ಜಮ್ಮು-ಕಾಶ್ಮೀರ ಚುನಾವಣೆ ಫಲಿತಾಂಶ; ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಾ, ನ್ಯಾಷನಲ್ ಕಾನ್ಫರೆನ್ಸ್ 40 ಸ್ಥಾನಗಳಲ್ಲಿ ಮುನ್ನಡೆ
Oct 08, 2024 10:49 AM IST
ಜಮ್ಮು-ಕಾಶ್ಮೀರ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಮತ ಎಣಿಕೆ ಪ್ರಗತಿಯಲ್ಲಿದೆ. ಆರಂಭಿಕ ಟ್ರೆಂಡ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಂಚೂಣಿಗೆ, ಎರಡನೇ ಸ್ಥಾನದಲ್ಲಿದೆ ಬಿಜೆಪಿ. (ಸಾಂಕೇತಿಕ ಚಿತ್ರ)
ಜಮ್ಮು-ಕಾಶ್ಮೀರದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಆರಂಭಿಕ ಟ್ರೆಂಡ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಮುಂಚೂಣಿಯಲ್ಲಿದೆ. 40 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ನ್ಯಾಷನಲ್ ಕಾನ್ಫರೆನ್ಸ್ ಆಡಳಿತ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಬಿಜೆಪಿ ಎರಡನೇ ಸ್ಥಾನ ಮತ್ತು ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ.
ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಬಳಿಕ ಜಮ್ಮು- ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರದ 90 ಸ್ಥಾನಗಳ ಪೈಕಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ 41 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಕಾಂಗ್ರೆಸ್ ಪಕ್ಷ 8 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಚುನಾವಣೆಗೆ ಮೊದಲೇ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಎರಡೂ ಪಕ್ಷಗಳ ಮುನ್ನಡೆ ಈಗ ಮೈತ್ರಿ ಆಡಳಿತವನ್ನು ಖಾತರಿ ಪಡಿಸಿದೆ. ಜಮ್ಮು-ಕಾಶ್ಮೀರದಲ್ಲಿ ಬಹುಮತಕ್ಕೆ 46 ರಿಂದ 48 ಸ್ಥಾನಗಳು ಬೇಕು. ಇದರಂತೆ ಗಮನಿಸಿದರೆ, ನ್ಯಾಷನಲ್ ಕಾನ್ಫರೆನ್ಸ್‌ಗೆ 41 ಮತ್ತು ಕಾಂಗ್ರೆಸ್ ಪಕ್ಷಕ್ಕೆ 8 ಸ್ಥಾನಗಳಲ್ಲಿ ಮುನ್ನಡೆ ಇದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಫಲಿತಾಂಶದ ಟ್ರೆಂಡ್
ಚುನಾವಣಾ ಆಯೋಗವು ಇಂದು ಬೆಳಗ್ಗೆ 8 ಗಂಟೆಗೆ ಜಮ್ಮು- ಕಾಶ್ಮೀರದ ಮತ ಎಣಿಕೆ ಕೇಂದ್ರಗಳಲ್ಲಿ ಒಟ್ಟು 90 ಕ್ಷೇತ್ರಗಳ ಮತ ಎಣಿಕೆ ಶುರುಮಾಡಿದೆ. ಆರಂಭಿಕ ಟ್ರೆಂಡ್ ಪ್ರಕಾರ ಎಂದರೆ 10 ಗಂಟೆಯ ವರದಿ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷ 41ರಲ್ಲಿ, ಅದರ ಮಿತ್ರ ಪಕ್ಷ ಕಾಂಗ್ರೆಸ್ 8ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಬಿಜೆಪಿ ಎರಡನೇ ಸ್ಥಾನದಲ್ಲಿದ್ದು 22 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಪಿಡಿಪಿ 3, ಪೀಪಲ್ಸ್ ಕಾನ್ಫರೆನ್ಸ್ 2, ಸಿಪಿಐಎಂ, ಎಎಪಿ, ಎನ್‌ಪಿಪಿಐ ತಲಾ 1ರಲ್ಲಿ ಮುನ್ನಡೆಯಲ್ಲಿವೆ. ವಿಶೇಷ ಎಂದರೆ 10 ಸ್ವತಂತ್ರ ಅಭ್ಯರ್ಥಿಗಳು ಕೂಡ ಮುನ್ನಡೆಯಲ್ಲಿದ್ದಾರೆ.
ಮುನ್ನಡೆಯಲ್ಲಿರುವ ಅಭ್ಯರ್ಥಿಗಳು
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಮತ್ತು ಸಿಪಿಐ(ಎಂ) ನಾಯಕ ಎಂವೈ ತಾರಿಗಾಮಿ ಮತ್ತು ಬಿಜೆಪಿಯ ಮಾಜಿ ಸಚಿವ ಶಾಮ್ ಲಾಲ್ ಶರ್ಮಾ ಪ್ರಮುಖರು.
ಮೂರು ಹಂತಗಳಲ್ಲಿ ಜಮ್ಮು -ಕಾಶ್ಮೀರದ ಚುನಾವಣೆ ನಡೆದಿತ್ತು. ಮೊದಲ ಹಂತದಲ್ಲಿ 24, ಎರಡನೇ ಹಂತದಲ್ಲಿ 26, ಮೂರನೇ ಹಂತದಲ್ಲಿ 40 ಸ್ಥಾನಗಳಿಗೆ ಮತದಾನ ನಡೆದಿತ್ತು. 90 ಸದಸ್ಯರ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ 873 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2014ರಲ್ಲಿ ಜಮ್ಮು-ಕಾಶ್ಮೀರದ ಕೊನೆಯ ಸರ್ಕಾರ ಆಡಳಿತದಲ್ಲಿದ್ದಾಗ ಪಿಡಿಪಿ 28 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿತ್ತು. ಸೈದ್ಧಾಂತಿಕ ವಿರೋಧಿ ಬಿಜೆಪಿ (25 ಸದಸ್ಯ ಬಲ) ಜೊತೆ ಸೇರಿ ಸರ್ಕಾರ ರಚಿಸಿತ್ತು. ಆದರೆ 2018ರಲ್ಲಿ ಬಿಜೆಪಿ ಬೆಂಬಲ ಹಿಂಪಡೆದ ಕಾರಣ ಸರ್ಕಾರ ಪತನವಾಗಿ, ರಾಜ್ಯಪಾಲರ ಆಳ್ವಿಕೆ ಬಂದಿತ್ತು. ಮುಂದೆ 2019ರಲ್ಲಿ ಕೇಂದ್ರ ಸರ್ಕಾರವು ಜಮ್ಮು- ಕಾಶ್ಮೀರದ ಆಡಳಿತವನ್ನು ಕೇಂದ್ರದ ವ್ಯಾಪ್ತಿಗೆ ತೆಗೆದುಕೊಂಡಿತು.