಗಳು ಅಥವಾ ಇಕ್ವಿಟಿ-ಆಧಾರಿತ ಮ್ಯೂಚುವಲ್ ಫಂಡ್‌ಗಳ ಮೇಲಿನ ಅಲ್ಪಾವಧಿಯ ಬಂಡವಾಳ ಲಾಭಗಳು ಸೇರಿ ವಿವಿಧ ವಿಶೇಷ ದರದ ಆದಾಯಗಳಿಗೆ ಸೆಕ್ಷನ್ 87A ಪ್ರಕಾರ ರಿಯಾಯಿತಿ ಸಿಗುವುದಿಲ್ಲ. ಸೆಕ್ಷನ್ 111A ಪ್ರಕಾರ ಶೇಕಡ 15ರ ರಿಯಾಯಿತಿ ಮಾತ್ರ ಸಿಗುತ್ತಿದೆ” ಎಂದು ಬಾಂಬೆ ಚಾರ್ಟರ್ಡ್ ಅಕೌಂಟೆಂಟ್ಸ್ ಸೊಸೈಟಿ (BCAS) ಅಧ್ಯಕ್ಷ ಆನಂದ್ ಬಥಿಯಾ ಹೇಳಿದ್ದಾಗಿ ಲೈವ್ ಮಿಂಟ್ ಉಲ್ಲೇಖಿಸಿದೆ.
ಗಮನಿಸಬೇಕಾದ ಅಂಶ ಎಂದರೆ, ತೆರಿಗೆದಾರರು ಷೇರುಗಳು ಅಥವಾ ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಮಾರಾಟದ ಖಾತೆಯಲ್ಲಿ ಅಲ್ಪಾವಧಿಯ ಬಂಡವಾಳ ಲಾಭದ ಅಡಿಯಲ್ಲಿ ಆದಾಯವನ್ನು ಹೊಂದಿದ್ದರೆ, ನಂತರ ಹೊಸ ತೆರಿಗೆ ಪದ್ಧತಿಯಲ್ಲಿ ಅವರ ಒಟ್ಟು ಆದಾಯವು 7 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೂ ಸಹ ರಿಯಾಯಿತಿಯನ್ನು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)