ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಆರ್ಥಿಕ ಸ್ಥಿತಿ ಇಂದು ಸಬಲವಾಗಿದೆ, ಅಡವಿಟ್ಟಿದ್ದ ಚಿನ್ನವನ್ನು ಆರ್‌ಬಿಐ ಮರಳಿ ಪಡೆದಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಭಾರತದ ಆರ್ಥಿಕ ಸ್ಥಿತಿ ಇಂದು ಸಬಲವಾಗಿದೆ, ಅಡವಿಟ್ಟಿದ್ದ ಚಿನ್ನವನ್ನು ಆರ್‌ಬಿಐ ಮರಳಿ ಪಡೆದಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಒಂದು ಸಮಯದಲ್ಲಿ ಭಾರತ ಬಡರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತಿತ್ತು. ಆದರೆ ಈಗ ಭಾರತದ ಆರ್ಥಿಕ ಪರಿಸ್ಥಿತಿ ಬದಲಾಗಿದೆ. ಮುಂದಿನ ಕೆಲವು ತಿಂಗಳವರೆಗೂ ಅವಶ್ಯಕತೆ ಇದ್ದದ್ದನ್ನು ಖರೀದಿಸುವ ಶಕ್ತಿ ಭಾರತಕ್ಕೆ ಇದೆ. ಈ ಕುರಿತು ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಭಾರತದ ಆರ್ಥಿಕ ಸ್ಥಿತಿ ಇಂದು ಸಬಲವಾಗಿದೆ, ಅಡವಿಟ್ಟಿದ್ದ ಚಿನ್ನವನ್ನು ಆರ್‌ಬಿಐ ಮರಳಿ ಪಡೆದಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ
ಭಾರತದ ಆರ್ಥಿಕ ಸ್ಥಿತಿ ಇಂದು ಸಬಲವಾಗಿದೆ, ಅಡವಿಟ್ಟಿದ್ದ ಚಿನ್ನವನ್ನು ಆರ್‌ಬಿಐ ಮರಳಿ ಪಡೆದಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ (PC: Freepik, Unsplash)

ಐದು ದಿನದ ಹಣದಿಂದ ಹನ್ನೊಂದು ತಿಂಗಳಿಗೆ ಬೇಕಾಗುವಷ್ಟು ಸಂಗ್ರಹ ಮಾಡುವ ಶಕ್ತಿ ಭಾರತ ಬೆಳೆಸಿಕೊಂಡಿದೆ. ನಾವು ಸರಿಯಾಗಿ ನಡೆದುಕೊಂಡರೆ ಮುಂದಿನ ಎರಡು ದಶಕ ನಮ್ಮದು , ಭಾರತಕ್ಕೆ ಸೇರಿದ್ದು ಸಂದೇಹ ಬೇಡ !

ಟ್ರೆಂಡಿಂಗ್​ ಸುದ್ದಿ

ಫಾರಿನ್‌ ರಿಸರ್ವ್‌ ಎಂದರೇನು?

ಫಾರಿನ್ ರಿಸೆರ್ವ್ ಎಂದರೇನು ಗೊತ್ತಾ ? ಬೇರೆ ದೇಶಗಳಿಂದ ನಾವು ಬಹಳಷ್ಟು ವಸ್ತುಗಳನ್ನು ಕೊಂಡುಕೊಳ್ಳುತ್ತೇವೆ. ಹಾಗೆ ಮಾರುತ್ತೇವೆ. ಹೀಗೆ ಮಾಡುವಾಗ ಅವರಾರೂ ಭಾರತೀಯ ರೂಪಾಯಿಯಲ್ಲಿ ವ್ಯವಹಾರ ಮಾಡುವುದಿಲ್ಲ. ಹೀಗಾಗಿ ನಾವು ಜಾಗತಿಕ ಹಣವೆಂದು ಗುರುತಿಸಿಕೊಂಡಿರುವ ಡಾಲರ್, ಯೆನ್ , ಯುರೋಗಳನ್ನು ಖರೀದಿ ಮಾಡಿ ಒಂದಷ್ಟು ಹಣವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಇದು ಕಡ್ಡಾಯವಲ್ಲ ಆದರೆ ಇದು ಅಲಿಖಿತ ನಿಯಮ. ಈ ಹಣ ಹೆಚ್ಚಿದ್ದಷ್ಟೂ ಜಾಗತಿಕ ಮಟ್ಟದಲ್ಲಿ ಅಷ್ಟು ಹೆಚ್ಚು ನಂಬಿಕೆ , ಮನ್ನಣೆ. ಜೊತೆಗೆ ನಮಗೂ ಚೌಕಾಸಿ ಮಾಡಲು ಧ್ವನಿ ಇರುತ್ತದೆ. ಇದರ ಜೊತೆಗೆ ಚಿನ್ನ , ಚಿನ್ನದ ಬಾಂಡ್ , ಐಎಂಎಫ್‌ನಲ್ಲಿ ವಿಶೇಷ ಪರಿಮಿತಿ , ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ಥಾನಮಾನ ಎಲ್ಲವೂ ಲೆಕ್ಕಕ್ಕೆ ಬರುತ್ತದೆ.

ಸರಳವಾಗಿ ಹೇಳಬೇಕೆಂದರೆ ನಮ್ಮ ಬಳಿ 100 ರೂಪಾಯಿ ಇದ್ದರೆ ಅದರಲ್ಲಿ 20 ಅಥವಾ 30 ರೂಪಾಯಿ ಹಣವನ್ನು ಡಾಲರ್ , ಯೆನ್ , ಯುರೋ ಮತ್ತು ಚಿನ್ನದ ರೂಪದಲ್ಲಿ ಇಟ್ಟು ಕೊಂಡಿದ್ದರೆ ಅದರಿಂದ ಬೇರೆ ದೇಶಗಳಿಗೆ ನಮ್ಮ ಮೇಲೆ ಹೆಚ್ಚು ನಂಬಿಕೆ ಬರುತ್ತದೆ. ಹಾಗೊಮ್ಮೆ ಜಾಗತಿಕ ಕುಸಿತ ಉಂಟಾದರೆ ರೂಪಾಯಿ ಬೆಲೆ ಕಳೆದುಕೊಳ್ಳುತ್ತದೆ. ಹೀಗಾಗಿ ನಮ್ಮ ಬಳಿ ಬೇರೆ ಹಣವೂ ಅಂದರೆ ಜಗತ್ತು ನಂಬುವ ಹಣವೂ ಇದೆ ಎಂದು ತೋರಿಸಬೇಕಾಗುತ್ತದೆ. ಇಷ್ಟೇ ಪ್ರತಿಶತ ಹಣವನ್ನು ವಿದೇಶಿ ಹಣದ ರೂಪದಲ್ಲಿ , ಚಿನ್ನದ ರೂಪದದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ನಿಯಮವಿಲ್ಲ. ಅದು ಆಯಾ ದೇಶದ ತಾಕತ್ತಿನ ಮೇಲೆ ಅವಲಂಬಿತ.

1 ಲಕ್ಷ ಕೆಜಿ ಚಿನ್ನ ಅಡವಿಟ್ಟಿದ್ದ ಅಂದಿನ ಪ್ರಧಾನಿ

ನಿಮಗೆಲ್ಲಾ 1991 ನೆನಪಿದೆಯಲ್ಲವೇ ? ನನಗಂತೂ ಚೆನ್ನಾಗಿ ನೆನಪಿದೆ. ನಾನಾಗ ಎರಡನೇ ಪಿಯುಸಿ ಕಾಮರ್ಸ್ ವಿದ್ಯಾರ್ಥಿಯಾಗಿದ್ದೆ. ಮನಸ್ಸು ಕುಗ್ಗಿ ಹೋಗಿತ್ತು. ಅದಕ್ಕೆ ಕಾರಣವೇನು ಗೊತ್ತಾ ? ಈ ರೀತಿಯ ವಿದೇಶಿ ವಿನಿಮಯ ರಾಕ್ ಬಾಟಮ್ ತಲುಪಿತ್ತು. ಯಾವ ದೇಶವೂ ಭಾರತವನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಸುಮ್ಮನೆ ಮಿಲಿಯನ್ , ಬಿಲಿಯನ್ ಡಾಲರ್ ಹೇಳಿ ತಲೆ ಕೆಡಿಸುವುದಿಲ್ಲ , ಸರಳವಾಗಿ ಹೇಳುತ್ತೇನೆ. ಅಂದಿಗೆ ನಮ್ಮ ಬಳಿ ಐದಾರು ದಿನ ಆಮದು ಮಾಡಿಕೊಳ್ಳಲು ಬೇಕಾಗುವಷ್ಟು ಹಣ ಮಾತ್ರ ಇತ್ತು. ಅಂದಿನ ಪ್ರಧಾನಿ ಶ್ರೀ ಚಂದ್ರಶೇಖರ್ ವಿಧಿಯಿಲ್ಲದೇ ಭಾರತದ 1 ಲಕ್ಷ ಕೆಜಿ ಚಿನ್ನವನ್ನು ಇಂಗ್ಲೆಂಡ್ ನಲ್ಲಿ ಅಡವಿಡುತ್ತಾರೆ. ನಂಬಿಕೆಗಾಗಿ !

ಇವತ್ತು ಭಾರತದ ಸ್ಥಿತಿ ಆರ್ಥಿಕವಾಗಿ ಸಬಲವಾಗಿದೆ. ಸರಳವಾಗಿ ಹೇಳಬೇಕೆಂದರೆ ಮುಂದಿನ ಹನ್ನೊಂದು , ಹೌದು ಸರಿಯಾಗಿ ಓದಿದಿರಿ ಮುಂದಿನ ಹನ್ನೊಂದು ತಿಂಗಳು ಬೇಕಾದ್ದು ಕೊಳ್ಳುವಷ್ಟು ಹಣ ನಮ್ಮಲ್ಲಿ ಫಾರಿನ್ ರೆಸೆರ್ವಸ್‌ನಲ್ಲಿದೆ. ಭಾರತದ ಇತಿಹಾಸದಲ್ಲಿ ಇಷ್ಟು ದೊಡ್ಡ ವಿದೇಶಿ ವಿನಿಮಯ ಸಂಗ್ರಹವಾಗಿದ್ದು ಇದೇ ಮೊದಲು. ಇದರ ಜೊತೆಗೆ ಇನ್ನೊಂದು ಸಿಹಿ ಸುದ್ದಿ ಈಗತಾನೇ ಗಿರಕಿ ಹೊಡೆಯಲು ಶುರುವಾಗಿದೆ ಎಂದು ಗೊತ್ತೇ ? 1991 ರಲ್ಲಿ ಇಂಗ್ಲೆಂಡ್‌ನಲ್ಲಿ ಇಟ್ಟಿದ್ದ 1 ಲಕ್ಷ ಕೆಜಿ ಬಂಗಾರವನ್ನು ಆರ್‌ಬಿಐ ಮರಳಿ ಭಾರತಕ್ಕೆ ವಾಪಸ್ಸು ತರಿಸಿಕೊಂಡಿದೆ.

ಜೈ ಹೋ !

ಶುಭವಾಗಲಿ

ಅಡವಿಟ್ಟಿದ್ದ ಚಿನ್ನವನ್ನು ಆರ್‌ಬಿಐ ಮರಳಿ ಪಡೆದಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ
ಅಡವಿಟ್ಟಿದ್ದ ಚಿನ್ನವನ್ನು ಆರ್‌ಬಿಐ ಮರಳಿ ಪಡೆದಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಟಿ20 ವರ್ಲ್ಡ್‌ಕಪ್ 2024

ವಿಭಾಗ