logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amit Shah: ತ್ರಿಪುರಾದಲ್ಲಿ ಕಾಂಗ್ರೆಸ್‌ ಜೊತೆ ಕೈ ಜೋಡಿಸಿ ಸಿಪಿಎಂ ತಪ್ಪು ಮಾಡಿದೆ: ಅಮಿತ್‌ ಶಾ ಅಭಿಮತ

Amit shah: ತ್ರಿಪುರಾದಲ್ಲಿ ಕಾಂಗ್ರೆಸ್‌ ಜೊತೆ ಕೈ ಜೋಡಿಸಿ ಸಿಪಿಎಂ ತಪ್ಪು ಮಾಡಿದೆ: ಅಮಿತ್‌ ಶಾ ಅಭಿಮತ

HT Kannada Desk HT Kannada

Feb 12, 2023 04:05 PM IST

google News

ಅಮಿತ್‌ ಶಾ

    • ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಎಂ ನಡುವೆ ಏರ್ಪಟ್ಟಿರುವ ಮೈತ್ರಿಯನ್ನು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ. ಕಾಂಗ್ರೆಸ್‌ ಜೊತೆ ಕೈಜೋಡಿಸುವ ಮೂಲಕ ಸಿಪಿಎಂ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದೆ ಎಂದು ಅಮಿತ್‌ ಶಾ ಕಿಡಿಕಾರಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ಅಮಿತ್‌ ಶಾ
ಅಮಿತ್‌ ಶಾ (Verified Twitter)

ಅಗರ್ತಲಾ: ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಎಂ ನಡುವೆ ಏರ್ಪಟ್ಟಿರುವ ಮೈತ್ರಿಯನ್ನು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ. ಕಾಂಗ್ರೆಸ್‌ ಜೊತೆ ಕೈಜೋಡಿಸುವ ಮೂಲಕ ಸಿಪಿಎಂ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದೆ ಎಂದು ಅಮಿತ್‌ ಶಾ ಕಿಡಿಕಾರಿದ್ದಾರೆ.

ತ್ರಿಪುರಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಂಡಿಪುರದಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಸಿಪಿಎಂ ಯುದ್ಧಕ್ಕೂ ಮೊದಲೇ ಶಸ್ತ್ರಗಳನ್ನು ಕೆಳಗಿಟ್ಟಿರುವುದು ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿದರು.

ಸಿಪಿಎಂ ರಾಜ್ಯದಲ್ಲಿ ಎರಡು ದಶಕಗಳ ಕಾಲ ಅಧಿಕಾರ ನಡೆಸಿದೆ. ಆದರೆ ಈಗ ಆ ಪಕ್ಷ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ದುಸ್ಥಿತಿಗೆ ತಲುಪಿದೆ. ಕೇರಳದಲ್ಲಿ ಪರಸ್ಪರ ಬಡಿದಾಡುವ ಎರಡೂ ಪಕ್ಷಗಳು, ತ್ರಿಪುರಾದಲ್ಲಿ ಒಂದಾಗಿರುವುದು ಅವರ ಅಧಿಕಾರ ಲಾಲಸೆಗೆ ಸಾಕ್ಷಿ ಎಂದು ಅಮಿತ್‌ ಶಾ ತೀವ್ರ ವಾಗ್ದಾಳಿ ನಡೆಸಿದರು.

ತ್ರಿಪುರಾದಲ್ಲಿ ಸಿಪಿಎಂ ಅನೇಕ ಕಾಂಗ್ರೆಸ್‌ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿದೆ. ಅಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಅಮಿತ್‌ ಶಾ ಗುಡುಗಿದರು.

ಸ್ವಾತಂತ್ರ್ಯದ ಬಳಿಕ ತ್ರಿಪುರಾವನ್ನು ಆಳಿದ ಕಾಂಗ್ರಸ್‌ ಮತ್ತು ಸಿಪಿಎಂ, ರಾಜ್ಯದ ಒಳಿತಾಗಿ ಏನನ್ನೂ ಮಾಡಿಲ್ಲ. ಆದರೆ ಕೇವಲ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದೆ. ಮುಂದಿನ ದಿನಗಳಲ್ಲಿ ತ್ರಿಪುರಾವನ್ನು ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿನಲ್ಲಿ ಸೇರಿಸುವುದು ಬಿಜೆಪಿಯ ಗುರಿಯಾಗಿದೆ ಎಂದು ಅಮಿತ್‌ ಶಾ ಹೇಳಿದರು.

ಕಾಂಗ್ರೆಸ್‌ ಹಾಗೂ ಸಿಪಿಎಂ ಎರಡೂ ಪಕ್ಷಗಳು ತ್ರಿಪುರಾದ ಆದಿವಾಸಿಗಳನ್ನು ಕಡೆಗಣಿಸಿದ್ದವು. ಆದರೆ ಬಿಜೆಪಿ ಸರ್ಕಾರ ಆದಿವಾಸಿಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ. ಆದಿವಾಸಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಗುರಿ ಎಂದು ಅಮಿತ್‌ ಶಾ ಹೇಳಿದರು. ಅಲ್ಲದೇ ರಾಜ್ಯದಲ್ಲಿ ಪ್ರತ್ಯೇಕತಾವಾದವನ್ನು ಮಟ್ಟ ಹಾಕಲಾಗಿದೆ ಎಂದು ಅಮಿತ್‌ ಶಾ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತ್ರಿಪುರಾದ ಜನತೆ ಹೊಸ ಇತಿಹಾಸವನ್ನು ಸೃಷ್ಟಿಸಿದ್ದರು. ಎರಡು ದಶಕಗಳ ಸಿಪಿಎಂ ದುರಾಡಳಿತವನ್ನು ಕಿತ್ತೆಸೆದು, ಬಿಜೆಪಿಯನ್ನು ಅಧಿಕಾರಕ್ಕೇರಿಸಿದ್ದರು. ಈ ಬಾರಿಯೂ ತ್ರಿಪುರಾದ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಅಮಿತ್‌ ಶಾ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ತ್ರಿಪುರಾದ ಚಹರೆಯನ್ನು ಬದಲಿಸಿದೆ. ಹಿಂಸಾಚಾರ ತಾಂಡವವಾಡುತ್ತಿದ್ದ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಬಿಜೆಪಿ ಮಾಡಿದೆ. ತ್ರಿಪುರಾ ಅಭಿವೃದ್ಧಿಯ ಹೊಸ ಮನ್ವಂತರ ಕಾಣುತ್ತಿದ್ದು, ಇದನ್ನು ಮುಂದುವರೆಸಲು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವುದು ಅತ್ಯಂತ ಅವಶ್ಯ ಎಂದು ಅಮಿತ್‌ ಶಾ ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ತ್ರಿಪುರಾದ ಬಗ್ಗೆ ವಿಶೇಷ ಗಮನ ನೀಡುತ್ತಿದೆ. ತ್ರಿಪುರಾ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದು, ಸ್ವತಃ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಅಮಿತ್‌ ಶಾ ನುಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆಗೆ ಆರೋಗ್ಯ ವಿಮೆ, ಕುಡಿಯಲು ಶುದ್ಧ ನೀರು, ಉತ್ತಮ ಆಹಾರ, ಅಡುಗೆ ಅನಿಲ ಸಂಪರ್ಕ ದೊರೆತಿದೆ. ತ್ರಿಪುರಾದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ನಾವು ಪ್ರದರ್ಶಿಸಿದ್ದೇವೆ. ರಾಜ್ಯದ ಜನತೆ ಈ ಬಾರಿಯೂ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಅಮಿತ್‌ ಶಾ ಹೇಳಿದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ