Viral News: ಸಿಂಹ ಜೋಡಿ ಅಕ್ಬರ್, ಸೀತಾ ಹೆಸರು ಮರುನಾಮಕರಣಕ್ಕೆ ಕೋರ್ಟ್ ಸೂಚನೆ, ಏನಿದು ವಿವಾದ
Feb 22, 2024 08:38 PM IST
ವಿವಾದಕ್ಕೆ ಈಡಾಗಿದ್ದ ಸಿಂಹಗಳ ಹೆಸರು ಬದಲಾಗಲಿದೆ.
- Lion news ಧಾರ್ಮಿಕ ಭಾವನೆ ಕೆರಳಿಸುವ ಹೆಸರುಗಳನ್ನು ಪ್ರಾಣಿಗಳಿಗೆ ಇಡಬೇಡಿ. ಅಕ್ಬರ್ ಒಬ್ಬ ಸಮರ್ಥ, ಜಾತ್ಯತೀತ ನಾಯಕ. ಸೀತಾ ಧಾರ್ಮಿಕ ಹಿನ್ನೆಲೆಯ ಹೆಸರು. ಹೀಗೆ ಹೆಸರಿಟ್ಟು ಜನರಲ್ಲಿ ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳಿ ಎಂದು ನ್ಯಾಯಾಲಯ ಅರಣ್ಯ ಇಲಾಖೆಗೆ ಸೂಚಿಸಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಲದ ಸಿಲಿಗುರಿ ಸಫಾರಿ ಕೇಂದ್ರದಲ್ಲಿ ಅಕ್ಬರ್ ಹಾಗೂ ಸೀತಾ ಸಿಂಹದ ಜೋಡಿಯನ್ನು ಒಂದೇ ಕಡೆ ಬಿಟ್ಟು ವಿವಾದವಾಗಿದ್ದ ವಿಚಾರದಲ್ಲಿ ಎರಡೂ ಸಿಂಹದ ಹೆಸರು ಬದಲಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ ನೀಡಿದೆ. ಸಮಾಜದಲ್ಲಿ ಅನಗತ್ಯವಾಗಿ ಗೊಂದಲ ಮೂಡುವಂತಹ ಹೆಸರುಗಳನ್ನು ಇಡುವ ಬದಲು ದಾರ್ಶನಿಕರು. ಸಾಹಿತಿಗಳು, ಸಾಧಕರ ಹೆಸರುಗಳನ್ನು ಪ್ರಾಣಿಗಳಿಗೆ ಇಡಿ ಎಂದೂ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆಯನ್ನು ಅರಣ್ಯ ಇಲಾಖೆಗೆ ನೀಡಿದೆ.
ತ್ರಿಪುರಾದಿಂದ ಪಶ್ಚಿಮ ಬಂಗಾಲದ ಸಿಲಿಗುರಿ ಸಫಾರಿ ಕೇಂದ್ರಕ್ಕೆ ತರಲಾಗಿದ್ದ ಅಕ್ಬರ್ ಹಾಗೂ ಸೀತಾ ಸಿಂಹದ ಜೋಡಿಯನ್ನು ಒಂದು ಕಡೆ ಬಿಡಲಾಗಿತ್ತು. ಇವುಗಳನ್ನು ಬೇರ್ಪಡಿಸಿ ಇಲ್ಲವೇ ಹೆಸರು ಬದಲಿಸಿ ಎನ್ನುವ ಬೇಡಿಕೆಯನ್ನು ವಿಶ್ವ ಹಿಂದೂಪರಿಷತ್ ಪಶ್ಚಿಮ ಬಂಗಾಳ ಘಟಕ ಇರಿಸಿತ್ತು, ಆದರೆ ಅದು ಹಿಂದೆಯೇ ನಾಮಕರಣ ಆಗಿರುವುದರಿಂದ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಲ ಅರಣ್ಯ ಇಲಾಖೆ ಹೇಳಿತ್ತು. ಇದನ್ನು ಪ್ರಶ್ನಿಸಿ ವಿಎಚ್‌ಪಿ ಜಲಪೈಗುರಿಯಲ್ಲಿರುವ ಕೋಲ್ಕತ್ತಾ ಹೈಕೋರ್ಟ್‌ನ ಪೀಠದ ಮೆಟ್ಟಿಲೇರಿತ್ತು.
ನ್ಯಾಯಮೂರ್ತಿಗಳು ಹೇಳಿದ್ದೇನು?
ಗುರುವಾರ ಅರ್ಜಿ ವಿಚಾರಣೆ ಮಾಡಿದ ಏಕಪೀಠ ಸದಸ್ಯರಾದ ನ್ಯಾಯಮೂರ್ತಿ ಸುಗತಾ ಭಟ್ಟಾಚಾರ್ಯ ಅವರು, ಸಿಂಹಕ್ಕೆ ಇಟ್ಟಿರುವ ಹೆಸರಗಳನ್ನು ಬದಲಾಯಿಸಬೇಕು ಎಂದು ನಿರ್ದೇಶನ ನೀಡಿದರು.
ಯಾವುದೇ ವನ್ಯಜೀವಿಗೆ ಹಿಂದೂ ದೇವರ ಹೆಸರು ಇಲ್ಲವೇ ಮುಸ್ಲೀಂ ಅಥವಾ ಕ್ರಿಶ್ಚಿಯನ್ ದೇವರ ಹೆಸರನ್ನು ಯಾಕೆ ಇಡುತ್ತೀರಿ., ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ನೋಬೆಲ್ ಬಹುಮಾನ ಪಡೆದ ಸಾಧಕರ ಹೆಸರನ್ನು ಯಾಕೆ ಇಡಬಾರದು. ಇವರ ಬದಲು ನಮ್ಮ ದೇಶ ಗೌರವಿಸುವ ಯಾವುದೇ ಸಾಧಕರನ್ನು ಹೆಸರನ್ನು ಇಡಬಹುದಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಅವರು, ಹಿಂದೆ ತ್ರಿಪುರಾದಲ್ಲಿಯೇ ಇವುಗಳಿಗೆ ಹೆಸರು ಇಡಲಾಗಿತ್ತು. ಸರ್ಕಾರವೂ ಹೆಸರು ಬದಲಾಯಿಸಲು ಯೋಚನೆ ನಡಸುತ್ತಿತ್ತು ಎಂದು ವಿವರಿಸಿದರು.
ಇದು ಜಾತ್ಯತೀತ ರಾಜ್ಯ. ಸುಮ್ಮನೇ ದೇವರ ಹೆಸರನ್ನು ಪ್ರಾಣಿಗಳಿಗೆ ಇಟ್ಟು ಯಾಕೆ ವಿವಾದ ಸೃಷ್ಟಿಸುತ್ತೀರಿ. ಇದನ್ನು ಇಲಾಖೆಯವರು ತಪ್ಪಿಸಬಹುದಿತ್ತು. ಅಕ್ಬರ್ ಒಬ್ಬ ಸಮರ್ಥ ಹಾಗೂ ಉದಾತ್ತ ಮೊಗಲ್ ಮಹಾರಾಜ. ಆತ ಜಾತ್ಯತೀತೆಗೆ ಹೆಸರಾಗಿದ್ದ ನಾಯಕ. ಸೀತಾ ಎನ್ನುವುದು ಜನರ ನಂಬಿಕೆಯ ಭಾಗ. ಇಂತಹ ಹೆಸರಿನಲ್ಲಿ ಜನರ ಧಾರ್ಮಿಕ ಭಾವನೆ ಕೆರಳಿಸುವುದು ಆಗಬಾರದು. ಕೂಡಲೇ ಹೆಸರು ಬದಲಿಸಿ ಎಂದು ಸೂಚಿಸಿದರು.
ಏನಿದು ವಿವಾದ
ಕೆಲ ದಿನಗಳ ಹಿಂದೆ ತ್ರಿಪುರಾದ ಸೆಪಹಿಜಾಲ ಮೃಗಾಲಯದಿಂದ ಸಿಂಹದ ಜೋಡಿಯನ್ನು ವಾರದ ಹಿಂದೆಯಷ್ಟೇ ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿತ್ತು. ಇದರಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಸಿಂಹಗಳು ಸಫಾರಿ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಇವರೆಡನ್ನೂ ಜೋಡಿಯಾಗಿ ಬಿಟ್ಟಿದ್ದನ್ನು ಕೆಲವರು ಗಮನಿಸಿದ್ದರು. ಇದು ಸ್ಥಳೀಯ ವಿಶ್ವ ಹಿಂದೂಪರಿಷತ್ ಪ್ರಮುಖರ ಗಮನಕ್ಕೂ ಬಂದಿತ್ತು. ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿಂಹಗಳ ಹೆಸರನ್ನು ಬದಲಿಸಿ ಇಲ್ಲವೇ ಸಿಂಹಗಳನ್ನು ಒಂದೇ ಕಡೆ ಇರುವುದನ್ನು ತಪ್ಪಿಸಿ ಎಂದು ಮನವಿ ಸಲ್ಲಿಸಿದ್ದರು. ಆದರೆ ಈಗಾಗಲೇ ಸಿಂಹಗಳಿಗೆ ಹೆಸರು ಇಡಲಾಗಿದೆ. ಹೆಸರು ಬದಲಾಯಿಸಲು ಆಗುವುದಿಲ್ಲ. ಅವುಗಳನ್ನು ಸ್ಥಳಾಂತರಿಸುವ ವಿಷಯವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರ ನೀಡಿದ್ದರು
ಅರಣ್ಯ ಇಲಾಖೆ ಕ್ರಮವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ರಾಜ್ಯ ವಿಎಚ್‌ಪಿ ಮುಖಂಡರು ಜಲಪಾಯ್‌ಗುರಿಯಲ್ಲಿರುವ ಕೋಲ್ಕತಾ ಹೈಕೋರ್ಟ್‌ನ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
ಇದು ಹಿಂದೂ ಭಾವನೆಗಳನ್ನು ಕೆರಳಿಸುವ ಕೆಲಸ. ಅಕ್ಬರ್ ಎನ್ನುವ ಸಿಂಹವನ್ನು ಸೀತಾ ಎನ್ನುವ ಸಿಂಹದ ಜತೆಗೆ ಇರಿಸುವುದು ಸರಿ ಕಾಣುತ್ತಿಲ್ಲ. ಕೂಡಲೇ ಹೆಸರು ಬದಲಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಪಶ್ವಿಮಬಂಗಾಲದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಲಿಗುರಿ ಸಫಾರಿ ಪಾರ್ಕ್ ನಿರ್ದೇಶಕರನ್ನು ಪಾರ್ಟಿಗಳನ್ನಾಗಿ ಮಾಡಲಾಗಿತ್ತು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಪೀಠದ ನ್ಯಾಯಮೂರ್ತಿ ಸೌಗತಾ ಭಟ್ಟಾಚಾರ್ಯ ಅವರು ಫೆಬ್ರವರಿ 22ರಂದು ವಿಚಾರಣೆ ನಡೆಸುವುದಾಗಿ ಮುಂದಕ್ಕೆ ಹಾಕಿದ್ದರು.
ವಿಭಾಗ