ಸುಕನ್ಯಾ ಸಮೃದ್ಧಿ vs ಆರ್‌ಡಿ; ಮಗುವಿನ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ; ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ಸುಕನ್ಯಾ ಸಮೃದ್ಧಿ Vs ಆರ್‌ಡಿ; ಮಗುವಿನ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ; ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ

ಸುಕನ್ಯಾ ಸಮೃದ್ಧಿ vs ಆರ್‌ಡಿ; ಮಗುವಿನ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ; ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ

ಮಕ್ಕಳ ಭವಿಷ್ಯಕ್ಕೆ ಹಣ ಹೊಂದಿಸುವ ಸಲುವಾಗಿ ಪೋಷಕರು ಕೆಲವು ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಸುಕನ್ಯಾ ಸಮೃದ್ಧಿ ಹಾಗೂ ಆರ್‌ಡಿ (ರಿಕರಿಂಗ್‌ ಡೆಪಾಸಿಟ್‌) ಈ ಎರಡಲ್ಲಿ ಯಾವುದು ಉತ್ತಮ? ಈ ಬಗ್ಗೆ ಪೋಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸುಕನ್ಯಾ ಸಮೃದ್ಧಿ vs ಆರ್‌ಡಿ
ಸುಕನ್ಯಾ ಸಮೃದ್ಧಿ vs ಆರ್‌ಡಿ

ಮಕ್ಕಳ ಭವಿಷ್ಯ ಚೆನ್ನಾಗಿರಬೇಕು, ನಮ್ಮಂತೆ ನಮ್ಮ ಮಕ್ಕಳು ಕಷ್ಟಪಡಬಾರದು ಎಂದು ಎಲ್ಲಾ ಪೋಷಕರು ಬಯಸುತ್ತಾರೆ. ಅಲ್ಲದೇ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಬಯಸುತ್ತಾರೆ. ಇತ್ತೀಚಿಗೆ ಹಲವಾರು ಸ್ಕೀಮ್‌ಗಳು ಮಕ್ಕಳು ಭವಿಷ್ಯ ರೂಪಿಸಲು ನೆರವಾಗುತ್ತಿದೆ. ಅವುಗಳಲ್ಲಿ ಹೆಣ್ಣುಮಕ್ಕಳಿಗಾಗಿ ಇವರು ಸುಕನ್ಯಾ ಸಮೃದ್ಧಿ ಒಂದೆಡೆಯಾದರೆ, ಆರ್‌ಡಿ ಅಥವಾ ರಿಕರಿಂಗ್‌ ಡೆಪಾಸಿಟ್‌ ಕೂಡ ಒಂದು. ಈ ಎರಡಲ್ಲಿ ಯಾವುದು ಉತ್ತಮ, ಇದರಿಂದ ಹೆಚ್ಚು ಲಾಭ, ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಈ ಎಲ್ಲದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಇರುವ ಯೋಜನೆ, ಅವರ ಮದುವೆ, ವಿದ್ಯಾಭ್ಯಾಸದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಅನುವು ಮಾಡಿಕೊಡುವ ಯೋಜನೆ ಇದಾಗಿದೆ. ಇದು ಹೆಣ್ಣುಮಗುವಿನ ಭವಿಷ್ಯವನ್ನು ಭದ್ರಪಡಿಸುವ ಗುರಿಯೊಂದಿಗೆ ಪ್ರಾರಂಭಿಸಲಾದ ಯೋಜನೆಯಾಗಿದೆ.

ಆರ್‌ಡಿ ಎನ್ನುವುದು ಅವಧಿ ಆಧಾರಿತ ಠೇವಣಿ ಖಾತೆಯಾಗಿದೆ. ಇದರಲ್ಲಿ ವ್ಯಕ್ತಿಗಳು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಪ್ರತಿ ತಿಂಗಳು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಆರ್‌ಡಿಯಲ್ಲಿ ಪ್ರತಿತಿಂಗಳು ನೀವು ನಿಮ್ಮ ಖಾತೆಯಿಂದ ನಿರ್ದಿಷ್ಟ ಹಣ ಕಡಿತವಾಗುವಂತೆ ಮಾಡಬಹುದು, ಅದು ಸೇವಿಂಗ್‌ ರೂಪದಲ್ಲಿ ಆರ್‌ಡಿ ಖಾತೆಯಲ್ಲಿರುತ್ತದೆ, ಮಾತ್ರವಲ್ಲ ಇದಕ್ಕೆ ಬಡ್ಡಿಕೂಡ ದೊರೆಯುತ್ತದೆ.

ಸುಕನ್ಯಾ ಸಮೃದ್ಧಿ ಹಾಗೂ ಆರ್‌ಡಿ ವೈಶಿಷ್ಟ್ಯಗಳು

ಅರ್ಹತೆ

ಸುಕನ್ಯಾ ಸಮೃದ್ಧಿ: 10 ವರ್ಷದ ಒಳಗಿನ ಹೆಣ್ಣುಮಕ್ಕಳ ಪೋಷಕರು ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.

ಆರ್‌ಡಿ: ಯಾವುದೇ ವಯಸ್ಸು, ವ್ಯಕ್ತಿ ಹಾಗೂ ಲಿಂಗವನ್ನು ಗಣನೆಗೆ ತೆಗೆದುಕೊಳ್ಳದೇ ಆರ್‌ಡಿ ಖಾತೆಯನ್ನು ತೆರೆಯಬಹುದು. ಅನಿವಾಸಿ ಭಾರತೀಯರಿಗೂ ಆರ್‌ಡಿ ಖಾತೆ ತೆರೆಯಲು ಅವಕಾಶವಿದೆ.

ಎಲ್ಲಿ ಖಾತೆ ತೆರೆಯಬಹುದು

ಸುಕನ್ಯಾ ಸಮೃದ್ಧಿ: ಎಸ್‌ಎಸ್‌ವೈ (ಸುಕನ್ಯಾ ಸಮೃದ್ಧಿ ಯೋಜನೆ) ಖಾತೆಯನ್ನು ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ತೆರೆಯಬಹುದು.

ಆರ್‌ಡಿ: ಆರ್‌ಡಿ ಖಾತೆಯನ್ನು ಅಂಚೆ ಕಚೇರಿಗಳು ಮತ್ತು ಬ್ಯಾಂಕ್‌ಗಳಲ್ಲಿ ತೆರೆಯಬಹುದು. ಆದರೆ ಎನ್‌ಆರ್‌ಐಗಳು ಬ್ಯಾಂಕ್‌ಗಳಲ್ಲಿ ಮಾತ್ರ ಆರ್‌ಡಿ ಖಾತೆ ತೆರೆಯಲು ಅವಕಾಶವಿದೆ.

ಎಷ್ಟು ಖಾತೆ ತೆರೆಯಬಹುದು

ಸುಕನ್ಯಾ ಸಮೃದ್ಧಿ: ಒಂದು ಹೆಣ್ಣುಮಗು ತನ್ನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು.

ಆರ್‌ಡಿ: ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯಬಹುದು.

ಯೋಜನೆಯ ಉದ್ದೇಶ

ಸುಕನ್ಯಾ ಸಮೃದ್ಧಿ: ಎಸ್‌ಎಸ್‌ವೈ (ಸುಕನ್ಯಾ ಸಮೃದ್ಧಿ ಯೋಜನೆ) ಖಾತೆಯು ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸುವ ಮುಖ್ಯ ಗುರಿಯೊಂದಿಗೆ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ.

ಆರ್‌ಡಿ: ದುಬಾರಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು, ಸಣ್ಣ ಶೈಕ್ಷಣಿಕ ವೆಚ್ಚಗಳು, ಕಾರು ಖರೀದಿಸುವುದು ಇತ್ಯಾದಿಗಳಂತಹ ಅಲ್ಪಾವಧಿಯ ಉದ್ದೇಶಗಳಿಗಾಗಿ RD ಗಳನ್ನು ತೆರೆಯಬಹುದು.

ಅವಧಿ

ಸುಕನ್ಯಾ ಸಮೃದ್ಧಿ: ಸುಕನ್ಯಾ ಸಮೃದ್ಧಿ ಯೋಜನೆ ಅವಧಿಯು 21 ವರ್ಷಗಳದ್ದಾಗಿದೆ.

ಆರ್‌ಡಿ: ಆರ್‌ಡಿ ಖಾತೆಯ ಅವಧಿಯು 6 ತಿಂಗಳಿಂದ 10 ವರ್ಷಗಳವರೆಗೆ ಇರುತ್ತದೆ.

ಕನಿಷ್ಠ ಹೂಡಿಕೆ

ಸುಕನ್ಯಾ ಸಮೃದ್ಧಿ: 250 ರೂಪಾಯಿ

ಆರ್‌ಡಿ: ಆರ್‌ಡಿ ಠೇವಣಿಗೆ ಕನಿಷ್ಠ ಮೊತ್ತವು ಬ್ಯಾಂಕ್‌ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ, ಐಸಿಐಸಿಐ ಬ್ಯಾಂಕ್‌ನಲ್ಲಿ ತಿಂಗಳಿಗೆ ಕನಿಷ್ಠ ಮೊತ್ತವು 500 ರೂ ಠೇವಣಿ ಇಡಬಹುದು. ಆದಾಗ್ಯೂ, ಎಸ್‌ಬಿಐನಲ್ಲಿ 100 ರೂಪಾಯಿಯಿಂದ ಆರ್‌ಡಿ ಠೇವಣಿ ಮಾಡಬಹುದು.

ಗರಿಷ್ಠ ಹೂಡಿಕೆ

ಸುಕನ್ಯಾ ಸಮೃದ್ಧಿ: ಸುಕನ್ಯಾ ಸಮೃದ್ಧಿಯಲ್ಲಿ ಗರಿಷ್ಠ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಆರ್‌ಡಿ: ಗರಿಷ್ಠ ಮೊತ್ತಕ್ಕೆ ಮಿತಿಯಿಲ್ಲ.

ಬಡ್ಡಿದರ

ಸುಕನ್ಯಾ ಸಮೃದ್ಧಿ: ಸದ್ಯ ಸುಕನ್ಯಾ ಸಮೃದ್ಧಿಗೆ ಶೇ 7.6ರಷ್ಟು ಬಡ್ಡಿದರ ನೀಡಲಾಗುತ್ತಿದೆ.

ಆರ್‌ಡಿ: ಆರ್‌ಡಿ ಬಡ್ಡಿದರವು ಆಯಾ ಬ್ಯಾಂಕ್‌ಗಳ ಮೇಲೆ ಅವಲಂಬಿತವಾಗಿದೆ.

ಬಡ್ಡಿ ಲೆಕ್ಕಾಚಾರ

ಸುಕನ್ಯಾ ಸಮೃದ್ಧಿ: ವಾರ್ಷಿಕೊಮ್ಮೆ

ಆರ್‌ಡಿ: ತ್ರೈಮಾಸಿಕ

ಠೇವಣಿಗಳ ಮೇಲಿನ ತೆರಿಗೆ ಪ್ರಯೋಜನಗಳು

ಸುಕನ್ಯಾ ಸಮೃದ್ಧಿ: ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ಯೋಜನೆಗೆ ನೀಡಿದ ಯಾವುದೇ ಕೊಡುಗೆಗಳಿಗೆ ರೂ.1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಆರ್‌ಡಿ: ಯಾವುದೇ ತೆರಿಗೆ ಪ್ರಯೋಜನಗಳು ಸಿಗುವುದಿಲ್ಲ.

ಮೆಚುರಿಟಿ ಮೊತ್ತದ ಮೇಲಿನ ತೆರಿಗೆ ಪ್ರಯೋಜನಗಳು

ಸುಕನ್ಯಾ ಸಮೃದ್ಧಿ: ತೆರಿಗೆ ವಿನಾಯಿತಿ ಇದೆ

ಆರ್‌ಡಿ: ತೆರಿಗೆ ವಿನಾಯಿತಿ ಇಲ್ಲ

ಟಿಡಿಎಸ್‌ ಕಡಿತ

ಸುಕನ್ಯಾ ಸಮೃದ್ಧಿ: ಟಿಡಿಎಸ್‌ ಕಡಿತವಾಗುವುದಿಲ್ಲ

ಆರ್‌ಡಿ: ಟಿಡಿಎಸ್‌ ಕಡಿತವಾಗುತ್ತದೆ.

ಅವಧಿಗೂ ಮುನ್ನ ಖಾತೆಯನ್ನು ಕ್ಲೋಸ್‌ ಮಾಡುವುದು

ಸುಕನ್ಯಾ ಸಮೃದ್ಧಿ: ಈ ಖಾತೆಯನ್ನು ಹೊಂದಿರುವವರು ತೀರಿಕೊಂಡರೆ ಮರಣ ಪ್ರಮಾಣಪತ್ರವನ್ನು ನೀಡಿ ಖಾತೆಯನ್ನು ಮುಚ್ಚಬಹುದು. ಖಾತೆ ತೆರೆದ ದಿನಾಂಕದಿಂದ 5 ವರ್ಷಗಳು ಪೂರ್ಣಗೊಂಡ ನಂತರವೂ ಅಕೌಂಟ್‌ ಕ್ಲೋಸ್‌ ಮಾಡುವ ಅವಕಾಶವಿದೆ. ಮಾರಣಾಂತಿಕ ಕಾಯಿಲೆಯ ಚಿಕಿತ್ಸೆಗೆ ಈ ಅಕೌಂಟ್‌ನಲ್ಲಿರುವ ಹಣ ಬಳಸುವ ಸಲುವಾಗಿ ಖಾತೆಯನ್ನು ಮುಚ್ಚಬಹುದು.

ಆರ್‌ಡಿ: ಬ್ಯಾಂಕ್‌ನ ನಿಯಾಮಾವಳಿಗೆ ಅನುಸರಿಸಿ ಅವಧಿ ಪೂರ್ವ ಆರ್‌ಡಿ ಖಾತೆ ಮುಚ್ಚಲು ನಿರ್ದಿಷ್ಟ ಮೊತ್ತ ಪಾವತಿಸಬೇಕಾಗಬಹುದು. ಕೆಲವು ಬ್ಯಾಂಕ್‌ಗಳಲ್ಲಿ ಬಡ್ಡಿದರ ಕಡಿಮೆಯಾಗುತ್ತದೆ.

ಸುಕನ್ಯಾ ಸಮದ್ಧಿ ಹಾಗೂ ಆರ್‌ಡಿ ಖಾತೆಗಳ ನಡುವಿನ ವ್ಯತ್ಯಾಸ ಏನು ಎಂಬುದು ನಿಮಗೆ ಈಗ ಸ್ವಷ್ಟವಾಗಿ ಅರ್ಥವಾಗಿರಬೇಕು. ಈ ಎರಡೂ ಹಣ ಉಳಿತಾಯಕ್ಕೆ ಉತ್ತಮ ಎಂದಾದರೂ ಕೆಲವೊಂದು ನಿರ್ದಿಷ್ಟ ನಿಯಮಗಳು ಈ ಎರಡಕ್ಕೂ ಇದೆ. ಯಾವುದೇ ಉಳಿತಾಯ ಯೋಜನೆಯನ್ನು ಆರಂಭಿಸುವ ಮುನ್ನ ಅದರ ಒಳಿತು-ಕೆಡಕು, ಒಳ-ಹೊರಗು ತಿಳಿದು ಆರಂಭಿಸುವುದು ಉತ್ತಮ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner