ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಹೊಸ ನಿಯಮ; ಅಜ್ಜ ಅಜ್ಜಿ ಹೆಸರಲ್ಲಿದ್ದರೆ ಅಪ್ಪ ಅಮ್ಮನ ಹೆಸರಿಗೆ ಖಾತೆ ವರ್ಗಾವಣೆ ಕಡ್ಡಾಯ
Sep 02, 2024 08:21 PM IST
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಹೊಸ ನಿಯಮ; ಅಜ್ಜ ಅಜ್ಜಿ ಹೆಸರಲ್ಲಿದ್ದರೆ ಅಪ್ಪ ಅಮ್ಮನ ಹೆಸರಿಗೆ ಖಾತೆ ವರ್ಗಾವಣೆ ಕಡ್ಡಾಯವಾಗಲಿದೆ. (ಸಾಂಕೇತಿಕ ಚಿತ್ರ)
Sukanya Samriddhi Accounts; ಹೆಣ್ಣು ಮಗುವಿಗೆ ಆರ್ಥಿಕ ಭದ್ರತೆ ಒದಗಿಸುವುದಕ್ಕಾಗಿ ಈಗಾಗಲೇ ಅಜ್ಜ ಅಜ್ಜಿ ಹೆಸರಿನಲ್ಲಿ ಖಾತೆ ತೆರೆದಿದ್ದರೆ ಶೀಘ್ರವೇ ಅದನ್ನು ಅಪ್ಪ ಅಮ್ಮನ ಹೆಸರಿಗೆ ವರ್ಗಾವಣೆ ಮಾಡಬೇಕು. ಇದನ್ನು ಕಡ್ಡಾಯಗೊಳಿಸುವ ನಿಯಮ ಜಾರಿಗೆ ಬರಲಿದ್ದು, ವರ್ಗಾವಣೆ ಮಾಡುವುದು ಹೇಗೆ, ಅದಕ್ಕೆ ಬೇಕಾದ ದಾಖಲೆಗಳ ವಿವರ ಈ ವರದಿಯಲ್ಲಿದೆ.
ಬೆಂಗಳೂರು/ನವದೆಹಲಿ: ಜನಪ್ರಿಯ ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಅನಿಯಂತ್ರಿತವಾಗಿ ತೆರೆಯಲಾದ ಉಳಿತಾಯ ಖಾತೆಗಳನ್ನು ಕ್ರಮಬದ್ಧಗೊಳಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯು ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ.
ಯೋಜನೆ ಪ್ರಾರಂಭಿಸಿದ ಬಳಿಕ ಸಾರ್ವಜನಿಕರು ಈ ಖಾತೆ ಶುರು ಮಾಡುವಾಗ ಖಾತೆಗಳ ಮಾಲೀಕತ್ವಕ್ಕೆ ಸಂಬಂಧಿಸಿ ಅನುಸರಿಸಬೇಕಾದ ಸರಿಯಾದ ಮಾರ್ಗಸೂಚಿಗಳನ್ನು ಸರ್ಕಾರ ನೀಡಿರಲಿಲ್ಲ. ಈ ನಿಯಮಗಳು ಮುಂದಿನ ತಿಂಗಳು 1 ರಿಂದ ಅಂದರೆ 2024ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.
ಅಜ್ಜ-ಅಜ್ಜಿ ತೆರೆದ ಸುಕನ್ಯಾ ಸಮೃದ್ಧಿ ಖಾತೆಗಳ ಮಾಲೀಕತ್ವ ವರ್ಗಾವಣೆ ಕಡ್ಡಾಯ
ಈ ಮಾರ್ಗಸೂಚಿಗಳಲ್ಲಿ ಮುಖ್ಯವಾದುದು ಸುಕನ್ಯಾ ಸಮೃದ್ಧಿ ಖಾತೆಗಳ ಮಾಲೀಕತ್ವ ಬದಲಾವಣೆ. ಹೊಸ ನಿಯಮ ಪ್ರಕಾರ, ಹೆಣ್ಣು ಮಗುವಿನ ಕಾನೂನು ಬದ್ಧ ಪಾಲಕರು ಅಥವಾ ಪೋಷಕರು ತೆರೆಯದೇ ಇರುವಂತಹ ಖಾತೆಯನ್ನು ಅವರ ಮಾಲೀಕತ್ವಕ್ಕೆ ವರ್ಗಾವಣೆ ಮಾಡಬೇಕು. ಅಂದರೆ, ಅಜ್ಜ -ಅಜ್ಜಿ ತೆರೆದ ಖಾತೆಗಳಿದ್ದರೆ ಅಂಥವನ್ನು ಹೆಣ್ಣುಮಗುವಿನ ಪಾಲಕರ ಹೆಸರಿಗೆ ವರ್ಗಾವಣೆ ಮಾಡಬೇಕು. ಇದು ಕಡ್ಡಾಯ.
ಈ ಹಿಂದೆ, ಹಣಕಾಸು ಭದ್ರತೆ ಒದಗಿಸುವುದಕ್ಕಾಗಿ ಹೆಣ್ಣುಮಗುವಿನ ಅಜ್ಜ- ಅಜ್ಜಿ ಕೂಡ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದಾಗ್ಯೂ, ಈ ಖಾತೆ ಕಡ್ಡಾಯವಾಗಿ ಹೆಣ್ಣು ಮಗುವಿನ ಕಾನೂನು ಬದ್ಧ ಪೋಷಕರು ಅಥವಾ ಹೆತ್ತವರು (ಪಾಲಕರು) ಮಾತ್ರ ತೆರೆಯಬಹುದು ಎಂಬುದನ್ನು ದೃಢಪಡಿಸಿತ್ತು. ನಿಯಮ ಬಿಗಿಯಾಗಿ ಅನುಸರಣೆಯಾಗಿರಲಿಲ್ಲ. ಈಗ ಅದು ಕಡ್ಡಾಯವಾಗಿದೆ ಎಂದು ಸಿಎನ್‌ಬಿಸಿ ನ್ಯೂಸ್18 ವರದಿ ವಿವರಿಸಿದೆ.
ಸುಕನ್ಯಾ ಸಮೃದ್ಧಿ ಖಾತೆ ಮಾಲೀಕತ್ವ ವರ್ಗಾವಣೆ ಹೇಗೆ - ಸರಳ ಹಂತಗಳ ವಿವರಣೆ
ಅಜ್ಜ ಅಜ್ಜಿಯರ ಪಾಲನೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆದಿರುವವರಿಗೆ, ಹೊಸ ನಿಯಮಗಳನ್ನು ಹೇಗೆ ಅನುಸರಿಸಬೇಕು ಎಂಬುದರ ಸರಳ ವಿವರಣೆ ಇಲ್ಲಿದೆ.
ಸುಕನ್ಯಾ ಸಮೃದ್ಧಿ ಖಾತೆಯ ಮಾಲೀಕತ್ವ ವರ್ಗಾವಣೆ ಮಾಡುವಾಗ, ಖಾತೆಗೆ ಸಂಬಂಧಿಸಿದ ಎಲ್ಲ ವಿವರಗಳೂ ಇರುವಂತಹ ಖಾತೆಯ ಮೂಲ ಪಾಸ್ ಪುಸ್ತಕ, ವಯಸ್ಸು ಮತ್ತು ಸಂಬಂಧ ದೃಢೀಕರಿಸುವ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಕಾನೂನು ಬದ್ಧ ಪಾಲಕರು ಎಂಬುದನ್ನು ದೃಢೀಕರಿಸುವ ಸರ್ಕಾರದ ಗುರುತಿನ ಚೀಟಿ, ಅಂಚೆರ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಖಾತೆ ಇದೆ ಎಂಬುದನ್ನು ದೃಢೀಕರಿಸುವ ಅರ್ಜಿ ದಾಖಲೆ ಇರಬೇಕು.
ಇವಿಷ್ಟನ್ನೂ ತಗೊಂಡು ಬಳಕೆದಾರರು ಖಾತೆ ಇರುವಂತಹ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಅಲ್ಲಿ ದಾಖಲೆ ಸಲ್ಲಿಸಿ ಮಾಲೀಕತ್ವ ವರ್ಗಾವಣೆಗೆ ಮನವಿ ಮಾಡಬೇಕು. ಮನವಿ ಅರ್ಜಿಗೆ ಖಾತೆಯ ಹಾಲಿ ಮಾಲೀಕರು ( ಅಜ್ಜ/ಅಜ್ಜಿ) ಮತ್ತು ಹೊಸ ಮಾಲೀಕರು (ಅಪ್ಪ/ಅಮ್ಮ) ಸಹಿ ಹಾಕಬೇಕು. ಇದಾದ ಬಳಿಕ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಉಳಿದ ಕೆಲಸಗಳು ನಡೆಯುತ್ತವೆ. ಮಾಲೀಕತ್ವ ವರ್ಗಾವಣೆ ಆಗಿರುವುದನ್ನು ಖಾತರಿ ಮಾಡಿಕೊಳ್ಳಿ.
ಒಬ್ಬಳೇ ಹೆಣ್ಣು ಮಗುವಿನ ಹೆಸರಿನಲ್ಲಿ ಹಲವು ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆದಿದ್ದರೆ ಅಂಥವನ್ನು ಮುಚ್ಚಬೇಕು. ಅದು ನಿಯಮ ಬಾಹಿರವಾಗಿದ್ದು, ಖಾತೆ ಮುಚ್ಚಿದ ಕೂಡಲೇ ಇದುವರೆಗೆ ಪಾವತಿ ಮಾಡಿರುವ ಹಣವನ್ನು ಬಳಕೆದಾರರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಬಡ್ಡಿ ಇರುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.