Kejriwal Hugs Satyendar: ಜೈಲು ಸೇರಿ ಅನಾರೋಗ್ಯದಿಂದ ಬಳಲುತ್ತಿರುವ ಸತ್ಯೇಂದ್ರ ಜೈನ್​ರನ್ನು ಅಪ್ಪಿಕೊಂಡ ಕೇಜ್ರಿವಾಲ್, ಹೀರೋ ಎಂದು ಪೋಸ್ಟ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kejriwal Hugs Satyendar: ಜೈಲು ಸೇರಿ ಅನಾರೋಗ್ಯದಿಂದ ಬಳಲುತ್ತಿರುವ ಸತ್ಯೇಂದ್ರ ಜೈನ್​ರನ್ನು ಅಪ್ಪಿಕೊಂಡ ಕೇಜ್ರಿವಾಲ್, ಹೀರೋ ಎಂದು ಪೋಸ್ಟ್

Kejriwal Hugs Satyendar: ಜೈಲು ಸೇರಿ ಅನಾರೋಗ್ಯದಿಂದ ಬಳಲುತ್ತಿರುವ ಸತ್ಯೇಂದ್ರ ಜೈನ್​ರನ್ನು ಅಪ್ಪಿಕೊಂಡ ಕೇಜ್ರಿವಾಲ್, ಹೀರೋ ಎಂದು ಪೋಸ್ಟ್

Satyendar Jain in hospital: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಕಳೆದೊಂದು ವರ್ಷದಿಂದ ದೆಹಲಿ ತಿಹಾರ್ ಜೈಲಿನಲ್ಲಿದ್ದ ಸತ್ಯೇಂದ್ರ ಜೈನ್ ಅವರು ಮೇ 25 ರಂದು ತಲೆತಿರುಗಿ ಜೈಲಿನಲ್ಲಿ ಕುಸಿದು ಬಿದ್ದಿದ್ದರು.

 ಸತ್ಯೇಂದ್ರ ಜೈನ್​ರನ್ನು ಅಪ್ಪಿಕೊಂಡ ಕೇಜ್ರಿವಾಲ್
ಸತ್ಯೇಂದ್ರ ಜೈನ್​ರನ್ನು ಅಪ್ಪಿಕೊಂಡ ಕೇಜ್ರಿವಾಲ್

ನವದೆಹಲಿ: ಜೈಲು ಸೇರಿ ಅನಾರೋಗ್ಯದಿಂದ ಬಳಲುತ್ತಿರುವ ಆಮ್​ ಆದ್ಮಿ ಪಕ್ಷದ ನಾಯಕ, ಮಾಜಿ ಸಚಿವ ಸತ್ಯೇಂದ್ರ ಜೈನ್​ ಅವರನ್ನು ಆಸ್ಪತ್ರೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಪ್ಪಿಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಕಳೆದೊಂದು ವರ್ಷದಿಂದ ದೆಹಲಿ ತಿಹಾರ್ ಜೈಲಿನಲ್ಲಿದ್ದ ಸತ್ಯೇಂದ್ರ ಜೈನ್ ಅವರು ಮೇ 25 ರಂದು ತಲೆತಿರುಗಿ ಜೈಲಿನಲ್ಲಿ ಕುಸಿದು ಬಿದ್ದಿದ್ದರು. ಉಸಿರಾಟದ ತೊಂದರೆಯಿಂದಾಗಿ ಅವರನ್ನು ಮೊದಲು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಅವರನ್ನು ಲೋಕನಾಯಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತಲೆಗೆ ಪೆಟ್ಟಾಗಿ ರಕ್ತ ಹೆಪ್ಪುಗಟ್ಟಿದೆ ಎಂದು ವರದಿಯಾಗಿದೆ.

ಸತ್ಯೇಂದ್ರ ಜೈನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಅವರ ಯೋಗ-ಕ್ಷೇಮ ವಿಚಾರಿಸಿದ್ದಾರೆ. ಇದೇ ವೇಳೆ ಸತ್ಯೇಂದ್ರ ಜೈನ್ ಅವರನ್ನು ಕೇಜ್ರಿವಾಲ್​ ಅಪ್ಪಿಕೊಂಡಿದ್ದಾರೆ. ಈ ಫೋಟೋಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ಧೈರ್ಯಶಾಲಿ ಮನುಷ್ಯ, ಹೀರೋನನ್ನು ಭೇಟಿಯಾದೆ ಎಂದು ತಮ್ಮ ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದ್ದಾರೆ.

ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಶುಕ್ರವಾರ ( ಮೇ 26) ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ. ಜೈನ್ ಚಿಕಿತ್ಸೆಗಾಗಿ ನಾಲ್ವರು ಸದಸ್ಯರ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ. ಮಂಡಳಿಯ ಸದಸ್ಯರಲ್ಲಿ ಎಲ್‌ಎನ್‌ಜೆಪಿ ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಜಿಬಿ ಪಂತ್ ಆಸ್ಪತ್ರೆಯ ನರವಿಜ್ಞಾನಿಗಳು, ನಿರ್ಣಾಯಕ ಆರೈಕೆಗಾಗಿ ತಜ್ಞರು ಇದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸತ್ಯೇಂದ್ರ ಜೈನ್ ಅವರನ್ನು ಮೇ 30, 2022 ರಂದು ಜಾರಿ ನಿರ್ದೇಶನಾಲಯವು (ಇಡಿ) ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿತ್ತು. ಪ್ರಕರಣ ಸಂಬಂಧ ಜೈನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸತ್ಯೇಂದರ್ ಜೈನ್ ಅವರು ಫೆಬ್ರವರಿ 14, 2015 ರಿಂದ ಮೇ 31, 2017 ರವರೆಗೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚರ ಆಸ್ತಿಗಳನ್ನು ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ದೂರಿನ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈ ವರ್ಷ ಫೆಬ್ರವರಿಯಲ್ಲಿ ಸತ್ಯೇಂದ್ರ ಜೈನ್​ ದೆಹಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಹಿಂದೆ ತಿಹಾರ್​ ಜೈಲಿನಲ್ಲಿ ಸತ್ಯೇಂದ್ರ ಜೈನ್ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಮೊದಲು ವೈರಲ್​ ಆದ ಪೋಟೋದಲ್ಲಿ ಅತ್ಯಾಚಾರ ಆರೋಪಿಯಿಂದ ಸತ್ಯೇಂದ್ರ ಜೈನ್​ ಕಾಲು ಒತ್ತಿಸಿಕೊಳ್ಳುತ್ತಿರುವುದು ಕಂಡು ಬಂದಿತ್ತು. ನಂತರ ವೈರಲ್​ ಆದ ವಿಡಿಯೋದಲ್ಲಿ ಅದೇ ಅತ್ಯಾಚಾರ ಆರೋಪಿಯಿಂದ ಮಸಾಜ್​ ಮಾಡಿಸಿಕೊಂಡಿರುವುದು ಕಂಡು ಬಂದಿತ್ತು. ಆನಂತರ ವೈರಲ್​ ಆದ ಮತ್ತೊಂದು ವಿಡಿಯೋದಲ್ಲಿ ಹೊರಗಡೆಯಿಂದ ಊಟದ ಪೂರೈಕೆ ಮಾಡಿದ್ದು ಕಂಡು ಬಂದಿತ್ತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.