ಇರಾನ್‌ನ ಕ್ಷಿಪಣಿ ನೆಲೆಗಳ ಮೇಲೆ ನೇರ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಸೇನೆ, ಮಧ್ಯಪ್ರಾಚ್ಯ ಉದ್ವಿಗ್ನ, 10 ಮುಖ್ಯ ಅಂಶಗಳು
ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗಿದೆ. ಇರಾನ್, ಹಿಜ್ಬುಲ್ಲಾ ದಾಳಿ ಬಳಿಕ ಕೆಲ ದಿನಗಳ ಮಟ್ಟಿಗೆ ಸುಮ್ಮನಿದ್ದ ಇಸ್ರೇಲ್, ಶನಿವಾರ ಮುಂಜಾನೆ ದಿಢೀರ್ ಆಗಿ ಇರಾನ್‌ನ ಕ್ಷಿಪಣಿ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಗೆ ಸಂಬಂಧಿಸಿದ 10 ಮುಖ್ಯ ಅಂಶಗಳ ವಿವರ ಇಲ್ಲಿದೆ.
ನವದೆಹಲಿ: ಇರಾನ್‌ನ ಕಡೆಯಿಂದ ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಮೇಲೆ ನಡೆದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಶನಿವಾರ ಮುಂಜಾನೆ ಇಸ್ರೇಲ್ ಕ್ಷಿಪಣಿ ಸಂಗ್ರಹಗಳ ಮೇಲೆ ನಿರ್ದಿಷ್ಟವಾಗಿ ಪ್ರತಿದಾಳಿ ನಡೆಸಿದೆ. ಇಸ್ರೇಲ್ ಸೇನೆ ಇದೇ ಮೊದಲ ಬಾರಿಗೆ ಇರಾನ್ ಮೇಲೆ ಬಹಿರಂಗ ದಾಳಿ ನಡೆಸಿರುವಂಥದ್ದು. ಹೀಗಾಗಿ ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿದೆ. ಆದಾಗ್ಯೂ, ತಾನು ಇರಾನ್‌ನಿಂದ ತನ್ನ ಮೇಲೆ ನಡೆದ ಕ್ಷಿಪಣಿ ದಾಳಿಯ ಮೂಲ ತಾಣಗಳನ್ನು ನಿರ್ದಿಷ್ಟವಾಗಿ ಗುರಿ ಇಟ್ಟು ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇರಾನ್‌ನ ನ್ಯೂಕ್ಲಿಯರ್ ಸೈಟ್ ಅಥವಾ ತೈಲ ಭಾವಿ, ಸಂಗ್ರಹಗಳ ಮೇಲೆ ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇರಾನಿನ ವರದಿಗಳ ಪ್ರಕಾರ, ಟೆಹ್ರಾನ್ ಮತ್ತು ಹತ್ತಿರದ ಮಿಲಿಟರಿ ಸ್ಥಾಪನೆಗಳ ಮೇಲೆ ಸ್ಥಳೀಯ ಸಮಯ ನಸುಕಿನ 2 ಗಂಟೆಗೆ ನಂತರ ಮೂರು ಆವೃತ್ತಿ ದಾಳಿ ನಡೆದಿದೆ. ಇದೇ ವೇಳೆ, ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಟೆಹ್ರಾನ್, ಖುಜೆಸ್ತಾನ್ ಮತ್ತು ಇಲಾಮ್ ಪ್ರಾಂತ್ಯಗಳಲ್ಲಿನ ಮಿಲಿಟರಿ ಗುರಿಗಳ ಮೇಲೆ ಇಸ್ರೇಲಿ ದಾಳಿಗಳನ್ನು ತಡೆಯಲಾಗಿದೆ. ಅದು ಕೇವಲ ಸೀಮಿತ ಹಾನಿ ಎಂದು ಹೇಳಿಕೊಂಡಿದೆ.
ಹೈ ಅಲರ್ಟ್‌ನಲ್ಲಿದ್ದ ಇರಾನ್ - ಇಸ್ರೇಲ್
ಇರಾನ್ ಅಕ್ಟೋಬರ್ 1 ರಂದು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಉಡಾಯಿಸಿ ಪಶ್ಚಿಮ ದಂಡೆಯಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದ ಅಂದಿನಿಂದ ಎರಡೂ ದೇಶಗಳು ಹೈ ಅಲರ್ಟ್ ಸ್ಥಿತಿಯಲ್ಲಿವೆ. 2023ರ ಅಕ್ಟೋಬರ್ 7 ರಂದು ಇರಾನ್ ಬೆಂಭಲಿತ ಪ್ಯಾಲೆಸ್ತೀನಿಯನ್ ಗುಂಪು ಹಮಾಸ್ ದಾಳಿ ನಡೆಸಿದ್ದರಿಂದಾಗಿ ಶುರುವಾದ ಉದ್ವಿಗ್ನ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿದೆ. ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಬೆಂಬಲವೂ ಹಮಾಸ್‌ಗೆ ಇದೆ.
ಇರಾನ್ ಸೇನಾ ಕ್ಷಿಪಣಿ ನೆಲೆಗಳ ಮೇಲೆ ಇಸ್ರೇಲ್ ದಾಳಿ 10 ಅಂಶಗಳು
1) "ಇಸ್ರೇಲ್ ವಿರುದ್ಧ ಇರಾನ್ ಆಡಳಿತದಿಂದ ನಡೆದ ತಿಂಗಳ ನಿರಂತರ ದಾಳಿಗಳಿಗೆ ಪ್ರತಿಕ್ರಿಯೆಯಾಗಿ - ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನ ಮಿಲಿಟರಿ ಗುರಿಗಳ ಮೇಲೆ ನಿಖರ, ನಿರ್ದಿಷ್ಟ ದಾಳಿಗಳನ್ನು ನಡೆಸುತ್ತಿದೆ" ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
2) ಇರಾನ್ ಮೇಲಿನ ತನ್ನ ನಿರ್ದಿಷ್ಟ ದಾಳಿ ಪೂರ್ಣಗೊಂಡಿದೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ. ಅದು ಟ್ರಕ್ ಕ್ಷಿಪಣಿ ಉತ್ಪಾದನಾ ಸೌಲಭ್ಯಗಳನ್ನು ವೈಮಾನಿಕ ದಾಳಿ ಮೂಲಕ ಧ್ವಂಸಗೊಳಿಸಿರುವುದಾಗಿ ಸ್ಪಷ್ಟಪಡಿಸಿದೆ. ಇದಕ್ಕೆ ಉತ್ತರ ಕೊಡುವುದಕ್ಕೆ ಮತ್ತೆ ಇರಾನ್ ದಾಳಿ ನಡೆಸಿದರೆ ನಾವು ಕೂಡ ಪ್ರತಿಕ್ರಿಯಿಸುತ್ತೇವೆ ಎಂದು ಇಸ್ರೇಲ್ ಸೇನೆ ಎಚ್ಚರಿಸಿದೆ.
3) ಇರಾನ್‌ನ ಅಣು ಸ್ಥಾವರ ಅಥವಾ ಇಂಧನ ಮೂಲ ಸೌಕರ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ.
4) ಇಸ್ರೇಲ್‌ನ ದಾಳಿ ನಿರ್ದಿಷ್ಟವಾಗಿ ಮತ್ತು ಇರಾನ್ ದಾಳಿಗೆ ಸರಿಸಮನಾಗಿ ಇತ್ತು. ಇದು ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸಬೇಕು. ಇನ್ನು ಇದನ್ನು ಮುಂದುವರಿಸಬಾರದು. ಇರಾನ್ ಮತ್ತೆ ದಾಳಿ ನಡೆಸಿದರೆ ಇಸ್ರೇಲ್ ಪರವಾಗಿ ಅಮೆರಿಕ ನಿಲ್ಲಲಿದೆ ಎಂದು ಜೋ ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
5) ಇರಾನ್ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ದೃಶ್ಯಗಳಲ್ಲಿ ಸೆಂಟ್ರಲ್ ಟೆಹ್ರಾನ್‌ನಲ್ಲಿ ಕ್ಷಿಪಣಿಗಳ ಸುರಿಮಳೆ ಕಂಡುಬಂದಿದೆ. ಈ ದಾಳಿ ಎಲ್ಲಿ ನಡೆಯುತ್ತಿದೆ ಎಂಬ ವಿವರವನ್ನು ಅದರಲ್ಲಿ ತಿಳಿಸಿರಲಿಲ್ಲ.
6) ಇರಾನ್‌ನಲ್ಲಿ ದಾಳಿಗೊಳಗಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೆಲೆಗಳಿಗೆ ಹಾನಿಯಾಗಿಲ್ಲ ಎಂದು ಅರೆ ಸರ್ಕಾರಿ ಸುದ್ದಿ ಏಜೆನ್ಸಿ ತಸ್ನಿಮ್ ಹೇಳಿದೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಮಾರ್ಗಗಳಲ್ಲಿನ ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾಗಿ ರಾಜ್ಯ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ. ಮುಂದಿನ ಸೂಚನೆ ಬರುವವರೆಗೆ ನೆರೆಯ ಇರಾಕ್ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.
7) ಇಸ್ರೇಲ್ ಶನಿವಾರ ಮುಂಜಾನೆ ಸಿರಿಯಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿನ ಕೆಲವು ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಿದೆ ಎಂದು ಸಿರಿಯನ್ ರಾಜ್ಯ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ. ಇಸ್ರೇಲ್ ಸಿರಿಯಾ ಮೇಲಿನ ದಾಳಿಯನ್ನು ದೃಢೀಕರಿಸಿಲ್ಲ.
8) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಇತರ ಭದ್ರತಾ ಅಧಿಕಾರಿಗಳು ಟೆಲ್ ಅವೀವ್‌ನಲ್ಲಿರುವ ಮಿಲಿಟರಿಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಕಾರ್ಯಾಚರಣೆಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ವರದಿಯಾಗಿದೆ.
9) ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಮಧ್ಯಪ್ರಾಚ್ಯ ಪ್ರವಾಸ ಮುಗಿಸಿ ಅಮೆರಿಕ ತಲುಪಿದ ಕೂಡಲೇ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆದಿದೆ.
10) ಇರಾನ್ ಮೇಲೆ ನಿರ್ದಿಷ್ಟವಾಗಿ ಇಸ್ರೇಲ್ ದಾಳಿ ನಡೆಸುವ ವಿಚಾರ ಮುಂಚಿತವಾಗಿಯೇ ಅಮೆರಿಕಕ್ಕೆ ತಿಳಿದಿತ್ತು. ಆದರೆ ದಾಳಿಯಲ್ಲಿ ಅಮೆರಿಕದ ಭಾಗವಹಿಸುವಿಕೆ ಏನೂ ಇಲ್ಲ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.