Viral News: ಪಶ್ಚಿಮ ಬಂಗಾಲ ಸಫಾರಿ ಪಾರ್ಕ್‌ನಲ್ಲಿ ಅಕ್ಬರ್-ಸೀತಾ ಸಿಂಹ ಜೋಡಿ, ನ್ಯಾಯಾಲಯ ಮೊರೆ ಹೋದ ವಿಎಚ್‌ಪಿ !
Feb 17, 2024 05:36 PM IST
ಪಶ್ಚಿಮ ಬಂಗಾಲದಲ್ಲಿ ಅಕ್ಬರ್- ಸೀತಾ ಹೆಸರಿನ ಜೋಡಿ ಸಿಂಹದ ಜತೆ ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಲಾಗಿದೆ.
- Forest Tales ತ್ರಿಪುರದಿಂದ ತಂದಿದ್ದ ಅಕ್ಬರ್ ಹಾಗೂ ಸೀತಾ ಸಿಂಹದ ಜೋಡಿಯನ್ನು ಪಶ್ಚಿಮ ಬಂಗಾಲದ ಅರಣ್ಯ ಇಲಾಖೆಯ ಸಿಲಿಗುರಿ ಸಫಾರಿಯಲ್ಲಿ ಜತೆಯಾಗಿಸಿದ್ದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯ ಮೆಟ್ಟಿಲೇರಿದೆ. ಇದು ಹಿಂದೂ ಭಾವನೆ ಕೆರಳಿಸುವ ಪ್ರಯತ್ನ ಎಂದು ಅರ್ಜಿಯಲ್ಲಿ ತಿಳಿಸಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಲದ ಅರಣ್ಯ ಇಲಾಖೆ ನಡೆಸುತ್ತಿರು ಸಫಾರಿ ಪಾರ್ಕ್‌ನಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಹೆಸರಿನ ಸಿಂಹದ ಜೋಡಿಯನ್ನು ಒಟ್ಟಿಗೆ ಬಿಟ್ಟಿರುವುದು ವಿಶ್ವ ಹಿಂದೂಪರಿಷತ್ ಅನ್ನು ಕೆರಳಿಸಿದೆ. ಈ ಜೋಡಿಯನ್ನು ಒಂದೇ ಕಡೆ ಇಟ್ಟಿರುವುದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಕೋಲ್ಕತಾ ಹೈಕೋರ್ಟ್ ಮೊರೆ ಹೋಗಿದೆ. ಈ ಕುರಿತು ಅರ್ಜಿ ವಿಚಾರಣೆಗೆ ಎತ್ತಿಕೊಂಡು ನ್ಯಾಯಾಲಯ ಪೀಠವು ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ.
ಪಶ್ಚಿಮ ಬಂಗಾಲ ರಾಜ್ಯದ ಅರಣ್ಯ ಇಲಾಖೆಯು ಹಲವಾರು ವರ್ಷಗಳಿಂದ ಪ್ರವಾಸಿ ತಾಣವಾದ ಸಿಲಿಗುರಿಯಲ್ಲಿ ವನ್ಯಜೀವಿಗಳ ಸಫಾರಿ ಪಾರ್ಕ್ ಹೊಂದಿದೆ. ಇಲ್ಲಿ ಆನೆ, ಸಿಂಹ, ಹುಲಿ ಸಹಿತ ಪ್ರಮುಖ ಪ್ರಾಣಿಗಳಿವೆ. ಬನ್ನೇರಘಟ್ಟ ಮಾದರಿಯಲ್ಲಿಯೇ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಇದೆ. ಇಲ್ಲಿಗೆ ನಿತ್ಯ ಸಹಸ್ರಾರು ಪ್ರವಾಸಿಗರು ಬಂದು ವನ್ಯಜೀವಿಗಳನ್ನು ಹತ್ತಿರದಿಂದಲೇ ನೋಡಿ ಖುಷಿಪಟ್ಟು ಹೋಗುತ್ತಾರೆ.
ಕೆಲ ದಿನಗಳ ಹಿಂದೆ ತ್ರಿಪುರಾದ ಸೆಪಹಿಜಾಲ ಮೃಗಾಲಯದಿಂದ ಸಿಂಹದ ಜೋಡಿಯನ್ನು ವಾರದ ಹಿಂದೆಯಷ್ಟೇ ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿತ್ತು. ಇದರಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಸಿಂಹಗಳು ಸಫಾರಿ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಇವರೆಡನ್ನೂ ಜೋಡಿಯಾಗಿ ಬಿಟ್ಟಿದ್ದನ್ನು ಕೆಲವರು ಗಮನಿಸಿದ್ದರು. ಇದು ಸ್ಥಳೀಯ ವಿಶ್ವ ಹಿಂದೂಪರಿಷತ್ ಪ್ರಮುಖರ ಗಮನಕ್ಕೂ ಬಂದಿತ್ತು. ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿಂಹಗಳ ಹೆಸರನ್ನು ಬದಲಿಸಿ ಇಲ್ಲವೇ ಸಿಂಹಗಳನ್ನು ಒಂದೇ ಕಡೆ ಇರುವುದನ್ನು ತಪ್ಪಿಸಿ ಎಂದು ಮನವಿ ಸಲ್ಲಿಸಿದ್ದರು. ಆದರೆ ಈಗಾಗಲೇ ಸಿಂಹಗಳಿಗೆ ಹೆಸರು ಇಡಲಾಗಿದೆ. ಹೆಸರು ಬದಲಾಯಿಸಲು ಆಗುವುದಿಲ್ಲ. ಅವುಗಳನ್ನು ಸ್ಥಳಾಂತರಿಸುವ ವಿಷಯವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರ ನೀಡಿದ್ದರು.
ಅರಣ್ಯ ಇಲಾಖೆ ಕ್ರಮವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ರಾಜ್ಯ ವಿಎಚ್‌ಪಿ ಮುಖಂಡರು ಜಲಪಾಯ್‌ಗುರಿಯಲ್ಲಿರುವ ಕೋಲ್ಕತಾ ಹೈಕೋರ್ಟ್‌ನ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
ಇದು ಹಿಂದೂ ಭಾವನೆಗಳನ್ನು ಕೆರಳಿಸುವ ಕೆಲಸ. ಅಕ್ಬರ್ ಎನ್ನುವ ಸಿಂಹವನ್ನು ಸೀತಾ ಎನ್ನುವ ಸಿಂಹದ ಜತೆಗೆ ಇರಿಸುವುದು ಸರಿ ಕಾಣುತ್ತಿಲ್ಲ. ಕೂಡಲೇ ಹೆಸರು ಬದಲಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪಶ್ವಿಮಬಂಗಾಲದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಲಿಗುರಿ ಸಫಾರಿ ಪಾರ್ಕ್ ನಿರ್ದೇಶಕರನ್ನು ಪಾರ್ಟಿಗಳನ್ನಾಗಿ ಮಾಡಲಾಗಿದೆ.
ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಪೀಠದ ನ್ಯಾಯಮೂರ್ತಿ ಸೌಗತಾ ಭಟ್ಟಾಚಾರ್ಯ ಅವರು ಫೆಬ್ರವರಿ 20ರಂದು ವಿಚಾರಣೆ ನಡೆಸುವುದಾಗಿ ಮುಂದಕ್ಕೆ ಹಾಕಿದರು. ಈ ಕುರಿತು ವಾದಿಗಳು ಹಾಗೂ ಪ್ರತಿವಾದಿಗಳಿಗೆ ನೊಟೀಸ್ ಕೂಡ ಜಾರಿಗೊಳಿಸಲಾಗಿದೆ.