Breaking News: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಜಾಮೀನು ಮಂಜೂರು; 6 ತಿಂಗಳ ಬಳಿಕ ಬಿಡುಗಡೆ ಭಾಗ್ಯ
Sep 13, 2024 11:29 AM IST
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
- Arvind Kejriwal ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ದೊರೆತಿದೆ. ಬಹುತೇಕ ಆರು ತಿಂಗಳು ಜೈಲಿನಲ್ಲಿದ್ದ ಕೇಜ್ರಿವಾಲ್ ಅವರು ಬಿಡುಗಡೆಯಾಗುವ ಸಾಧ್ಯತೆಗಳಿವೆ.
ದೆಹಲಿ: ದೆಹಲಿಯ ಅಬಕಾರಿ ನೀತಿ ಜಾರಿಯಲ್ಲಿ ಭಾರೀ ಅಕ್ರಮ ಎಸಗಿದ ಆರೋಪದ ಮೇಲೆ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ಗೆ ಜಾಮೀನು ಮಂಜೂರಾಗಿದೆ. ಅಬಕಾರಿ ಹಂಚಿಕೆಯಲ್ಲಿನ ಭಾರೀ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ 6 ತಿಂಗಳಿನಿಂದ ದೆಹಲಿಯ ತಿಹಾರ್ ಜೈಲುವಾಸ ಅನುಭವಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ದೊರೆತಿದೆ. ಶುಕ್ರವಾರದಂದು ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೆಲ ದಿನಗಳ ಹಿಂದೆ ಇದೇ ಪ್ರಕರಣದಲ್ಲಿ ದೆಹಲಿ ಡಿಸಿಎಂ ಮನೋಜ್ ಸಿಸೋಡಿಯಾ ಹಾಗೂ ತೆಲಂಗಾಣ ಕೆಸಿಆರ್ ಪಕ್ಷದ ನಾಯಕಿ ಹಾಗೂ ಶಾಸಕಿ ಟಿ.ಆರ್. ಕವಿತಾ ಅವರಿಗೂ ಜಾಮೀನು ದೊರೆತಿತ್ತು.ಈ ವರ್ಷದ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಬಂಧನವಾಗಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿತು.
ಅಂತಿಮವಾಗಿ ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಪೀಠವು ಅರವಿಂದ್ ಕೇಜ್ರಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತು.
ಇದೀಗ 6 ತಿಂಗಳ ಬಳಿಕ ಅರವಿಂದ ಕೇಜ್ರಿವಾಲ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು, ಇಂದು ಇಲ್ಲವೇ ನಾಳೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
ಅರವಿಂದ ಕೇಜ್ರಿವಾಲ್ ಕೇಸ್ ಬಗ್ಗೆ ಪ್ರತಿಕ್ರಿಯಿಸುವಂತಿಲ್ಲ. ಕೇಜ್ರಿವಾಲ್ ಸಿಎಂ ಕಚೇರಿಗೆ ಪ್ರವೇಶಿಸಲು ಅವಕಾಶವಿಲ್ಲ. ಸರ್ಕಾರದ ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಕೋರ್ಟ್ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು. ಎಂದು ಸುಪ್ರೀಂಕೋರ್ಟ್ ಹಲವಾರು ಷರತ್ತುಗಳನ್ನು ಕೇಜ್ರಿವಾಲ್ ಅವರಿಗೆ ವಿಧಿಸಿದೆ. ಹಾಗೆಯೇ 10 ಲಕ್ಷ ಮೌಲ್ಯದ 2 ಬಾಂಡ್ ಸಲ್ಲಿಸುವಂತೆ ಸೂಚನೆ ನೀಡಿದೆ.
ಚುನಾವಣೆ ವೇಳೆ ಹದಿನೈದು ದಿನದ ಮಟ್ಟಿಗೆ ಬಿಡುಗಡೆಯಾಗಿದ್ದ ಕೇಜ್ರಿವಾಲ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು. ಸಿಬಿಐ ಹಾಗೂ ಇಡಿ ದಾಳಿ ನಡೆಸಿ ದೆಹಲಿ ಸರ್ಕಾರದ ಹಲವರನ್ನು ಬಂಧಿಸಲಾಗಿತ್ತು. ಇದರಲ್ಲಿ ಕೇಜ್ರಿವಾಲ್ ಕೂಡ ಒಬ್ಬರು. ಅಲ್ಲದೇ ಸಚಿವರು,ಡಿಸಿಎಂ ಕೂಡ ಇದ್ದರು. ದೆಹಲಿ ಅಬಕಾರಿ ನೀತಿ ಜಾರಿಯಲ್ಲಿ ಕೋಟ್ಯಂತರ ರೂ. ಹಣ ಲಾಭ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪಗಳನ್ನು ಸಿಬಿಐ ಹೊರಿಸಿತ್ತು.