Explainer: ಘನ ಇಂಧನ ಕ್ಷಿಪಣಿಗಳೆಂದರೇನು, ಉತ್ತರ ಕೊರಿಯಾ ಇದನ್ನು ಏಕೆ ಅಭಿವೃದ್ಧಿಪಡಿಸುತ್ತಿದೆ? ಲಿಕ್ವಿಡ್-ಸಾಲಿಡ್ ವ್ಯತ್ಯಾಸ ತಿಳಿಯಿರಿ
Nov 13, 2024 09:30 AM IST
Explainer: ಘನ ಇಂಧನ ಕ್ಷಿಪಣಿಗಳೆಂದರೇನು, ಉತ್ತರ ಕೊರಿಯಾ ಅಭಿವೃದ್ಧಿಪಡಿಸುತ್ತಿರುವುದೇಕೆ?
- Explainer: ಉತ್ತರ ಕೊರಿಯಾ ಇತ್ತೀಚೆಗೆ ಉಡಾವಣೆ ಮಾಡಿರುವ ಖಂಡಾಂತರ ಕ್ಷಿಪಣಿಯು ಹೊಸ ಘನ ಇಂಧನ ರಾಕೆಟ್ ಎಂಜಿನ್‌ಗಳ ಅಭಿವೃದ್ಧಿಗೆ ಸಂಬಂಧಪಟ್ಟಿರಬಹುದು ಎಂದು ದಕ್ಷಿಣ ಕೊರಿಯಾ ಅಂದಾಜಿಸಿದೆ. ಏನಿದು ಸಾಲಿಡ್ ಫ್ಯೂಯೆಲ್ ಮಿಸೈಲ್? ಉತ್ತರ ಕೊರಿಯಾ ಏಕೆ ಇದನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಯೋಣ.
ಉತ್ತರ ಕೊರಿಯಾ ಇತ್ತೀಚೆಗೆ ಉಡಾವಣೆ ಮಾಡಿರುವ ಖಂಡಾಂತರ ಕ್ಷಿಪಣಿಯು ಹೊಸ ಘನ ಇಂಧನ ರಾಕೆಟ್ ಎಂಜಿನ್‌ಗಳ ಅಭಿವೃದ್ಧಿಗೆ ಸಂಬಂಧಪಟ್ಟಿರಬಹುದು ಎಂದು ದಕ್ಷಿಣ ಕೊರಿಯಾ ಅಂದಾಜಿಸಿದೆ. ಉಕ್ರೇನ್‌ನಲ್ಲಿ ಸಹಾಯ ಮಾಡಲು ತನ್ನ ಸೈನ್ಯವನ್ನು ನಿಯೋಜಿಸುವ ಬದಲು ಉತ್ತರ ಕೊರಿಯಾವು ರಷ್ಯಾದಿಂದ ಹೊಸ ಐಸಿಬಿಎಂ ತಂತ್ರಜ್ಞಾನವನ್ನು ಪಡೆಯಬಹುದು ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವರು ಇತ್ತೀಚೆಗೆ ಹೇಳಿದ್ದರು. ಪಯೋಂಗ್ಯಾಂಗ್‌ನ ಕ್ಷಿಪಣಿ ಕಾರ್ಯಕ್ರಮ ಇಲ್ಲಿಯವರೆಗೆ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ದಕ್ಷಿಣ ಕೊರಿಯಾಕ್ಕೆ ರಷ್ಯಾದಿಂದ ಯಾವ ಸಹಾಯ ಬೇಕು ಎಂದು ಸ್ಪಷ್ಟವಾಗಿಲ್ಲ. ಉತ್ತರ ಕೊರಿಯಾವು ತನ್ನ ಕ್ಷಿಪಣಿ ವ್ಯವಸ್ಥೆಯನ್ನು ಸಾಕಷ್ಟು ಸುಧಾರಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಘನ ಇಂಧನ ಕ್ಷಿಪಣಿಯು ಮಹತ್ವದ ಸೇರ್ಪಡೆಯಾಗುತ್ತದೆ. ಬನ್ನಿ ನಾವಿಲ್ಲ ಘನ ಇಂಧನ ತಂತ್ರಜ್ಞಾನದ ಕ್ಷಿಪಣಿಗಳ (solid-fuel missiles) ಗುಣಲಕ್ಷಣಗಳನ್ನು ತಿಳಿಯೋಣ.
ಘನ ಇಂಧನ ಮಿಸೈಲ್ ಅನುಕೂಲತೆಗಳೇನು?
ಇದರಲ್ಲಿ ಕೆಲವು ತಕ್ಷಣದ ಅನುಕೂಲತೆಗಳಿವೆ. ಘನ-ಇಂಧನ ಕ್ಷಿಪಣಿಗಳು ಉಡಾವಣೆಗೆ ಮುಂಚಿತವಾಗಿ ತಕ್ಷಣವೇ ಇಂಧನ ತುಂಬುವ ಅಗತ್ಯವಿಲ್ಲ. ಮೊದಲೇ ತುಂಬಿಸಿಡಬಹುದು. ಈ ಮಿಸೈಲ್‌ಗಳ ಕಾರ್ಯನಿರ್ವಹಣೆ ಸುಲಭ ಮತ್ತು ಸುರಕ್ಷಿತವಾಗಿರುತ್ತದೆ. ಕಡಿಮೆ ಲಾಜಿಸ್ಟಿಕ್ ಬೆಂಬಲ ಬೇಕಿರುತ್ತದೆ. ದ್ರವ ಇಂಧನ ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ ಸಾಲಿಡ್ ಟೆಕ್ನಾಲಜಿಯ ಮಿಸೈಲ್‌ಗಳನ್ನು ಪತ್ತೆಹಚ್ಚುವುದು ಕಷ್ಟಕರ.
ಘನ ಇಂಧನ ತಂತ್ರಜ್ಞಾನ ಎಂದರೇನು?
ಘನ ಪ್ರೊಪೆಲ್ಲಂಟ್‌ಗಳು ಇಂಧನ ಮತ್ತು ಆಕ್ಸಿಡೈಸರ್ ಮಿಶ್ರಣವಾಗಿದೆ. ಅಲ್ಯೂಮಿನಿಯಂನಂತಹ ಲೋಹೀಯ ಪುಡಿಗಳು ಇಲ್ಲಿ ಸಾಮಾನ್ಯವಾಗಿ ಇಂಧನವಾಗಿ ಕಾರ್ಯನಿರ್ವಹಿಸುತ್ತವೆ. ಅಮೋನಿಯಂ ಪರ್ಕ್ಲೋರೇಟ್, ಇದು ಪರ್ಕ್ಲೋರಿಕ್ ಆಮ್ಲ ಮತ್ತು ಅಮೋನಿಯದ ಉಪ್ಪಿನ ಸಾಮಾನ್ಯ ಆಕ್ಸಿಡೈಸರ್ ಆಗಿದೆ. ಇಂಧನ ಮತ್ತು ಆಕ್ಸಿಡೈಸರ್ ಅನ್ನು ಜತೆಯಾಗಿ ಗಟ್ಟಿಯಾದ ರಬ್ಬರಿನ ವಸ್ತುವಿನಿಂದ ಬಂಧಿಸಲಾಗುತ್ತದೆ. ಲೋಹದ ಕವಚದಲ್ಲಿ ಪ್ಯಾಕ್ ಮಾಡಲಾಗುತ್ತದೆ. ಘನ ನೋದಕವು (ಪ್ರೊಪೆಲಂಟ್) ಸುಟ್ಟಾಗ ಅಮೋನಿಯಂ ಪರ್ಕ್ಲೋರೇಟ್‌ನಿಂದ ಆಮ್ಲಜನಕವು ಅಲ್ಯೂಮಿನಿಯಂನೊಂದಿಗೆ ಸೇರಿಕೊಂಡು ಅಗಾಧ ಪ್ರಮಾಣದ ಶಕ್ತಿ ಮತ್ತು 5,000 ಡಿಗ್ರಿ ಫ್ಯಾರನ್‌ಹೀಟ್ (2,760 ಡಿಗ್ರಿ ಸೆಲ್ಸಿಯಸ್)ಗಿಂತ ಹೆಚ್ಚಿನ ತಾಪಮಾನ ಉತ್ಪಾದಿಸುತ್ತದೆ. ಇದು ಉಡಾವಣಾ ಪ್ಯಾಡ್‌ನಿಂದ ಕ್ಷಿಪಣಿಯನ್ನು ಮೇಲಕ್ಕೆ ಎತ್ತುತ್ತದೆ.
ಈ ತಂತ್ರಜ್ಞಾನವನ್ನು ಯಾರೆಲ್ಲ ಹೊಂದಿದ್ದಾರೆ?
ಚೈನೀಸ್ ತಂತ್ರಜ್ಞರು ಅಭಿವೃದ್ಧಿಪಡಿಸಿದ ಪಟಾಕಿಗಳಿಗಿಂತ ಹಿಂದೆಯೇ ಘನ ಇಂಧನವನ್ನು ಅಭಿವೃದ್ಧಿಪಡಿಸಲಾಗಿತ್ತು. 20ನೇ ಶತಮಾನದ ಮಧ್ಯಭಾಗದಲ್ಲಿ ಅಮೆರಿಕವು ಹೆಚ್ಚು ಶಕ್ತಿಶಾಲಿ ಪ್ರೊಪೆಲೆಂಟ್‌ಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಈ ತಂತ್ರಜ್ಞಾನದ ಬೆಳವಣಿಗೆಯು ನಾಟಕೀಯವಾಗಿ ಹೆಚ್ಚಾಯಿತು.
ಉತ್ತರ ಕೊರಿಯಾ ಸಣ್ಣ, ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಘನ ಇಂಧನ ಬಳಸುತ್ತದೆ. ಅದೇ ರೀತಿ ಹೊಸ ಹ್ವಾಸಾಂಗ್ -18 ಖಂಡಾಂತರ ಕ್ಷಿಪಣಿಯಲ್ಲಿಯೂ ಸಾಲಿಡ್ ಫ್ಯೂಯೆಲ್ ಬಳಸುತ್ತದೆ.
ಸೋವಿಯತ್ ಯೂನಿಯನ್ ತನ್ನ ಮೊದಲ ಘನ-ಇಂಧನ ICBM, RT-2 ಅನ್ನು 1970 ರ ದಶಕದ ಆರಂಭದಲ್ಲಿ ಪರಿಚಯಿಸಿತು. ನಂತರ ಫ್ರಾನ್ಸ್ ತನ್ನ S3 ಅನ್ನು ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಿತು. 1990 ರ ದಶಕದ ಉತ್ತರಾರ್ಧದಲ್ಲಿ ಚೀನಾ ಘನ ಇಂಧನ ICBM ಗಳನ್ನು ಪರೀಕ್ಷಿಸಲು ಪ್ರಾರಂಭಿಸಿತು.ದಕ್ಷಿಣ ಕೊರಿಯಾವು "ದಕ್ಷ ಮತ್ತು ಸುಧಾರಿತ" ಘನ-ಪ್ರೊಪೆಲ್ಲೆಂಟ್ ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಚಿಕ್ಕ ರಾಕೆಟ್‌ಗಳಿಗೆ ಇದನ್ನು ಬಳಸುತ್ತಿದೆ.
ಸಾಲಿಡ್ ಮತ್ತು ಲಿಕ್ವಿಡ್ ಫ್ಯೂಯೆಲ್ ವ್ಯತ್ಯಾಸ
ಘನ ಮತ್ತು ದ್ರವ ಇಂಧನಗಳ ನಡುವೆ ಇರುವ ವ್ಯತ್ಯಾಸವೂ ಪ್ರಮುಖವಾದದ್ದು. ದ್ರವ ಪ್ರೊಪೆಲೆಂಟ್‌ಗಳು ಹೆಚ್ಚಿನ ಪ್ರೊಪಲ್ಸಿವ್ ಥ್ರಸ್ಟ್ ಮತ್ತು ಶಕ್ತಿಯನ್ನು ಒದಗಿಸುತ್ತವೆ. ಆದರೆ, ಇವು ಹೆಚ್ಚು ಸಂಕೀರ್ಣ ತಂತ್ರಜ್ಞಾನ ಹೊಂದಿರುತ್ತವೆ. ಹೆಚ್ಚುವರಿ ತೂಕದ ಅಗತ್ಯ ಇರುತ್ತದೆ.
ಘನ ಇಂಧನವು ದಟ್ಟವಾಗಿರುತ್ತದೆ. ಬೇಗ ಉರಿದುಬಿಡುತ್ತದೆ. ಕಡಿಮೆ ಸಮಯದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಘನ ಇಂಧನವನ್ನು ಬಹುಕಾಲ ಶೇಖರಿಸಿಇಡಬಹುದು. ಅದು ವಿಘಟನೆಯಾಗುವುದಿಲ್ಲ. ಆದರೆ, ದ್ರವ ಇಂಧನವನ್ನು ಈ ರೀತಿ ಮಾಡಲು ಸಾಧ್ಯವಾಗುವುದಿಲ್ಲ.