PFI Trainer Arrested: ಪಿಎಫ್‌ಐನ ಮಾಸ್ಟರ್ ವೆಪನ್ ಟ್ರೇನರ್ ಬಂಧನ; ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ
Jun 14, 2023 07:14 PM IST
ಎನ್‌ಐಎ (ಸಾಂಕೇತಿಕ ಚಿತ್ರ)
PFI Trainer Arrested: ಕರ್ನಾಟಕದ ಬಳ್ಳಾರಿ (Bellary) ಯ ಕೌಲ್ ಬಜಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪಿಎಫ್‌ಐನ ಮಾಸ್ಟರ್ ವೆಪನ್ ಟ್ರೇನರ್ ಒಬ್ಬನನ್ನು ಎನ್‌ಐಎ ತಂಡ ಬಂಧಿಸಿದೆ. ಈ ಕುರಿತ ವಿವರ ವರದಿ ಇಲ್ಲಿದೆ.
ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India -PFI)ದ ಮಾಸ್ಟರ್ ವೆಪನ್ ಟ್ರೇನರ್ (master weapons trainer) ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬನನ್ನು ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (NIA) ತಂಡ ಕರ್ನಾಟಕದ ಬಳ್ಳಾರಿ (Bellary) ಯ ಕೌಲ್ ಬಜಾರ್‌ನಲ್ಲಿ ಬಂಧಿಸಿದೆ.
ಎನ್‌ಐಎ ಈ ವಿಚಾರವನ್ನು ಬುಧವಾರ ಬಹಿರಂಗಪಡಿಸಿದ್ದು, ಬಂಧಿತನನ್ನು ನೊಸಾಮ್ ಮೊಹಮದ್ ಯೂನಸ್ (Nossam Mohamed Yunus) (33) ಎಂದು ಗುರುತಿಸಲಾಗಿದೆ. ಈತ ನಿಜಾಮಾಬಾದ್ ಭಯೋತ್ಪಾದನೆ ಪಿತೂರಿ (Nizamabad terror conspiracy) ಕೇಸ್‌ನಲ್ಲಿ ಬೇಕಾದ ಆರೋಪಿಯಾಗಿದ್ದ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಿಂದ ತಲೆಮರೆಸಿಕೊಂಡಿದ್ದ ಯೂನಸ್
ಆಂಧ್ರಪ್ರದೇಶದ ನಂದ್ಯಾಲ್‌ನವನಾದ ಯೂನಸ್, ಆತನ ಅಣ್ಣನ ಇನ್‌ವರ್ಟರ್ ವ್ಯಾಪಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. 2022ರ ಸೆಪ್ಟೆಂಬರ್‌ನಲ್ಲಿ ಯೂನಸ್ ಮನೆಯನ್ನು ಶೋಧಿಸಿದಾಗ ಆತ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ ಅಲ್ಲಿಂದ ಪರಾರಿಯಾಗಿದ್ದ.
ಹೆಚ್ಚಿನ ತನಿಖೆ ವೇಳೆ ಯೂನಸ್ ಮತ್ತು ಆತನ ಇಡೀ ಕುಟುಂಬ ಆಂಧ್ರ ಪ್ರದೇಶ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಆತ ಮತ್ತು ಆತನ ಕುಟುಂಬ ಕರ್ನಾಟಕದ ಬಳ್ಳಾರಿಯ ಕೌಲ್ ಬಜಾರ್‌ಗೆ ವಾಸ ಬದಲಾಯಿಸಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದೆ. ಆತ ಕೌಲ್ ಬಜಾರ್‌ನಲ್ಲಿ ಬಷೀರ್ ಎಂಬ ಹೊಸ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ. ಅಲ್ಲದೆ, ಪ್ಲಂಬರ್ ಆಗಿ ಹೊಸ ಕೆಲಸ ಶುರುಮಾಡಿಕೊಂಡಿದ್ದ.
ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಪಿತೂರಿ ಕೇಸ್
ದೇಶದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಅಂತಿಮ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವುದು, ಇದನ್ನು ನಿರ್ವಹಿಸಲು ಯುವಕರನ್ನು ನೇಮಿಸಿ, ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಉದ್ದೇಶದ ಪಿತೂರಿಯ ಪ್ರಕರಣ ಇದು. ನಿಷೇಧಿತ ಸಂಘಟನೆಯಾದ ಪಿಎಫ್‌ಐನ ನಾಯಕರು ಮತ್ತು ಕಾರ್ಯಕರ್ತರು ನಡೆಸಿದ ಕ್ರಿಮಿನಲ್ ಪಿತೂರಿ ಇದು ಎಂದು ಆರೋಪಿಸಲಾಗಿದೆ.
ಎನ್‌ಐಎ ವಿಚಾರಣೆ ವೇಳೆ ನುಣುಚಿಕೊಳ್ಳುವ ಉತ್ತರ ನೀಡುತ್ತಿರುವ ಯೂನಸ್, ಶೇಖ್ ಇಲ್ಯಾಸ್ ಅಹ್ಮದ್ ಕೂಡ ಪಿಎಫ್‌ಐ ಶಸ್ತ್ರಾಸ್ತ್ರ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಹೇಳಿದ್ದಾನೆ ಎಂದು ಎನ್‌ಐಎ ಹೇಳಿಕೊಂಡಿದೆ. ಸದ್ಯ ಇಲ್ಯಾಸ್ ತಲೆಮರೆಸಿಕೊಂಡಿದ್ದಾನೆ.
ಯೂನಸ್ ಮಾಸ್ಟರ್ ವೆಪನ್ಸ್ ಟ್ರೇನರ್
ಯೂನಸ್ ಮಾಸ್ಟರ್ ವೆಪನ್ಸ್ ಟ್ರೇನರ್ ಆಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಪಿಎಫ್‌ಐನಿಂದ ನೇಮಕಗೊಂಡ ಯುವಕರಿಗೆ ತರಬೇತಿ ನೀಡುತ್ತಿದ್ದ. ನಿಜಾಮಾಬಾದ್ ಪಿಎಫ್‌ಐ ಕೇಸ್‌ನಲ್ಲಿ ಈ ಎರಡು ರಾಜ್ಯಗಳಿಗೆ ಪಿಇ (ದೈಹಿಕ ಶಿಕ್ಷಣ) ತರಬೇತಿ ರಾಜ್ಯ ಸಂಯೋಜಕ ಎಂಬ ಆರೋಪ ಈತನ ಮೇಲಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಯೂನಸ್ ಬಂಧನದ ಮೂಲಕ, ಸಮುದಾಯಗಳ ನಡುವೆ ಕೋಮುವಾದ ಕೆರಳಿಸಲು ಮತ್ತು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡಲು ಮತ್ತು ಕದಡಲು ಅಮಾಯಕ ಮುಸ್ಲಿಂ ಯುವಕರನ್ನು ಬಳಸಿಕೊಳ್ಳುವ ಪಿಎಫ್‌ಐನ ಆಮೂಲಾಗ್ರ ನೀಚ ಯೋಜನೆಗಳನ್ನು ದೃಢೀಕರಿಸುವ ಇನ್ನಷ್ಟು ಪುರಾವೆಗಳು ಸಿಕ್ಕಂತಾಗಿದೆ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.
ಕಳೆದ ವರ್ಷ ಜುಲೈ 4 ರಂದು ತೆಲಂಗಾಣ ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಈ ಪ್ರಕರಣದಲ್ಲಿ ಇದುವರೆಗೆ 16 ಆರೋಪಿಗಳ ವಿರುದ್ಧ ಎರಡು ಚಾರ್ಜ್ ಶೀಟ್‌ಗಳನ್ನು ಎನ್‌ಐಎ ಸಲ್ಲಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ 28 ರಂದು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗಾಗಿ ಕೇಂದ್ರವು PFI ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಪ್ರಕಾರ ನಿಷೇಧಿಸಿತ್ತು.