logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಮಳೆನೀರಿನ ಮ್ಯಾಜಿಕ್ ಮಾಡಿದ ಆಧುನಿಕ ಭಗೀರಥ ಭಗವತಿ ಅಗರವಾಲ್, ಮಳೆಯೇ ಹಲವು ಹಳ್ಳಿಗಳಿಗೆ ಆಸರೆ: ರಂಗ ನೋಟ

ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಮಳೆನೀರಿನ ಮ್ಯಾಜಿಕ್ ಮಾಡಿದ ಆಧುನಿಕ ಭಗೀರಥ ಭಗವತಿ ಅಗರವಾಲ್, ಮಳೆಯೇ ಹಲವು ಹಳ್ಳಿಗಳಿಗೆ ಆಸರೆ: ರಂಗ ನೋಟ

D M Ghanashyam HT Kannada

Jun 29, 2024 12:28 PM IST

google News

ರಾಜಸ್ಥಾನದಲ್ಲಿ ಮಳೆ ನೀರು ಸಂಗ್ರಹದ ಮಹತ್ವ ಮನಗಾಣಿಸಿದ ಸಾಧಕ ಭಗವತಿ ಅಗರ್‌ವಾಲ್

    • ವರ್ಷಪೂರ್ತಿ ಪ್ರತಿದಿನ 9.5 ಲೀಟರ್‌ ನೀರನ್ನು ಪ್ರತಿ ವ್ಯಕ್ತಿಗೆ ತಲುಪಿಸುವುದಕ್ಕೆ ತಗಲುವ ವೆಚ್ಚ ಎರಡು ಅಮೆರಿಕನ್ ಡಾಲರ್. ಅಂದರೆ ವರ್ಷಕ್ಕೆ 135 ರೂಪಾಯಿಗಳು. ಇದು ಭಗವತಿ ಅಗರ್‌ವಾಲ್ ಸಾಧನೆ. (ರಂಗ ನೋಟ ಅಂಕಣ, ರಂಗಸ್ವಾಮಿ ಮೂಕನಹಳ್ಳಿ)
ರಾಜಸ್ಥಾನದಲ್ಲಿ ಮಳೆ ನೀರು ಸಂಗ್ರಹದ ಮಹತ್ವ ಮನಗಾಣಿಸಿದ ಸಾಧಕ ಭಗವತಿ ಅಗರ್‌ವಾಲ್
ರಾಜಸ್ಥಾನದಲ್ಲಿ ಮಳೆ ನೀರು ಸಂಗ್ರಹದ ಮಹತ್ವ ಮನಗಾಣಿಸಿದ ಸಾಧಕ ಭಗವತಿ ಅಗರ್‌ವಾಲ್

ರಾಜಸ್ಥಾನವು ದೇಶದಲ್ಲೇ ಹೆಚ್ಚು ಒಣ ಪ್ರದೇಶ ಹೊಂದಿದೆ. ಅಂತರ್ಜಲ ಮಟ್ಟ ಕುಸಿದು ಮಹಿಳೆಯರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ಬಿಸಿಲಿನಲ್ಲಿ ನಡೆಯಬೇಕಾದ ಸ್ಥಿತಿ. ಬದುಕು ದುಸ್ತರವಾಗಿ ಇನ್ನೇನು ಗತಿ ಅನ್ನುವಾಗ ದೇವರಂತೆ ಬಂದವರು ಭಗವತಿ ಅಗರವಾಲ್. ಭಗವತಿ ಅಗರವಾಲ್ ಹುಟ್ಟಿದ್ದು ರಾಜಸ್ಥಾನದಲ್ಲಿ. ಲಕ್ಷಾಂತರ ಭಾರತೀಯರಂತೆ ಅಮೆರಿಕ ಪಾಲಾಗಿ ಕಾರ್ಪೊರೇಟ್ ವರ್ಲ್ಡ್‌ನಲ್ಲಿ ದುಡಿತ. 2006 ರಲ್ಲಿ ಅವರು ದುಡಿಯುತ್ತಿದ್ದ ಕಂಪನಿ ದಿವಾಳಿಯಾಯಿತು. ರಾಜಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಬಯಕೆ ಮನಸ್ಸಿನಲ್ಲಿ ಮೂಡಿ ಭಾರತಕ್ಕೆ ವಾಪಸ್ಸು ಬಂದರು.

ನಂತರ ನಡೆದದ್ದು ಯಾವ ಚಲನಚಿತ್ರಕ್ಕೂ ಕಡಿಮೆಯಲ್ಲ. ‘ಆಕಾಶ ಗಂಗಾ ‘ ಎನ್ನುವ ಯೋಜನೆ ಸಿದ್ಧಪಡಿಸಿ, ಮಳೆ ನೀರನ್ನು ಹಿಡಿದಿಡುವ ಕಾರ್ಯಕ್ಕೆ ಅಣಿಗೊಂಡರು. ಈ ಯೋಜನೆಯು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಈ ಯೋಜನೆಯಡಿಯಲ್ಲಿ ಮನೆಮನೆಯ ಮಹಡಿ, ನೆಲಮಾಳಿಗೆ ಸೇರಿದಂತೆ ಎಲ್ಲಿ ಸಾಧ್ಯವೋ ಅಲ್ಲಿ ನೀರು ಸಂಗ್ರಹಿಸಿಡುತ್ತಾರೆ. ಮಳೆಗಾಲದಲ್ಲಿ ನೀರು ಹಿಡಿದಿಟ್ಟು, ಕುಡಿಯಲು ಹಾಗೂ ಇತರ ಕೆಲಸಕ್ಕೆ ಎಂದು ವಿಂಗಡಿಸಿಸುತ್ತಾರೆ.

ನೀರು ಸಂಗ್ರಹಿಸಲು ಜಾಗ ಕೊಟ್ಟವರಿಗೆ ನೀರು ಸರಬರಾಜು ಆಗುತ್ತದೆ. ಉಳಿದ ನೀರನ್ನು ಪೈಪುಗಳ ಮೂಲಕ ಹಳ್ಳಿಯ ಮನೆಮನೆಗೆ ತಲುಪಿಸಲಾಗುತ್ತದೆ. ವರ್ಷಪೂರ್ತಿ ಪ್ರತಿದಿನ 2.5 ಗ್ಯಾಲನ್ ನೀರು ಪ್ರತಿ ವ್ಯಕ್ತಿಗೆ ತಲುಪಿಸುವುದಕ್ಕೆ ತಗಲುವ ವೆಚ್ಚ ಎರಡು ಅಮೆರಿಕನ್ ಡಾಲರ್. ಅಂದರೆ ವರ್ಷಕ್ಕೆ 135 ರೂಪಾಯಿಗಳು.

ಬಾಲ್ಯದಲ್ಲಿ ಬವಣೆಯ ಬದುಕು

ರಾಜಸ್ಥಾನದ ವಾಯುವ್ಯ ಭಾಗದಲ್ಲಿರುವ ದಲ್ಲಿಚ್ಚಪೋಲಿ ಎನ್ನುವ ಗ್ರಾಮದಲ್ಲಿ ಜನಿಸಿದ ಭಗವತಿ ಅಗರವಾಲ್ ಅವರ ಬದುಕು ಅಂದಿನ ದಿನಗಳಲ್ಲಿ ಬಹುತೇಕ ಭಾರತೀಯರಂತೆ ಬವಣೆಗಳಿಂದಲೇ ಕೂಡಿತ್ತು. ‘ವಿಜ್ಞಾನ ಪುಸ್ತಕ ಕೊಳ್ಳಲು ಹಣವಿಲ್ಲದೆ, ಶಾಲೆಯಲ್ಲಿ ಕೂತು ಇಡೀ ಪುಸ್ತಕವನ್ನು ಬರೆದು ಕೊಳ್ಳುತ್ತಿದ್ದೆ. ನನ್ನ ಬವಣೆ ನೋಡಿ ಗುರುಗಳೊಬ್ಬರು ಪುಸ್ತಕ ಎರವಲು ನೀಡಿದ್ದರು. ಅವರಿಗೆ ನಾನು ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆಯುತ್ತೇನೆ’ ಎಂದು ವಚನ ಕೊಟ್ಟಿದ್ದೆ. ದೈವದ ಕೃಪೆಯಿಂದ ಅವರಿಗೆ ಕೊಟ್ಟ ಮಾತು ಉಳಿಸಿಕೊಂಡೆ. ಎರಡು ಹೊತ್ತಿನ ಊಟ ಸಿಕ್ಕರೆ ಅದೇ ನಮ್ಮ ಪಾಲಿಗೆ ಹಬ್ಬ’ ಎಂದು ಹಳೆಯ ನೆನಪು ಮೆಲುಕು ಹಾಕುತ್ತಾರೆ.

‘ಮಳೆ ನೀರನ್ನು ಹಿಡಿದಿಡುವ ಈ ಕಾರ್ಯ 600 ವರ್ಷಕ್ಕೂ ಮುಂಚೆಯೇ ಭಾರತದಲ್ಲಿ ಅಸ್ತಿತ್ವದಲ್ಲಿ ಇತ್ತು. ಅದಕ್ಕೆ ನೂತನ ತಂತ್ರಜ್ಞಾನ ಅಳವಡಿಸಿದ್ದೇವೆ ಅಷ್ಟೇ’ ಎಂದು ತಮ್ಮದೇನೂ ಹೆಚ್ಚುಗಾರಿಕೆ ಇಲ್ಲ ಎನ್ನುವ ಭಾವನೆ ವ್ಯಕ್ತಪಡಿಸುತ್ತಾರೆ. ಇದೀಗ ಭಗವತಿ ಅಗರವಾಲ್ ಅವರಿಗೆ 71 ವರ್ಷ. ‘ನಾನು ಎಷ್ಟು ವರ್ಷ ಬದುಕಬಹುದು? 80 ವರ್ಷಗಳ ಇರಬಹುದೇ? ನನ್ನ ಬಳಿ ಹೆಚ್ಚು ಸಮಯವಿಲ್ಲ. ಹುಸೇನ್ ಬೋಲ್ಟ್ ಮಾದರಿಯಲ್ಲಿ ನಾನು ಓಡಬೇಕಿದೆ, ಹೆಚ್ಚು ಜನರಿಗೆ ಸಹಾಯ ಮಾಡಬೇಕಿದೆ’ ಎಂದು ಉತ್ಸಾಹದಿಂದ ಮಾತನಾಡುತ್ತಾರೆ.

10 ಸಾವಿರಕ್ಕೂ ಹೆಚ್ಚು ಜನರಿಗೆ ನೀರು

‘ಸಸ್ಟೈನ್ಬಲ್ ಇನ್ನೋವೇಶನ್ಸ್’ ಎನ್ನುವ ಲಾಭದ ಉದ್ದೇಶವಿಲ್ಲದ ಸಂಘಟನೆ ಮೂಲಕ ರಾಜಸ್ಥಾನದ ಆರು ಹಳ್ಳಿಯ 10 ಸಾವಿರಕ್ಕೂ ಹೆಚ್ಚು ಜನರಿಗೆ ನೀರು ಪೂರೈಕೆ ಮಾಡಿದ್ದಾರೆ. ನೀರಿಗಾಗಿ ಗಂಟೆ ಅಲೆಯುವುದು ತಪ್ಪಿ ಜನರ ಒಟ್ಟು ಜೀವನ ಮೌಲ್ಯ ಸುಧಾರಿಸಿದೆ. ಇವರ ಕೆಲಸವನ್ನು ಗುರುತಿಸಿ 2012 ರಲ್ಲಿ 'ಪರ್ಪಸ್ ಪ್ರೈಸ್' ದೊರಕಿದೆ. ಸಿಎನ್‌ಎನ್‌ ಸಂಸ್ಥೆಯು ಇವರನ್ನು 'ಟಾಪ್ ಟೆನ್ ಹೀರೊ' ಎಂದು ಗುರುತಿಸಿತ್ತು. ಇವರ ‘ಸಸ್ಟೈನ್ಬಲ್ ಇನ್ನೋವೇಶನ್ಸ್’ ಜೊತೆ ಗುರುತಿಸಿಕೊಳ್ಳಲು, ಕೆಲಸ ಮಾಡಲು, ಚೀನಾ, ಅಮೆರಿಕ ಮುಂತಾದ ದೇಶಗಳು ಮುಂದೆ ಬಂದಿವೆ. ಇವರ ಯೋಜನೆಗೆ ಭಾರತ ಮತ್ತು ಅಮೆರಿಕ ಸರ್ಕಾರಗಳು ಹಣ ಸಹಾಯವನ್ನು ಒದಗಿಸಿವೆ.

‘ನಮ್ಮ ಸಂಸ್ಕೃತಿ ಹೇಳುವುದು ಒಂದೇ. ನಿನ್ನ ಹೊಟ್ಟೆ ತುಂಬಿದ ನಂತರ ಇನ್ನೊಬ್ಬರ ಹೊಟ್ಟೆ ತುಂಬಿಸುವ ಕಾರ್ಯ ಮಾಡು. ನನ್ನ ಎಲ್ಲಾ ಜವಾಬ್ದಾರಿ ಮುಗಿದಿದೆ. ಮಕ್ಕಳು ಅವರ ದಾರಿ ಅವರು ಹುಡುಕಿಕೊಂಡಿದ್ದಾರೆ. ನನ್ನ ಉಳಿದ ಸಮಯ ಸಮಾಜಕ್ಕೆ’ ಎನ್ನುವ ಭಗವತಿ ಅಗರವಾಲ್ ಅವರ ಮುಖದಲ್ಲಿ ಕಾಣುವ ಆತ್ಮತೃಪ್ತಿ, ದೈವೀಕಳೆ ಮಿನುಗುತ್ತದೆ.

ನಾನು ಈ ಬರಹ ಬರೆಯುವಾಗ ಹಿನ್ನೆಲೆಯಲ್ಲಿ 'ಮಾನವ ಮೂಳೆ ಮಾಂಸದ ತಡಿಕೆ .. ದೇಹವೂ ...' ಹಾಡು ಬರುತ್ತಿತ್ತು. ಇದು ಕಾಕತಾಳೀಯ ಆಗಿರಲು ಸಾಧ್ಯವೇ?

ರಂಗಸ್ವಾಮಿ ಮೂಕನಹಳ್ಳಿ ಅಂಕಣ 'ರಂಗ' ನೋಟ

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ